ಹಿಮ ಸುಂದರಿಯರ ಹಿಂದೆ ಬಕೆಟ್ ಹಿಡಿದು

ಹಿಮ ಸುಂದರಿಯರ ಹಿಂದೆ ಬಕೆಟ್ ಹಿಡಿದು

'ಎಎಲ್‌ಎಸ್‌' ಖಾಯಿಲೆ ಕುರಿತು ಜಾಗೃತಿ ಮೂಡಿಸಲು ಉತ್ತರ ಅಮೆರಿಕಾ ಪ್ರಾಂತ್ಯದಲ್ಲಿ ಪ್ರಾರಂಭವಾದ ಈ ಐಸ್‌ಬಕೆಟ್ ಅಭಿಯಾನ ಈಗ ಪ್ರಪಂಚದ ಮೂಲೆ ಮೂಲೆಯೂ ತಲುಪಿದ್ದು ಎಲ್ಲೆಡೆ ಸೆಲೆಬ್ರಿಟಿಗಳು ಬಕೆಟ್‌ಗೆ ಹುಡುಕಾಡುತ್ತಿದ್ದಾರೆ. ಎಎಲ್‌ಎಸ್ ಕುರಿತು ಎಷ್ಟು ಜಾಗೃತಿ ಮೂಡಿದೆಯೋ ದೇವರಿಗೇ ಗೊತ್ತು, ಆದರೆ ಈ ಐಸ್ ಮತ್ತು ಬಕೆಟ್‌ನಿಂದ ಸೆಲೆಬ್ರಿಟಿಗಳಿಗಂತೂ ಸಾಕಷ್ಟು ಅಗ್ಗದ ಪ್ರಚಾರ ಸಿಕ್ಕಿದೆ. ಹಾಗೇ ಹಿಮ ಸುಂದರಿಯರ ಹಿಂದೆ ಬಕೆಟ್ ಹಿಡಿದು ಚಾಲೆಂಜ್‌ಗೆ ಉತ್ತೇಜಿಸುವವರೂ ಹೆಚ್ಚಾಗಿದ್ದಾರೆ.

ಈ ತಲೆ ಮೇಲೆ ತಣ್ಣೀರ್ ಸುರಿದುಕೊಳ್ಳುವ ಐಸ್ ಬಕೆಟ್ ಚಾಲೆಂಜ್ ಹೆಸರಿಗೆ ಐಸ್ ಬಕೆಟ್ಟೇ ಆದರೂ ಇದು ಸಕತ್ ಹಾಟ್ ಅಂಡ್ ಸ್ಪೈಸಿ! ಹೆಂಗೆಳೆಯರು, ಸಿನಿಮಾ ನಟಿಯರು, ಮಾಡೆಲ್‌ಗಳು ಬಾಗುತ್ತಾ, ಬೀಗುತ್ತಾ ತಲೆ ಮೈಲೆ ಐಸ್‌ನೀರು ಸುರಿದುಕೊಳ್ಳುವ ಸಂಭ್ರಮ ಮೈ ಬಿಸಿಯೇರಿಸುವ ಅತ್ಯಂತ ಹಸಿಬಿಸಿ ರೋಚಕ ಅಭಿಯಾನ ಅನಿಸಿದೆ. ಹದಿ ಹರೆಯದ ಚೆಲುವೆ ತಲೆ ಮೇಲೆ ಐಸ್‌ನೀರು ಸುರಿದುಕೊಂಡರೆ ತಣ್ಣಗೆ ಕುಳಿತಿರುವ ಮನಸ್ಥಿತಿ ಯಾವ ಗಂಡಸಿಗೆ ತಾನೇ ಇದ್ದೀತು? ಅದರಲ್ಲೂ ಆ ಐಸು ತಲೆ ಮೇಲೆ ಬಿದ್ದಾಗ ಆ ಬೆಡಗಿಯಿಂದ ಹೊರಡುವ ಮಾದಕ, ರೋಚಕ ಉದ್ಗಾರ, ಚಳಿಗೆ, ಹಠಾತ್ ರೋಮಾಂಚನಕ್ಕೆ ಕಂಪಿಸುವ ಮೈ ನೋಡುತ್ತಿದ್ದರೆ ನಮಗೂ ಐಸ್ ಇಟ್ಟುಕೊಳ್ಳಬೇಕು ಎನಿಸುತ್ತದೆ. ಹೀಗೆ ಇಂಟರ್‌ನೆಟ್‌ನಲ್ಲಿ ಹಿಮಸುಂದರಿಯರನ್ನು ಕದ್ದು ಬಾಯಿ ಬಿಟ್ಕೊಂಡು ನೋಡುತ್ತಾ ಕುಳಿತ ಗಂಡಂದಿರನ್ನು ಎಚ್ಚರಿಸಲು ಮನೆ ಹೆಂಡತಿಯರು ಐಸ್ ಬಕೆಟ್ ಸೇವೆ ಮಾಡಿದರೆ ತಪ್ಪೇನಿಲ್ಲ ಬಿಡಿ! ಆಗ ಗಂಡಂದಿರು 'ಕೂಲ್ ಕೂಲ್ ಬೀ ಕೂಲ್‌' ಎಂದು ಅರ್ಧ ರಾತ್ರಿಯಲ್ಲೇ ಐಸ್‌ಕ್ರೀಂ ಅಂಗಡಿ ಹುಡುಕಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಆ ಬೆಡಗಿ ಮೈಗಂಟಿದ ಬಟ್ಟೆ ತೊಟ್ಟು ಐಸ್‌ಬಕೆಟ್ ಶೋ ನಡೆಸಿದರೆ ಬಟ್ಟೆ ಮತ್ತೂ ಬಿಗಿಯಾಗಿ ಒದ್ದೆಯಾಗಿ, ಕಿತ್ತು ಹೋಗಿ ನೋಡುಗರಿಗೆ ಅನಿರ್ವಚನೀಯ ಪುಳಕ, ಆನಂದ! ಅರ್ಧಂಬರ್ಧ ಹಾಕಿದ ಬಟ್ಟೆಯೊಳಗೆ ಎಲ್ಲೆಲ್ಲೋ ಐಸ್‌ಪೀಸ್ ಹೋದರಂತೂ ಮುಗಿಯಿತು, ನಟಿಗೆ ಫಜೀತಿಯ ಜಳಕ! ನೋಡುಗರಿಗೆ ರೋಮಾಂಚನದ ತೀವ್ರ ಪುಳಕ! ಅದಕ್ಕೆ ಈ ಫಜೀತಿಯೇ ಬೇಡವೆಂದು ಖ್ಯಾತ ಚಿತ್ರನಟಿಯರು, ಮಾಡೆಲ್‌ಗಳಾದ ಕೆಂಡಲ್ ಜೆನ್ನರ್, ಎಮೀಲಾ ಕ್ಲಾರ್ಕ್ ಮೊದಲಾದವರು ಬಿಕಿನಿಗಳಲ್ಲೇ ಐಸ್ ಬಕೆಟ್ ಶೋ ಕೊಟ್ಟಿದ್ದಾರೆ. ನಟಿ ಕೇತಿ ಗ್ರೆಫಿನ್ ಸಂಪೂರ್ಣ ನಗ್ನಳಾಗಿಯೇ ಐಸ್ ಬಕೆಟ್ ಚಾಲೆಂಜ್ ಸ್ವೀಕರಿಸಿ ತಲೆ ಮೇಲೆ ಐಸ್‌ನೀರು ಸುರಿದುಕೊಂಡು ಲಕ್ಷಾಂತರ ಜನರ ಮೈ ಮನಗಳಲ್ಲಿ ಬಿಸಿಯ ಲಾವಾರಸ ಉಕ್ಕಿಸಿದ್ದಾಳೆ. ಇದಕ್ಕೂ ಮುಂದೆ ಹೋದ ಡಾನ್ ಓ ಪಾರ್ಟರ್ ಎಂಬ ಸುಂದರಿ ಐಸ್ ಬಕೆಟ್ ಚಾಲೆಂಜ್ ಮೂಲಕ ತಾನು ಪ್ರಗ್ನೆಂಟ್ ಎಂದು ಜಗಜ್ಜಾಹೀರು ಮಾಡಿದ್ದಾಳೆ. ಹೊಟ್ಟೆಯ ಮೇಲೆ ಲೋಟದಲ್ಲಿ ಐಸ್‌ನೀರು ಸುರಿದುಕೊಂಡು ಹುಟ್ಟಲಿರುವ ಮಗುವಿಗೂ ಐಸ್‌ಬಕೆಟ್ ಸ್ನಾನ ಮಾಡಿಸಿದ್ದಾಳೆ.

ಈ ಐಸ್ ಬಕೆಟ್ ಅಭಿಯಾನವೂ ಹುಡುಗಾಟವಾಗಿ ಗಂಭೀರತೆ ಕಳೆದುಕೊಂಡು ಒಂದು ಥ್ರಿಲಿಂಗ್ ಶೋ ಎನ್ನುವಂತಾಗಿದೆ. ಮನೆಯ ಲಿವಿಂಗ್ ರೂಂ, ಬೆಡ್‌ರೂಂ, ಕಿಚನ್, ರಸ್ತೆ, ಪಾರ್ಕ್ ಹೀಗೆ (ಬಾತ್‌ರೂಂ ಬಿಟ್ಟು) ಎಲ್ಲಾ ಕಡೆ ಐಸ್ ಬಕೆಟ್ ಶೋ ಕೊಟ್ಟಿದ್ದಾರೆ. ಕೆಲವರು ಬಕೆಟ್ ತಲೆ ಮೇಲೆ ಹಾಕಿಕೊಂಡು ಮಕಾಡೆ ಬಿದ್ದಿದ್ದಾರೆ. ಐಸ್ ನೀರು ಹುಯಿದುಕೊಳ್ಳಲು ಹಿಂದೇಟು ಹಾಕಿದವರನ್ನು ಹಿಡಿದು ಅವರ ತಲೆ ಮೇಲೆ ಐಸ್ ಸ್ಲಾಬಿನಿಂದ ಕುಟ್ಟಿದ್ದಾರೆ. ಕದ್ದು ತಪ್ಪಿಸಿಕೊಂಡು ಹೋಗುವವರನ್ನು ಅಟ್ಟಾಡಿಸಿ ಹಿಡಿದು ನೀರು ಹುಯಿದವರಿದ್ದಾರೆ. ಕೆಲವರು ಬಕೆಟ್ ಎತ್ತುವಾಗಲೇ ಬಕೆಟ್ ಪೀಸಾಗಿ ಐಸ್ ಬೀಳಬಾರದ ಜಾಗಕ್ಕೆಲ್ಲ ಬಿದ್ದು ಪರದಾಡಿದ್ದಾರೆ. ಒಂಟಿಯಾಗಿ ಚಳಿ ತಡೆಯಲಾಗದವರು ಫಿಯಾನ್ಸಿಯೊಂದಿಗೆ ಜಂಟಿಯಾಗಿ ಐಸ್‌ನೀರು ಸುರಿದುಕೊಂಡು ನಮಗೆ ಮೈ ಜುಂ ಎನಿಸಿದ್ದಾರೆ. ಹಲವರು ಒಟ್ಟಾಗಿ ಗುಂಪಿನಲ್ಲಿ ಗೋವಿಂದ ಎಂದು ಜೆಸಿಬಿಯ ಬಕೆಟ್‌ನಲ್ಲಿ ಐಸ್‌ನೀರು ತುಂಬಿಸಿ ತಲೆ ಮೇಲೆ ಸುರಿದುಕೊಂಡಿದ್ದಾರೆ. ಈ ಐಸ್‌ಬಕೆಟ್ ಚಾಲೆಂಜ್ ಒಂದು ರೀತಿ ಕೊಕ್ಕೋ ಆಟವಿದ್ದಂತೆ! ಐಸ್‌ನೀರು ಸುರಿದುಕೊಂಡವರು ಇನ್ನೊಬ್ಬರನ್ನು ಈ ರೀತಿ ನೀರು ಸುರಿದುಕೊಳ್ಳಲು 'ಕೋ' ಎಂದು ನಾಮನಿರ್ದೇಶನ ಮಾಡುತ್ತಾರೆ. ಹಾಗೆ ಹೆಸರು ಹೇಳಿದವರೂ ಚಾಲೆಂಜ್ ಸ್ವೀಕರಿಸಿ ತಲೆಗೆ ಐಸ್‌ನೀರು ಸುರಿದುಕೊಳ್ಳಬೇಕು. ಇಲ್ಲವಾದರೆ ಎಎಲ್‌ಎಸ್ ಚಿಕಿತ್ಸೆ, ಸಂಶೋಧನೆಗಾಗಿ ಹಣ ದಾನ ಮಾಡಬೇಕು. ಅಮೆರಿಕಾ ಪ್ರಧಾನಿ ಬರಾಕ್ ಒಬಾಮಾ, ಇಂಗ್ಲೆಂಡ್ ಪ್ರಧಾನಿ ಕ್ಯಾಮರೂನ್ ಮೊದಲಾದವರು ದುಡ್ಡು ಪೀಕಿ ತಲೆ ತಪ್ಪಿಸಿಕೊಂಡಿದ್ದಾರೆ.
ಪ್ರಪಂಚವೇ ತಲೆ ಮೇಲೆ ತಣ್ಣೀರು ಸುರಿದುಕೊಳ್ಳಬೇಕಾದರೆ ನಾವು ಸುಮ್ಮನಿದ್ದರೆ ಆದೀತೇ? ಅದರಲ್ಲೂ ನಮಗೆ ನಿದ್ದೆ, ಮಂಪರು ಜಾಸ್ತಿ. 'ಆಕಳಿಸಿ ತೂಕಡಿಸಿ ಬೀಳದಿರು ತಮ್ಮ, ನನ್ನ ತಮ್ಮ ಮಂಕುತಿಮ್ಮ' ಎಂದು ಹಾಡು ಬರೆದುಕೊಂಡವರು ನಾವು! ನಾವು ತಲೆ ಮೇಲೆ ಐಸ್‌ನೀರು ಸುರಿದುಕೊಳ್ಳದಿದ್ದರೆ ಆದೀತೇ? ನಾವೂ ಐಸ್ ಬಕೆಟ್ ಚಾಲೆಂಜ್ ಸ್ವೀಕರಿಸಿದ್ದೇವೆ. ಹಾಗೆ ನೋಡಿದರೆ ನಮ್ಮಲ್ಲಿ ಐಸ್ ಮತ್ತು ಬಕೆಟ್ ಎರಡೂ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸಲ್ಪಡುತ್ತವೆ. ಯಾರಾದರೂ ಬೆಣ್ಣೆ ಹಚ್ಚಲು ಶುರು ಮಾಡಿದಾಗ 'ತಗೋ, ನನ್ಮಗ ತಲೆ ಮೇಲೆ ಐಸ್ ಇಡೋಕೆ ಶುರು ಮಾಡಿದ' ಅನ್ನೋ ಕುಹಕ ಶುರುವಾಗುತ್ತದೆ. ಹಾಗೇ ಯಾರಾದರೂ ಇನ್ನೊಬ್ಬರ ಮೇಲೆ ಸಿಕ್ಕಾಪಟ್ಟೆ ನಿಷ್ಠೆ ತೋರಿಸಿ ಅವರ ಅನುಯಾಯಿ(ಅನುನಾಯಿ) ಆದಾಗ 'ತಗಳಪ್ಪ, ಬಕೆಟ್ ಹಿಡಿಯೋಕೆ ಹೊರಟ' ಅಂತ ಹೇಳೋದಿದೆ. ಇಂಡಿಯಾದಲ್ಲಿ ಎಣ್ಣೆ ಹಾಕುವ ತುಂಡು ಹೈಕ್ಳ ಮುಂದೆ ತುಂಡು ಲಂಗದ ಬೆಡಗಿಯರು ಐಸ್‌ಬಕೆಟ್ ಹಿಡಿದು ಐಟಂ ಸಾಂಗ್ ಕುಣಿಯುವುದೇ ನಿಜವಾದ ಐಸ್ ಬಕೆಟ್ ಕಾನ್‌ಸೆಪ್ಟ್ ಎನ್ನಬಹುದೇನೋ?

ನಮಗೆ ಈ ರೀತಿ ತಲೆ ಮೇಲೆ ನೀರು ಸುರಿದುಕೊಳ್ಳುವುದು ಹೊಸದೇನಲ್ಲ. ಹಿಂದೆ ಸೋಂಭೇರಿಗಳಂತೆ ಸೂರ್ಯ ನೆತ್ತಿ ಮೇಲೆ ಬಂದರೂ ಮುಸುಕಿಕ್ಕಿ ಮಲಗುತ್ತಿದ್ದ ನಮಗೆ ಮನೆಯಲ್ಲಿ ಈ ತರ ತಲೆ ಮೇಲೆ ತಣ್ಣೀರ್‌ಸ್ನಾನ ಆಗುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ಬಕೆಟ್ ಜಾಗದಲ್ಲಿ ಆಗ ಬಿಂದಿಗೆ ಇರುತ್ತಿತ್ತು. ಅದನ್ನು ಬೇಕಾದರೆ 'ಐಸ್ ಬಿಂದಿಗೆ' ಸ್ನಾನ ಎಂತಲೋ 'ಐಸ್ ಕೊಡ' ಸ್ನಾನ ಎಂದೋ ಕರೆಯಬಹುದಿತ್ತು. ಇನ್ನು ಯಾರಾದರೂ ಬಾದರಾಯಣ ಸಂಬಂಧಿಕರು ಸತ್ತರೆ ಆಗೆಲ್ಲಾ ನಮ್ಮ ಬಟ್ಟೆ ಬಿಚ್ಚಿಸಿ ಹಿತ್ತಲಲ್ಲಿ ನಿಲ್ಲಿಸಿ ತಲೆ ಮೇಲೆ ಕೊರೆವ ತಣ್ಣೀರು ಸುರಿಯಲಾಗುತ್ತಿತ್ತು. ಆನಂತರ ಗ್ರಹಣದ ದಿನಗಳಲ್ಲಿ ಮತ್ತೆ ನಮಗೆ ಈ ಐಸ್ ಬಿಂದಿಗೆ ಸ್ನಾನದ ಯೋಗ ಸಿಗುತ್ತಿತ್ತು. ಬೆಳಗಿನ ಜಾವ ಚಂದ್ರನಿಂದ ರಾಹುವಿನ ಛಾಯೆ ಸರಿದ ಕೂಡಲೇ ನಮ್ಮ ಜುಟ್ಟು ಹಿಡಿದು ಎಬ್ಬಿಸಿ ತಲೆ ಮೇಲೆ ಬಾವಿಯ ಕೊರೆವ ನೀರು ಸುರಿಯಲಾಗುತ್ತಿತ್ತು. ಅಪರೂಪಕ್ಕೆ ಎಲ್ಲಾದರೂ ಟೂರ್ ಹೋದಾಗ ಪುಣ್ಯಕ್ಷೇತ್ರಗಳಲ್ಲಿ ಧೈರ್ಯಶಾಲಿಗಳು, ಬಲಿತವರು ನದಿಗೆ ಡೈವ್ ಹೊಡೆದು ಸ್ನಾನ ಮಾಡುತ್ತಿದ್ದರು. ನದಿಗೆ ಇಳಿಯಲಾಗದ ನಮ್ಮಂತಹ ಹೆದರುಪುಕ್ಕಲರಿಗೆ, ಹೆಂಗಸರು ಕೊರೆವ ನದಿ ನೀರನ್ನು ಬಿಂದಿಗೆಯಲ್ಲಿ ತುಂಬಿ ತಲೆ ಮೇಲೆ ಹುಯ್ಯುತ್ತಿದ್ದರು. ತರ್ಪಣ, ಪುಣ್ಯಸ್ನಾನ ಎಂದೆಲ್ಲಾ ಅವಾಗವಾಗ ಈ ಐಸ್‌ಬಿಂದಿಗೆ ಸೇವೆ ನಡೆಯುತ್ತಲೇ ಇದ್ದು ಇದನ್ನು ಅನಿವಾರ್ಯವಾಗಿ ಚಾಲೆಂಜ್ ಅಂದುಕೊಳ್ಳಲೇಬೇಕಿತ್ತು.
ಪುಟ್ಟ ಹುಡುಗನಾಗಿದ್ದಾಗ ನನ್ನನ್ನು ಅಮ್ಮ, ಅಕ್ಕ ಪಕ್ಕದ ಮನೆಯ ಹೆಂಗಸರೊಂದಿಗೆ ಆಗೊಮ್ಮೆ ಈಗೊಮ್ಮೆ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದಳು. ಸಿನಿಮಾದಲ್ಲಿ ನಾಯಕಿ ರಾತ್ರಿ ವೇಳೆ ಹಾಸಿಗೆಯಲ್ಲಿ ಒದ್ದಾಡಿ ನಿದ್ದೆ ಬಾರದೇ ಹಿತ್ತಲಿಗೆ ಎದ್ದು ಬಂದು ತಲೆ ಮೇಲೆ ಬಿಂದಿಗೆಯಿಂದ ಎರಡು ಬಿಂದಿಗೆ ನೀರು ಹುಯಿದುಕೊಂಡು ನಡುಗುತ್ತಾ, ತುಟಿ ಕಚ್ಚುತ್ತಾ ಮೈನೆಲ್ಲಾ ಹಿಡಿ ಮಾಡಿಕೊಂಡು ಒಳಗೆ ಓಡುತ್ತಿದ್ದಳು. ಈ ಐಸ್‌ಬಿಂದಿಗೆ ಸ್ನಾನದ ಗುಟ್ಟು ಮಾತ್ರ ಎಷ್ಟೋ ವರ್ಷ ನನಗೆ ಗೊತ್ತಾಗಿರಲಿಲ್ಲ. ನನ್ನ ಜೊತೆ ಸಿನಿಮಾಕ್ಕೆ ಬರುತ್ತಿದ್ದ ರೇವತಿಯನ್ನು ಕೇಳಿದರೆ 'ಸೆಕೆ ಎಂದು ನಮ್ಮಮ್ಮನೂ ಆಗಾಗ್ಗೆ ಹೀಗೇ ನೀರು ಹುಯಿದುಕೊಳ್ಳುತ್ತಾರೆ' ಎಂಬ ಗುಟ್ಟು ಈಚೆ ಬಿಟ್ಟಿದ್ದಳು. ಅದು ವಿರಹಕ್ಕೇ ಚಾಲೆಂಜ್ ಹಾಕುವ ಐಸ್ ಬಿಂದಿಗೆ ಸ್ನಾನ ಎಂದು ಕಾಲೇಜಿಗೆ ಹೋಗುವಂತಾಗಿ ಭಾಗ್ಯರಾಜರ 'ಮುಂದಾನೆ ಮುಡಿಚ್ಚು' ಸಿನಿಮಾ ನೋಡಿದ ಮೇಲೇ ಗೊತ್ತಾಗಿದ್ದು! ಈಗ ಹಿತ್ತಲೂ ಇಲ್ಲ, ಬಾವಿ ಮೊದಲೇ ಇಲ್ಲ. ತಲೆ ಮೇಲೆ ಸೋಲಾರು, ಶವರ್ರು ಬಂದಿರುವುದರಿಂದ ಯಾರ್ಯಾರು ಯಾವ ಹೊತ್ತಿನಲ್ಲಿ ವಿರಹದ ಸ್ನಾನ ಮಾಡುತ್ತಾರೋ ಯಾರಿಗೆ ಗೊತ್ತು? ಈ ತರಹದ ವಿರಹದ ಐಸ್ ಬಿಂದಿಗೆ ಸ್ನಾನಗಳನ್ನು ಚಾಲೆಂಜ್ ಆಗಿ ಸ್ವೀಕರಿಸುವ ಕನ್ಯಾಮಣಿಗಳೂ ಇಲ್ಲವಾಗಿ ಇವನ್ನು ನೋಡುವ ಭಾಗ್ಯ ಬಹಳ ಹಿಂದೆಯೇ ಕೈ ತಪ್ಪಿ ಹೋಯಿತು. ಆಮೇಲೆ ಹೊಸ ತರದ ಐಸ್ ಬಿಂದಿಗೆ ಸ್ನಾನಗಳು ಜಾರಿಗೆ ಬಂದವು. ಕುಡಿದು ಬಂದ ಗಂಡಂದಿರನ್ನು ಬಾಗಿಲಲ್ಲಿ ನಿಲ್ಲಿಸಿ ತಲೆ ಮೇಲೆ ನೀರು ಹುಯಿದು ಅಮಲು ಇಳಿಸಿ ಒಳಗೆ ಕರೆದುಕೊಳ್ಳಲಾಗುತ್ತಿತ್ತು. ಹಾಗೇ ಅಮಲಲ್ಲಿ ಪಕ್ಕದ ಮನೆಗೆ ಹೋದವರಿಗೆ, ಚರಂಡಿಗೆ ಬಿದ್ದು ಬಂದವರಿಗೆ ಡಬಲ್ ಐಸ್ ಬಿಂದಿಗೆ ಸ್ನಾನದ ಯೋಗ ಸಿಗುತ್ತಿತ್ತು. ಹಲವರು ದಿನವಿಡೀ ಮೊಬೈಲ್ ಬಳಸದಿರಲು ನಿರ್ಧರಿಸಿ ಚಾಲೆಂಜ್ ಮಾಡಿ ಐಸ್ ಬಕೆಟ್ ಸ್ನಾನ ಮಾಡುತ್ತಿದ್ದಾರೆ. ಅದು ಒಳ್ಳೆಯದೇ! ಯಾರಾದರೂ ಅಕಸ್ಮಾತ್ ಮರೆತು ಚಡ್ಡಿ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ನೀರು ಹುಯಿದುಕೊಂಡರೆ ರಿಪೇರಿಯಾಗುವವರೆಗೆ ಮೊಬೈಲ್ ಬಳಸುವ ಗೋಜೇ ಇರುವುದಿಲ್ಲ. ಹಾಗಾಗಿ ಚಡ್ಡಿ ಹಾಕದೆಯೇ ಲಂಗೋಟಿಯಲ್ಲೇ ಐಸ್ ಬಕೆಟ್ ಸಂಕಲ್ಪ ಮಾಡಬಹುದು. ದುರಾದೃಷ್ಟವೆಂದರೆ ಅದನ್ನು ನೋಡುವ ಭಾಗ್ಯ ನಮಗಿರುವುದಿಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಒಂಭತ್ತು ಜನ ಗಣ್ಯರಿಗೆ ಐಸ್‌ಬಕೆಟ್ ಚಾಲೆಂಜ್ ಸ್ವೀಕರಿಸಲು ಆಹ್ವಾನ ನೀಡಿದ್ದಾರೆ. ಸ್ನಾನವನ್ನೇ ದ್ವೇಷಿಸುತ್ತಿದ್ದ ಮಹಾ ಸುಂದರಿಯರಾದ ಕ್ಲಿಯೋಪಾತ್ರ, ಮದಾದ್-ದ-ಮರಿಯಾ, ಇಸಬೆಲ್ಲಾ ಮೊದಲಾದವರಂತೆ ಸ್ನಾನದ್ವೇಷಿಗಳಿಗೆ ಸ್ನಾನ ಮಾಡಿಸಿ ಸೆಂಟ್‌ಹಾಕಿ ಸ್ವಚ್ಛತೆ ಮೆರೆಸಬಹುದು. ನಮ್ಮ ಇಂಡಿಯನ್ ಸೆಲೆಬ್ರಿಟಿಗಳೂ ಐಸ್ ಬಕೆಟ್ ಚಾಲೆಂಜಿಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಸನ್ನಿ ಲಿಯೋನ್, ಸೋನಿಯಾ ಹಯಾತ್, ಪೂನಮ್ ಪಾಂಡೆ, ಬಿಪಾಶಾ ಬಸು ಮೊದಲಾದವರು ತಲೆ ಮೇಲೆ ಐಸ್‌ನೀರು ಸುರಿದುಕೊಂಡು ಮೈ ಮೇಲೆಲ್ಲಾ ಹರಿಸಿಕೊಳ್ಳುವ ಮೂಲಕ ಲಕ್ಷಾಂತರ ರಸಿಕರ ನಿದ್ದೆಗೆಡಿಸಿ ಜಾಗೃತಿ ಮೂಡಿಸಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ, ಅಕ್ಷಯ್‌ಕುಮಾರ್, ರಿತೇಶ್, ಅಭಿಷೇಕ್ ಬಚ್ಚನ್ ಮೊದಲಾದವರು ಸಹ ಅವರಿಗೆ ಸಾಥ್ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ ಮಾತ್ರ ಭುಜದ ತನಕ ಬಕೆಟ್ ಎತ್ತಿ 'ಉಹುಂ! ಜಾಗೃತಿಗೋಸ್ಕರ ನೀರು ಪೋಲು ಮಾಡಬಾರದು' ಎಂದು ಬಕೆಟ್ ಕೈ ಬಿಟ್ಟು ಕಣ್ಣು ಬಾಯಿ ಬಿಟ್ಟುಕೊಂಡು ಕೂತಿದ್ದ ಪೋಲಿ ಅಭಿಮಾನಿಗಳ ಸಂಭ್ರಮಕ್ಕೆ ತಣ್ಣೀರ್ ಎರೆಚಿದ್ದಾಳೆ. ಈ ಬಗ್ಗೆ ಆಕ್ಷೇಪವೆತ್ತಿದ್ದಕ್ಕೆ 'ಡೋಂಟ್ ಜಡ್ಜ್ ದ ಸೈಜ್ ಆಫ್ ಮೈ ಬಕೆಟ್‌' ಎಂದಿರುವುದು ಬಾಡಿ ಲಾಂಗ್ವೇಜಾ? ಬಕೆಟ್ ಲಾಂಗ್ವೇಜಾ? ಎಂಬ ಗೊಂದಲದಲ್ಲಿ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹ ಹೀಗೇ ರಸಿಕರ ತಲೆ ಮೇಲೆ ಐಸ್ ಇಟ್ಟಿದ್ದಾಳೆ. ಆದರೆ ಸಾನಿಯಾ ಮಿರ್ಜಾ ಮಾತ್ರ ಎರಡು ಸಾರಿ ಐಸ್‌ಬಕೆಟ್ ಸ್ನಾನ ಮಾಡಿದ್ದಾರೆ. ಒಮ್ಮೆ ನೀರೋ, ಐಸೋ ಸಾಲಲಿಲ್ಲ ಎನಿಸಿ ಮತ್ತೊಮ್ಮೆ ಚಾಲೆಂಜ್ ಸ್ವೀಕರಿಸಿದ್ದಾರೆ. ಸಾನಿಯಾ ಸಂತತಿ ಸಾವಿರವಾಗಲಿ ಎಂದು ನುಣ್ಣಗೆ ತಲೆ ಬೋಳಿಸಿ ತಿರುಪತಿಯಲ್ಲಿ ಐಸ್‌ಬಕೆಟ್ ಸ್ನಾನ ಮಾಡುವುದಾಗಿ ಸಾವಿರಾರು ಅಭಿಮಾನಿಗಳು ಚಾಲೆಂಜ್ ಮಾಡಿದ್ದಾರಂತೆ. ಅವರು 'ಕೋ..' ಎಂದು ನನ್ನ ಹೆಸರು ಹೇಳದಿರಲೆಂದು ಆ ತಿರುಪತಿ ವೆಂಕಟರಮಣಸ್ವಾಮಿಯಲ್ಲಿ ನನ್ನ ಕಳಕಳಿಯ ಪ್ರಾರ್ಥನೆ!

-ತುರುವೇಕೆರೆ ಪ್ರಸಾದ್

turuvekereprasad@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com