ಮೂಲ: ಆಷಾಢ್ ಕಾ ಏಕ್ ದಿನ್
ತುಳುವಿನಲ್ಲಿ: ಆಟಿ ತಿಂಗೊಲ್ದ ಒಂಜಿ ದಿನ
ಕನ್ನಡದಲ್ಲಿ: ಆಷಾಢದ ಒಂದು ದಿನ
'ಆಟಿ ತಿಂಗೊಲ್ದ ಒಂಜಿ ದಿನ' ಎಂಬ ತುಳು ನಾಟಕ ನೋಡಿದ ನಂತರ ನಟಿ, ಕವಿಯತ್ರಿ, ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ತಮ್ಮ ಅಭಿಪ್ರಾಯವನ್ನು ಹೇಳಿದ್ದು ಹೀಗೆ :
ಮೋಹನ್ ರಾಕೇಶ್ ಅವರು ನಮ್ಮ ದೇಶದ ಒಬ್ಬ ಪ್ರಮುಖ, ಅತ್ಯುತ್ತಮ ನಾಟಕಕಾರ. ಕನ್ನಡಕ್ಕೆ ಅನುವಾದಗೊಂಡ ಅವರ ‘ಆಧೆ ಅಧೂರೆ’ ನಾಟಕದಲ್ಲಿ ಅಭಿನಯಿಸಿ ಮತ್ತು ಈ ‘ಆಷಾಢದ ಒಂದು ದಿನ’ ನಾಟಕವನ್ನು ಓದಿ ಅವರ ಸಂಭಾಷಣೆಗಳನ್ನು ಮತ್ತು ದೃಶ್ಯಗಳನ್ನು ಕಟ್ಟಿಕೊಡುವ ತಾಕತ್ತಿನ ಬಗ್ಗೆ ನಮ್ಮ ಗಿರೀಶ್ ಕಾರ್ನಾಡರ ತುಘಲಕ್, ಹಯವದನ, ಅಂಜುಮಲ್ಲಿಗೆ ಇತ್ಯಾದಿಗಳ ಕುರಿತ ರೀತಿಯಲ್ಲೇ ಬೆರಗುಗೊಂಡಿದ್ದೇನೆ. ‘ಆಷಾಢದ ಒಂದು ದಿನ’ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದೆಯೇನೋ ಎಂಬಷ್ಟು ಸಂಭಾಷಣಾ ಪ್ರಧಾನ ನಾಟಕವಾದರೂ (ಆಧೆ ಅಧೂರೆ ಸಹ!) ಏನೂ ಹೇಳದೆಯೂ ಬಹಳಷ್ಟನ್ನು ಹೇಳಿಬಿಡುತ್ತಾರೆ ಮೋಹನ್ ರಾಕೇಶ್, ಥೇಟ್ ಕಾವ್ಯದಂತೆ! ಅದು ಕಾಳಿದಾಸ-ಮಲ್ಲಿಕಾರ ಪ್ರೀತಿ ಇರಬಹುದು, ಮಲ್ಲಿಕಾಳಿಗೆ ಅಮುಖ್ಯವೆನಿಸಿದರೂ ಕಾಳಿದಾಸನಷ್ಟೆ ಮುಖ್ಯವಾಗುವ ವಿಲೋಮನಿರಬಹುದು, ಬೆಳೆದ ಮಗಳ ಭಾವ ಪ್ರಪಂಚದಿಂದಾಗಿ ಹಣ್ಣಾದ ಅಂಬಿಕಾ ಇರಬಹುದು, ರಾಜಕುಮಾರಿ ಪ್ರಿಯಾಂಗು ಇರಬಹುದು, ಎಲ್ಲ ಪಾತ್ರಗಳ ವ್ಯಕ್ತಿತ್ವಗಳನ್ನೂ ನಮ್ಮ ಕಲ್ಪನಾ ಪ್ರಪಂಚದನುಸಾರ ನಮ್ಮ ನಮ್ಮ ಮನಸಿನಲ್ಲಿ ರೂಪುಗೊಳ್ಳಲ್ಲು ಅದೆಷ್ಟು ಅನುವು ಮಾಡಿಕೊಡುತ್ತಾರೆಂದರೆ, ರಂಗಮಂಚದಿಂದಾಚೆಗೂ ನಾಟಕ ಪ್ರೇಕ್ಷಕನ ಮನದ ಅಂಗಣಕ್ಕನುಗುಣವಾಗಿ ಬೆಳೆದು ಆಡ ತೊಡಗುತ್ತದೆ,ಕಾಡ ತೊಡಗುತ್ತದೆ! ‘ಆಷಾಢದ ಒಂದು ದಿನ’ವನ್ನು ರಂಗದ ಮೇಲೆ ಕಾಣುವ ಈ ಕನ್ನಡತಿಯ ಆಸೆ ಸಾಕಾರವಾಗಿದ್ದು ಮಾತ್ರ ತುಳುವಿನಲ್ಲಿ!
ಮುಂಬೈನ ಈ ಕಲಾವಿದರ ಅಭಿನಯದ ತಾಕತ್ತಿನ ಕುರಿತು ಎರಡು ಮಾತಿಲ್ಲ! ಬೆಂಗಳೂರಿನ ಎರಡೂ ದಿನದ ಪ್ರಯೋಗಗಳನ್ನು ನೋಡಿದವರಿಗೆ ಇದು ಮನದಟ್ಟಾಗಿರುತ್ತದೆ.
- ಜಯಲಕ್ಷ್ಮೀ ಪಾಟೀಲ್
Advertisement