ಸೊಪ್ಪುಸಾರು ಮತ್ತು ಸೂಪರ್ ಸ್ಟಾರು!

ಟಿ-20 ಯಲ್ಲಿ ವೇಗದ ಶತಕ ಬಾರಿಸುವ ಕ್ರಿಸ್‌ಗೇಲ್‌ಗೆ ಅವರ ಸೀಕ್ರೆಟ್ ಏನಂತ...
ಸಸ್ಯಾಹಾರಿ ಸೂಪರ್ ಸ್ಟಾರ್ ಗಳು
ಸಸ್ಯಾಹಾರಿ ಸೂಪರ್ ಸ್ಟಾರ್ ಗಳು

ಟಿ-20 ಯಲ್ಲಿ ವೇಗದ ಶತಕ ಬಾರಿಸುವ ಕ್ರಿಸ್‌ಗೇಲ್‌ಗೆ ಅವರ ಸೀಕ್ರೆಟ್ ಏನಂತ ಕೇಳಿ. ತೆಂಡೂಲ್ಕರ್ ಥರ ಬೂಸ್ಟ್ ಬಾಟಲ್ ತೋರಿಸುವುದಿಲ್ಲ. 'ಕಬಾಬ್‌' ಅಂದಾನು: 'ತಲೆಮಟನ್‌' ಅಂದರೂ ಅಂದಾನು ಆ ಕ್ರಿಸ್‌ಗೇಲ್. ಅದೇ ಪ್ರಶ್ನೆಯನ್ನು ಏಕದಿನದಲ್ಲಿ ಡಬಲ್ ಸೆಂಚುರಿ ಬಾರಿಸಿದ ನಮ್ಮ ರೋಹಿತ್ ಶರ್ಮಾನಿಗೆ ಕೇಳಿ. ಕಾಳು, ಬೀನ್ಸು, ಆಲೂಗಡ್ಡೆ ಅಂತ ತರಕಾರಿ ಮಾರ್ಕೆಟ್ ಕಡೆ ಕೈ ತೋರಿಸ್ತಾನೆ!

ಹೌದು, ಇವರಿಗೆ ತಾಕತ್ತು ಬರೋದೇ ಸಸ್ಯಾಹಾರದಿಂದ. ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾದ ಕೆಲವರು ಪರದಾಡಿದ್ದು ಗೊತ್ತಲ್ಲ. ಮೆನುವಿನಲ್ಲಿ ವೆಜಿಟೇರಿಯನ್ ಇಲ್ಲ ಅಂತ ರೋಹಿತ್ ಶರ್ಮಾ ಹಾಗೂ ರವಿಶಾಸ್ತ್ರಿ ಮುಖ ಕೆಂಪಗೆ ಮಾಡಿದರು. ಫಾಸ್ಟ್ ಬೌಲರ್ ಇಶಾಂತ ಅಶಾಂತಗೊಂಡು ಸ್ಟೇಡಿಯಮ್ಮಿಂದ ಹೊರನಡೆದುಬಿಟ್ಟ. ಆರೆ ಪುಳ್ಚಾರ್ ತಿನ್ಕೊಂಡು ಇಷ್ಟು ವೇಗದಲ್ಲಿ ಬೌಲಿಂಗ್ ಮಾಡ್ತಾನಾ ಇವ್ನು ಎಂಬ ಅಚ್ಚರಿ ಕಂಡವರ ಕಣ್ಣಲ್ಲಿ. ಹಲೋ, ನಮ್ಮ ರಾಜ್ಯದ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡಾ ಪುಳ್ಚಾರೆ ರೀ.

ಆಟದಲ್ಲೆಂದಾದರೂ ಆ ಚಹರೆ ಗೊತ್ತಾಗಿದ್ಯಾ? ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಸುಮ್ನಿರಿ. ಸುಮ್ನೆ ಕಿಂಡಲ್ ಮಾಡ್ತೀರಾ ಎಂಬುದು ಸಸ್ಯಾಹಾರಿಗಳ ಸಮಜಾಯಿಷಿ.

ಸಸ್ಯಾಹಾರ-ಕೆಲವರಿಗೆ ಹುಟ್ಟಿನಿಂದ ಬಂದ ಧರ್ಮ, ಇನ್ನು ಕೆಲವರಿಗೆ ಅದೊಂದು ಆದರ್ಶ. ಬದುಕಿನ ರೀತಿ. ಇನ್ನಷ್ಟು ಮಂದಿಗೆ ಆರೋಗ್ಯ ಕಾಳಜಿ. ಮತ್ತುಳಿದವರಿಗೆ ನಾರುಬೇರು ತಿನ್ನುವವರು ಎಂದರೆ ದುರ್ಬಲರು ಎಂಬ ನಂಬಿಕೆ. ಜಾವನದಲ್ಲಿ ಮಹತ್ವವಾದದ್ದೇನೋ ಕಳೆದುಕೊಂಡಿರುವವರು ಎಂಬಂತೆ 'ಅಯ್ಯೋ, ಪಾಪಾ' ಲುಕ್ ನೀಡುತ್ತಾರೆ. ತಾವು ಕಳೆದುಕೊಂಡು ಮತ್ತೇನನ್ನೋ ಗಳಿಸಿರುವುದನ್ನು ತತ್‌ಕ್ಷಣ ತೋರಿಸಲಾಗುವುದಿಲ್ಲವಲ್ಲ. ಅದೇನೇ ಇರಲಿ, ಪ್ರಪಂಚದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳಿದ್ದರೆ ಅದು ಭಾರತದಲ್ಲೇ. ಈಗ ವಿದೇಶದಲ್ಲೂ ಅನೇಕ ಮಂದಿ ಗೋ ವೆಜ್ ಎನ್ನುತ್ತಾ. ಸತ್ತ ಪ್ರಾಣಿಯ ಮೇಲಿನ ತಮ್ಮ ಪ್ರೀತಿಯನ್ನು ಬದುಕಿರುವ ಪ್ರಾಣಿ ಮೇಲೆ ತೋರುತ್ತಿದ್ದಾರೆ ಎಂದರೆ ಅದಕ್ಕೆ ಆದರ್ಶವಾಗಿ ನಿಲ್ಲಬಲ್ಲ ತಾಕತ್ತು ಭಾರತಕ್ಕೆ ಮಾತ್ರ ಇರುವುದು.

ಹೌದು, ಸಸ್ಯಾಹಾರ...ಸಸ್ಯಾಹಾರ ಎಂದು ಬಡಕೊಳ್ತೀರಲ್ಲ. ಏನಿದೆ ಅಂಥದ್ದು ಅದರಲ್ಲಿ ಎಂದು ನಮ್ಮ ನಡುವಿನ ಘಟಾನುಘಟಿಗಳನ್ನು ಕೇಳಿದರೆ, ಗಾಂಧೀಜಿ ಹೇಳ್ತಾರೆ...ಅದು ನನಗೆ ಬದುಕು ಕಲಿಸಿದ ಪಾಠ. ಅಹಿಂಸೆಯ ಹಾದಿ. ಮೊದಮೊದಲು ಅಮ್ಮನನ್ನು ಮೆಚ್ಚಿಸಲು ಮಾಂಸಾಹಾರ ತ್ಯಾಜಿಸಿದ್ದೆ. ಆದರೆ ಭೂಮಿ ಮೇಲೆ ಬದುಕಲು ನಮಗೆಷ್ಟು ಹಕ್ಕಿದೆಯೋ ಪ್ರಾಣಿಗಳಿಗೂ ಅಷ್ಟೇ ಇದೆ ಎಂಬ ಅರಿವು ಎಂದು ನನಗಾಯ್ತೇ ಅಂದಿನಿಂದ ಸಸ್ಯಾಹಾರವೇ ನನ್ನ ಜೀವನರೀತಿಯಾಯ್ತು ಎಂದು ರವೀಂದ್ರನಾಥ್ ಠಾಗೋರ್ ಪ್ರಕಾರ, 'ಮಾಂಸಸೇವನೆ ನಮ್ಮ ಆಂತರ್ಯದಲ್ಲಿ ಅಡಗಿರುವ ಕ್ರೂರತೆಗೆ ಹಿಡಿದ ಕನ್ನಡಿ. ಕ್ರೂರತೆಗಿಂತ ಪಾಪ ಇನ್ನೇನಿದೆ? ನಮ್ಮ ಹೃದಯ ಜಡ್ಡುಗಟ್ಟಿಲ್ಲವೆಂದರೆ ಪ್ರಾಣಿ ಹತ್ಯೆಯನ್ನು ಅದು ಖಂಡಿತಾ ಖಂಡಿಸುತ್ತದೆ'.

ಇನ್ನೂ ಮುಂದುವರಿದು ಜ.12 ಅನ್ನು ವಿಶ್ವ ಸಸ್ಯಾಹಾರಿಗಳ ದಿನವನ್ನಾಗಿ ಆಚರಿಸೋಣವೆಂದು ಕರೆ ನೀಡುತ್ತಾರೆ. ಅಮಿತಾಭ್ ಬಚ್ಚನ್‌ಗೆ ಸಸ್ಯಾಹಾರ ಅಳವಡಿಸಿಕೊಳ್ಳಲು ಅದು ತನ್ನ ನಾಲಗೆಗೆ ಇಷ್ಟವಾಗುತ್ತದೆ. ಎಂಬ ಸಂಗತಿ ಸಾಕು.

ಸಸ್ಯಾಹಾರಿಗಳಲ್ಲಿ ಶಕ್ತಿ ಕಡೆಮೆ ಎಂದರೆ ಭಾರತದ ನಂ.1 ಬಾಡಿಬಿಲ್ಡರ್ ವಾರಿಂದರ್ ಸಿಂಗ್ ತೊಡೆ ತಟ್ಟಿ ನಿಲ್ಲುತ್ತಾನೆ. ಒಲಂಪಿಕ್‌ನಲ್ಲಿ ಕಂಚು ಪಡೆದ ಸುಶೀಲ್ ಕುಮಾರ್ ಕುಸ್ತಿಗೆ ಕರೆಯುತ್ತಾರೆ

ಮರು ಮಾತನಾಡಿದವ ಪಡ್ಚ! ಫಿಟ್ನೆಸ್ ಕಡಿಮೆ ಎಂದರೆ ಬಾಲಿವುಡ್ ನಟರಾದ ಜಾನ್ ಅಬ್ರಾಹಂ, ಶಾಹಿದ್ ಕಪೂರ್ ಶರ್ಟ್ ಬಿಚ್ಚಿಕೊಂಡು ಕುದುರೆಯ ಪಕ್ಕ ಓಡಿ 'ವಾವ್‌' ಎನಿಸಿ ಕೊಂಡಾರು. ಮಲ್ಲಿಕಾ ಶೆರಾವತ್, ಕರೀನಾ ಕಪೂರ್, ಅಮೃತಾ ರಾವ್, ಅಮಿಶಾ ಪಟೇಲ್, ಮಂದಿರಾ ಬೇಡಿ, ಇಶಾ ಡಿಯೋಲ್, ಯಾನಾ ಗುಪ್ತಾ, ದಿಯಾ ಮಿರ್ಜಾ ಸಾಲಿನಲ್ಲಿ ರ್ಯಾಂಪ್‌ವಾಕ್ ನಡೆಸುತ್ತಾರೆ.

ಇನ್ನು ಬುದ್ಧಿ ಬೆಳವಣಿಗೆ ಕಡಿಮೆ ಎಂದರೆ ವಿಜ್ಞಾನಿಗಳಾದ ಥಾಮಸ್ ಎಡಿಸನ್, ಐನ್‌ಸ್ಟ್ರೀನ್, ವಿಶ್ವೇಶ್ವರಯ್ಯ. ಸಿ.ವಿ.ರಾಮನ್. ಸ್ಟೀವ್ ಜಾಬ್ಸ್ ತಲೆಯೊಳಗೆ ಇಣುಕಿದರೆ ಅದೆಷ್ಟು ಸಸ್ಯಗಳು ಮೆದುಳೊಳಗೆ ಬೆಳೆದು ನಿಂತಿದ್ದಾವೋ, ಅಲ್ಲಲ್ಲ, ಮೆದುಳನ್ನೇ ಬೆಳೆಸಿ ನಿಂತಿದ್ದಾವೋ!

ರಾಜಕೀಯ ಕ್ಷೇತ್ರದಲ್ಲಿ ಬಿಲ್ ಕ್ಲಿಂಟನ್, ಬೆಂಬಮಿನ್ ಫ್ರ್ಯಾಂಕ್ಲಿನ್, ಅಬ್ದುನ್ ಕಲಾಂ, ನರೇಂದ್ರ ಮೋದಿ ಎಲ್ಲರೂ ಸಸ್ಯಾಹಾರಿಗಳೇ. ಇವರೆಲ್ಲರೂ ಹುಟ್ಟಿನಿಂದಲ್ಲದೆ, ತಮ್ಮ ಬದುಕಿಗಾಗಿ ಸಸ್ಯಾಹಾರವನ್ನು ಅಳವಡಿಸಿಕೊಂಡಿದ್ದಾರೆ.

ಸಸ್ಯಾಹಾರವೇ ಪರಿಹಾರ
ಆಸ್ಟ್ರೇಲಿಯಾದಲ್ಲಿ ನಮ್ಮ ಕ್ರಿಕೆಟಿಗರು ಸಸ್ಯಾಹಾರ ಸಿಗಲಿಲ್ಲವೆಂದು ಸಿಟ್ಟಾದರು. ನಾನ್‌ವೆಜ್ ತಿನ್ನುವ ಮೈಕೆಲ್ ಕ್ಲಾರ್ಕ್ ಮುಂದೆ ನಮ್ಮ ರೋಹಿತ್ ಶರ್ಮಾ ಯಾವತ್ತೂ ಡಲ್ ಹೊಡೆಯುವುದಿಲ್ಲ. ಮೀನುಪ್ರಿಯ ಮಿಚೆಲ್ ಜಾನ್ಸ್‌ನ್ ಎದುರು ನಮ್ಮ ಇಶಾಂತ್ ಶರ್ಮಾ ವೀಕ್ ಅಲ್ಲವೇ ಅಲ್ಲ. ಸಸ್ಯಾಹಾರಿಗಳಿಗೂ ಬೆಲೆಕೊಡಿ ಸಾರ್. ಇಡೀ ಜಗತ್ತೇ 'ವೇಗನಿಸಂ' ಆಗುತ್ತಿರುವ ಈ ಹೊತ್ತನಲ್ಲಿ ಸಸ್ಯಾಹರ ಯಾಕೆ ಅನಿವಾರ್ಯ ಎನ್ನುವವರಿಗೆ ಒಂದಿಷ್ಟು ಉತ್ತರ...

ಯಾಕಾಗಿ ಸಸ್ಯಾಹಾರ?
ನಮ್ಮ ಆರೋಗ್ಯಕ್ಕಾಗಿ


ರಿಸರ್ಚ್‌ಗಳ ಪ್ರಕಾರ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಅಲ್ಲದೆ, ಸಸ್ಯಾಹಿರಿಗಳ ಜೀವಿತಾವಧಿ ಮಾಂಸಾಹಾರಿಗಳಿಗಿಂತ ಹೆಚ್ಚೆಂಬುದೂ ನಿರೂಪಿತ. ಪ್ರಸ್ತುತ ಹೆಚ್ಚಿನ ಕಾಯಿಲೆಗಳ ಮುಖ್ಯ ಕಾರಣ ಒಬೆಸಿಟಿ. ಅಂದರೆ ವಿಪರೀತ ಕೊಲೆಸ್ಟೆರಾಲ್. ಸಸ್ಯ ಜನ್ಯ ಆಹಾರಗಳಲ್ಲಿ ಕೊಬ್ಬು ಹೆಚ್ಚಿಸುವ ಅಂಶಗಳು ಕಡಿಮೆ. ಹೀಗಾಗಿ ಹೃದಯ ರೋಗಗಳು, ಬಿಪಿ ಇವರಿಂದ ಸಾಧ್ಯವಾದಷ್ಟು ದೂರ ಉಳಿಯುತ್ತವೆ.

ಪ್ರಾಣಿಗಳಿಗಾಗಿ
ಸಹಜೀವಿಗಳಾದ ಪ್ರಾಣಿಗಳನ್ನು ಕೊಲ್ಲಲು ನಮಗೆ ಹಕ್ಕಿಲ್ಲ. ಪ್ರಾಣಿಗಳು ಸತ್ತ ಮೇಲಲ್ಲ, ಬದುಕಿರುವಾಗಲೇ ಪ್ರೀತಿಸುವುದು ಉತ್ತಮವಲ್ಲವೇ?

ಪರಿಸರ ಪ್ರಜ್ಞೆಯಿಂದ
ಎಲ್ಲ ವಿಧದ ಜೀವಿಗಳೂ ಒಂದು ಬ್ಯಾಲೆನ್ಸ್‌ನಲ್ಲಿ ಪರಿಸರ ನಡೆಸುತ್ತಿರುತ್ತವೆ. ಇದರಲ್ಲಿ ಸ್ವಲ್ಪವೇ ಏರುಪೇರಾದರೂ ಫಲಿತಾಂಶವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಪ್ರಾಣಿಗಳ, ಸಸ್ಯಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿ ಕೊಳ್ಳುಮುದು ನಮ್ಮ ಜವಾಬ್ದಾರಿ. ಮೊದಲೇ ಹೆಚ್ಚುತ್ತಿರುವ ಕಾರ್ಬನ್ ನಮ್ಮ ಸುತ್ತಲಿನ ವಾತಾವರಣದ ಪೊರೆಯನ್ನು ವಿಷಯುಕ್ತವಾಗಿಸುತ್ತಿದೆ. ಅಂಥದರಲ್ಲಿ ಪ್ರಾಣಿಜನ್ಯ ಆಹಾರವಸ್ತುಗಳು ವಾತಾವರಣಕ್ಕೆ ಮತ್ತಿಷ್ಟು ಕಾರ್ಬನ್ ಹೆಜ್ಜೆ ಗುರುತನ್ನು ಸೇರಿಸುತ್ತವೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com