ಸ್ವೀಡನ್‌ನಲ್ಲಿರುವ ಮನದನ್ನೆಯನ್ನು ಭೇಟಿ ಮಾಡಲು ಭಾರತದಿಂದ ಸೈಕಲ್‌ನಲ್ಲೇ ಹೋದ 'ಪಿಕೆ'

ಸುಮಾರು 40 ವರುಷಗಳ ಹಿಂದೆ ಭಾರತದ ಬಡ ಚಿತ್ರಕಾರನೊಬ್ಬನಿಗೆ ವಿದೇಶಿ ರಾಜಕುಟುಂಬದ ಕನ್ಯೆ ಪಿಧಾ ಆಗಿದ್ದು, ಆಕೆಯನ್ನು ಮದುವೆಯಾದ ಆತ ಆಕೆಯನ್ನು ಭೇಟಿ ಮಾಡಲು ಸೈಕಲ್‌ನಲ್ಲೇ ...
ಶಾರ್ಲೆಟ್  ಮತ್ತು ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ
ಶಾರ್ಲೆಟ್ ಮತ್ತು ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ
ಇತ್ತೀಚೆಗೆ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸರ್ಹಾ ಟೈಲರ್ ಭಾರತೀಯ ಕ್ರಿಕೆಟರ್ ರವೀಂದ್ರ ಜಡೇಜಾನಿಗೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿ ಲವ್ ಸಿಗ್ನಲ್ ನೀಡಿದ್ದು ಸುದ್ದಿಯಾಗಿತ್ತು. ಈ ಸುದ್ದಿಗೆ ಇಂಗ್ಲೆಂಡ್‌ನ ಬಿಳಿ ಹುಡುಗಿಯರೀಗ ಭಾರತದ ಹುಡುಗರ ಹಿಂದೆ ಬೀಳುತ್ತಿದ್ದಾರೆ ಎಂಬ ಟ್ವೀಟ್ ಪ್ರತಿಕ್ರಿಯೆಯೂ ಟ್ವಿಟರ್ ನಲ್ಲಿ ಹರಿದಾಡಿತ್ತು. ಭಾರತದ ಹುಡುಗರಿಗೆ ವಿದೇಶಿ ಕನ್ಯೆಯರು ಫಿದಾ ಆಗುವುದು ಇದೇ ಮೊದಲೇನು ಅಲ್ಲ ಬಿಡಿ. 
ಆದರೆ ಸುಮಾರು 40 ವರುಷಗಳ ಹಿಂದೆ ಭಾರತದ ಬಡ ಚಿತ್ರಕಾರನೊಬ್ಬನಿಗೆ ವಿದೇಶಿ ರಾಜಕುಟುಂಬದ ಕನ್ಯೆ ಪಿಧಾ ಆಗಿದ್ದು, ಆಕೆಯನ್ನು ಮದುವೆಯಾದ ಆತ ಆಕೆಯನ್ನು ಭೇಟಿ ಮಾಡಲು ಸೈಕಲ್‌ನಲ್ಲೇ ಸ್ವೀಡನ್‌ಗೆ ಹೋಗಿದ್ದ ಎಂದರೆ ನೀವದನ್ನು ನಂಬಲೇ ಬೇಕು.
ಇದು ಬಾಲಿವುಡ್ ಸಿನಿಮಾದ ಕಥೆಯಲ್ಲ, ಆದರೆ ಈ ಕಲಾವಿದನ ಪ್ರೇಮಕಥೆ.
ಈ ಪ್ರೇಮಕಥೆಯ ನಾಯಕನ ಹೆಸರು ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ. ಒಡಿಶಾದ ಧೇನ್‌ಕನಾಲ್ ನಲ್ಲಿ ನೇಯ್ಗೆಕಾರರ ಕುಟುಂಬದಲ್ಲಿ 1949ರಲ್ಲಿ ಪ್ರದ್ಯುಮ್ನ ಜನಿಸಿದ್ದ. ಆ ಗ್ರಾಮದಲ್ಲಿ ಪ್ರದ್ಯುಮ್ನನ ಜಾತಿ ಅಸ್ಪ್ಛಶ್ಯತೆಗೊಳಗಾಗಿತ್ತು. ಅಸ್ಪಶೃತೆಯ ಕರಿ ನೆರಳಲ್ಲೇ ಬೆಳೆದ ಪ್ರದ್ಯುಮ್ನ ಕುಮಾರ್ (ಪಿಕೆ) ಒಬ್ಬ ಅದ್ಭುತ ಚಿತ್ರಕಾರನಾಗಿದ್ದ. ಆತನ ವಿದ್ಯಾಭ್ಯಾಸಕ್ಕೆ ಪೋಷಣೆ ನೀಡುವಷ್ಟು ಆತನ ಕುಟುಂಬ ಸಶಕ್ತವಾಗಿರಲಿಲ್ಲ. ಪದೇ ಪದೇ ಮೇಲ್ಜಾತಿಯವರಿಂದ ಪಿಕೆ ಅವಮಾನಿತನಾಗುತ್ತಿದ್ದ. ಹೀಗೆ 1971ರಲ್ಲಿ ಈತ ನವದೆಹಲಿಯ ಆರ್ಟ್ಸ್ ಕಾಲೇಜಿಗೆ ಸೇರಿ ಅಲ್ಲಿ ಪೋಟ್ರೈಟ್ ತಯಾರಿಸುವ ಕಲಾವಿದನಾಗಿ ಪ್ರಸಿದ್ಧಿ ಹೊಂದಿದ್ದ. 
1975ರಲ್ಲಿ ಪಿಕೆ ಬಗ್ಗೆ ತಿಳಿದ ಲಂಡನ್‌ನ ವಿದ್ಯಾರ್ಥಿನಿ 19ರ ಹರೆಯದ ಶಾರ್ಲೆಟ್ ವಾನ್ ಸ್ಲೆಡ್‌ವಿನ್ ಭಾರತಕ್ಕೆ ಬಂದು ಪೋಟ್ರೈಟ್ ಮಾಡಿಕೊಡುವಂತೆ ಪಿಕೆಗೆ ಹೇಳಿದಳು. ಹೀಗೆ ಪೋಟ್ರೈಟ್ ಮಾಡುವ ಹೊತ್ತಲ್ಲಿ ಆಕೆಯ ಸೌಂದರ್ಯ ಈತನ ಮನ ಸೆಳೆದರೆ, ಇವನ ಸೌಮ್ಯ ಸ್ವಭಾವ ಹಾಗೂ ಸರಳತೆ ಅವಳ ಮನಸ್ಸನ್ನು ಸೆಳೆಯಿತು. ಇಬ್ಬರಲ್ಲೂ ಪ್ರೇಮಾಂಕುರವಾಯಿತು. 
ಶಾರ್ಲೆಟ್ ತನ್ನ ಹೆಸರನ್ನು ಚಾರುಲತಾ ಎಂದು ಬದಲಿಸಿ, ಪಿಕೆಯನ್ನು ಮದುವೆಯಾದಳು.
ಸ್ವಲ್ಪ ಕಾಲದ ನಂತರ ಶಾರ್ಲೆಟ್‌ಗೆ ಸ್ವೀಡನ್‌ಗೆ ಮರಳಬೇಕಾಗಿ ಬಂತು. ನೀನೂ ನನ್ನೊಂದಿಗೆ ಬಾ ಎಂದು ಆಕೆ ಕರೆದಳು. ಆದರೆ ವಿದ್ಯಾರ್ಥಿಯಾಗಿದ್ದ ಪಿಕೆಗೆ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಬಿಟ್ಟು ಹೋಗುವಂತಿಲ್ಲ. ನಾನೇ ನಿನಗೆ ವಿಮಾನದ ಟಿಕೆಟ್ ಕಳಿಸುತ್ತೇನೆ ಎಂದು ಆಕೆ ಹೇಳಿದರೂ, ನೀನೀಗ ಹೋಗು, ನಾನೇ ನಿನ್ನಲ್ಲಿಗೆ ಬರುವೆ ಎಂದು ಹೇಳಿ ಪಿಕೆ ಆಕೆಯನ್ನು ಕಳಿಸಿಕೊಟ್ಟ. ಆಮೇಲೆ ಅವರು ಪತ್ರದ ಮೂಲಕವೇ ವ್ಯವಹರಿಸುತ್ತಿದ್ದರು.
ಸ್ವೀಡನ್ ಹೋಗುವಷ್ಟು ಆತನಲ್ಲಿ ದುಡ್ಡಿರಲ್ಲಿಲ್ಲ. ಹಾಗಂತ ಅಲ್ಲಿ ಹೋಗದೇ ಇರುವುದಕ್ಕೆ ಸಾಧ್ಯವಿಲ್ಲ. ಶಾರ್ಲೆಟ್‌ನ ಪ್ರೀತಿಯ ಸೆಳೆತ ಆತನನ್ನು ಆ ಕಡೆ ಎಳೆಯುತ್ತಿತ್ತು. ಹೀಗಿರುವಾಗ ಆತ ತನ್ನಲ್ಲಿರುವ ವಸ್ತುಗಳನ್ನೆಲ್ಲಾ ಮಾರಿ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ. ಅದರಲ್ಲಿ ತನ್ನ ಪೇಟಿಂಗ್ ಮತ್ತು ಪೇಟಿಂಗ್ ಸಾಮಾಗ್ರಿಗಳನ್ನಿಟ್ಟುಕೊಂಡು ಆತ ಹೊರಟಿದ್ದು ಎಲ್ಲಿಗೆ ಗೊತ್ತಾ? ತನ್ನ ಮನದನ್ನೆಯನ್ನು ಭೇಟಿ ಮಾಡಲು ಪಾಶ್ಚಿಮಾತ್ಯ ದೇಶಕ್ಕೆ.
ಈ ಯಾತ್ರೆ ನಡೆದದ್ದು 1978ರಲ್ಲಿ. ಮೊದಲಿಗೆ ಈತ ನವದೆಹಲಿಯಿಂದ ಅಮೃತಸರಕ್ಕೆ ಬಂದು ಅಲ್ಲಿಂದ ಅಫ್ಘಾನಿಸ್ತಾನ್, ಇರಾನ್, ಟರ್ಕಿ, ಬಲ್ಗೇರಿಯಾ, ಯುಗೋಸ್ಲಾವಿಯಾ, ಜರ್ಮನಿ, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್ ಗೆ ತಲುಪಿದ್ದಾನೆ. ಈ ನಡುವೆ ಹಲವಾರು ಬಾರಿ ಸೈಕಲ್ ಕೈಕೊಟ್ಟಿದೆ. ಕೆಲವೊಂದು ದಿನ ಊಟ ತಿಂಡಿ ಇಲ್ಲದೆ ಅಲೆದದ್ದೂ ಇದೆ.  ಆದರೆ ಆಕೆಯನ್ನು ಭೇಟಿಯಾಗಬೇಕೆಂಬ ಆಸೆ ಇದ್ಯಾವುದಕ್ಕೂ ಧೈರ್ಯಗುಂದುವಂತೆ ಮಾಡಿಲ್ಲ. 
4 ತಿಂಗಳು ಮತ್ತು ಮೂರು ವಾರಗಳ ನಂತರ ಈತ ಸ್ವೀಡನ್ ನ ಗೋಥೆನ್ ಬರ್ಗ್‌ಗೆ ತಲುಪಿದ. ಆ ವೇಳೆ ಕೆಲವೊಂದು ದೇಶಗಳಿಗೆ ಹೋಗಬೇಕಾದರೆ ವೀಸಾದ ಅಗತ್ಯವಿರಲಿಲ್ಲ.
ಸ್ವೀಡನ್ ತಲುಪಿದ ಕೂಡಲೇ ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡರು. ಅವರಿಗೆ ಈತ ತನ್ನ ಪ್ರೇಮಕಥೆಯನ್ನು ಹೇಳಿದ. ತಾನು ಶಾರ್ಲೆಟ್ ನ್ನು ಮದುವೆಯಾಗಿರುವ ಫೋಟೋವನ್ನು ಅವರಿಗೆ ತೋರಿಸಿದ. ಅವರಿಗೆ ವಿಚಿತ್ರವೆನಿಸಿತು.
ಯುರೋಪ್ ನ ರಾಜಮನೆತನದ ಹುಡುಗಿಯೊಬ್ಬಳು ಬಡ ಭಾರತೀಯನೊಬ್ಬನನ್ನು ಮದುವೆಯಾಗುವುದಕ್ಕೆ ಸಾಧ್ಯವೇ?  ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿತ್ತು.
ಇತ್ತ ನನ್ನನ್ನು ಶಾರ್ಲೆಟ್ ಸ್ವೀಕರಿಸುವಳೇ? ಎಂಬ ಅನುಮಾನ ಪಿಕೆಯ ಮನಸಲ್ಲಿ ಮೂಡಿತು. ಅಷ್ಟೊತ್ತರಲ್ಲಿ ತನ್ನನ್ನು ಭೇಟಿಯಾಗಲು ಪಿಕೆ ಸೈಕಲ್ ಮೂಲಕ ಸ್ವೀಡನ್ ಗೆ ಬಂದಿದ್ದಾನೆ. ಅದೂ 5 ತಿಂಗಳು ಯಾತ್ರೆ ಮಾಡಿಕೊಂಡು ಎಂದು ತಿಳಿದ ಕೂಡಲೇ ಶಾರ್ಲೆಟ್ ಗೋಥೆನ್‌ಬರ್ಗ್‌ಗೆ ಬಂದಳು. ಅಲ್ಲಿ ಅವರಿಬ್ಬರು ಭೇಟಿಯಾದರು. ಪಿಕೆಯನ್ನು ಶಾರ್ಲೆಟ್ ಕುಟುಂಬ ಆತ್ಮೀಯವಾಗಿ ಬರ ಮಾಡಿಕೊಂಡರು. ರಾಜ ಮನೆತನದ ಧಿಮಾಕು ತೋರಿಸದೆ ಪಿಕೆಯನ್ನು ಶಾರ್ಲೆಟ್‌ನ ಪತಿಯಾಗಿ ಸ್ವೀಕರಿಸಿಕೊಂಡರು.
ಮದುವೆಯಾಗಿ 40 ವರುಷಗಳ ನಂತರ ಡಾ. ಪಿಕೆ ಮಹಾನಂದಿಯಾ ಸ್ವೀಡನ್‌ಗೆ ಭಾರತದ ಒಡಿಯಾ ಸಾಂಸ್ಕ್ಛತಿಕ ರಾಯಭಾರಿಯಾಗಿ ನೇಮಕಗೊಂಡರು. ಪಿಕೆ ಈಗ ಸ್ವೀಡನ್ ನಲ್ಲಿ ಶಾರ್ಲೆಟ್ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖವಾಗಿದ್ದಾರೆ.
ಒಂದು ಕಾಲದಲ್ಲಿ ಅಸ್ಪೃಶ್ಯತೆ ಎಂದು ದೂರವಿಟ್ಟಿದ್ದ ಪಿಕೆಯ ಗ್ರಾಮವೀಗ ಪಿಕೆಯನ್ನು ಆದರದಿಂದ ಬರ ಮಾಡಿಕೊಳ್ಳುತ್ತದೆ.
ಸಾಧನೆಯ ಛಲದಿಂದ ಮನ್ನಣೆ ಮತ್ತು ಪ್ರೀತಿ ಎರಡನ್ನೂ ಸಾಧಿಸಿದ ಕಲಾವಿದ ಪಿಕೆ. ಈತನ ಪ್ರೇಮಕತೆಯನ್ನು ಸಂಜಯ್ ಲೀಲಾ ಬನ್ಸಾಲಿ ಸಿನಿಮಾವನ್ನಾಗಿ ಮಾಡಲಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com