
ಲಂಡನ್: ಆಗಸದಲ್ಲಿ ಈಜುಕೊಳವನ್ನು ನಿವೇನಾದರೂ ಕಂಡಿದ್ದೀರಾ...ಎಂದರೆ ಬರುವ ಉತ್ತರ ಇಲ್ಲ ಅಂತ.
ವಿಶ್ವದ ಮೊದಲ "ಆಕಾಶ ಈಜುಕೊಳ' ನಿರ್ಮಾಣ ಲಂಡನ್ ನಲ್ಲಿ ನಡೆಯಲಿದ್ದು, ಅದಕ್ಕಾಗಿ 2018ರವರೆಗೂ ಕಾಯಬೇಕು. ನೈಋತ್ಯ ಲಂಡನ್‌ನ ನೈನ್ ಎಲ್ಮ್ಸ್ ಜಿಲ್ಲೆಯಲ್ಲಿ ಭಾರಿ ಶ್ರೀಮಂತರಿಗಾಗಿ ಅಪಾರ್ಟ್‌ಮೆಂಟ್‌ವೊಂದನ್ನು ನಿರ್ಮಿಸಲಾಗುತ್ತಿದೆ.
ಎರಡು ಐಷಾರಾಮಿ ಅಪಾರ್ಟ್‌ಮೆಂಟ್ ಕಟ್ಟಡಗಳ ನಡುವಣ ಖಾಲಿ ಜಾಗದಲ್ಲಿ 10 ಮಹಡಿಗಳ ಎತ್ತರದಲ್ಲಿ ಈ "ಆಕಾಶ ಈಜುಕೊಳ' ನಿರ್ಮಾಣವಾಗಲಿದೆ. ಈ ಈಜುಕೊಳಕ್ಕೆ ಯಾವುದೇ ಅಡಿಪಾಯ ಇರುವುದಿಲ್ಲ. ಎರಡು ಕಟ್ಟಡಗಳಿಗೆ ಅಂಟಿಕೊಂಡಂತೆ ಇರುತ್ತದೆ ಪಾರದರ್ಶಕವಾಗಿರುತ್ತದೆ.
ಗುಂಡು ನಿರೋಧಕ ಗಾಜಿಗಿಂತ ಏಳು ಪಟ್ಟು ದಪ್ಪದಾಗಿರುವ, 8 ಇಂಚಿನಷ್ಟು ದಪ್ಪ ಗಾಜನ್ನು ಬಳಸಿ ಈ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಈಜುತ್ತಾ ಲಂಡನ್ ಐ, ಬ್ರಿಟನ್ ಸಂಸತ್ತು ಹಾಗೂ ಅಮೆರಿಕದ ಹೊಸ ರಾಯಭಾರ ಕಚೇರಿಯನ್ನು ವೀಕ್ಷಿಸಬಹುದಾಗಿದೆ.
ಈ ಈಜುಕೊಳ 90 ಅಡಿ ಉದ್ದ, 4 ಅಡಿ ಆಳವಿರಲಿದ್ದು, 360 ಡಿಗ್ರಿ ವೀಕ್ಷಣಾ ಅನುಭವವನ್ನು ನೀಡಲಿದೆ. ಅಂದಹಾಗೆ ಈ ಕಟ್ಟಡದಲ್ಲಿನ ಒಂದು ಫ್ಲ್ಯಾಟ್‌ನ ಬೆಲೆ 6.2 ಕೋಟಿ ರೂಪಾಯಿ! ಬರುವ ಸೆಪ್ಟೆಂಬರ್‌ನಿಂದ ಫ್ಲ್ಯಾಟ್‌ಗಳ ಮಾರಾಟ ಆರಂಭವಾಗಲಿದೆ.
Advertisement