

ಜಾಗತಿಕ ಟೆಕ್ ದಿಗ್ಗಜ ಮೈಕ್ರೋಸಾಫ್ಟ್‌ನ ಪ್ರಮುಖ ಸೇವೆಗಳಾದ ಔಟ್‌ಲುಕ್ ಮತ್ತು ಮೈಕ್ರೋಸಾಫ್ಟ್ 365ನಲ್ಲಿ ಕಾಣಿಸಿಕೊಂಡಿರುವ ಭಾರಿ ತಾಂತ್ರಿಕ ಅಡಚಣೆ ಎರಡನೇ ದಿನವೂ ಮುಂದುವರೆದಿದ್ದು, ಸಮಸ್ಯೆಯನ್ನು ಬಗೆಹರಿಸಲು ಕಂಪನಿ ಹರಸಾಹಸ ಪಡುತ್ತಿದೆ.
ಸೇವಾ ವ್ಯತ್ಯಯದ ಬಳಿಕ ಔಟ್‌ಲುಕ್ ಸೇವೆಗಳನ್ನು ಸಹಜ ಸ್ಥಿತಿಗೆ ತರುವ ಮೈಕ್ರೋಸಾಫ್ಟ್ ಪ್ರಯತ್ನಗಳು ಗುರುವಾರ ನಿರೀಕ್ಷಿತ ಫಲ ನೀಡಿಲ್ಲ.
ಸಾಮರ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಇದೇ ವೇಳೆ, ಮೈಕ್ರೋಸಾಫ್ಟ್‌ನ ವಿವಿಧ ಅಪ್ಲಿಕೇಶನ್‌ಗಳ ಬಳಕೆದಾರರು ಇನ್ನೂ ಸೇವಾ ವ್ಯತ್ಯಯದ ಬಗ್ಗೆ ದೂರು ನೀಡುತ್ತಿದ್ದಾರೆ.
ಸೇವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಜಾರಿಗೊಳಿಸಿದ ಬದಲಾವಣೆಗಳ ಪರಿಣಾಮವನ್ನು ಪರಿಶೀಲಿಸಿದಾಗ, ಅವು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ದೃಢಪಟ್ಟಿದೆ.
ನಿರಂತರವಾಗಿ ಎದುರಾಗುತ್ತಿರುವ ದಟ್ಟಣೆಯ ನಿರ್ವಹಣೆಯ ಅಸಮತೋಲನವನ್ನು ನಿಭಾಯಿಸಿ, ಸೇವೆಯ ಸಾಮರ್ಥ್ಯ ಹೆಚ್ಚಿಸಲು ಪರ್ಯಾಯ ಮಾರ್ಗಗಳನ್ನು ಗುರುತಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ತಿಳಿಸಿದೆ.
ಗುರುವಾರ ಅಮೆರಿಕದಲ್ಲಿ ವರದಿಯಾದ ಈ ತಾಂತ್ರಿಕ ಸಮಸ್ಯೆಯಿಂದ ಔಟ್‌ಲುಕ್, ಕಂಪನಿಯ ಕಚೇರಿ ಸಂವಹನ ವೇದಿಕೆಯಾದ ಟೀಮ್ಸ್, ಕೃತಕ ಬುದ್ಧಿಮತ್ತೆ ಸಹಾಯಕ ಕೋಪೈಲಟ್ ಹಾಗೂ ಮೈಕ್ರೋಸಾಫ್ಟ್ 365ರ ಇತರ ಸೇವೆಗಳು ಬಾಧಿತವಾಗಿದ್ದವು. ಇದರಿಂದ ಹಲವು ಉದ್ಯಮ ಸಂಸ್ಥೆಗಳು ಮತ್ತು ಕೆಲವು ಸರ್ಕಾರಿ ಕಾರ್ಯಚಟುವಟಿಕೆಗಳಿಗೂ ಅಡಚಣೆಯಾಯಿತು.
ಗುರುವಾರ ಮಧ್ಯಾಹ್ನ 1 ಗಂಟೆಯ ಸ್ವಲ್ಪ ಸಮಯದ ಬಳಿಕ, ಸೇವಾ ವ್ಯತ್ಯಯಗಳ ಬಗ್ಗೆ ಮಾಹಿತಿ ನೀಡುವ ಡೌನ್‌ಡೆಟೆಕ್ಟರ್ ಜಾಲತಾಣದಲ್ಲಿ ಔಟ್‌ಲುಕ್ ಬಳಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸುಮಾರು 1.30 ಲಕ್ಷ ಬಳಕೆದಾರರು ದೂರು ದಾಖಲಿಸಿದ್ದರು.
ಬಳಿಕ ದೂರುಗಳ ಸಂಖ್ಯೆ ಇಳಿಕೆಯಾದರೂ, ಇಮೇಲ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಇನ್‌ಬಾಕ್ಸ್ ತೆರೆಯುತ್ತಿಲ್ಲ ಎಂದು ಅನೇಕರು ತಿಳಿಸಿದ್ದರು.
ಟೀಮ್ಸ್ ಮತ್ತು ಕೋಪೈಲಟ್ ಬಳಕೆಯಲ್ಲೂ ಸಾವಿರಾರು ಮಂದಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ವರದಿಯಾಗಿತ್ತು. ಶುಕ್ರವಾರ ಬೆಳಿಗ್ಗೆ ಏಷ್ಯಾದ ಹಲವು ಭಾಗಗಳಲ್ಲಿಯೂ ಮೈಕ್ರೋಸಾಫ್ಟ್ ವೇದಿಕೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಜಪಾನ್‌ನಲ್ಲಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಕ್ಕೂ ಈ ಸ್ಥಗಿತದ ಪರಿಣಾಮ ಬೀರಿದೆ ಎಂದು ಉಪ ಮುಖ್ಯ ಸಂಪುಟ ಕಾರ್ಯದರ್ಶಿ ಮಸನಾವೊ ಒಜಾಕಿ ಶುಕ್ರವಾರ ತಿಳಿಸಿದ್ದಾರೆ. ಪರಿಸ್ಥಿತಿಯ ಬೆಳವಣಿಗೆಗಳ ಮೇಲೆ ಅಧಿಕಾರಿಗಳು ನಿಕಟ ನಿಗಾ ಇರಿಸಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಮಾಹಿತಿಯಲ್ಲಿ, ತನ್ನ ಮೂಲಸೌಕರ್ಯದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಹೊರೆ ಉಂಟಾಗಿದೆ. ಇದರಿಂದ ಸಂಪರ್ಕ ದೋಷಗಳು ಕಾಣಿಸಿಕೊಂಡಿವೆ ಎಂದು ಮೈಕ್ರೋಸಾಫ್ಟ್ ತಿಳಿಸಿತ್ತು.
ವಾಷಿಂಗ್ಟನ್‌ನ ರೆಡ್‌ಮಂಡ್ ಮೂಲದ ಕಂಪನಿಯ ಕೆಲವು ಸರ್ವರ್‌ಗಳು ಸ್ವಯಂಚಾಲಿತ ಆರೋಗ್ಯ ತಪಾಸಣೆಯಲ್ಲಿ ವಿಫಲವಾಗಿವೆ. ಅವುಗಳನ್ನು ಮತ್ತೆ ಕಾರ್ಯಾರಂಭಗೊಳಿಸಲು ಕೈಗೊಂಡ ಪರ್ಯಾಯ ಕ್ರಮಗಳು ತಕ್ಷಣವೇ ಫಲ ನೀಡುತ್ತಿಲ್ಲ ಎಂದೂ ಕಂಪನಿ ಹೇಳಿತ್ತು.
ಸೇವಾ ವ್ಯತ್ಯಯದ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಮಾರ್ಗಗಳಲ್ಲೂ ತೀವ್ರ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ 365ರ ಸೇವಾ ಸ್ಥಿತಿ ಖಾತೆ ಈ ಹಿಂದೆ ಎಕ್ಸ್‌ನಲ್ಲಿ ಪ್ರಕಟಿಸಿತ್ತು.
ಉತ್ತರ ಅಮೆರಿಕದಲ್ಲಿ ಟೀಮ್ಸ್ ಸೇವೆಯನ್ನು ಯಶಸ್ವಿಯಾಗಿ ಪುನಃಸ್ಥಾಪಿಸಲಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿತ್ತು. ಆದರೆ, ಕೆಲವು ಬಳಕೆದಾರರು ಇನ್ನೂ ಸಂಪರ್ಕ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ದೂರು ನೀಡುತ್ತಿದ್ದರು.
ತಾಂತ್ರಿಕ ಕಾರಣವೇನು?
ಸ್ವಯಂಚಾಲಿತ ತಪಾಸಣೆಯಲ್ಲಿ (Automated health checks) ವಿಫಲವಾದ ಕಾರಣ ಹಲವು ಸರ್ವರ್‌ಗಳು ಅನಿರೀಕ್ಷಿತವಾಗಿ ಸ್ಥಗಿತಗೊಂಡಿವೆ. ಇದರಿಂದ ಉಳಿದ ಸರ್ವರ್‌ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಇಡೀ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗಿದೆ. ಈ ಅಡಚಣೆಗೆ ಯಾವುದೇ ಸೈಬರ್ ದಾಳಿ ಕಾರಣವಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ.
ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ
ಈ ತಾಂತ್ರಿಕ ದೋಷದಿಂದಾಗಿ ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ 74 ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಔಟ್‌ಲುಕ್ ಮಾತ್ರವಲ್ಲದೆ ಮೈಕ್ರೋಸಾಫ್ಟ್ ಟೀಮ್ಸ್ (Teams), ಒನ್‌ಡ್ರೈವ್ (OneDrive), ಶೇರ್‌ಪಾಯಿಂಟ್ (SharePoint) ಮತ್ತು ಕೋಪೈಲಟ್ (Copilot) ಸೇವೆಗಳಲ್ಲೂ ವ್ಯತ್ಯಯವಾಗಿದೆ. ಇದರಿಂದಾಗಿ ಕಚೇರಿ ಕೆಲಸಗಳು, ಇಮೇಲ್ ಸಂವಹನ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಭಾರಿ ಅಡ್ಡಿಯಾಗಿದೆ.