ಸಿನಿ ಬರೆದ ಕಾದಂಬರಿ

ಅದೊಂದು ಕಾಲವಿತ್ತು. ಕನ್ನಡ ಸಿನಿಮಾಗಳೆಂದರೆ ಯಾವ ಕಾದಂಬರಿ ಆಧಾರಿತವೆನ್ನುವುದನ್ನು ಕೆಳಗೆ ಬಾಕ್ಸ್‌ನೊಳಗೆ...
ಟು ಸ್ಟೇಟ್ಸ್ & ಹಾಫ್ ಗರ್ಲ್‌ಫ್ರೆಂಡ್‌  ಪೋಸ್ಟರ್
ಟು ಸ್ಟೇಟ್ಸ್ & ಹಾಫ್ ಗರ್ಲ್‌ಫ್ರೆಂಡ್‌ ಪೋಸ್ಟರ್

ಅದೊಂದು ಕಾಲವಿತ್ತು. ಕನ್ನಡ ಸಿನಿಮಾಗಳೆಂದರೆ ಯಾವ ಕಾದಂಬರಿ ಆಧಾರಿತವೆನ್ನುವುದನ್ನು ಕೆಳಗೆ ಬಾಕ್ಸ್‌ನೊಳಗೆ ಹಾಕಲಾಗುತ್ತಿತ್ತು. ಕಾದಂಬರಿ ಆಧಾರಿತ ಎನ್ನುವಾಗಲೇ ಆ ಚಿತ್ರಕ್ಕೊಂದು ತೂಕ ಬಂದು ಬಿಡುತ್ತಿತ್ತು . ಅಷ್ಟೇ ಅಲ್ಲ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಂದೇಶಗಳಿರುತ್ತಿದ್ದವಲ್ಲದೆ, ಜೀವನಕ್ಕೆ ಹತ್ತಿರವಾಗಿದ್ದವು. ಈ ಮೂಲಕ ಓದುವ ಅಭ್ಯಾಸವಿಲ್ಲದವನನ್ನೂ ಕಾದಂಬರಿಗಳು ಮುಟ್ಟುತ್ತಿದ್ದವು.

ಅದೇನಾಗಿ ಹೋಯಿತೋ, ಹೊಡೆಬಡಿ, ಪ್ರೀತಿಗೀತಿ ಇತ್ಯಾದಿ ವಿಚಾರಗಳು ಬಂದ ಮೇಲೆ ಕತೆಯೇ ಬೇಡ. ನಾಲ್ಕು ಡ್ಯಾನ್ಸು, ನಾಲ್ಕು ಫೈಟು, ಒಂದು ತಲೆಬುಡವಿಲ್ಲದ ಇಮ್ಮೆಚುರ್ಡ್ ಲವ್ವು. ದಾರಿಯಲಿ ಹೋಗುವ ದಾಸಯ್ಯನೂ ಚಿತ್ರ ನಿರ್ಮಾಣ,  ನಿರ್ದೇಶನ, ನಟನೆ ಎನ್ನತೊಡಗಿದ. ಹೀಗಾಗಿ ವರ್ಷಕ್ಕೆ ಎಲ್ಲೋ ಕೈಬೆರಳುಗಳಷ್ಟು ತಯಾರಾಗುತ್ತಿದ್ದ ಸಿನಿಮಾಗಳು  ನೂರನ್ನು ದಾಟಿ ಹೋಗತೊಡಗಿದವು. ಐದು ದಶಕಗಳಾದರೂ ಮರೆಯದಂಥ ಹಳೆಯ ಹಾಡುಗಳ ನಡುವೆ, ಮ್ಯೂಸಿಕ್ ಇನ್‌ಸ್ಟ್ರುಮೆಂಟ್ಸ್‌ಗೇ ಕರೆಂಟ್ ಶಾಕ್ ಹೊಡೆದಂತೆ ಬಂದ ಗೀತೆಗಳು ವಾರಗಳ ಕಾಲ ಕಾಡುವುದಕ್ಕೂ ಸೋತವು. ಕಾದಂಬರಿಗಳು ಸರ್ಕಾರಿ ಲೈಬ್ರರಿಗಳಲ್ಲಿ ಧೂಳು ಹಿಡಿದು  ಮಂಕಾಗಿ ಹೋದವು. ಸಧ್ಯ  ಜನರ ಮನದಲ್ಲಿ ಕಾದಂಬರಿಗಳನ್ನು ಚಿತ್ರ ಮಾಡುವುದೆಂದರೆ ಕಲಾತ್ಮಕ ಚಿತ್ರಗಳೆಂದೇ ಕುಳಿತುಬಿಟ್ಟಿವೆ. ಅವುಗಳೆಂದ ದುಡ್ಡು ಮಾಡಲು ಸಾಧ್ಯವಿಲ್ಲ. ಜನ ನೋಡಲ್ಲ ಎನ್ನುತ್ತಾರೆ. ಆದರೆ ಪುಟ್ಟಣ್ಣ ತೆಗೆದ ಎಂ.ಕೆ ಇಂದಿರಾ, ಸಾಯಿಸುತೆ ಇತರ ಪ್ರಮುಖರು ರಚಿಸಿದ ಕಾದಂಬರಿ ಆಧಾರಿತ ಚಿತ್ರಗಳು, ಡಾ. ರಾಜ್ ಅಭಿನಯಿಸಿದ ಹಲವಾರು ಕಾದಂಬರಿ ಆಧಾರಿತ ಚಿತ್ರಗಳೆಲ್ಲವೂ ಕಮರ್ಶಿಯಲೀ ದೊಡ್ಡ ಸಕ್ಸಸ್‌ಗಳೇ ಅಲ್ಲವೇ?

ಇಂದಿಗೂ ಜನ ಅವುಗಳ ಗುಂಗಿಗೆ ಬೀಳುತ್ತಾರೆ. ಒಳ್ಳೆಯ ಸಿನಿಮಾ ಎಂದ ಕೂಡಲೇ ದಶಕಗಳ ಹಿಂದೆ ತಿರುಗಿ ನೋಡುತ್ತಾರೆ.
ಆದರೆ ಹಿಂದಿಯಲ್ಲಿ ಪರವಾಗಿಲ್ಲ. ಬಾಲಿವುಡ್ ಜಗತ್ತು ವರ್ಷಕ್ಕೊಮ್ಮೆಯಾದರೂ ಕಾದಂಬರಿಗಳ ಪುಟ ತಿರುವಿ, ಇದನ್ನು ಚಿತ್ರ ಮಾಡಬೇಕೆನ್ನುವ ಹುಕ್ಕಿಗೆ ಬೀಳುತ್ತದೆ. ಹಾಗೆ ಪುಸ್ತಕಗಳು ತೆರೆ ಮೇಲೆ ಬಂದಾಗೆಲ್ಲ ಹೆಚ್ಚೂ ಕಡಿಮೆ ಸಖತ್ ಸಕ್ಸಸ್ ಅನ್ನೇ ಬಾಚಿಕೊಂಡಿವೆ.

ಮೊನ್ನೆ ಮೊನ್ನೆ ಬಂದ ಟು ಸ್ಟೇಟ್ಸ್ ನಾಲ್ಕು ವರ್ಷಗಳ ಹಿಂದೆ ಬಂದ ತ್ರೀ ಈಡಿಯಟ್ಸ್, ದೇವದಾಸ್, ಪರಿಣೀತಾ, ಸಾವರಿಯಾ, ಸಾತ್ ಕೂನ್ ಮಾಫ್,  ಓಂಕಾರ ಎಲ್ಲವೂ ಜನರ ಮನಸ್ಸಿನ ಜೊತೆಗೆ ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆದಿವೆ. ಈ ಎಲ್ಲ ಸಕ್ಸಸ್ ಸ್ಟೋರಿಗಳ ಪ್ರೇರಣೆ ಎಂಬಂತೆ  ಈ ವರ್ಷ ಹಿಂದಿಯಲ್ಲಿ  ಕಾದಂಬರಿಗಳು ಸಿನಿಮವಾಗಲು ಸಾಲಿನಲ್ಲಿ ನಿಂತಿವೆ.

ಟು ಸ್ಟೇಟ್ಸ್ , ತ್ರೀ ಈಡಿಯಟ್ಸ್ ಭರ್ಜರಿ ಗೆಲವನ್ನು ನೋಡಿದ ಮೇಲೂ  ಚೇತನ್ ಭಗತ್‌ರ ಇತ್ತೀಚಿನ ಕಾದಂಬರಿ 'ಹಾಫ್ ಗರ್ಲ್‌ಫ್ರೆಂಡ್‌' ನ್ನು ಯಾರೂ ಚಿತ್ರ ಮಾಡಲಿಲ್ಲವೆಂದರೆ ಅವರನ್ನು ವ್ಯವಹಾರ ತಿಳಿಯದ ಬುದ್ದುಗಳೆಂದೇ ತಿಳಿಯಬೇಕು. ಆದರೆ ಚೇತನ್ ತನ್ನ ಕಾದಂಬರಿಗೆ ಚಿತ್ರ ಮಾಡಲು ಹಕ್ಕು ನೀಡುವುದಾಗಿ ಹೇಳಿದ ದಿನದ ಮಧ್ಯರಾತ್ರಿಯಲ್ಲಿ ಸೀರಿಯಲ್‌ಗಳ ರಾಣಿ ಏಕ್ತಾ ಕಪೂರ್ ಚೇತನ್ ಮನೆಗೆ ಭೇಟಿ ನೀಡಿ 'ಹಾಫ್ ಗರ್ಲ್‌ಫ್ರೆಂಡ್‌' ಚಿತ್ರದ ಹಕ್ಕನ್ನು ಪಡೆದುರೊಂಡು ಬಂದಿದ್ದಾಳೆ. ಈ ಬಾರಿ ಚೇತನ್ ಕೂಡಾ ಸಹ ನಿರ್ಮಾಪಕರಾಗುವ ಜಾಣತನ ತೋರಿದ್ದಾರೆ. ಚಿತ್ರವನ್ನು 'ಆಶಿಕಿ 2' ಖ್ಯಾತಿಯ ಮೋಹಿತ್ ಸೂರಿ ನಿರ್ದೇಶಿಸಲಿದ್ದಾರೆ.

ಚಾರ್ಲ್ಸ್ ಡಿಕನ್ಸ್‌ನ ಖ್ಯಾತ ಕಾದಂಬರಿ 'ಗ್ರೇಟ್ ಎಕ್ಸ್‌ಪೆಕ್ಟೇಶನ್ಸ್ 'ಕೂಡಾ ಖಂಡಗಳನ್ನು ದಾಟಿ  ಬಾಲಿವುಜ್ ಅಂಗಳಕ್ಕೆ 'ಫಿಟ್‌ಡೋರ್‌' ಹೆಸರಿನಲ್ಲಿ ಬಂದು ನಿಲ್ಲಲು ತಯಾರಾಗಿದೆ. ಅಭಿಷೇಕ್ ಕಪೂರ್ ನಿರ್ದೇಶಿಸಲಿರುವ  ಚಿತ್ರದ ಪ್ರಮುಖ  ಪಾತ್ರಗಳಲ್ಲಿ ಆದಿತ್ಯಾ ರಾಯ್ ಕಪೂರ್, ಕತ್ರೀನಾ ಕೈಫ್ ಹಾಗೂ ರೇಖಾ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಗ್ಯಾನ್  ಪ್ರಕಾಶ್‌ರ ಮುಂಬೈ ಫೇಕಲ್ಸ್ - ಬಾಂಬೆ ವೆಲ್ವೆಟ್ ಆಗಿ ತೆರೆ ಏರಲಿದೆ. ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಜೋಡಿಯನ್ನು ಹಾಕಿಕೊಂಡು ಈಗಾಗಲೇ ಚಿತ್ರೀಕರಣ ಆರಂಭಿಸಲಾಗಿದೆ. ಚಿತ್ರಕತೆಯು ತೆರೆಯ ಮೇಲೆ 1960 ರ ದಶಕವನ್ನು ಮರುಸೃಷ್ಟಿಸಲಿದೆ.

ಇನ್ನು ಸ್ವಾತಂತ್ರ ಪೂರ್ವ ಕೋಲ್ಕತ್ತದ ಕತೆಯನ್ನಿಟ್ಟುಕೊಂಡ ಬೆಂಗಾಳಿ ಕತೆಗಾರ ಸಾರಾದಿಂದು ಬಂದೋಪಾಧ್ಯಾಯ್ ಅವರ ಕತೆ
'ಡಿಟೆಕ್ಟಿವ್ ಭ್ಯೋಮಕೇಶ್ ಭಕ್ಷಿ' ಹೆಸರಿನಲ್ಲಿ ದಿವಾಕರ್ ಬೆನರ್ಜಿ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿದೆ. ಕಳೆದ ವರ್ಷ ತೆರೆ ಕಂಡ ಕಾದಂಬರಿ ಕೈ ಪೋಚೆ, ಶುದ್ಧ ದೇಸಿ ರೊಮ್ಯಾನ್ಸ್‌ಗಳಲ್ಲಿ  ಗಮನ ಸೆಳೆದ ಸುಶಾಂತ್ ಸಿಂಗ್ ಈ ಚಿತ್ರದ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.

ಇದನ್ನೆಲ್ಲ ಕೇಳಿಸಿಕೊಂಡ ಕನ್ನಡ ಕಾದಂಬರಿಗಳು ದುಃಖದಿಂದ ಬಿಡುವ ನಿಟ್ಟುಸಿರಿಗಾದರೂ ಅವುಗಳ ಮೇಲಿನ ಧೂಳು ದೂರ ಹಾರಲಿ.

-ರೇಶ್ಮಾರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com