ಕಬ್ಬಿಣದ ರಥ ಕಟ್ಟುವ ಪವಾರರ ಪವರ್

ಕಬ್ಬಿಣದ ರಥ ಕಟ್ಟುವ ಪವಾರರ ಪವರ್

ಇಲ್ಲೊಬ್ಬರು ಪರಿಸರ ಉಳಿಸುವುದರ ಜೊತೆಗೆ ದೀರ್ಘಕಾಲಿನ ಬಾಳಿಕೆ ಬರುವ...
Published on

ದೇಶದಲ್ಲಿ ಪ್ರತಿ ಮಠಮಾನ್ಯ ದೇವಸ್ಥಾನಕ್ಕೂ ತೇರು ಇದ್ದೇ ಇರುತ್ತದೆ. ಅದಕ್ಕೆ ಉತ್ತಮ ಗುಣಮಟ್ಟದ ಕಟ್ಟಿಗೆಯೂ ಬೇಕು. ಕಟ್ಟಿಗೆಗೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಪರಿಸರ ನಾಶ ಮಾಡಲೇಬೇಕು. ಆದರೆ ಇಲ್ಲೊಬ್ಬರು ಪರಿಸರ ಉಳಿಸುವುದರ ಜೊತೆಗೆ ದೀರ್ಘಕಾಲಿನ ಬಾಳಿಕೆ ಬರುವ, ಶಾಸ್ತ್ರ ಸಂಪ್ರದಾಯಕ್ಕನುಗುಣವಾಗಿ ರಥಶಾಸ್ತ್ರ ಸೂತ್ರದನ್ವಯ ಕಬ್ಬಿಣ ಬಳಸಿ ಸುಂದರ ತೇರು ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.

ನಾಡು ಮಾತ್ರವಲ್ಲದೆ ಬೇರೆ ರಾಜ್ಯಗಳ ಮಠಮಾನ್ಯ ದೇವಸ್ಥಾನಗಳಿಗೆ ಇದುವರೆಗೂ 200 ಕಬ್ಬಿಣದ ತೇರು ಮಾಡಿಕೊಟ್ಟು ಭೇಷ್ ಎಂದು ಬೆನ್ನು ತಟ್ಟಿಸಿಕೊಂಡಿದ್ದಾರೆ ಬಿಜಾಪುರ ಜಿಲ್ಲೆ ಮುದ್ದೇಬಿಹಾಳದ ಪರಶುರಾಮ ರಾಮಚಂದ್ರ ಪವಾರ. ಇವರು ದೇಶದ ಏಕೈಕ ಕಬ್ಬಿಣ ರಥಶಿಲ್ಪಿ ಎಂದೇ ಖ್ಯಾತರು.

ತಮ್ಮ ಸಹೋದರರಾದ ಪ್ರಭು, ಮುಕುಂದ, ಸುಭಾಷ, ಸಂಬಂಧಿಕರಾದ ಗಣೇಶ, ವಿಜಯ ಮತ್ತಿತರರೊಂದಿಗೆ ಈ ಕೆಲಸ ಮಾಡುತ್ತಾರೆ. ನರೇಂದ್ರ "ಎಂಜಿನೀಯರಿಂಗ್ ವರ್ಕ್ಸ್' ಎಂಬ ಕೇಂದ್ರದ ಚುಕ್ಕಾಣಿ ಹಿಡಿದು ಕಬ್ಬಿಣದ ತೇರು ತಯಾರಿಕಯನ್ನೇ ಮೂಲಕಾಯಕವಾಗಿಸಿಕೊಂಡಿದ್ದಾರೆ. ಇದರ ಹಿಂದೆ ಸತತ 23 ವರ್ಷಗಳ ಪರಿಶ್ರಮ ಇದೆ.

ತಯಾರಿಕೆ ಹೇಗೆ?
ರಥಶಾಸ್ತ್ರ ಸೂತ್ರಕ್ಕೆ ಅನುಗುಣವಾಗಿ ತೇರು ತಯಾರಿಸಲಾಗುತ್ತದೆ.  ಒಟ್ಟು 4 ಹಂತ ಹೊಂದಿರುವ ತೇರಿನ ಮೊದಲ ಹಂತ ಪೀಠ ಅಥವಾ ತಳ. ಇದನ್ನು ನಾಗರ ಇಲ್ಲವೆ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ಇದರ ಆಧಾರದ ಮೇಲೆ ರಥದ ಶೈಲಿ. ಇದು ತೇರಿಗೆ ಆಧಾರವೂ ಆಗಿರುತ್ತದೆ. ಎರಡನೇ ಹಂತ ಅಧಿಷ್ಠಾನ. ಇಲ್ಲಿ ಕಂಚು, ಕಬ್ಬಿಣ, ಹಿತ್ತಾಳೆ, ತಾಮ್ರ ಬಳಸಿ ವಿವಿಧ ಆಕಾರದ ಅಲಂಕಾರಿಕ ಪ್ರಾಣಿಗಳು ಅಥವಾ ದೇವರ ಮೂರ್ತಿ ಅಳವಡಿಸಲಾಗುತ್ತದೆ. ಮೂರನೇ ಹಂತ ಮಂಟಪ. ಜಾತ್ರೋತ್ಸವ ಸಂದರ್ಭ ಈ ಮಂಟಪದಲ್ಲಿ ದೇವರ ಮೂರ್ತಿ ಕೂಡಿಸಿ ಪೂಜೆ ಸಲ್ಲಿಸಲು ಅವಕಾಶ. ನಾಲ್ಕನೇ ಮತ್ತು ಅಂತಿಮ ಹಂತ ಶಿಖರ. ಇದನ್ನು ಗೋಪುರ ಅಥವಾ ಕಳಸ ಎಂದು ಕರೆಯುತ್ತಾರೆ.

ರಥ ಗ್ರಂಥೋಕ್ತಿ ಪ್ರಕಾರ 5 ಶೈಲಿಯ ತೇರುಗಳ ಪೈಕಿ ವಿದ್ಯಾರಥ ಬಹು ಜನಪ್ರಿಯ. ಈ ಮಾದರಿಯಲ್ಲೇ ತೇರು ನಿರ್ಮಿಸುತ್ತೇವೆ. ಒಂದು ತೇರು ನಿರ್ಮಿಸಲು ಕನಿಷ್ಠ 10 ಕೆಲಸಗಾರರೊಂದಿಗೆ ಅಂದಾಜು 3 ತಿಂಗಳು ಶ್ರಮಪಡಬೇಕು. ತೇರಿನ ಎತ್ತರ, ಗಾತ್ರ ಮತ್ತು ಭಾರದ ಆಧಾರದ ಮೇಲೆ ಬೆಲೆ ನಿಗಧಿಪಡಿಸಲಾಗುತ್ತದೆ. ಕಬ್ಬಿಣದ ತೇರು ನಿರ್ಮಾಣಕ್ಕೆ ಕಟ್ಟಿಗೆ ತೇರಿಗಿಂತ ಖರ್ಚು ಕಡಿಮೆ. ಕಟ್ಟಿಗೆ ತೇರು ದುಬಾರಿಯಾದರೂ ಪರಿಸರ ನಾಶಕ್ಕೆ ಕಾರಣ. ವರ್ಷಕ್ಕೆ ಒಂದು ಬಾರಿ ಬಣ್ಣ ಬಳಿದು, ಬಿಸಲು ಮಳೆ ತಾಗದಂತೆ ರಕ್ಷಿಸಿದರೆ ದೀರ್ಘ ಬಾಳಿಕೆ ಬರುತ್ತದೆ ಎನ್ನುತ್ತಾರೆ ಪರಶುರಾಮ ಪವಾರ.

ಕಡಿಮೆ ಖರ್ಚಿನ ಪರಿಸರ ಪ್ರೇಮಿ ಕಬ್ಬಿಣ ತೇರು ತಯಾರಿಕೆ ಇಲ್ಲಿ ಉದ್ಯಮವಾಗಿ ಬೆಳೆಯುತ್ತಿದೆ. ಪರಶುರಾಮ ಅವರ ಗರಡಿಯಲ್ಲಿ 30-40 ಕಾರ್ಮಿಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಆಧುನಿಕತೆ ಬೆಳೆದಂತೆ ತೇರಿನ ಗಾತ್ರ, ಮಾದರಿ ವ್ಯತ್ಯಾಸ ಕಾಣುತ್ತಿದೆ. ತೇರು ತಯಾರಿಕೆಯಲ್ಲಿ ಪರಿಣಿತಿ ಸಾಧಿಸಿ, ಯಾವ ಮಠ, ದೇವಸ್ಥಾನ ಮತ್ತು ದೇವರಿಗೆ ಎಂತಹ ತೇರು ಇರಬೇಕು ಎನ್ನುವ ಸಲಹೆಯನ್ನೂ ಪರಶುರಾಮ ಕೊಡುತ್ತಾರೆ. ಮುದ್ದೇ ಬಿಹಾಳ ತಾಲೂಕು ಢವಳಗಿ ಗ್ರಾಮದ ಶ್ರೀಮಡಿವಾಳೇಶ್ವರ ದೇವಸ್ಥಾನದ ಕಬ್ಬಿಣದ ತೇರು ದೇಶದಲ್ಲಿಯೇ ಅತಿ ಎತ್ತರದ ಗಾಲಿಯುಳ್ಳ ಅತಿ ಎತ್ತರದ ತೇರು(55ಅಡಿ) ಎನ್ನುವ ಖ್ಯಾತಿ ಪಡೆದುಕೊಂಡಿದೆ.

ಚಿತ್ರ ಲೇಖನ: ಡಿ.ಬಿ.ವಡವಡಗಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com