ಇಂದು ರಾತ್ರಿ ಆಕಾಶದಲ್ಲಿ ಗೋಚರವಾಗಲಿದೆ ಈ ವರ್ಷದ ಮೊದಲ 'ಸೂಪರ್ ಮೂನ್'

ಸೆಪ್ಟೆಂಬರ್‌ವರೆಗೆ ಸೂಪರ್‌ ಮೂನ್‌ಗಳ ಸರಣಿಯಲ್ಲಿ ಇಂದು ರಾತ್ರಿ ಮೊದಲ ಸೂಪರ್‌ಮೂನ್ ಆಗಲಿದೆ. ಆಕಾಶದಲ್ಲಿ ಕಾಣುವ ಮುಂದಿನ ನಾಲ್ಕು ಪೂರ್ಣ ಹುಣ್ಣಿಮೆಗಳು ಸೂಪರ್ ಮೂನ್ ಆಗಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೆಪ್ಟೆಂಬರ್‌ವರೆಗೆ ಸೂಪರ್‌ ಮೂನ್‌ಗಳ ಸರಣಿಯಲ್ಲಿ ಇಂದು ರಾತ್ರಿ ಮೊದಲ ಸೂಪರ್‌ ಮೂನ್ ಆಗಲಿದೆ. ಆಕಾಶದಲ್ಲಿ ಕಾಣುವ ಮುಂದಿನ ನಾಲ್ಕು ಪೂರ್ಣ ಹುಣ್ಣಿಮೆಗಳು ಸೂಪರ್ ಮೂನ್ ಆಗಲಿವೆ. ಇಂದು ಜುಲೈ 3, ಆಗಸ್ಟ್ 1, ಆಗಸ್ಟ್ 31 ಮತ್ತು ಸೆಪ್ಟೆಂಬರ್ 29 ರಂದು ಸೂಪರ್ ಮೂನ್ ವೀಕ್ಷಿಸಬಹುದು.

ಹುಣ್ಣಿಮೆಯ ದಿನದಂದು ಚಂದ್ರನು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣುವುದನ್ನು ಸೂಪರ್‌ ಮೂನ್ ಎಂದು ಕರೆಯಲಾಗುತ್ತದೆ. ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣಿಸುವುದಿಲ್ಲ. ಮೈಕ್ರೋ ಮೂನ್‌ಗಳು ಚಿಕ್ಕದಾಗಿ ಕಾಣುತ್ತವೆ. ಚಂದ್ರ ಯಾವಾಗಲೂ ಭೂಮಿಯಿಂದ ಒಂದೇ ದೂರದಲ್ಲಿ ಇರುವುದಿಲ್ಲ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಹಾಗೂ ಪೂರ್ಣಪ್ರಜ್ಞ ಅಮೆಚೂರ್ ಆಸ್ಟ್ರೋನೊಮರ್ಸ್ ಕ್ಲಬ್ (ಪಿಎಎಸಿ) ಸಂಸ್ಥಾಪಕ ಹಾಗೂ ಸಂಯೋಜಕ ಡಾ.ಎ.ಪಿ.ಭಟ್ ಹೇಳುತ್ತಾರೆ. 

ಚಂದ್ರನು ದೀರ್ಘವೃತ್ತದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿರುವಂತೆ, ಭೂಮಿಗೆ ಸಂಬಂಧಿಸಿದಂತೆ ಅದರ ಅತ್ಯಂತ ದೂರದಲ್ಲಿ (ಅಪೋಜಿ) ಮತ್ತು ಹತ್ತಿರದಲ್ಲಿ (ಪೆರಿಜಿ) ಇರುವ ಕೆಲವು ಬಿಂದುಗಳಿವೆ.ಚಂದ್ರ ಭೂಮಿಯಿಂದ ಸರಾಸರಿ ದೂರ 3,84,400 ಕಿ.ಮೀ. ಅದರ ಪೆರಿಜಿಯಲ್ಲಿ, ಅದು ಭೂಮಿಯಿಂದ 3,56,000 ಕಿಮೀ ದೂರದಲ್ಲಿದೆ. ಅಪೋಜಿಯಲ್ಲಿ ಅದು 4,06,000 ಕಿಮೀ ಇದೆ. ಒಂದು ವಸ್ತುವು ಹತ್ತಿರದಲ್ಲಿದ್ದಾಗ ದೊಡ್ಡದಾಗಿ ಮತ್ತು ದೂರ ಹೋದಂತೆ ಚಿಕ್ಕದಾಗಿ ಕಾಣಿಸಿಕೊಳ್ಳುವುದು ಸಹಜ ವಿದ್ಯಮಾನವಾಗಿದೆ ಎನ್ನುತ್ತಾರೆ. 

ಸೂಪರ್‌ ಮೂನ್ ದಿನದಂದು, ಚಂದ್ರನು ಭೂಮಿಗೆ ಸುಮಾರು 30,000 ಕಿಮೀ ಹತ್ತಿರನಾಗುತ್ತಾನೆ, ಇದು ಸರಾಸರಿ ಚಂದ್ರನಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಸೂಪರ್‌ಮೂನ್‌ನ ಸಾಮೀಪ್ಯದಿಂದಾಗಿ, ಚಂದ್ರನನ್ನು ಅವಲಂಬಿಸಿರುವ ವಿವಿಧ ವಸ್ತುಗಳು ಸಹ ಬದಲಾಗುತ್ತವೆ. 

ಸಮುದ್ರದ ಏರಿಳಿತಕ್ಕೆ ಚಂದ್ರನ ಆಕರ್ಷಣೆಯೂ ಕಾರಣ. ಆದ್ದರಿಂದ, ಸೂಪರ್‌ ಮೂನ್‌ಗಳ ಸಮಯದಲ್ಲಿ, ಸಮುದ್ರದ ಅಲೆಗಳಿಂದ ಶಬ್ದವು ಅಧಿಕವಾಗಿರುತ್ತದೆ ಏಕೆಂದರೆ ಅಲೆಗಳು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಡಾ ಎ ಪಿ ಭಟ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com