ಮಹಾ ರಜನಿ: ಒನ್ ಅಂಡ್ ಒನ್ಲೀ ಸೂಪರ್‌ಸ್ಟಾರ್‌ನ ಆತ್ಮಕಥೆ

ಆದಿನಗಳಲ್ಲಿ ಬೆಂಗಳೂರಿನ ತಾಪಮಾನ..
ಮಹಾ ರಜನಿ: ಒನ್ ಅಂಡ್ ಒನ್ಲೀ ಸೂಪರ್‌ಸ್ಟಾರ್‌ನ ಆತ್ಮಕಥೆ

ಆದಿನಗಳಲ್ಲಿ ಬೆಂಗಳೂರಿನ ತಾಪಮಾನ ಹಗಲು ಹೊತ್ತಿನಲ್ಲಿ ಅಬ್ಬಬ್ಬಾ ಎಂದರೆ 25.5 ಡಿಗ್ರಿ ಸೆಲ್ಸಿಯಸ್ ತಲುಪುತ್ತಿತ್ತು. ರಾತ್ರಿ 9.45ರ ಹೊತ್ತಿಗೆ 12.2 ಡಿಗ್ರಿ ಸೆಲ್ಸಿಯಸ್‌ಗೂ ಇಳಿಯುತ್ತಿತ್ತು. ಅಂದು ಮಂಗಳವಾರ, ಡಿಸೆಂಬರ್ 12, 1950.  ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿಯಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ಮರಾಠ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು. ದಂಪತಿಗಳ ನಾಲ್ಕನೆಯ ಕೂಸಾಗಿ ಜನಿಸಿದ ಆ ಮಗುವಿಗೆ ಮರಾಠಿ ವೀರ ಶಿವಾಜಿಯ ಹೆಸರನ್ನು ಇಡಲಾಯಿತು. ಆದರೆ ವಿಧಿ ವಿಲಾಸ ನೋಡಿ, ಮಹಾರಾಜನ ಹೆಸರನ್ನು ಪಡೆದ ಆ ಮಗುವಿಗೆ ಅದೇ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕಾಗುತ್ತದೆಂದು ಯಾರಿಗೂ ಅರಿವಿರಲಿಲ್ಲ. ಅಷ್ಟೇಕೆ ಮುಂದೆ ಅದೇ ಬಾಲಕ ದಕ್ಷಿಣ ಭಾರತದ ಮನೆಮಾತಾಗುತ್ತ್ತಾನೆಂದೂ ಕೂಡ ಯಾರೂ ಕನಸು ಕಂಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಲೇಖಕ ನಮನ್ ರಾಮಚಂದ್ರನ್ ಬರೆದಿರುವ 'ರಜನಿಕಾಂತ್: ದಿ ಡೆಫಿನಿಟಿವ್ ಬಯಾಗ್ರಫಿ' (2012) ಕೆಲವು ಚುಕ್ಕೆಗಳನ್ನು ಸೇರಿಸಿ ಒಂದು ಕಥೆಯನ್ನು ಹೇಳುತ್ತದೆ. ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಸುತ್ತ ಇದ್ದ ಅಜ್ಞಾನದ ಜೇಡರ ಬಲೆಯನ್ನು ತೆಗೆದುಹಾಕುವಲ್ಲಿ ಈ ಜೀವನಚರಿತ್ರೆ ಯಶಸ್ವಿಯಾಗಿದೆ. ನಮನ್ ರಾಮಚಂದ್ರನ್ ತಾಳ್ಮೆಯಿಂದ ನಟನ ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದ ಜಾಡು ಹಿಡಿದು ಆತ ನಟಿಸಿದ ಸುಮಾರು 150ಕ್ಕೂ ಹೆಚ್ಚು ಚಿತ್ರಗಳ ಬಗ್ಗೆ ಗಮನಹರಿಸಿದ್ದಾರೆ.

ಶಿವಾಜಿಯೆಂಬ ತಾರೆಯ ಜನನ
ಪೊಲೀಸ್ ಪೇದೆ ರಾಣೋಜಿ ರಾವ್ ಗಾಯಕ್ವಾಡ್ ಮತ್ತು ರಾಮ್‌ಬಾಯಿಗೆ ಜನಿಸಿದ ನಾಲ್ಕು ಮಕ್ಕಳೆಂದರೆ ಅಶ್ವತ್ ಬಾಲುಬಾಯಿ (ಅಶ್ವಥಮ್ಮ), ನಾಗೇಶ್ವರ ರಾವ್, ಸತ್ಯನಾರಾಯಣ ರಾವ್ ಮತ್ತು ಶಿವಾಜಿ ರಾವ್. ಮಕ್ಕಳು ಅವರಿಗೆ ಹೊರೆಯಾಗಿರಲಿಲ್ಲವಾದರೂ 'ಆರು ಜನರ ಕುಟುಂಬವನ್ನು ಬರುತ್ತಿದ್ದ ಚಿಕ್ಕ ಸಂಬಳದಲ್ಲಿ ಸಾಕುವುದು ಸುಲಭದ ಮಾತೇನಾಗಿರಲಿಲ್ಲ' ಎಂದು ಲೇಖಕ ಹೇಳುತ್ತಾರೆ. 1956ರಲ್ಲಿ ನಿವೃತ್ತಿ ಹೊಂದಿದ ರಾಣೋಜಿ ಪೊಲೀಸ್ ಕ್ವಾರ್ಟರ್ಸ್ ಬಿಟ್ಟು ನಗರದ ಅತಿ ಹಳೆಯ ಪ್ರದೇಶಗಳಲ್ಲಿ ಒಂದಾದ ಹನುಮಂತನಗರದ ಒಂದು ಬಾಡಿಗೆಯ ಮನೆಗೆ ತೆರಳಿದರು. ತನ್ನ ಪಿಂಚಣಿ ಮತ್ತು ಉಳಿತಾಯದ ಹಣದಿಂದ 5000 ರುಪಾಯಿ ಹೊಂದಿಸಿದ ರಾಣೋಜಿ ಅದೇ ಪ್ರದೇಶದಲ್ಲಿ ಒಂದು ಸಾಧಾರಣ ಮನೆಯೊಂದನ್ನು ಖರೀದಿಸಿದರು.
'ನಮ್ಮ ಸಂಸಾರ ತಂದೆಗೆ ಬರುತ್ತಿದ್ದ ವಾರ್ಷಿಕ 1000 ರುಪಾಯಿ ಪಿಂಚಣಿಯನ್ನೇ ಅವಲಂಬಿಸಿತ್ತು. ನಮ್ಮ ಊಟ, ಬಟ್ಟೆ ಮತ್ತು ಇತರೆ ಎಲ್ಲಾ ಖರ್ಚುಗಳೂ ಆ ಮೊತ್ತದಲ್ಲಿಯೇ ನಡೆಯಬೇಕಾಗಿತ್ತು' ಎಂದು ರಜನಿಕಾಂತ್ ಅಣ್ಣ ಸತ್ಯನಾರಾಯಣ ನೆನೆಪಿಸಿಕೊಳ್ಳುತ್ತಾರೆ.
  ಅವರೆಲ್ಲಾ ಮನೆಯಲ್ಲಿ ಮರಾಠಿ ಮತ್ತು ಹೊರಗೆ ಕನ್ನಡ ಭಾಷೆ ಬಳಸುತ್ತಿದ್ದರು. ಶಿವಾಜಿ ಆರು ವರ್ಷದವನಾದಾಗ ಅವನನ್ನು ರಾಮ್‌ಬಾಯಿ ಗವಿಪುರಂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಸೇರಿಸಿದರು. ಹದಿನಾರು ವರ್ಷದ ಸತ್ಯನಾರಾಯಣ ಎಸ್.ಎಸ್.ಎಲ್.ಸಿ. ನಂತರ ಮನೆಗೆ ಸಹಾಯವಾಗಲೆಂದು ಓದನ್ನು ಬಿಟ್ಟು ಸಗಟು ವ್ಯಾಪಾರದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ತಿಂಗಳಿಗೆ 50 ರುಪಾಯಿ ಸಂಬಳ ಕೊಡುತ್ತಿದ್ದ ಆ ಕೆಲಸ ದಿನಕ್ಕೆ 13 ಗಂಟೆಗಳ ಶ್ರಮದ ಕೆಲಸ ಬೇಡುತ್ತಿತ್ತು. ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ.) ಸೇರಿದ ಸತ್ಯನಾರಾಯಣ 'ನಾನು ಆಗ ಕೂಲಿಗಳ ನಾಯಕ'ನಾಗಿದ್ದೆನೆಂದು ನೆನೆಸಿಕೊಂಡು ನಗುತ್ತಾರೆ. ಎರಡು ವರ್ಷಗಳ ನಂತರ ಬೆಂಗಳೂರು ನಗರಪಾಲಿಕೆಗೆ ಅವರನ್ನು ವರ್ಗಾಯಿಸಲಾಯಿತು. ಕೆಲವೊಮ್ಮೆ ಜೀವನಚರಿತ್ರೆ ಓದಲು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ. ಆದರೆ ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಮೇಲೆ ಬರೆದಿರುವ ಈ ಪುಸ್ತಕ ತ್ವರಿತವಾಗಿ ಓದಿಸಿಕೊಂಡು ಹೋಗುತ್ತದೆ.

ಆಧ್ಯಾತ್ಮಿಕ ಒಲವು
'ಬಾಲ್ಯದಲ್ಲಿ ಬಹಳ ತುಂಟನಾಗಿದ್ದ ಶಿವಾಜಿ ಓದಿನಲ್ಲಿ ಬಹಳ ಚುರುಕಾಗಿದ್ದ. ನೆರೆಹೊರೆಯ ಮಕ್ಕಳೊಡನೆ ಕ್ರಿಕೆಟ್, ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಡುತ್ತಿದ್ದ', ಎಂದು ಸತ್ಯನಾರಾಯಣ ನೆನೆಸಿಕೊಳ್ಳುತ್ತಾರೆ. ಬಾಲ್ಯದಲ್ಲೇ ಕಂಡ ಆಧ್ಯಾತ್ಮಿಕ ಒಲವನ್ನು ಅಲಕ್ಷ್ಯ ಮಾಡದೆ ಆತನನ್ನು ಶ್ರೀ ಗೋಸಾಯಿ ಮಠಕ್ಕೆ ಕಳುಹಿಸಿದರು. ಲವಂಗ ಭಾರತಿ ಸ್ವಾಮಿಗಳು ಶಿವಾಜಿಯ ಆಧ್ಯಾತ್ಮಿಕ ಒಲವಿನ ಬಗ್ಗೆ ವಿಶೇಷ ಗಮನ ಹರಿಸಿದರು. ಒಂದು ವೇಳೆ ಕಾರಣಾಂತರಗಳಿಂದ ಶಿವಾಜಿ ಮಠಕ್ಕೆ ತೆರಳದಿದ್ದರೆ, ತಮ್ಮ ಶಿಷ್ಯನೊಬ್ಬನನ್ನು ಮನೆಗೇ ಕಳುಹಿಸುತ್ತಿದ್ದರು.
ಒಂಬತ್ತು ವರ್ಷದ ಶಿವಾಜಿಯಲ್ಲಿ ಬೆಳೆಯುತ್ತಿದ್ದ ಆಧ್ಯಾತ್ಮಿಕ ಒಲವನ್ನು ಮನಗಂಡ ಸತ್ಯನಾರಾಯಣ ಆತನನ್ನು ರಾಮಕೃಷ್ಣ ಮಠಕ್ಕೆ ಸೇರಿಸಿದರು. ಶಾಲೆಯ ಬಳಿಕ ದಿನವೂ ಮೂರ್ನಾಲ್ಕು ಗಂಟೆಗಳ ಕಾಲ ಅಲ್ಲಿಗೆ ಹೋಗಿ ತನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದ. ಅಲ್ಲಿ ಅವನಿಗೆ ವೇದ ಉಪನಿಷತ್ತುಗಳ ಪರಿಚಯಆಯಿತು. ಮಾತ್ರವಲ್ಲ, ಮನೆಯಲ್ಲಿ ದೊರೆಯುತ್ತಿದ್ದ ಸಾದಾ ಆಹಾರದ ಜೊತೆಗೆ, ಮಠದ ಪೌಷ್ಟಿಕವಾದ ಹಾಲು ಮತ್ತು ಬನ್ ಆತನ ಹಸಿವನ್ನು ಹಿಂಗಿಸುತ್ತಿದ್ದವು.
  ರಜನಿಕಾಂತ್ ಎಂಬ ಸೂಪರ್‌ಸ್ಟಾರ್‌ನ ಬಗ್ಗೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. 255 ಪುಟಗಳಲ್ಲಿ ಇದು ಆ ಮಹಾನ್ ನಾಯಕನಿಗೆ ಸಂಪೂರ್ಣ ನ್ಯಾಯವೊದಗಿಸುತ್ತದೆಯೇ? ಎನ್ನುವ ಸಂಶಯ ಎಲ್ಲರಿಗೂ ಕಾಡುವುದು ಸಹಜ. ಹಾಗೆಂದ ಮಾತ್ರಕ್ಕೆ ಲೇಖಕ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲವೆಂದರ್ಥಅಲ್ಲ. ವಾಸ್ತವವಾಗಿ, ರಜನಿಯ ಅಭಿಮಾನಿಗಳಿಗೆ ತಿಳಿದಿಲ್ಲದಿರುವ ವಿಷಯಗಳು ಅಷ್ಟೇನೂ ಇಲ್ಲಿಲ್ಲ ಅಷ್ಟೆ. ರಜನಿ ಒಬ್ಬ ವ್ಯಕ್ತಿಯಾಗಿ, ಸಿನೆಮಾ ಜಗತ್ತಿನ ಹೊರಗೆ, ಅವರ ಜೀವನದ ಬಗ್ಗೆ ಲೇಖಕ ಸಾಕಷ್ಟು ಹೇಳಲು ಪ್ರಯತ್ನ ಪಟ್ಟಿರುವರಾದರೂ, ಸಾಕಷ್ಟು ವಿಷಯಗಳು ಹೊರಬಂದಿಲ್ಲವೇನೋ ಎನ್ನಿಸುತ್ತದೆ.

ಬೇಂದ್ರೆ ಮೆಚ್ಚಿದ್ದರು!
ಶಿವಾಜಿಯಲ್ಲಿದ್ದ ನಟನಾ ಕೌಶಲ್ಯ ಮೊದಲ ಬಾರಿಗೆ ಬೆಳಕಿಗೆ ಬಂದದ್ದು ರಾಮಕೃಷ್ಣ ಮಠದಲ್ಲಿ. ಒಮ್ಮೆ 'ಏಕಲವ್ಯ' ನಾಟಕದಲ್ಲಿ ಏಕಲವ್ಯನ ಗೆಳೆಯನ ಪಾತ್ರ ನಿರ್ವಹಿಸಿದ ಶಿವಾಜಿ ಎಲ್ಲರ ಮನಗೆದ್ದ. ಮಾತ್ರವಲ್ಲ ಅಲ್ಲಿಗೆ ನಾಟಕ ನೊಡಲು ಬಂದಿದ್ದ ಕವಿ ದ.ರಾ. ಬೇಂದ್ರೆಯವರ ಮೆಚ್ಚುಗೆಗೂ ಪಾತ್ರನಾದ' ಎಂದು ಲೇಖಕ ಬರೆಯುತ್ತಾರೆ. ಶಿವಾಜಿಗೆ 11 ವರ್ಷಆದಾಗ ತಾಯಿಗೆ ತೀವ್ರ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡವು. ಸರಿಯಾದ ಚಿಕಿತ್ಸೆ ದೊರೆಯದೆ ಆಕೆ ಕಣ್ಮುಚ್ಚಿದಾಗ ಎಲ್ಲರಿಗೂ ದೊಡ್ಡ ಆಘಾತವಾಯಿತು. 'ನಾವು ಆಕೆಗೆ ಸರಿಯಾದ ಚಿಕಿತ್ಸೆ ಕೊಡಲಾರದೆ ಹೋದೆವು. ನಾವು ಇನ್ನೂ ಚಿಕ್ಕವರಾಗಿದ್ದೆವು. ಏನು ಮಾಡಬೇಕೆಂದು ತಿಳಿದಿರಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ಬಿಟ್ಟರೆ ಹೆಚ್ಚಿಗೆ ಬೇರೇನೂ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ' ಎಂದು ಸತ್ಯನಾರಾಯಣ ಹೇಳುತ್ತಾರೆ.
ತಾಯಿ ಸತ್ತ ನಂತರ ಎಲ್ಲ ಮಕ್ಕಳ ಹಾಗೆ ಕೆಲವು ದಿನ ಬಹಳ ದುಃಖದಲ್ಲಿದ್ದ ಶಿವಾಜಿ ನಿಧಾನವಾಗಿ ಆ ನೋವಿನಿಂದ ಹೊರಬಂದು ತನ್ನ ಆಟ-ಪಾಠಗಳಲ್ಲಿ ಮಗ್ನನಾದ. ರಾಮ್‌ಬಾಯಿ ಮರಣದ ಬಳಿಕ ರಾಣೋಜಿಗೆ ಅಡುಗೆ ಮನೆಯ ಜವಾಬ್ದಾರಿಯನ್ನು ಬಿಟ್ಟು ಅಶ್ವಥಮ್ಮ ತನ್ನ ಪತಿಯ ಮನೆಗೆ ಆಗಲೇ ತೆರಳಿದ್ದರಿಂದ ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದಿರುವುದು ಗೋಚರವಾಗುತ್ತಿತ್ತು. ಆಗ 20 ವರ್ಷ ತಲುಪಿದ ಸತ್ಯನಾರಾಯಣ ಸೋಮನಹಳ್ಳಿಯಲ್ಲಿದ್ದ ತನ್ನ ದೂರದ ಸಂಬಂಧಿ ಕಲಾವತಿಬಾಯಿಯನ್ನು ವಿವಾಹವಾದರು.
ಆಚಾರ್ಯ ಪಾಠಶಾಲ ಪ್ರೌಢಶಾಲೆಗೆ ಸೇರಿದ ಶಿವಾಜಿಯ ನಟನಾ ಶಕ್ತಿ ಬೆಳೆಯುತ್ತಲೇ ಸಾಗಿತು. ಶಾಲಾ ವಾರ್ಷಿಕ ದಿನಗಳಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಶಿವಾಜಿ 'ಕುರುಕ್ಷೇತ್ರ' ನಾಟಕದಲ್ಲಿ ನಿರ್ವಹಿಸಿದ ದುರ್ಯೋಧನನ ಪಾತ್ರ ಎಲ್ಲರ ಮನಗೆದ್ದಿತ್ತು. 'ಆತನ ನಟನಾ ಶೈಲಿಯೇ ಹಾಗಿತ್ತು. ಆ ದಿನಗಳಲ್ಲಿಯೇ ಅವನದೇ ಆದ ಶೈಲಿ ರೂಢಿಸಿಕೊಂಡಿದ್ದ. ಆತನ ಸಂಭಾಷಣೆ ಕೇಳಿ ಜನ 'ಒನ್ಸ್‌ಮೋರ್, ಒನ್ಸ್ ಮೋರ್‌' ಎಂದು ಒಕ್ಕೊರಲಿನಿಂದ ಕೂಗುತ್ತಿದ್ದರು. ಶಿವಾಜಿ ನಟಿಸಿದ 'ಸಾಹುಕಾರ', 'ರಕ್ತ ಕಣ್ಣೀರು' ಮತ್ತು 'ವೀರ ಕೇಸರಿ' ನಾಟಕಗಳು ಜನರ ಮನದಲ್ಲಿ ತಮ್ಮದೇ ಛಾಪು ಮೂಡಿಸಿದ್ದವು.

ರೌಡಿಗೇ ಹೊಡೆದಿದ್ದ ರಜನಿ!
ಇವುಗಳೆಲ್ಲದರ ಮಧ್ಯೆ ಆತನ ಕ್ರಿಕೆಟ್ ಹುಚ್ಚು ಕೈಬಿಟ್ಟಿರಲಿಲ್ಲ ಎನ್ನುವ ಲೇಖಕ ಪ್ರತಿ ಸಾಯಂಕಾಲ ಕ್ರಿಕೆಟ್ ಆಡುತ್ತಿದ್ದ ಶಿವಾಜಿ ಭಾನುವಾರ ಪೂರ್ತಿ ಆ ಆಟದಲ್ಲೇ ಮುಳುಗಿಬಿಡುತ್ತಿದ್ದ ಎಂದು ಬರೆಯುತ್ತಾರೆ. ಹೀಗಿರುವಾಗ ಹದಿನಾರು ವರ್ಷದ ಶಿವಾಜಿಯ ಜೀವನದಲ್ಲಿ ಮರೆಯಲಾರದ ಘಟನೆಯೊಂದು ನಡೆಯಿತು. ಈ ಘಟನೆಯನ್ನು ರಜನಿ ಇನ್ನೂ ನೆನೆಸಿಕೊಳ್ಳುತ್ತಾರೆ.
'ನಾನು ಬೆಳೆದ ಪ್ರದೇಶದಲ್ಲಿ ಸಾಕಷ್ಟು ರೌಡಿಗಳು ಇದ್ದರು. ಒಂದು ರಾತ್ರಿ ನಾನು ಮತ್ತು ನನ್ನ ಗೆಳೆಯ ಕಿಟ್ಟಿ ಸಿನೆಮಾ ನೋಡಿ ಥಿಯೇಟರ್‌ನಿಂದ ಹೊರಬಂದೆವು. ಆಗ ರೌಡಿಯೊಬ್ಬ ಕಿಟ್ಟಿಯನ್ನು ಹೊಡೆಯಲು ಪ್ರಾರಂಭಿಸಿದ. ತನ್ನ ಏರಿಯಾದ ಹುಡುಗಿಯ ಮೇಲೆ ಕಿಟ್ಟಿ ಕಣ್ಣು ಹಾಕಿದ ಎನ್ನುವ ಕೋಪದಲ್ಲಿ ಆ ರೌಡಿ ಅವನಿಗೆ ಹೊಡೆಯುತ್ತಿದ್ದ. ಅದನ್ನು ನೋಡಲಾಗದೆ ನಾನೂ ಅವನಿಗೆ ಹೊಡೆಯತೊಡಗಿದೆ. ಕಿಟ್ಟಿ ಬೇಡ ಬೇಡವೆಂದರೂ ನಾನು ಕೇಳಲಿಲ್ಲ. 'ಬೇಡ, ಅವನು ಹೆಸರಾಂತ ಕೊಲೆಗಾರ ಮರ್ಡರ್ ಕೃಷ್ಣ ಕಣೋ' ಎಂದು ಕಿಟ್ಟಿ ಹೇಳಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತೆ. ನನ್ನ ಹಿಂದೆ ಪ್ರಾಣ ಉಳಿಸಿಕೊಳ್ಳಲು ಕಿಟ್ಟಿ ಓಡುತ್ತಾ ಬಂದ. ಆಗ ನನಗೆ ಪೊಲೀಸರು ಮುಟ್ಟಲೂ ಹೆದರುತ್ತಿದ್ದ ರೌಡಿಯನ್ನು ಹೊಡೆಯುತ್ತಿದ್ದೇನೆಂದು ಅರಿವಿರಲಿಲ್ಲ' ಎಂದು ರಜನಿ ಹೇಳುತ್ತಾರೆ.
 ತಮ್ಮ ನಾಯಕನನ್ನು ಥಳಿಸಿದ ಹುಡುಗನನ್ನು ಹಿಡಿಯಲೆಂದು 'ಮರ್ಡರ್ ಕೃಷ್ಣ'ನ ಹಿಂಬಾಲಕರು ತಂಡ ತಂಡಗಳಲ್ಲಿ ಪ್ರತಿ ಬೀದಿ-ಬೀದಿಯನ್ನು ಸುತ್ತುತ್ತಿದ್ದರೆ, ಶಿವಾಜಿ ಪ್ರಾಣಕ್ಕೆ ಹೆದರಿ ಎರಡು ದಿನ ಮನೆ ಬಿಟ್ಟು ಹೊರಗೆ ಹೋಗಲಿಲ್ಲ. ಅದರ ಬಳಿಕ ವಿಷಯಕ್ಕೆ ಒಂದು ಅಂತ್ಯ ಹಾಡಬೇಕೆಂದು ನಿರ್ಧರಿಸಿದ ಶಿವಾಜಿ ಮನೆಯಲ್ಲಿ ಯಾರಿಗೂ ಹೇಳದೆ ಕಾಂಪೌಂಡಿನ ಗೋಡೆ ಹಾರಿ ನೇರವಾಗಿ 'ಮರ್ಡರ್‌' ಕೃಷ್ಣನ ಅಡ್ಡಕ್ಕೆ ಹೋಗುತ್ತಾನೆ. 'ಹೌದು, ನಾನೇ ನಿನ್ನನ್ನು ಹೊಡೆದಿದ್ದು. ಏನು ಮಾಡಬೇಕೆಂದುಕೊಂಡಿರುವೆ? ನನ್ನನ್ನು ಕತ್ತರಿಸಬೇಕೆಂದು ಕೊಂಡಿದ್ದರೆ, ಬಾ ಈಗಲೇ ನನ್ನನ್ನು ಕತ್ತರಿಸು' ಎಂದು ಕೃಷ್ಣನಿಗೆ ಹೇಳಿದೆ. ಕೆಲ ಕಾಲ ನನ್ನನ್ನೇ ದುರುಗುಟ್ಟಿ ನೋಡಿದ ಕೃಷ್ಣ 'ಹೋಗು' ಎಂದು ಕಳುಹಿಸಿಬಿಟ್ಟ. ಅದರ ಬಳಿಕ ಕೃಷ್ಣನನ್ನು ಹೊಡೆದ ದೊಡ್ಡ 'ದಾದಾ' ಆಗಿಬಿಟ್ಟೆ ನಾನು. ಎಷ್ಟು ಕಾಲ ನಾನು ಅಡಗಿಕೊಂಡಿರಲು ಸಾಧ್ಯ? ಇದಕ್ಕೆಲ್ಲ ಒಂದು ಇತಿಶ್ರೀ ಹಾಡಬೇಕೆಂದುಕೊಂಡಿದ್ದೆ. ಯಾವತ್ತಿದ್ದರೂ ಸಾಯಲೇಬೇಕಲ್ಲವೆ? ಅದು ಇಂದೇ ಆಗಿದ್ದರೂ ಸರಿ ಎನ್ನುವ ನಿರ್ಧಾರ ಮಾಡಿದ್ದೆ. ಆ ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ' ಎಂದು ರಜನಿ ಈಗಲೂ ನೆನೆಸಿಕೊಂಡು ನಗುತ್ತಾರೆ.

ಅಣ್ಣನ ಊಟಕ್ಕೆ ಜಗಳ
ಎಲ್ಲಾ ಬೆಳೆಯುವ ಹುಡುಗರಂತೆ ಶಿವಾಜಿಗೆ ಹೊಟ್ಟೆಬಾಕ ಹಸಿವು ಕಾಣಿಸಿಕೊಳ್ಳುತ್ತಿತ್ತು. 'ಒಮ್ಮೆ ನನಗೆ ತಡೆಯಲಾರದ ಹಸಿವು ಕಾಣಿಸಿಕೊಂಡಿತು. ನನ್ನ ಪಾಲಿನ ಅನ್ನ ತಿಂದ ಬಳಿಕವೂ ಹಸಿವು ಹಿಂಗಲಿಲ್ಲ. ಇನ್ನೂ ಅನ್ನ ಬೇಕು ಎಂದು ಅತ್ತಿಗೆಯನ್ನು ಕೇಳಿದೆ. ಆದರೆ ಹಸಿದು ಬರುವ ತನ್ನ ಗಂಡನಿಗಾಗಿ ಇರಿಸಿದ್ದ ಪಾಲನ್ನು ಆಕೆ ನನಗೆ ಕೊಡಲು ನಿರಾಕರಿಸಿದರು. ಅಣ್ಣ ಬಂದ ನಂತರ ವಿಷಯ ತಿಳಿದು ಅತ್ತಿಗೆಯನ್ನು ಬೈಯ್ದು ತನ್ನ ಪಾಲನ್ನೂ ನನಗೇ ಬಡಿಸಬೇಕೆಂದು ಹೇಳಿದರು. ಆಗ ಸಂತೋಷದಿಂದಲೇ ಅವರ ಪಾಲಿನ ಅನ್ನವನ್ನು ತಿಂದೆ. ಆದರೆ ಅಣ್ಣ ಹಸಿದು ಮಲಗುವುದನ್ನು ಕಂಡಾಗ ಬಹಳ ಸಂಕಟವಾಯಿತು' ಎಂದು ರಜನಿ ವಿಷಾದಪಡುತ್ತಾರೆ ಎಂದು ಲೇಖಕ ಬರೆಯುತ್ತಾರೆ.
ಶಿವಾಜಿಯ ಬಳಿಯಿದ್ದದ್ದು ಒಂದು ಪ್ಯಾಂಟು ಮತ್ತು ಎರಡು ಶರ್ಟ್. ಅವುಗಳನ್ನೇ ಒಗೆದು ಮತ್ತೆ ಮತ್ತೆ ಧರಿಸುತ್ತಿದ್ದ ಶಿವಾಜಿಗೆ ದೀಪಲಿಯಲ್ಲಿ ಅಣ್ಣ ಸತ್ಯನಾರಾಯಣ ಹೊಸ ಬಟ್ಟೆ ಕೊಡಿಸುವುದಾಗಿ ಹೇಳುತ್ತಾರೆ. ಆದರೆ ಅವರ ಬಳಿಯಿದ್ದದ್ದು ಕೇವಲ ಏಳು ರೂಪಾಯಿ. ಅದರಲ್ಲಿ ಆತ ಬೇಕಾದರೆ ಒಂದು ಪ್ಯಾಂಟು ಮತ್ತು ಶರ್ಟ್ ಖರೀದಿಸಬಹುದಾಗಿತ್ತು, ಇಲ್ಲವೇ ಮೂರು ಜೊತೆ ಕುರ್ತಾ ಪೃಜಾಮ ಖರೀದಿಸಬಹುದಾಗಿತ್ತು. 'ತನ್ನ ಬಳಿಯಿದ್ದ ಬಟ್ಟೆಗಳನ್ನು ಸದಾ ಒಗೆಯಬೇಕಾದ ಪರಿಸ್ಥಿತಿಯಿದ್ದುದರಿಂದ ಶಿವಾಜಿ ಮೂರು ಜೊತೆ ಕುರ್ತಾ ಪೈಜಾಮ ಖರೀದಿಸಿದ' ಎಂದು ಸತ್ಯನಾರಾಯಣ ನೆನೆಸಿಕೊಳ್ಳುತ್ತಾರೆ. 'ಈಗಲೂ ಕುರ್ತಾ ಪೃಜಾಮ ಹಾಕಿಕೊಳ್ಳುವ ಅಭ್ಯಾಸ ನನ್ನನ್ನು ಬಿಟ್ಟು ಹೋಗಿಲ್ಲ. ಪ್ರತಿ ಬಾರಿ ಕುರ್ತಾ ಪೃಜಾಮ ಧರಿಸಿಕೊಳ್ಳುವಾಗಲೂ ನನಗೆ ಆ ದೀಪಾವಳಿ ನೆನಪಾಗುತ್ತದೆ' ಎಂದು ಹೇಳುವ ರಜನಿ ತನ್ನ ಅಣ್ಣ ಹೇಳುತ್ತಿದ್ದ ಮಾತೊಂದನ್ನು ಸದಾ ಸ್ಮರಿಸಿಕೊಳ್ಳುತ್ತಾರೆ. 'ನಮ್ಮ ಏಳಿಗೆಯಿಂದ ಕೇವಲ ನಮ್ಮ ಸಂಸಾರ ಮಾತ್ರವಲ್ಲ, ಹತ್ತಾರು ಸಂಸಾರಗಳಿಗೂ ನೆರವಾಗಬೇಕು' ಬಹುಶಃ ಇದೇ ಮಾತಿರಬಹುದು ರಜನಿಯ ಜೀವನದಲ್ಲಿ ಆತ ಮಾಡುವ ದಾನ ಧರ್ಮಗಳಿಗೆ ಸರಿಯಾದ ಅಡಿಪಾಯ ಹಾಕಿದ್ದು. (ಮುಂದುವರಿಯುವುದು)

- ಚೈತ್ರಾ ಅರ್ಜುನಪುರಿ
carjunp@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com