ಆಡಿಸಿ ನೋಡಿ!

ಮಾನಸಿಕ ಪುಷ್ಠಿಯ ಜೊತೆಗೆ ದೈಹಿಕ ಪೋಷಣೆಗೆ ನೆರವಾಗುತ್ತಿದ್ದ ಕೆಲ ಆಟಗಳು ಇಂದಿನ ನಗರ ಕೇಂದ್ರಿತ ಮಕ್ಕಳಿಗೆ ಪರಿಚಯವೇ ಇಲ್ಲವಾಗಿದೆ.
ಆಡಿಸಿ ನೋಡಿ!

ಮಾನಸಿಕ ಪುಷ್ಠಿಯ ಜೊತೆಗೆ ದೈಹಿಕ ಪೋಷಣೆಗೆ ನೆರವಾಗುತ್ತಿದ್ದ ಕೆಲ ಆಟಗಳು ಇಂದಿನ ನಗರ ಕೇಂದ್ರಿತ ಮಕ್ಕಳಿಗೆ ಪರಿಚಯವೇ ಇಲ್ಲವಾಗಿದೆ. ಸಹಬಾಳ್ವೆ, ಸಹಜೀವನ, ಸ್ಪರ್ಧಾ ಮನೋಭಾವ, ಹುರುಪು, ಉತ್ಸಾಹ, ನಿಸರ್ಗದತ್ತವಾದ ಚೈತನ್ಯಗಳು ಅಂದಿನ ಕೆಲ ಆಟಗಳ ವೈಶಿಷ್ಟ್ಯವೂ ಹೌದು. ಅಂತಹ 8 ಮಕ್ಕಳ ಜನಪ್ರಿಯ ಆಟಗಳ ಪರಿಚಯ ಇಲ್ಲಿದೆ.

ಬಣ್ಣದ ಬುಗುರಿ
ಸ್ಪಿನ್ನಿಂಗ್ ಟಾಪ್ ಅಥವಾ ಲಟ್ಟು ಎಂದು ಕರೆಯಿಸಿಕೊಳ್ಳುವ ಆ ಆಟವನ್ನು ಕನ್ನಡದಲ್ಲಿ 'ಬುಗುರಿ' ಆಡಿಸುವುದು ಎನ್ನುತ್ತಾರೆ. ಮೇಲೆ ದಪ್ಪವಾಗಿದ್ದು ನಂತರ ಹಂತಹಂತವಾಗಿ ಕೆಳಗೆ ಸಣ್ಣವಾಗುವಂತೆ ಹಾಗೂ ಚೂಪಾಗಿರುವಂತೆ ವಿನ್ಯಾಸ ಮಾಡಿದ ಮರದ ಆಟಿಕೆಯ ತುದಿಯಲ್ಲಿ ಕಬ್ಬಿಣ ಮೊಳೆಯೊಂದನ್ನು ಅಡಕಗೊಳಿಸಲಾಗಿರುತ್ತದೆ. ಗಟ್ಟಿಯಾದ ದಾರವೊಂದನ್ನು ತೆಗೆದುಕೊಂಡು ಅದನ್ನು ಮೊಳೆಯಿಂದ ಮೇಲ್ಮುಖವಾಗಿ ಸುತ್ತುತ್ತಾ ಬಂದು ನಂತರ ತುದಿಯಲ್ಲಿ ಉಳಿಯುವ ದಾರವನ್ನು ಹಿಡಿದು ಜೋರಾಗಿ ನೆಲದ ಮೇಲೆ ಉರುಳಿ ಬಿಡಲಾಗುತ್ತದೆ. ಯಾರು ಎಷ್ಟು ಕಲಾತ್ಮಕವಾಗಿ ಹಾಗೂ ರಭಸವಾಗಿ ಉರುಳಿಬಿಟ್ಟರು ಎಂಬುದರ ಆಧಾರದ ಮೇಲೆ ಬಣ್ಣದ ಬುಗುರಿ ಗಿರಗಿರನೆ ನೆಲದಲ್ಲಿ ತಿರುಗತೊಡಗುತ್ತದೆ. ಸತತಅಭ್ಯಾಸವಿಲ್ಲದೆ ಬುಗುರಿ ಆಡಿಸುವುದು ಕಷ್ಟ.ಕ್ರಿಯಾಶೀಲತೆ, ಏಕಾಗ್ರತೆ, ಹಾಗೂ ಕಲಾ ವಿನ್ಯಾಸಗಳು ಈ ಆಟ ಆಡುವುದರ ಮೂಲಕ ಮಕ್ಕಳಲ್ಲಿ ಹೆಚ್ಚಾಗುತ್ತದೆ. ಸುಲಭ ಖರ್ಚಿನಲ್ಲಿ ಆಟಿಕೆ ತಯಾರಾಗುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಬಹು ಜನಪ್ರಿಯ ಆಟವಾಗಿದೆ.

ಗಿಲ್ಲಿದಾಂಡು
ಕ್ರಿಕೆಟ್ ಅಥವಾ ಬೇಸ್‌ಬಾಲ್‌ನ ಬ್ಯಾಟ್ ಮಾದರಿಯಲ್ಲಿ ಕಡ್ಡಿಯನ್ನು (ದಾಂಡು) ಕೈಲಿಡಿದು ಕೆಳಗೆ ನಿರ್ದಿಷ್ಟ ಜಾಗದಲ್ಲಿ ಚಿಕ್ಕ ಗುಣಿ ತೋಡಿ ಸ್ಥಾಪಿಸಿದ ಗಿಲ್ಲಿಯನ್ನು ಜೋರಾಗಿ ಹೊಡೆದಾಗ ಅದು ಮೇಲಕ್ಕೆ ಹಾರಿ ದೂರಕ್ಕೆ ಚಿಮ್ಮುತ್ತದೆ. ಅದನ್ನು ಎದುರಾಳಿ ತಂಡದ ಸದಸ್ಯರು ಕ್ಯಾಚ್ ಹಿಡಿದಾಗ ಗಿಲ್ಲಿಯನ್ನು ಚಿಮ್ಮಿಸಿದವ ಔಟ್ ಆಗುತ್ತಾನೆ. ಗ್ರಾಮೀಣ ಪ್ರದೇಶ ಹಾಗೂ ಸಣ್ಣ ಪಟ್ಟಣಗಳಲ್ಲಿ ಇದನ್ನು ಹುಡುಗರು ಹೆಚ್ಚಾಗಿ ಆಡುತ್ತಾರೆ. ದಂಡ ಉದ್ದಕ್ಕಿದ್ದರೆ, ಗಿಲ್ಲಿ ಎರಡೂ ಬದಿ ಮೊನಚಾದ ಮರದ ಚಿಕ್ಕ ಆಟಿಕೆಯಾಗಿದೆ. ಈ ಆಟ ಬಹುತೇಕ ಕ್ರಿಕೆಟ್ಟನ್ನು ಹೋಲುತ್ತದೆ. ದಾಂಡು ಬ್ಯಾಟಿನ ಹೋಲಿಕೆ ಹೊಂದಿದ್ದರೆ ಗಿಲ್ಲಿ ಚೆಂಡಿನ ಹೋಲಿಕೆಯದ್ದಾಗಿದೆ. ದಾಂಡು ಹಾಗೂ ಗಿಲ್ಲಿಯ ಅಳತೆಯ ಬಗ್ಗೆ ನಿರ್ದಿಷ್ಟ ಮಾನದಂಡಗಳಿಲ್ಲವಾದರೂ ಸಾಮಾನ್ಯವಾಗಿ ಗಿಲ್ಲಿಯನ್ನು 3 ರಿಂದ 6 ಇಂಚು ಅಳತೆಯಲ್ಲಿ ನಿರ್ಮಿಸಲಾಗುತ್ತದೆ. ಇದನ್ನು ಬೆಂಗಾಲಿಯಲ್ಲಿ 'ಡಾಂಗೋಲಿ', ಮಹಾರಾಷ್ಟ್ರದಲ್ಲಿ 'ವಿಟಿ ದಾಂಡು', ತೆಲುಗಿನಲ್ಲಿ 'ಗೋಟಿಬಿಲ್ಲಾ', ತಮಿಳಿನಲ್ಲಿ 'ಕಿಟ್ಟಿಪುಲ್ಲು' ಎಂದು ಕರೆಯಲಾಗುತ್ತದೆ. ಅಷ್ಟರಮಟ್ಟಿಗೆ ಈ ಆಟ ದೇಶೀಯ ಆಟವಾಗಿದೆ. ಈ ಆಟವೂ ಕೂಡ ದೂರದರ್ಶಿತ್ವ, ಏಕಾಗ್ರತೆ, ಸಮಯಪಾಲನೆ ಮುಂತಾದವುಗಳನ್ನು ಪರೋಕ್ಷವಾಗಿ ಕಲಿಸಿಕೊಡುತ್ತದೆ.

ಗಾಳಿಪಟ
ಗುಡ್ಡಗಾಡು ಹಾಗೂ ಅಪಾರ ಪ್ರಮಾಣದ ಬಯಲಿರುವ ಪ್ರದೇಶದಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಾರಿಸುವ ಗಾಳಿಪಟ ಏಷ್ಯಾ ಖಂಡದ ಜನಪ್ರಿಯ ರೋಚಕ, ರೋಮಾಂಚಕ ಆಟಗಳಲ್ಲಿ ಒಂದು. ಬಣ್ಣದ ಕಾಗದಗಳನ್ನು ತಂದು ಬೇಕೆನಿಸಿದ ಆಕಾರಕ್ಕೆ ಮೊದಲು ಕತ್ತರಿಸಿ ಇಟ್ಟುಕೊಳ್ಳಲಾಗುತ್ತದೆ. ನಂತರ ಬಿದಿರಿನಿಂದ ಮಾಡಿದ ನಿರ್ದಿಷ್ಟ ಆಕಾರ, ವಿನ್ಯಾಸವುಳ್ಳ ಚೌಕಟ್ಟಿಗೆ ಈ ಬಣ್ಣದ ಕಾಗದವನ್ನು ಅಂಟಿಸಲಾಗುತ್ತದೆ. ಬಾಲಂಗೋಚಿ ಎಂದು ಕರೆಯಿಸಿಕೊಳ್ಳುವ ಉದ್ದನೆಯ ಕಾಗದದ ಬಾಲವೊಂದನ್ನು ಕೆಳಗೆ ಅಂಟಿಸಿ ಗಾಳಿಪಟವನ್ನು ತಯಾರುಮಾಡಲಾಗುತ್ತದೆ. ನಂತರ ಪಟದ ಮಧ್ಯದ ಬಿದಿರಿನ ಕಡ್ಡಿಗೆ ದಾರದ ತುದಿಯೊಂದನ್ನು ಕಟ್ಟಲಾಗುತ್ತದೆ. ಬಹಳಷ್ಟು ಉದ್ದವಿರುವ ದಾರದ ಉಂಡೆಯನ್ನು ಬಿಡಿಸುತ್ತಾ ಹೋದಂತೆ ಗಾಳಿಯ ರಭಸಕ್ಕೆ ತಕ್ಕಂತೆ ಪಟ ಮೇಲೇರತೊಡಗುತ್ತದೆ. ಆಗ ಬಾನಂಗಳದಲ್ಲಿ ಬಣ್ಣದ ಸೊಬಗಿನ ಚಿತ್ತಾರವೋ ಚಿತ್ತಾರ.

ಲಗೋರಿ
ಭಾರತದ ಗ್ರಾಮೀಣ ಭಾಗದ ಬಹುತೇಕ ಬಾಲಕ-ಬಾಲಕಿಯರ ನೆಚ್ಚಿನ ಆಟ ಲಗೋರಿ. ಇದು ಒಂದು ತಮಾಷೆಯ ಹಾಗೂ ಸರಳ ಆಟ. ಈ ಆಟದಲ್ಲಿ ಒಂದರ ಮೇಲೊಂದರಂತೆ ಒಟ್ಟು 7 ಕಲ್ಲುಗಳನ್ನು ಜೋಡಿಸಿಡಲಾಗುತ್ತದೆ. ಅವುಗಳು ಅನುಕ್ರಮವಾಗಿ ಕೆಳಗೆ ದೊಡ್ಡದಾಗಿದ್ದು ಮೇಲಕ್ಕೆ ಹೋಗುತ್ತಾ ಚಿಕ್ಕದಾಗಿರುತ್ತದೆ. ಗೋಪುರದ ಮಾದರಿಯಲ್ಲಿ ಕಲ್ಲುಗಳನ್ನು ಜೋಡಿಸಿಟ್ಟ ನಂತರ ರಬ್ಬರ್ ಬಾಲ್ ಹಿಡಿದ ಪೋರ/ಪೋರಿ ದೂರದಿಂದ ಗುರಿಯಿಟ್ಟು ಅದನ್ನು ಹೊಡೆಯುತ್ತಾರೆ. ಈ ಮೊದಲು ಕಲ್ಲುಗಳನ್ನು ಜೋಡಿಸಿಟ್ಟ ಪೋರ/ಫೋರಿ ತಕ್ಷಣ ಚೆದುರಿದ ಕಲ್ಲುಗಳನ್ನು ಮಾಮೂಲಿನಂತೆ ಜೋಡಿಸಿಡಲು ಪ್ರಯತ್ನಿಸುತ್ತಾರೆ. ಆದರೆ ಎದುರಾಳಿ ಬಾಲ್ ಮೂಲಕ ಅದನ್ನು ವಿಫಲಗೊಳಿಸುತ್ತಾನೆ/ಳೆ. ಅಂತಿಮವಾಗಿ ಎದುರಾಳಿಯ ದಾಳಿಯನ್ನು ಸಮರ್ಥವಾಗಿ ಎದುರಿಸಿ ಕಲ್ಲುಗಳನ್ನು ಜೋಡಿಸಿಟ್ಟರೆ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಆಟವನ್ನು ತಂಡವಾಗಿಯೂ ಕೂಡ ಆಡುತ್ತಾರೆ. ಈ ಆಟದಿಂದ ಗೆಲ್ಲಬೇಕೆಂಬ ಛಲ, ಗುರಿ ಸಾಧಿಸುವ ಹಠ, ಹಾಗೂ ಸಾಂಘಿಕ ಪ್ರಯತ್ನದ ಪರೋಕ್ಷ ಲಾಭವನ್ನು ಮಕ್ಕಳು ಪಡೆಯಬಹುದಾಗಿದೆ.

ಗೋಲಿ ಆಟ
ಭಾರತದ ಗ್ರಾಮೀಣ ಭಾಗದಲ್ಲಿ ಬಹುತೇಕ ಪ್ರೌಢಾವಸ್ಥೆಯ ಹುಡುಗರು ಆಡುವ ಆಟವೆಂದರೆ ಈ ಗೋಲಿ ಆಟ. ಗಾಜಿನ ಮಣಿಗಳಿಂದ ಮಾಡಿದ ಫಳಫಳಿಸುವ ಗೋಲಿಗಳು ಈ ಆಟದ ಪ್ರಮುಖ ಆಕರ್ಷಣೆ. ಈ ಆಟದಲ್ಲಿ ಗೋಲಿಯನ್ನು ನೆಲದ ಮೇಲಿರಿಸಲಾಗುತ್ತದೆ. ಪರಸ್ಪರ ಆಟಗಾರರು ಎಷ್ಟು ಗೋಲಿಗಳನ್ನು ಪಣಕ್ಕಿಟ್ಟು ಆಟವಾಡಬೇಕೆನ್ನುವುದನ್ನು ನಿರ್ಧರಿಸುತ್ತಾರೆ. ಹಾಗೆ ನಿರ್ಧರಿಸಿದ ಇಬ್ಬರ ಗೋಲಿಗಳನ್ನು ವೃತ್ತಾಕಾರದ ಚೌಕವೊಂದನ್ನು ರಚಿಸಿ ಅದರಲ್ಲಿ ಇರಿಸಲಾಗುತ್ತದೆ. ಗೋಲಿ ಹೊಡೆಯಲು ಸಿದ್ಧಪಡಿಸಿಕೊಂಡ ತನ್ನ ಮಾರ್ಬಲ್ ಬಾಲ್‌ನಿಂದ ಗೋಲಿಗಳನ್ನು ಹೊಡೆಯಲಾಗುತ್ತದೆ. ಚೌಕದಿಂದ ಆಚೆ ಚದುರಿದ ಗೋಲಿಗಳು ಹೊಡೆದ ವ್ಯಕ್ತಿಯ (ವಿಜೇತ) ಪಾಲಾಗುತ್ತವೆ. ಈ ಆಟದಲ್ಲಿ ಗೋಲಿಗಳನ್ನು ಹಾಗೂ ಕೆಲವೊಮ್ಮೆ ಹಣವನ್ನು ಪಣಕ್ಕಿಟ್ಟು ಆಡಲಾಗುತ್ತದೆ.

ಕಣ್ಣಾಮುಚ್ಚಾಲೆ
'ಚುಪ್ಪಾ ಚುಪ್ಪಿ', 'ಐಸ್ ಸ್ಪೈಸ್‌' ಎಂದೆಲ್ಲಾ ಕರೆಯಿಸಿಕೊಳ್ಳುವ ಈ ಆಟದ ಮೂಲ ನಮ್ಮ ಪುರಾತನ ಸಾಂಪ್ರದಾಯಿಕ ಕಣ್ಣಾಮುಚ್ಚಾಲೆ ಆಟವೇ. 'ಕಣ್ಣಾಮುಚ್ಚೆ ಕಾಡೇಗೂಡೇ ಉದ್ದಿನಮೂಟೆ ಉರುಳೇ ಹೋಯ್ತು ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ' ಎಂದು ಹಿರಿಯರೊಬ್ಬರು ಹಾಡುತ್ತಾ ಕಣ್ಣಾಮುಚ್ಚಾಲೆಯಲ್ಲಿ ಮಗುವೊಂದರ ಕಣ್ಣುಮುಚ್ಚಿ ಹಿಡಿದಾಗ ಉಳಿದ ಮಕ್ಕಳು ಅಡಗಿಕೊಳ್ಳುತ್ತಾರೆ. ನಂತರ ಕೈ ತೆಗೆದು ಮಗುವಿನ ಕಣ್ಣುತೆರೆದಾಗ ಈ ಮಗು ಉಳಿದ ಮಕ್ಕಳನ್ನು ಹುಡುಕಲು ಆರಂಭಿಸುತ್ತೆ. ಯಾರಾದರೂ ಕಂಡರೆ ತಕ್ಷಣ ಕಣ್ಣುಮುಚ್ಚಲು ಕೂತವರ ಬಳಿ ಬಂದು ಮುಟ್ಟಿ ಅವರ ಹೆಸರು ಹೇಳಿದರೆ ಆ ಮಗು ಆಟದಿಂದ ಔಟ್ ಆದಂತೆ. ಈ ದಿನಗಳಲ್ಲಿ ಕಣ್ಣುಮುಚ್ಚಿ ಮಕ್ಕಳನ್ನು ಆಟವಾಡಿಸಲು ಹಿರಿಯರಿಗೆ ಪುರುಸೊತ್ತಿಲ್ಲದ ಕಾರಣದಿಂದ ಮಕ್ಕಳು ನಿರ್ದಿಷ್ಟ ಜಾಗವೊಂದರ ಬಳಿ ತಮ್ಮ ಕಣ್ಣನ್ನು ತಾವೇ ಮುಚ್ಚಿಕೊಂಡು ಆಟವಾಡುತ್ತಾರೆ. ಈ ಆಟ ಗುಂಪಿನ ಮಹತ್ವ, ಹೊಂದಾಣಿಕೆಯ ತತ್ವ, ಹಾಗೂ ಕುತೂಹಲಗಳನ್ನು ಭೇದಿಸುವುದು, ಮತ್ತು ಆಲೋಚಿಸುವಿಕೆಯಂತಹ ಪರೋಕ್ಷ ಲಾಭಗಳನ್ನು ಮಕ್ಕಳಿಗೆ ತಂದುಕೊಡುತ್ತದೆ.

ಕಬಡ್ಡಿ
ಸುಮಾರು 4 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅತಿ ಪುರಾತನ ಸಾಂಪ್ರದಾಯಿಕ ಆಟವೆಂದರೆ ಕಬಡ್ಡಿ. ಈ ಆಟವನ್ನು ಆಡಲು ಎರಡು ತಂಡಗಳ ಅವಶ್ಯಕತೆ ಇರುತ್ತದೆ. ಪ್ರತಿ ತಂಡದಲ್ಲಿ 12 ಜನರ ಅಗತ್ಯವಿದ್ದು 12.5ಟ ್ಢ 10ಟ ವಿಸ್ತೀರ್ಣದ ಪ್ರದೇಶದಲ್ಲಿ ಆಡಲಾಗುತ್ತದೆ. ಈ ಆಟದ ಉಗಮದ ನಿಖರ ವಿವರಗಳು ತಿಳಿದು ಬಂದಿಲ್ಲವಾದರೂ ಭಾರತೀಯ ಸೇನೆಯ ಯೋಧರ ಯುದ್ಧ ಕೌಶಲ್ಯ ಹಾಗೂ ಆತ್ಮ ರಕ್ಷಣೆಯ ತಂತ್ರಗಳನ್ನು ಕಲಿಸಿಕೊಡಲು ಈ ಆಟವನ್ನು ಹುಟ್ಟುಹಾಕಲಾಯಿತು ಎಂಬ ನಂಬಿಕೆಯೂ ಇದೆ. ತಂಡದ ಪ್ರತಿ ಸದಸ್ಯ, ಎದುರಾಳಿಯ ಜಾಗಕ್ಕೆ ನುಗ್ಗಿ ಆ ತಂಡದ ಸದಸ್ಯನನ್ನು ತನ್ನ ಜಾಗಕ್ಕೆ ಕರೆ ತಂದರೆ ವಿಜಯ ದೊರಕಿದಂತೆ. ಹಾಗೂ ಆ ಸದಸ್ಯ ಆಟದಿಂದ ಔಟ್ ಆಗುತ್ತಾನೆ. ಈ ರೀತಿ ಆಡುತ್ತಾ ಎದುರಾಳಿ ತಂಡದ ಸದಸ್ಯರ ಸಂಖ್ಯೆಯನ್ನು ಕುಗ್ಗಿಸುತ್ತಾ ಬಂದರೆ ಅಂತಿಮವಾಗಿ ತಂಡವೊಂದಕ್ಕೆ ವಿಜಯ ಲಭಿಸುತ್ತದೆ. ಕಬಡ್ಡಿ ಇಂದು ಅಂತರಾಷ್ಟ್ರೀಯ ಕ್ರೀಡೆಯಾಗಿ ಗುರುತಿಸಲ್ಪಟ್ಟಿದ್ದು ಒಲಿಂಪಿಕ್‌ನ ಭಾಗವಾಗಿದೆ.

ಕೇರಂ
ಸಿನೆಮಾವೊಂದರಲ್ಲಿನ ಸಂಭಾಷಣೆ ಈ ರೀತಿ ಇದೆ. 'ಜ್ಯೂಸ್ ಕುಡಿಯುತ್ತಾ ಕೇರಂ ಆಡುತ್ತಿದ್ದರೆ ಬದುಕಿನಲ್ಲಿ ಮಜವೋ ಮಜ.' ಹೌದು ಕೇರಂ ಕುಳಿತಲ್ಲೇ ಆಟಗಾರರಿಗೆ ಮಜಾ ಕೊಡುವ ಅತ್ಯಂತ ಉಲ್ಲಾಸದಾಯಕವಾದ ಜನಪ್ರಿಯ ಆಟ. ಒಳಾಂಗಣ ಆಟವಾದ ಇದರಲ್ಲಿ ಮರದಿಂದ ಮಾಡಿದ ಬೋರ್ಡ್ ಇದ್ದು ಅದರಲ್ಲಿ ಚೌಕಾಕಾರವಾಗಿ ಗೆರೆಗಳನ್ನು ಹಾಕಲಾಗಿರುತ್ತದೆ. ಬೋರ್ಡಿನ ನಾಲ್ಕು ತುದಿಯಲ್ಲಿ ನಾಲ್ಕು ರಂದ್ರಗಳಿರುತ್ತವೆ. ಒಂಬತ್ತು ಬಿಳಿ ಹಾಗೂ ಒಂಬತ್ತು ಕಪ್ಪು ಹಾಗೂ ಒಂದು ಕೆಂಪು ಬಣ್ಣದ ಮರದ ಬಿಲ್ಲೆಗಳನ್ನು ಆಟಕ್ಕಾಗಿ ಉಪಯೋಗಿಸಲಾಗುತ್ತದೆ. ಸ್ಟ್ರೈಕರ್(ಮರದ ಬಿಲ್ಲೆಗಳನ್ನು ಹೊಡೆಯಲು ಉಪಯೋಗಿಸುವ ಫೈಬರ್‌ನ ಬಿಲ್ಲೆ) ಮೂಲಕ ಮರದ ಬಿಲ್ಲೆ(ಪಾನ್)ಗಳನ್ನು ಅತ್ಯಧಿಕವಾಗಿ ಹೊಡೆದವರು ಆಟದಲ್ಲಿ ಜಯಶಾಲಿಗಳಾಗುತ್ತಾರೆ. ವ್ಯಕ್ತಿಗಳಾಗಿ ಹಾಗೂ ತಂಡವಾಗಿ ಈ ಆಟವನ್ನು ಆಡಬಹುದಾಗಿದೆ. ಈ ಆಟವು ಕೌಶಲ್ಯ, ಏಕಾಗ್ರತೆ, ಕುಶಾಗ್ರಮತಿಯನ್ನು ಹೆಚ್ಚಿಸುತ್ತದೆ.

-ಜಿ.ಎಸ್. ನಾಗೇಶ್‌ಗುಬ್ಬಿ
nageshgubbi@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com