ಕನ್ನಡದ ಪರಿಮಳ

ಕನ್ನಡಕ್ಕಾಗಿ ಇರುವೆನು, ಕನ್ನಡಕ್ಕಾಗಿ ದುಡಿಯುವೆನು, ಕನ್ನಡಕ್ಕಾಗಿ ಮಡಿಯುವೆನು...
ಕನ್ನಡ ಕಸ್ತೂರಿ ಬ್ರಾಂಡ್‌ನ ಮಾಲೀಕ ಶಂಕರ ಹೇರಲಗಿ
ಕನ್ನಡ ಕಸ್ತೂರಿ ಬ್ರಾಂಡ್‌ನ ಮಾಲೀಕ ಶಂಕರ ಹೇರಲಗಿ

ಊದಿನಕಡ್ಡಿ ಕಂಪಿನಲ್ಲಿ ಭಾಷಾಭಿಮಾನ!
ವಿಜಯಾಪುರದ ಶಂಕರ ಹೇರಲಗಿ ತಯಾರಿಸುವ 20 ಬ್ರಾಂಡ್ ಊದಿನಕಡ್ಡಿಯಲ್ಲಿ ಅಕ್ಷರಶಃ ಕನ್ನಡ ಘಮ

-ರುದ್ರಪ್ಪ ಆಸಂಗಿ

ಕನ್ನಡಕ್ಕಾಗಿ ಇರುವೆನು, ಕನ್ನಡಕ್ಕಾಗಿ ದುಡಿಯುವೆನು, ಕನ್ನಡಕ್ಕಾಗಿ ಮಡಿಯುವೆನು...

ಇದು ವಿಜಯಾಪುರದ ಊದಿನಕಡ್ಡಿ ಉದ್ಯಮಿ ಶಂಕರ ಹೇರಲಗಿ ಅವರಿಗಿರುವ ಕನ್ನಡ ಪ್ರೇಮದ ಪರಿ..! 15 ವರ್ಷಗಳಿಂದ ಶಂಕರ ಹೇರಲಗಿ ಅವರು ಊದಿನಕಡ್ಡಿ ಕಾರ್ಖಾನೆಯಲ್ಲಿ 20 ಬ್ರಾಂಡ್‌ಗಳ ಊದಿನಕಡ್ಡಿಯನ್ನು ತಯಾರಿಸುತ್ತಿದ್ದಾರೆ. ಜನ ಸಾಮಾನ್ಯರಲ್ಲಿ ಕನ್ನಡಾಭಿಮಾನ ಸದಾಕಾಲ ಜಾಗೃತಗೊಳಿಸುವ ಸಲುವಾಗಿಯೇ ಕನ್ನಡ ಕಸ್ತೂರಿ ಊದಿನಕಡ್ಡಿ ಬ್ರಾಂಡ್ ಹೊರ ತಂದಿದ್ದಾರೆ.

ಹೇರಲಗಿ ಪ್ರಥಮ ಬಾರಿಗೆ ಕನ್ನಡ ಕಸ್ತೂರಿ ಬ್ರಾಂಡ್ ಮೇಲೆ ಕನ್ನಡ ಗೀತೆಗಳನ್ನು ಒಳಗೊಂಡ 40 ಸಾವಿರ ಪ್ಯಾಕ್‌ಳನ್ನು ಹೊರತಂದರು. ಈ ಪ್ಯಾಕ್‌ಗಳಿಗೆ ಅದೆಷ್ಟು ಬೇಡಿಕೆ ಎಂದರೆ ಕೆಲವೇ ದಿನಗಳಲ್ಲಿ ಒಂದು ಪ್ಯಾಕ್ ಕೂಡ ಉಳಿಯಲಿಲ್ಲ..! ಬೇಡಿಕೆ ಗಮನಿಸಿ ಮತ್ತೆ 20000 ಪ್ಯಾಕ್‌ಂಗಳನ್ನು ಮೂರು ಹಂತದಲ್ಲಿ ಹೊರತಂದಿದ್ದಾರೆ. ಇದುವರೆಗೆ 1 ಲಕ್ಷ ಕನ್ನಡ ಕಸ್ತೂರಿ ಪ್ಯಾಕ್‌ಗಳನ್ನು ಮುದ್ರಿಸಿ ವಿಜಯಾಪುರ, ಕೋಲ್ಕತಾ, ಛತ್ತೀಸ್‌ಗಡ, ರಾಜಸ್ತಾನ, ಆಂಧ್ರದ ಧರ್ಮಾವರಂ ಮುಂತಾದ ಕಡೆ ಕನ್ನಡ ಕಸ್ತೂರಿ ಕಂಪನ್ನು ಬೀರಿದ್ದಾರೆ.

ಆಯಾ ರಾಜ್ಯಗಳ ಭಾಷೆಯಲ್ಲಿ ಕನ್ನಡಾಭಿಮಾನದ ಗೀತೆಗಳನ್ನು ಮುದ್ರಿಸುವ ವಿಚಾರವೂ ಹೇರಲಗಿ ಅವರಲ್ಲಿದೆ. ಕನ್ನಡ ಕಸ್ತೂರಿ ಊದಿನಕಡ್ಡಿ ಪ್ಯಾಕ್ ಅತಿ ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ದೊರೆಯುತ್ತದೆ.

ಹೇರಲಗಿ ತಮ್ಮ ಊದಿನಕಡ್ಜಿ ವ್ಯಾಪಾರದ ಜಂಜಾಟದ ಮಧ್ಯೆಯೇ ಕವನ ಬರೆಯುತ್ತಾರೆ. ಎಲ್ಲ ಕವನಗಳು ಕನ್ನಡಾಭಿಮಾನದ ಕುರಿತಾದದ್ದು. ಕನ್ನಡ ಮಲ್ಲಿಗೆ ಎಂಬ ಹೊಸಬ್ರಾಂಡ್, ಜತೆಗೆ ಭಾರತ ಒಂದೇ ಎಂಬ ಹೆಸರಿನಲ್ಲಿಯೂ ಊದಿನ ಕಡ್ಡಿ ಬ್ರಾಂಡ್ ಹೊರತರಲು ಉತ್ಸುಕರಾಗಿದ್ದಾರೆ. ಇದಲ್ಲದೆ ಶಾಲಾ ಮಕ್ಕಳಿಗೆ ಕನ್ನಡ ಕಸ್ತೂರಿ ಗೀತೆ ಮುದ್ರಿಸಿದ ಉಚಿತ ನೋಟ್ ಪುಸ್ತಕ ವಿತರಿಸುವುದು, ಪ್ರತಿ ವರ್ಷ ದಸರೆಗೆ ಸಾರ್ವಜನಿಕ ಸ್ಥಳದಲ್ಲಿ 6 ಕೆಜಿ ತೂಕದ ಐದು ಅಡಿ ಎತ್ತರದ ಬೃಹತ್ ಊದಿನಕಡ್ಡಿಯನ್ನು ನಿರ್ಮಿಸಿ ಪ್ರದರ್ಶಿಸುವುದು ಅವರ ಹವ್ಯಾಸಗಳು.

1ರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆ ತೆರೆಯುವುದು ಮುಂದಿನ ಯೋಜನೆ, ತಮ್ಮ ಕಾರ್ಖಾನೆಗೆ ಸಗಟು ಖರೀದಿಗೆ ಬರುವ ವ್ಯಾಪಾರಿಗಳಿಗೆ ಕನ್ನಡದಲ್ಲಿಯೇ ವ್ಯವಹರಿಸಿ, ರಾಜ್ಯದ ಉತ್ತಮ ಪ್ರಜೆಯಾಗಿ ಎಂಬ ನಾಮಫಲಕ ಹಂಚುತ್ತಾರೆ.

ಲಾಭಕ್ಕಿಂತ ಭಾಷೆ ದೊಡ್ಡದು
ನಾನು ಕನ್ನಡ ಕಸ್ತೂರಿಯಿಂದ ಲಾಭ ನಿರೀಕ್ಷೆ ಮಾಡುವುದಿಲ್ಲ. ಇಲ್ಲಿ ಲಾಭಕ್ಕಿಂತ ಕನ್ನಡಾಭಿಮಾನ ನನಗೆ ದೊಡ್ಡದು. ಕನ್ನಡ ಜನರ ಮನ, ಮನಗಳಿಗೆ ತಲುಪಿದರೆ ಅದೇ ನನಗೆ ದೊಡ್ಡ ಖುಷಿ. ಕವನ ಸಂಕಲನ ಪುಸ್ತಕದ ರೂಪದಲ್ಲಿ ತಂದರೆ ಕೆಲವೇ ಜನರು ಪುಸ್ತಕ ಓದುತ್ತಾರೆ. ಆದರೆ ಊದಿನಕಡ್ಡಿ ಪ್ಯಾಕ್ ಮೇಲೆ ಎಲ್ಲರೂ ಒಂದೆರಡು ಸಾಲು ಓದಿದರೆ ಸಾಕು. ನನ್ನ ಶ್ರಮ ಸಾರ್ಥಕವಾಗುತ್ತದೆ ಎಂದು ಶಂಕರ ಹೇರಲಗಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com