
2015ರ ಐಪಿಎಲ್ ಪಂದ್ಯದಲ್ಲಿ ಕರ್ನಾಟಕದ ಸ್ಪಿನ್ನರ್ ಕೆ.ಸಿ ಕಾರ್ಯಪ್ಪನ ಮೇಲೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಭಾರೀ ಭರವಸೆ ಇದೆ. ಇಲ್ಲಿಯವರೆಗೆ ಫಸ್ಟ್ ಕ್ಲಾಸ್ ಅಥವಾ ಲಿಸ್ಟ್ ಎ ಮ್ಯಾಚ್ ಕೂಡಾ ಆಡದೇ ಇರುವ ಕಾರ್ಯಪ್ಪನನ್ನು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡ ರು. 2.4 ಕೋಟಿಗೆ ಖರೀದಿಸಿತ್ತು. ಹರಾಜಿನಲ್ಲಿ ಕಾರ್ಯಪ್ಪನ ಮೂಲ ಬೆಲೆ 10 ಲಕ್ಷ ಇತ್ತು. ಕರ್ನಾಟಕ ಪ್ರೀಮಿಯರ್ ಲೀಗ್ ಮಾತ್ರ ಆಡಿರುವ ಈ ಆಟಗಾರ ಇಷ್ಟೊಂದು ದುಡ್ಡಿಗೆ ಹರಾಜಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಕಾರ್ಯಪ್ಪ ಅವರಲ್ಲಿ ಅಂಥದ್ದೇನಿದೆ?
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರು. 2.4 ಕೋಟಿ ರುಗೆ ಹರಾಜಾದ ಕೂಡಲೇ ಕೆ.ಸಿ ಕಾರ್ಯಪ್ಪ ಸುದ್ದಿಯಾಗಿ ಬಿಟ್ಟರು. 21ರ ಹರೆಯದ ಈ ಸ್ಪಿನ್ನರ್, ಕ್ರಿಕೆಟ್ ವಲಯದಲ್ಲಿ ಲೆಗ್ ಸ್ಪಿನ್ನರ್ ಆಗಿಯೇ ಪರಿಚಿತರು. ಅಲ್ಲಿಯವರಗೆ ಯಾರಿಗೂ ಗೊತ್ತಿರದೇ ಇದ್ದ ಕಾರ್ಯಪ್ಪ ಅವರನ್ನು ಕೆಕೆಆರ್ ತಂಡ ಗುರುತಿಸಿದ್ದು ಹೇಗೆ? ಈ ಬಗ್ಗೆ ಕಾರ್ಯಪ್ಪ ಹೇಳುವುದು ಹೀಗೆ:
ಕಳೆದ ವರ್ಷ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಕ್ಕ ಮುನ್ನ ನಾನು ಕೆಕೆಆರ್ ತಂಡದೊಂದಿಗೆ ಅಭ್ಯಾಸ ನಡೆಸಿದ್ದೆ. ನಾನಲ್ಲಿ ನೆಟ್ ಬೌಲರ್ ಆಗಿದ್ದೆ. ಅಲ್ಲಿ ನನ್ನ ಪ್ರದರ್ಶನ ನೋಡಿ ಐಪಿಎಲ್ ಹರಾಜಿಗೆ ನನ್ನ ಹೆಸರು ನೀಡುವಂತೆ ಹೇಳಿದ್ದರು. ನಾನು ಗುರುತಿಸಿಕೊಂಡಿದ್ದೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ. ಕೆಪಿಎಲ್‌ನಲ್ಲಿ ಬಿಜಾಪುರ್ ಬುಲ್ಸ್ ಪರವಾಗಿ ಆಡಿ 11 ವಿಕೆಟ್ (ಇಕಾನಮಿ ರೇಟ್ 6) ಪಡೆದುಕೊಂಡಿದ್ದೆ.
ಇದೆಲ್ಲವೂ ಸಾಧ್ಯವಾಗಿದ್ದು ಕೆಪಿಎಲ್‌ನಲ್ಲಿ. ಪ್ರಸ್ತುತ ಪಂದ್ಯ ಸೋನಿ ಸಿಕ್ಸ್‌ನಲ್ಲಿ ಪ್ರಸಾರವಾಗಿತ್ತು. ಅಲ್ಲಿ ನಾನು ಮನೀಷ್ ಪಾಂಡೆ ವಿಕೆಟ್ ಪಡೆದಿದ್ದೆ. ಅದನ್ನು ನೋಡಿಯೇ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುವಂತೆ ಕೆಕೆಆರ್ ಕರೆದಿತ್ತು ಅಂತ ಅಂದುಕೊಂಡಿದ್ದೀನಿ.
ಟೆನಿಸ್ ಬಾಲ್ ಟೂರ್ನಮೆಂಟ್‌ನಿಂದ ಐಪಿಎಲ್‌ಗೆ
ಬೆಂಗಳೂರಿನ ಸೋಷ್ಯಲ್ ಕ್ರಿಕೆಟ್ ಕ್ಲಬ್‌ಗಳಲ್ಲಿ ಆಡುವ ಮುನ್ನ ಈತ ಹಲವಾರು ಟೆನಿಸ್ ಬಾಲ್ ಟೂರ್ನ್‌ಮೆಂಟ್‌ಗಳನ್ನಾಡಿದ್ದರು. ಇಂಥಾ ಕ್ರಿಕೆಟ್ ಪಂದ್ಯಗಳು ದಕ್ಷಿಣ ಭಾರತದಲ್ಲೇ ಜಾಸ್ತಿ. ಇಲ್ಲಿ ಆಡಿದ ನಂತರ ಕಾರ್ಯಪ್ಪ ಕೆಪಿಎಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡರು. ಮಾತ್ರವಲ್ಲದೆ ಕರ್ನಾಟಕ ಅಂಡರ್ 19 ತಂಡದ ಸದಸ್ಯನಾಗಿದ್ದು, ಕರ್ನಾಟಕ ರಣಜಿ ಟ್ರೋಫಿ ತಂಡದ ಸಾಧ್ಯತಾ ಸದಸ್ಯರ ಪಟ್ಟಿಯಲ್ಲಿದ್ದರು.
ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಷ್ಟೊಂದು ದುಡ್ಡಿಗೆ ಹರಾಜಾಗುತ್ತೇನೆ ಎಂದು ಗೊತ್ತಿರಲಿಲ್ಲ. ನಾನು 10 ಲಕ್ಷಕ್ಕೇ ಹರಾಜಾಗುತ್ತೇನೆ ಎಂದು ಅಂದುಕೊಂಡಿದ್ದೆ. ಈ ಬಗ್ಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಸುದ್ದಿ ಕೇಳಿ ನನ್ನ ಕುಟುಂಬ ಖುಷಿ ಪಡುತ್ತಿದೆ. ಇದೀಗ ನನ್ನ ಮನೆಗೆ ಬಂದು ಹಲವಾರು ಜನ ಶುಭ ಹಾರೈಸುತ್ತಿದ್ದಾರೆ ಎಂದು ಹರಾಜು ಪ್ರಕ್ರಿಯೆಯ ನಂತರ ಕಾರ್ಯಪ್ಪ ಈ ರೀತಿ ಪ್ರತಿಕ್ರಯಿಸಿದ್ದರು.
ಏಪ್ರಿಲ್ 8 ನೇ ತಾರೀಖಿನಂದು ಐಪಿಎಲ್ -8ನೇ ಆವೃತ್ತಿ ಪಂದ್ಯ ಆರಂಭವಾಗಲಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಎಂ.ಸಿ ಕಾರ್ಯಪ್ಪ ಅವರನ್ನು Mystery spinner ಎಂದೇ ಹೇಳಲಾಗುತ್ತಿದೆ. .ಕಳೆದ ವರ್ಷ ಐಪಿಎಲ್ ಟ್ರೋಫಿ ಗೆದ್ದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾರ್ಯಪ್ಪ ಅವರಿಗೆ ಸ್ಥಾನ ಸಿಕ್ಕಿದೆ.
ಆಲ್ ದ ಬೆಸ್ಟ್ ಕೆ.ಸಿ ಕಾರ್ಯಪ್ಪ...
-ಅಂಜಲಿ
Advertisement