ಅಮರ ವೀರರಿಗೆ "ಅಶೋಕ ಚಕ್ರ"

31 ವರ್ಷದ ಮೇಜರ್ ವರದ ರಾಜನ್ ಅವರು ತಮ್ಮ ಪ್ರಾಣ ಹೋಗುತ್ತಿದ್ದರೂ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದರು...
ಮೇಜರ್ ಮುಕುಂದ್ ವರದರಾಜನ್ ಹಾಗೂ ನಾಯ್ಕ್ ನೀರಜ್ ಕುಮಾರ್ ಸಿಂಗ್ (ಸಂಗ್ರಹ ಚಿತ್ರ)
ಮೇಜರ್ ಮುಕುಂದ್ ವರದರಾಜನ್ ಹಾಗೂ ನಾಯ್ಕ್ ನೀರಜ್ ಕುಮಾರ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ಭಯೋತ್ಪಾದಕರ ವಿರುದ್ಧ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮಡಿದ ಮೇಜರ್ ಮುಕುಂದ್ ವರದರಾಜನ್ ಹಾಗೂ ನಾಯ್ಕ್ ನೀರಜ್ ಕುಮಾರ್ ಸಿಂಗ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮರಣೋತ್ತರವಾಗಿ ಅಶೋಕ ಚಕ್ರ ಪುರಸ್ಕಾರ ನೀಡಿದರು.

ಕಳೆದ 2014ರ ಏಪ್ರಿಲ್ ತಿಂಗಳಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ವೇಳೆ ಶೌರ್ಯ ಮೆರೆದ 31 ವರ್ಷದ ಮೇಜರ್ ವರದ ರಾಜನ್ ಅವರು ತಮ್ಮ ಪ್ರಾಣ ಹೋಗುತ್ತಿದ್ದರೂ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದರು.

ಶೋಫಿಯಾನ್ ಗ್ರಾಮಕ್ಕೆ ನುಗ್ಗಿದ್ದ ಉಗ್ರರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಒಂದೇ ಸಮನೆ ಗುಂಡಿನ ಸುರಿಮಳೆ ಗೈಯುತ್ತಿದ್ದರು. ಈ ಮಾಹಿತಿ ಪಡೆದ 44ನೇ ರಾಷ್ಟ್ರೀಯ ಶಸಸ್ತ್ರ ದಳದ ಸೈನಿಕರು ಘಟನಾ ಪ್ರದೇಶವನ್ನು ಸುತ್ತುವರೆದರು. ಇದೇ ತಂಡದಲ್ಲಿ ಮೇಜರ್ ವರದ ರಾಜನ್ ಕೂಡ ಇದ್ದರು. ಮನೆಯೊಂದರಲ್ಲಿ ಅವಿತುಕುಳಿತಿದ್ದ ಉಗ್ರರು ಯೋಧರತ್ತ ಗುಂಡು ಹಾರಿಸುತ್ತಿದ್ದರು. ಇದೇ ವೇಳೆ ಉಗ್ರರ ಕಣ್ತಪ್ಪಿಸಿ ಕಟ್ಟಡದ ಒಳಗೆ ಹೋಗಲು ಮೇಜರ್ ವರದ ರಾಜನ್ ಮತ್ತು ಇದೇ ತಂಡದ ಮತ್ತೋರ್ವ ಯೋಧ ಸೆಪೊಯ್ ವಿಕ್ರಮ್ ಯತ್ನಿಸಿದರು. ಈ ವೇಳೆ ಉಗ್ರನೊಬ್ಬ ಹಾರಿಸಿದ ಗುಂಡು ವರದರಾಜನ್ ಅವರ ತೋಳು ಹೊಕ್ಕಿತ್ತು.

ಆದರೂ ದೃತಿಗೆಡದ ವರದರಾಜನ್ ಅವರು ಕಟ್ಟಡದ ಒಳಗೆ ಗ್ರೆನೈಡ್ ಎಸೆಯುವುದರಲ್ಲಿ ಯಶಸ್ವಿಯಾಗಿದ್ದರು. ಗ್ರೆನೇಡ್ ಸ್ಫೋಟಗೊಂಡು ಓರ್ವ ಉಗ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಇದರಿಂದ ಸೇನಾ ಪಡೆಗೆ ಕಟ್ಟಡದೊಳಗೆ ಹೋಗಲು ದಾರಿ ಸಿಕ್ಕಂತಾಯಿತು. ಆದರೆ ಅಲ್ಲೇ ಪಕ್ಕದಲ್ಲೇ ಇದ್ದ ಮತ್ತೋರ್ವ ಉಗ್ರ ಗ್ರೆನೇಡ್ ಸ್ಫೋಟದ ನಂತರ ವರದರಾಜನ್ ಅವರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದನು. ಇದರಿಂದ ವರದ ರಾಜನ್ ಅವರು ಸ್ಥಳದಲ್ಲಿಯೇ ಕುಸಿದುಬಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ವರದ ರಾಜನ್ ಅವರು ಮತ್ತೆ ಸಾವರಿಸಿಕೊಂಡು ಆ ಉಗ್ರನನ್ನು ಕೂಡ ಹೊಡೆದುರುಳಿಸಿದರು. ಕೂಡಲೇ ಸೈನಿಕರು ಕಟ್ಟಡದ ಒಳಗೆ ಪ್ರವೇಶ ಮಾಡಿ ಉಳಿದ ಮತ್ತೋರ್ವ ಉಗ್ರನನ್ನು ಕೊಂದು ಹಾಕಿದರು.

ವರದರಾಜನ್ ಅವರನ್ನು ಕೂಡಲೇ ಸೇನಾಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷರಲ್ಲಾಗಲೇ ಅವರು ಇಹಲೋಕ ತ್ಯಜಿಸಿದ್ದರು.

ಉಗ್ರನನ್ನು ಕೈಯಲ್ಲೇ ಗುದ್ದಿ ಸಾಯಿಸಿದ ವೀರ ಯೋಧ ನಾಯಕ್ ನೀರಜ್ ಸಿಂಗ್
ವರದರಾಜ್ ರಂತೆಯೇ ಅಶೋಕ ಚಕ್ರ ಪದಕಕ್ಕೆ ಭಾಜನರಾಗಿರುವ ಮತ್ತೋರ್ವ ವೀರ ಯೋಧ ನಾಯಕ್ ನೀರಜ್ ಸಿಂಗ್ ಅವರು ಕೂಡ ಉಗ್ರರೊಂದಿಗಿನ ಹೋರಾಟದಲ್ಲಿ ವೀರಮರಣವನ್ನಪ್ಪಿದ್ದಾರೆ. 2014 ಏಪ್ರಿಲ್ 24ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಗ್ರಾಮದಲ್ಲಿ ನಾಯಕ್ ನೀರಜ್ ಸಿಂಗ್ ಅವರ ನೇತೃತ್ವದಲ್ಲಿ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಗ್ರಾಮದಲ್ಲಿ ಅಡಗಿದ್ದ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ಸುರಿಮಳೆ ಗೈಯಲಾರಂಭಿಸಿದರು.

ಘಟನೆಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದ. ಅದೇ ತಂಡದಲ್ಲಿದ್ದ ನಾಯಕ್ ನೀರಜ್ ಸಿಂಗ್ ಅವರು ಈ ದೃಶ್ಯವನ್ನು ಕಣ್ಣಾರೆ ನೋಡಿದ್ದರು. ಅಲ್ಲದೆ ಉಗ್ರರ ವಿರುದ್ಧ ಹೋರಾಟಕ್ಕೆ ಮುಂದಾದರು. ಇದೇ ವೇಳೆ ಉಗ್ರರು ಅವರತ್ತ ಗ್ರೆನೇಡ್ ಗಳನ್ನು ತೂರಿದ್ದರು. ಕೂದಲೆಳೆ ಅಂತರದಲ್ಲಿ ನೀರಜ್ ಸಿಂಗ್ ಅವರು ಪಾರಾಗಿದ್ದರು. ಕೂಡಲೇ ನೀರಜ್ ಸಿಂಗ್ ಅವರು ಗ್ರೆನೇಡ್ ತೂರುತ್ತಿದ್ದ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಮತ್ತೋರ್ವ ಉಗ್ರ ನೀರಜ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದನು. ಈ ವೇಳೆ ಗುಂಡು ಅವರ ಎದೆಗೆ ಹೊಕ್ಕಿತ್ತು. ಗುಂಡು ಬೀಳುತ್ತಿದ್ದಂತೆಯೇ ಕೈಯಲ್ಲಿದ್ದ ಗನ್ ನೆಲಕ್ಕೆ ಉರುಳಿತ್ತು. ಗುಂಡೇಟಿನ ಹೊರತಾಗಿಯೂ ನೀರಜ್ ಸಿಂಗ್ ಅವರು ಉಗ್ರನಿಗೆ ಬಲವಾದ ಪಂಚ್ ಕೊಡುವ ಮೂಲಕ ಆತನ ಕೈಯಲ್ಲಿದ್ದ ಗನ್ ಅನ್ನು ಕಿತ್ತುಕೊಂಡಿದ್ದರು. ಬಳಿಕ ಆತನೊಂದಿಗೆ ಮಲ್ಲಯುದ್ಧ ಮಾಡಿ ಆತನನ್ನು ಕೈಯಲ್ಲೇ ಗುದ್ದಿ ಸಾಯಿಸಿದ್ದರು.

ಗುಂಡೇಟಿನಿಂದ ಅವರ ದೇಹದಲ್ಲಿ ತೀವ್ರ ರಕ್ತಸ್ರಾವವಾಗುತ್ತಿತ್ತು. ಇದನ್ನೂ ಲೆಕ್ಕಿಸದ ನೀರಜ್ ಸಿಂಗ್ ಅವರು ಪ್ರಜ್ಞೆ ತಪ್ಪುವವರೆಗೂ ಉಗ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು. ರಣಾಂಗಣದಲ್ಲಿ ಕೆಚ್ಚೆದೆಯ ಹೋರಾಟ ಮಾಡಿದ ಈ ಇಬ್ಬರು ಯೋಧರಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ಇಂದು ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾರತೀಯ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಲೆಫ್ಟಿನೆಂಟ್ ಮೇಜರ್ ಮುಕುಂದ್ ವರದರಾಜನ್ ಹಾಗೂ ನಾಯ್ಕ್ ನೀರಜ್ ಕುಮಾರ್ ಸಿಂಗ್ ಅವರ ಪತ್ನಿಯರಿಗೆ ಆಶೋಕ ಚಕ್ರ ಪ್ರಧಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com