ಮಗು ಆಗಿದೆ ಮನ

ನನ್ನ ಸಂಪತ್ತನ್ನು ತೆಗೆದುಕೋ. ನನ್ನ ಖ್ಯಾತಿಯನ್ನೂ ಬೇಕಾದರೆ ಕಸಿದುಕೋ. ಆದರೆ ನನಗೆ ನನ್ನ ಬಾಲ್ಯದ ಆ ಮಳೆಗಾಲ...
ಮಕ್ಕಳು
ಮಕ್ಕಳು

ನನ್ನ ಸಂಪತ್ತನ್ನು ತೆಗೆದುಕೋ. ನನ್ನ ಖ್ಯಾತಿಯನ್ನೂ ಬೇಕಾದರೆ ಕಸಿದುಕೋ. ಆದರೆ ನನಗೆ ನನ್ನ ಬಾಲ್ಯದ ಆ ಮಳೆಗಾಲವನ್ನು, ಆ ಕಾಗದದ ದೋಣಿಯನ್ನು ಮರಳಿ ಕೊಟ್ಟುಬಿಡು. ಹಾಗಂತ ಆರ್ದ್ರವಾಗಿ ಕಾಣದ ಕೈಯಲ್ಲಿ ಮೊರೆಯಿಡುತ್ತಾನೆ ಕವಿ. ಅವನ ಪಾಲಿಗೆ ದೊಡ್ಡವರಾಗುವುದು  ಶಾಪ. ಮಗುವಾಗಿ ಇರುವುದು ಸಂತಸದ ಒಂದು ಸ್ಥಿತಿ. ಅಲ್ಲಿ ದೊಡ್ಡವರ ಜಗತ್ತಿನ ಯಾವ ಜಂಜಡವಿಲ್ಲ. ಚಿಂತೆ ದುಮ್ಮಾನಗಳಿಲ್ಲ, ದೇಹ ಪ್ರೌಢವಾಗಿದೆ. ಮನಸ್ಸು ಮಾಗುತನವನ್ನು ಹಂಬಲಿಸುತ್ತಿದೆ. ಮನಸ್ಸು ಸದಾಕಾಲ ಮಗುವಾಗಿಯೇ ಇರುವಂತಿದ್ದರೆ!

ಮಕ್ಕಳ ದಿನಾಚರಣೆ ಇರುವುದು ದೊಡ್ಡವರಿಗೇ ಹೊರತು ಮಕ್ಕಳಿಗಲ್ಲ. ಯಾಕೆಂದರೆ ಮಕ್ಕಳಿಗೆ ಪ್ರತಿದಿನವೂ ಅವರದೇ ದಿನ. ಈ ದಿನ ತಮ್ಮದೆಂದಷ್ಟೇ ಯೋಚಿಸುವ, ಭೂತ ಭವಿಷ್ಯಗಳ ಹಂಗಿಲ್ಲದ ಅವರ ನಿಮಿತ್ತದಲ್ಲಿ ಸಂಭ್ರಮಿಸಲೊಂದು ದಿನವನ್ನು ನಾವು ಮಾಡಿಟ್ಟುಕೊಂಡಿದ್ದೇವೆ. ನಾವು ಕಳೆದುಕೊಂಡದ್ದು, ನಮ್ಮ ಮಕ್ಕಳು ಕಳೆದುಕೊಳ್ಳಬಾರದ್ದು, ನಾವು ಪಡೆದದ್ದು, ನಮ್ಮ ಮಕ್ಕಳು ಪಡೆಯಬೇಕಾದ್ದು...ಹೀಗೆ ಎಲ್ಲದರ ಮೇಲೊಂದು ಝಲಕ್ ಇಲ್ಲಿದೆ . ಇದು ನಾಳಿನ ಮಕ್ಕಳ ದಿನಕ್ಕಾಗಿ ನಮ್ಮ ಇಂದಿನ ಸ್ಪೆಶಲ್.

ಮರೆಯದ ಮಧುರ ನೆನಪುಗಳು

ಹತ್ತು ಪೈಸೆ ನಾಣ್ಯ: ಇದು ಚಾಲೂ ಇತ್ತು ಮತ್ತು ಇದಕ್ಕೆ ಪೆಪ್ಪರಮಿಂಟುಗಳು ಸಿಗುತ್ತಿದ್ದವು!

ರಾಮಾಯಣ ಸೀರಿಯಲ್: ಪ್ರತಿ ಭಾನುವಾರ ಬೆಳಗ್ಗೆ 9 ಗಂಟೆಗೆ ಎಲ್ಲರೂ ಟಿವಿ ಮುಂದೆ. ಮಕ್ಕಳಿಗೆ ಗಾಂಧಿಸೀಟು!

ಗಾಳಿಪಟ: ಅಂಗಡಿಯಿಂದ ಕಡ್ಲೆ ತಂದ ಹರಿದ ಕಾಗದ , ಪೊರಕೆಕಡ್ಡಿ, ಗಂಜಿ ಅಂಟುಗಳಿಂದ ಆಕಾಶಕ್ಕೆ ಲಗ್ಗೆ

ಕಾಗದದ ದೋಣಿ: ಮಳೆ ಬಂದು ಅಂಗಳದಲ್ಲಿ ನೀರು ಹರಿದರೆ ಅಂದು ನಮ್ಮ ನೌಕಾದಳಕ್ಕೆ ಭರ್ಜರಿ ಕೆಲಸ

ಗುಡ್ಡದ ಹಣ್ಣುಗಳು: ಅವುಗಳಿಗೆ ಅದರದೇ ರುಚಿ. ಇಂದು ಎಷ್ಟು ಹಣ ಕೊಟ್ಟರೂ ಸಿಗದು.

ಕಳೆದುಕೊಳ್ಳಬಾರದ ಐದು ಸಂಗತಿಗಳು

ಪೋಷಕರು ಬಾಲಕರಾಗಿದ್ದಾಗ ಅವರಿಗೆ ಕಲಿಕೆಯ ವಿಶ್ವವಿದ್ಯಾನಿಲಯಗಳಾಗಿದ್ದ, ಇಂದಿನ ಮಕ್ಕಳು ಜತನದಿಂದ ಕಾಪಾಡಿಕೊಳ್ಳಬೇಕಾದ ಕೆಲವು ಸಂಗತಿಗಳು

ಅಜ್ಜ ಅಜ್ಜಿ: ಇವರು ಹಳ್ಳಿ ಬದುಕಿನ ವಿಶ್ವಕೋಶ, ಹೆತ್ತವರು ಸಿಟ್ಟಿಗೆದ್ದರೆ ಮಕ್ಕಳನ್ನು ಕಾಪಾಡುತ್ತಿದ್ದ ದೇವತೆಗಳು

ಬೇಸಿಗೆ ರಜೆ: ಸ್ಕೂಲಿನಿಂದಾಚೆಗೆ ರಂಗು ರಂಗಾದ ಬದುಕಿದೆ ಎಂಬುದನ್ನು ಹೇಳಿಕೊಟ್ಟ ಮಧ್ಯಂತರ ವಿರಾಮ

ಕಾಲುದಾರಿ : ರಾಜಮಾರ್ಗ ಬಿಟ್ಟು ಕಾಲುದಾರಿಗಳಲ್ಲಿ ಹೋದಾಗಲೇ ವೈವಿಧ್ಯಮಯ ಬದುಕಿನ , ಪರಿಸರ ದರ್ಶನ

ಬೀದಿ ಕ್ರಿಕೆಟ್: ಹೊಸ ಹೊಸ ಗೆಳೆಯರು ಸಿಗುವುದು, ಸಮಾಜದೊಂದಿಗೆ ಬೆರೆಯುವುದು, ಹೊಸ ವಿಚಾರಗಳು ಗೊತ್ತಾಗುವುದು ಇಲ್ಲೇ.

ಈಜುಕೊಳ: ದೇಹ ಮನಸ್ಸುಗಳಿಗೆ ಸಿಗುವ ವ್ಯಾಯಮ ಬದುಕಲು ಕಲಿಸುವ ರಹದಾರಿ.


ನೋಡಬೇಕಾದ ಐದು ಸಿನಿಮಾಗಳು

ತಾರೇ ಜಮೀನ್ ಪರ್: ಡಿಸ್‌ಲೆಕ್ಸಿಯಾ ಎಂಬ ಅಪೂರ್ವ ಸಮಸ್ಯೆ ಹೊಂದಿದ ಪುಟ್ಟ ಹುಡುಗ ಮತ್ತು ಸಹೃದಯಿ ಮೇಸ್ಟ್ರೊಬ್ಬನ ಕತೆ.

ಗುಬ್ಬಚ್ಚಿಗಳು: ನಗರಗಳಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳ ಬೆನ್ನು ಹತ್ತಿ ಹೊರಟವರ ಅರಿವಿನ ಬೆಳಕಿಗೆ ಮುಖಾಮುಖಿಯಾಗುವ ವಿಶಿಷ್ಟ ಚಿತ್ರ.

ಗುರುಶಿಷ್ಯರು: ಈ ಹಾಸ್ಯಮಯ ಚಲನಚಿತ್ರ ದೊಡ್ಡವರೆಲ್ಲಾ ಜಾಣರಲ್ಲ ಎಂಬ ಸಂದೇಶವನ್ನೂ ಹೊಂದಿ ನಕ್ಕು ನಗಿಸುತ್ತದೆ.

ಗಾಡ್ಸ್ ಮಸ್ಟ್ ಬಿ ಕ್ರೇಝಿ: ಆಫ್ರಿಕಾದ ಕಾಡಿನ ಬುಡಕಟ್ಟು ನಾಗರಿಕ ಸಮಾಜದ ಮುಖಾಮುಖಿಯ ಈ ಕತೆ ಸರಳವಾಗಿದ್ದು ಸಾಕಷ್ಟು ನಗಿಸುತ್ತದೆ.

ಹ್ಯಾರಿ ಪಾಟರ್ ಸೀರೀಸ್ : ಹ್ಯಾರಿ ಎಂಬ ಪುಟಾಣಿ ಮತ್ತವನ ಮಾಂತ್ರಿಕ ಬಳಗ ಮಾಡುವ ಸಾಹಸಗಳು , ದೃಶ್ಯ  ವೈಭವ ನೀಡುವ ಅನುಭವ ಅಮೋಘ.

ಓದಬೇಕಾದ ಐದು ಪುಸ್ತಕಗಳು

ಬದುಕನ್ನು ಓದಲು ಕಲಿಸುವ, ಮನಸ್ಸಿಗೆ ಸೃಜನಶೀಲತೆಯ ಚಪಲ ಹತ್ತಿಸುವ, ಅಭಿರುಚಿಯ ಪಾಠಗಳನ್ನು ನಮಗರಿವಿಲ್ಲದಂತೆ ಕಲಿಸುವ ಪುಸ್ತಕಗಳ ಸಂಗ.

ಲಾರಾ ಇಂಗೆನ್ಸ್ ವೈಲ್ಡರ್ ಸೀರೀಸ್: ಲಾರಾ ಎಂಬ ಪುಟ್ಟ ಹುಡುಗಿ ಮತ್ತವಳ ಕುಟುಂಬದ ಕತೆಯನ್ನು ಹೇಳುವ 9 ಪುಸ್ತಕಗಳ ಸರಣಿ.

ಬೊಮ್ಮನಹಳ್ಳಿಯ ಕಿಂದರಿಜೋಗಿ: ಕಾವ್ಯಾತ್ಮಕ ಸೊಗಸಿನ, ಕನ್ನಡ ಭಾಷೆಯ ಶ್ರೀಮಂತಿಕೆಯ ಆಸ್ವಾದವನ್ನು ಮಕ್ಕಳಿಗೆ ಮುಟ್ಟಿಸುವ ಕುವೆಂಪು ಕೃತಿ.

ಚಂದಮಾಮ: ಒಂದು ಕಾಲದ ಮಕ್ಕಳ ಆಪ್ತ ಸಂಗಾತಿ. ಪೋಷಕರು ಜತೆಗೆ ಕೂತು ಸಮಯ ಕಳೆಯಲು, ಓದಿ ಹೇಳಲು ಸೂಕ್ತ.

ಅಮರ ಚಿತ್ರಕತೆ: ಚಿತ್ರಗಳ ಮೂಲಕ ಕತೆ ದಾಟಿಸುವ, ಎಂಥ ಸಂಕೀರ್ಣ ಕತೆಯನ್ನೂ ಕಾಮಿಕ್ಸ್ ಮಾದರಿಯಲ್ಲಿ ಮಕ್ಕಳೆಡೆಗೆ ತಂದ ಟ್ರೆಂಡ್‌ಸೆಟ್ಟರ್.

ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ: ಗಾಂಧೀಜಿಯ ಕತೆಯನ್ನು ಸರಳವಾಗಿ ಹೇಳುವ ಬೊಳುವಾರು ಮಹಮ್ಮದ್ ಕುಂಞಿ ಅವರ ಪುಸ್ತಕ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com