ಶಿಖರ್ ಧವನ್ ಫೇಸ್‌ಬುಕ್ ಲವ್‌ಸ್ಟೋರಿ

ಯಶಸ್ವಿ ಪುರುಷನ ಹಿಂದೆ ಹೆಣ್ಣೊಬ್ಬಳು ಇದ್ದೇ ಇರುತ್ತಾಳೆ ಎಂಬುದು ನಾಣ್ನುಡಿ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ...
ಶಿಖರ್ ಧವನ್ ತನ್ನ ಪತ್ನಿ ಹಾಗೂ ಮಗನೊಂದಿಗೆ
ಶಿಖರ್ ಧವನ್ ತನ್ನ ಪತ್ನಿ ಹಾಗೂ ಮಗನೊಂದಿಗೆ

ಯಶಸ್ವಿ ಪುರುಷನ ಹಿಂದೆ ಹೆಣ್ಣೊಬ್ಬಳು ಇದ್ದೇ ಇರುತ್ತಾಳೆ ಎಂಬುದು ನಾಣ್ನುಡಿ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಸೆಂಚುರಿ ಸಿಡಿಸಿದಾಗ ಕೊಹ್ಲಿಯ ವಿಜಯದ ಕ್ರೆಡಿಟ್‌ನಲ್ಲಿ ಬಾಲಿವುಡ್ ತಾರೆ, ಪ್ರೇಯಸಿ ಅನುಷ್ಕಾ ಶರ್ಮಾಳಿಗೂ ಪಾಲು ನೀಡಲಾಯಿತು. ಸಾಮಾಜಿಕ ತಾಣಗಳಲ್ಲಿ ಕೊಹ್ಲಿ ಜತೆಗೆ ಅನುಷ್ಕಾ ಕೂಡಾ ಹಿಟ್ ಆಗಿ ಬಿಟ್ಟರು.

ಇದಾದನಂತರ  ಮೆರ್ಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿ ಭಾರತ ಐತಿಹಾಸಿಕ ದಾಖಲೆ ಮಾಡಿದಾಗ ಅಲ್ಲಿ ಹೀರೋ ಆಗಿ ಮಿಂಚಿದ್ದು ಶಿಖರ್ ಧವನ್. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ವಂಚಿತನಾಗಿದ್ದ ಧವನ್ ಮೆರ್ಲ್ಬರ್ನ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಫಾರ್ಮ್ ಕಳೆದುಕೊಂಡಿದ್ದ ಧವನ್ ವಿಶ್ವಕಪ್‌ನಲ್ಲಿ ಹೊಡೆಬಡಿ ಆಟದ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದರು. ಶಿಖರ್ ಧವನ್ ಎಂಬ ಈ 'ಮೀಸೆ ಆಟಗಾರನ' ಯಶಸ್ಸಿನ ಹಿಂದೆ ಇದೆ ಒಂದು ಲವ್‌ಸ್ಟೋರಿ. ಯಸ್...ಒಂದು ಫೇಸ್‌ಬುಕ್ ಲವ್‌ಸ್ಟೋರಿ.

2004ರಲ್ಲಿ ಬಾಂಗ್ಲಾದೇಶದಲ್ಲಿ ನಡೆದೆ ಅಂಡರ್ 19 ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದ ಶಿಖರ್ ಧವನ್‌ನ ಸಹ ಆಟಗಾರರಾಗಿದ್ದ ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಆರ್.ಪಿ ಸಿಂಗ್ ಮೊದಲಾದವರು ಭಾರತದ ಟೀಂಗೆ ಆಯ್ಕೆಯಾದರೂ ಆಯ್ಕೆಗಾರರಿಗೆ ಧವನ್‌ನ ಪ್ರತಿಭೆ ಕಾಣಲೇ ಇಲ್ಲ. ಹಾಗೆ ಆಯ್ಕೆಗಾರರ ನಿರ್ಲಕ್ಷ್ಯಕ್ಕೊಳಗಾಗಿ ತನ್ನ ಪಾಡಿಗೆ ತಾನಾಯಿತು ಎಂಬಂತಿರುವಾಗ ಹರ್ಭಜನ್ ಸಿಂಗ್ ಅವರ ಫೇಸ್ ಬುಕ್ ಫ್ರೆಂಡ್ ಲಿಸ್ಟ್‌ನಲ್ಲಿ ಒಬ್ಬ ಸುಂದರಿ ಕಣ್ಣಿಗೆ ಬಿದ್ದಳು.
ಮೆಲ್ಬರ್ನ್‌ನಲ್ಲೇ ವಾಸವಾಗಿದ್ದ ಬ್ರಿಟಿಷ್-ಭಾರತೀಯ ಮೂಲದವಳಾದ ಆಕೆಯ ಹೆಸರು ಆಯೇಷಾ ಮುಖರ್ಜಿ. ಆಕೆಯನ್ನು ನೋಡಿದ ಧವನ್ ಕೂಡಲೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿಯೇ ಬಿಟ್ಟರು. ಆಕೆ ಅದನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ, ಅಲ್ಲಿ ಧವನ್ ಬದುಕು ಕೂಡಾ ಹೊಸ ತಿರುವು ಪಡೆದುಕೊಂಡಿತು.



ಫೇಸ್‌ಬುಕ್ ಫ್ರೆಂಡ್ ಪ್ರಿಯತಮೆಯಾದಳು. 2009ರಲ್ಲಿ ಅವರ ವಿವಾಹ ನಿಶ್ಚಿತಾರ್ಥವಾಗಿ,2012ರಲ್ಲಿ ವಿವಾಹವಾದರು. ಕಿಕ್ ಬಾಕ್ಸರ್ ಆಗಿರುವ ಆಯೇಷಾಗೆ ಮೊದಲೊಂದು ಮದುವೆಯಾಗಿದ್ದು ಅದರಲ್ಲಿ ರೇಹಾ ಮತ್ತು ಅಲಿಯಾಹ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಕೆ ಧವನ್ ಜೀವನಕ್ಕೆ ಪ್ರವೇಶಿಸಿ ಆತನ ಜೀವನದಲ್ಲಿ ಅಚ್ಚುಕಟ್ಟುತನವನ್ನು ತಂದರು. ಏಳು ಬೀಳುಗಳಲ್ಲಿ ಧವನ್ ಜತೆ ಆಯೇಷಾ ಜತೆಯಾಗಿ ನಿಂತರು. ಆಮೇಲೆ ತನ್ನ ಹುರಿಮೀಸೆ ಅಹಂಕಾರದ ಪ್ರತೀಕವಲ್ಲ, ಇದು ಅಭಿಮಾನದ ಸಂಕೇತ ಎಂದು ಧವನ್ ಸಾಧಿಸಿ ತೋರಿಸಿದರು. ಆತ್ಮವಿಶ್ವಾಸದಿಂದ ಕ್ರೀಸ್‌ಗಿಳಿಯುವ ಧವನ್‌ನನ್ನು ಕಡೆಗಣಿಸಲು ಆಯ್ಕೆಗಾರರಿಗೆ ಆಗಲಿಲ್ಲ. ಹಾಗೆ ಧವನ್ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 2013ರಲ್ಲಿ ತನ್ನ ಪತ್ನಿಯ ದೇಶವಾದ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ 187 ರನ್ ಸಿಡಿಸಿ ಧವನ್ ಅಬ್ಬರಿಸಿ ನಿಂತರು. ಆಸ್ಟ್ರೇಲಿಯಾ ಬೌಲರ್‌ಗಳ ಮಾರಕ ಬಾಲ್‌ಗಳನ್ನು ಬೌಂಡರಿಗಟ್ಟಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಧವನ್, ಟೀಂ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.



ಆದರೆ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಪಂದ್ಯಗಳಲ್ಲಿ ಧವನ್ ಫಾರ್ಮ್ ಕಳೆದುಕೊಂಡು ಬಿಟ್ಟಿದ್ದರು. ಫಾರ್ಮ್ ಕಳೆದುಕೊಂಡಿರುವ ಧವನ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿರುವುದನ್ನು ಹಲವರು ಪ್ರಶ್ನಿಸಿದ್ದರು. ಆದರೆ ಎಲ್ಲರಿಗೆ ಉತ್ತರವಾಗಿ ಧವನ್ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಐತಿಹಾಸಿಕ ಗೆಲವಿನ ರೂವಾರಿಯಾದರು.

ಫೆ. 22ರ ಭಾನುವಾರ ಧವನ್‌ರ ಈ ಆಟವನ್ನು ಕಾಣಲು ಪತ್ನಿ ಆಯೇಷಾ ಮುಖರ್ಜಿ ಮತ್ತು ಪುಟ್ಟ ಮಗ ಜೊರಾವರ್ ಜತೆ ಬಂದಿದ್ದರು. ಧವನ್‌ರ ಈ ಒಂದು ಶತಕ ಭಾರತದ ಐತಿಹಾಸಿಕ ಗೆಲವಿಗೆ ಕಾರಣವಾಗಿದ್ದು ಮಾತ್ರವಲ್ಲದೆ, ತನ್ನ ಕ್ರಿಕೆಟ್ ಜೀವನಕ್ಕೆ ಹೊಸ ತಿರುವು ತಂದದ್ದಕ್ಕೆ ಆಯೇಷಾಗೆ ಧವನ್ ನೀಡಿದ ಪ್ರೀತಿಯ ಉಡುಗೊರೆಯಾಗಿತ್ತು.

-ಸಾರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com