ಮೂರ್ಖನ ಪತ್ರ

ಇಂದು ಬೆಳಗ್ಗೆಯಾಗುತ್ತಲೇ ಗೆಳತಿ ಫೋನ್ ಹಚ್ಚಿ ಎಂದಿಲ್ಲದ ವಯ್ಯಾರದಿಂದ `ಹ್ಯಾಪ್ಪಿ ಬರ್ತ್‍ಡೇ ಕಣೋ' ಎಂದು ವಿಷ್ ಮಾಡುತ್ತಾಳೆ. ವಿಷ್ ಮಾಡಿದವಳು ಒಂದು ಕ್ಷಣವೂ ಕಾಯ...
ಮೂರ್ಖರ ದಿನ
ಮೂರ್ಖರ ದಿನ

ಇಂದು ಬೆಳಗ್ಗೆಯಾಗುತ್ತಲೇ ಗೆಳತಿ ಫೋನ್ ಹಚ್ಚಿ ಎಂದಿಲ್ಲದ ವಯ್ಯಾರದಿಂದ `ಹ್ಯಾಪ್ಪಿ ಬರ್ತ್‍ಡೇ ಕಣೋ' ಎಂದು ವಿಷ್ ಮಾಡುತ್ತಾಳೆ. ವಿಷ್ ಮಾಡಿದವಳು ಒಂದು ಕ್ಷಣವೂ ಕಾಯದೆ ಕಾಲ್ ಕಟ್ ಮಾಡುತ್ತಾಳೆ. ಅರೆ, ಬರ್ತ್‍ಡೇ ಸೆಲಬ್ರೇಟ್ ಮಾಡಿಕೊಂಡು ಇನ್ನೂ ಆರು ತಿಂಗಳಾಗಿಲ್ಲ, ಈಗೇನು ಅಂತ ತಲೆ ತುಂಬ ಹುಳ. ಎದ್ದು ಈಚೆ ಬಂದರೆ ತಂಗಿ ಕಿರುಚುತ್ತಾಳೆ-

ಅಯ್ಯೋ ನಿನ್ನ ಮುಖದ ಮೇಲೆ ರಕ್ತಾ! ಗಾಬರಿ ಬಿದ್ದು ಕನ್ನಡಿ ಮುಂದೆ ಹೋಗಿ ನಿಂತರೆ ಏನೂ ಇಲ್ಲ. ಎಲ್ಲೋ ಏನೋ ಮಿಸ್ ಹೊಡೀತಿದೆ ಅಂತನ್ನಿಸುವಾಗಲೇ ತಂಗಿ ಘೋಷಿಸುತ್ತಾಳೆ- ಅಣ್ಣಾ ಏಪ್ರಿಲ್ ಫೂಲ್! ಆ ಕ್ಷಣದಿಂದಲೇ ಹುಷಾರಾಗುತ್ತೇನೆ. ಇವತ್ತು ಇಡೀ ಜಗತ್ತು ನನ್ನನ್ನು ಫೂಲ್ ಮಾಡಲು ಕಾಯ್ತಾ ಇರುತ್ತೆ ಎಂದು ಗುಮಾನಿ ಮೂಡುತ್ತದೆ. ಹೇಳಿಕೇಳಿ, ಮೆಜೆಸ್ಟಿಕ್‍ನಲ್ಲಿ ಸಿಕ್ಕಿಬಿದ್ದ ಪಿಕ್‍ಪಾಕೆಟರ್‍ಗೆ ಹಾದುಹೋಗುವವರೆಲ್ಲರೂ  ಪಟಾರನೆ ಇಕ್ಕಿ ಹೋಗುತ್ತಿರುತ್ತಾರಲ್ಲ, ಅದೇ ರೀತಿ, ಯಾರಾದರೂ ಒಬ್ಬ ಬಕರಾ ಸಿಕ್ಕಿದರೆ ಸಾಕು ಅಂತ ಕಾಯುತ್ತಿರುತ್ತಾರೆ ನಂ ಜನ.

ಕಾರಣವಿದ್ದೇ ಫೂಲ್ ಮಾಡೋ ಶಾಣ್ಯಾ ಜನರ ಈ ಜಗತ್ತು, ಏಪ್ರಿಲ್ ಒಂದರಂದು ಸುಂಸುಮ್ನೆ ನನ್ನಂಥ ಯವಡಾಸ ಸಿಕ್ಕಿದರೆ ಮಂಗ ಮಾಡದೆ ಬಿಡುತ್ತದಾ? ಮನಸ್ಸು, ಇಷ್ಟರವರೆಗೆ ಫೂಲ್ ಆಗಿದ್ದು ಸಾಕೋ ಮಹರಾಯಾ, ಇನ್ನಾದರೂ ಜಾಣನಾಗು ಎಂದು ತಾಕೀತು ಮಾಡುತ್ತದೆ. ಆದರೆ, ಏನು ಮಾಡಿದರೂ, ಮೂರ್ಖನಾಗುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ನಾನೆಷ್ಟೇ ಎಚ್ಚರದಿಂದ ಹೋದರೂ, ಕಿಡಿಗೇಡಿ ಯೋಧರ ಬಾಣಗಳು ನನ್ನ ಆತ್ಮರಕ್ಷಣೆಯ ಕವಚವನ್ನು ಹರಿದುಹಾಕುತ್ತವೆ. ಕಾಲೇಜಿನಲ್ಲಿ ಗೆಳೆಯ ಯಾಕೋ ಪ್ಯಾಂಟ್‍ನ ಜಿಪ್ ಹಾಕಿಲ್ಲಾ ಅಂತ ಕೇಳುತ್ತಾನೆ. ಇಂವ ಫೂಲ್ ಮಾಡ್ತಿದಾನೆ ಅಂತ ಗೊತ್ತಾದ್ರೂ ಜಿಪ್ ವಿಷ್ಯ ಕೊಂಚ ಸೀರಿಯಸ್ಸಾಗಿಯೇ ತಗೋಬೇಕಲ್ವಾ.

ನಾಳೆ ಕ್ಲಾಸಿಲ್ಲ ಅಂದಿದ್ದ ಮ್ಯಾತ್ಸ್ ಲೆಕ್ಚರರ್ ಡಬಲ್ ಪೀರಿಯಡ್ ಪಾಠ ಮಾಡಿ ಟಾರ್ಚರ್ ಕೊಡುತ್ತಾರೆ. ಇನ್ನು ನೋಟಿಸ್ ಬೋರ್ಡ್‍ನಲ್ಲಿ ನಿನ್ನ ಹೆಸರಿದೆ ಅಂತೆಲ್ಲ ಹೇಳುವ ಶಾಣ್ಯಾಗಳಿದ್ದಾರೆ. ಇಂಥ ವರಸೆಗಳೆಲ್ಲ ಪ್ರಯೋಗವಾಗ್ತವೆ ಅಂತ ನನಗೆ ಮೊದಲೇ ಗೊತ್ತಿರುವುದರಿಂದ, ಹೋಗ್ರಯ್ಯಾ ಮುಚ್ಕೊಂಡು ಎಂದು  ದಬಾಯಿಸುತ್ತೇನೆ. ಕ್ಯಾಂಟೀನ್‍ಗೆ ಬಾ, ಕಾಯ್ತಾ ಇರ್ತೀನಿ ಅಂತ ಗೆಳತಿ ಕರೆಯುತ್ತಾಳೆ. ಕ್ಯಾಂಟೀನ್‍ಗೆ ಹೋಗಿ ದಿನವಿಡೀ ಕಾದರೂ ಆಕೆ ಬರುವುದಿಲ್ಲ. ಹುಡುಕಿಕೊಂಡು ಹೋದರೆ ಆಕೆ ಆರಾಮಾಗಿ ಲೈಬ್ರರಿಯಲ್ಲಿ ವೇದಾಧ್ಯಯನ ಮಾಡುತ್ತಿರುತ್ತಾಳೆ. ಮಾಡದೆ ಇನ್ನೇನು? ನನ್ನಂಥ ಮೂರು ಜನ ಹುಡುಗರು ಪಾಸಾಗಬಹುದಾದಷ್ಟು ಮಾರ್ಕು ಅವಳೊಬ್ಳಿಗೇ ಸುಮ್ನೆ ಬರುತ್ತಾ? ರೇಗುವಂತಿಲ್ಲ, ಇಂದು ಏಪ್ರಿಲ್ ಒಂದು.

ಮಂಗ್ಯಾ ಮಾಡುತ್ತಾರೆ ಅಂತ ಫ್ರೆಂಡ್‍ಗಳಿಗೆ ಸಿಗದೆ ಮನೆಯಲ್ಲೇ ಬಚ್ಚಿಟ್ಟುಕೊಂಡರೆ, ಮೊಬೈಲ್ ಇದೆಯಲ್ಲ. ಮೊಬೈಲ್‍ನಲ್ಲಿ ಫೂಲ್ ಮಾಡುವ ವರಸೆಗಳೇ ಬೇರೆ. ಯಾರೋ ಮಿಸ್ಡ್ ಕಾಲ್ ಕೊಡುತ್ತಾರೆ. ತಿರುಗಿ ಕಾಲ್ ಮಾಡುವಂತಿಲ್ಲ, ಬಿಡುವಂತಿಲ್ಲ. ಇನ್ಯಾರೋ ಕಾಲ್ ಮಾಡಿ ಹತ್ತು ಮಸಾಲೆ ದೋಸೆ ಅರ್ಜೆಂಟ್ ಕಳಿಸುವಂತೆ ಹೇಳುತ್ತಾರೆ. ನಾನೇನು ವಿದ್ಯಾರ್ಥಿ ಭವನದ ಮಾಣೀನಾ? ಇನ್ನು ಎಸ್ಸೆಮ್ಮೆಸ್‍ಗಳು, ಮೆಸೇಜ್‍ಗಳಲ್ಲ ಅವು, ಫೂಲ್ ಫ್ಯಾಕ್ಟರಿಗಳು. ವಾಟ್ಸ್ಯಾ ಪ್ಪೋ, ದೆವ್ವಕ್ಕೇ ಪ್ರೀತಿ. ಇದಕ್ಕೆಲ್ಲ ನಿಮ್ಮ ಬಳಿ ಉತ್ರ ಇದೆ, ನಂಗೊತ್ತು. ತಮಾಷೆ ಮಾಡ್ಬಾರ್ದಾ ಹಾಗಾದ್ರೆ? ಉಪ್ ಅಂತ ಸೀರಿಯಸ್ಸಾಗೇ ಇರ್ಬೇಕಾ?

ಜೋಕನ್ನು ಜೋಕಾಗಿ ತಗೊಳೋಕೆ ಆಗಲ್ವಾ? ತಮಾಷೆಯನ್ನು ಸ್ಪೋರ್ಟಿವ್ ಆಗಿ ತಗೋಬೇಕು ಕಣ್ರೀ ಅಂತೆಲ್ಲಾ ಹೇಳ್ತೀರಿ. ಅದೇ ನಾನೇನಾದ್ರೂ ನಿಮ್ಮನ್ನು ಕಿಂಡಲ್ ಮಾಡಿದ್ರೆ ಉರ ಉರ ಉರ ರೇಗ್ತೀರಿ. ನಾನಂತೂ ನನ್ನನ್ನು ಫೂಲ್ ಮಾಡಿದ್ರೆ ಖುಷಿಯಾಗೇ ತಗೊಳ್ತೀನಪ್ಪ. ಈ ದಿನಾಂತಲ್ಲ, ಮುನ್ನೂರರುವತ್ತೈದು ದಿನವೂ ನನ್ನನ್ನು ಪಿಗ್ಗಿ ಬೀಳಿಸಿದ್ರೂ ನಂಗೆ ಬೇಜಾರಿಲ್ಲ. ಯಾಕಂದ್ರೆ ನಾನು ಮೂರ್ಖ ನೋಡಿ. ಈ ಜಗತ್ತಿಗೆ ಮೂರ್ಖರು ಬೇಕು. ಇಲ್ಲಿ ಎಷ್ಟು ಮೂರ್ಖರಿದ್ರೂ ಸಾಕಾಗಲ್ಲ. ಯಾಕೆಂದರೆ ಅವರಿಗಿಂತ ದುಪ್ಪಟ್ಟು ಸಂಖ್ಯೆಯ ಜಾಣರಿದ್ದಾರೆ ನೋಡಿ. ಜಾಣರಿಗೇನು ಕೆಲಸ? ಮೂರ್ಖರನ್ನು ತಯಾರು ಮಾಡುವುದು. ಅಥವಾ ತಮಗಿಂತ ಕಡಿಮೆ ಜಾಣರನ್ನು ಮಂಕು ಮಾಡುವುದು.

ಎಲ್ಲರೂ ಎಲ್ಲರನ್ನೂ ಎಲ್ಲ ಕಾಲವೂ ಮೂರ್ಖ ಮಾಡಲಾಗುವುದಿಲ್ಲ ಅಂಥ ಹೇಳಿದವನೂ ಮೂರ್ಖನೇ ಇರಬೇಕು. ಆತ ಒಂದಲ್ಲ ಒಂದು ಬಾರಿ ಮೂರ್ಖನಾಗದೆ ಇದ್ದಿದ್ರೆ ಈ ಮಾತು ಹುಟ್ತಾ ಇರಲಿಲ್ಲ. ನನ್ನಂಥ ವ್ಯಕ್ತಿ ಮೂರ್ಖನಾಗುವುದನ್ನು ನೋಡಿ ನಿಮಗೆ ನಗೆ ಬರಬಹುದು. ಆದರೆ, ಹಿಂದೆಂದೋ ಒಮ್ಮೆ ನೀವೂ ಇಂಥದೇ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕ್ಕೊಂಡಿದ್ರಿ ಅಲ್ವಾ? ಅದನ್ನು ನೆನಪಿಸಿಕೊಂಡರೆ ನಿಮ್ಮ ನಗೆ ಹಾರಿ ಹೋಗುತ್ತಾ ಅಥ್ವಾ ಹೆಚ್ಚಾಗುತ್ತಾ? ನಗೆ ಬರಲಿಲ್ಲವಾದರೆ ನೀವು ಇನ್ನೊಮ್ಮೆ ಮೂರ್ಖರಾಗಲು ಲಾಯಕ್ಕಿದ್ದೀರಿ.

ನಿಜಕ್ಕೂ ಮೂರ್ಖನಾಗುವುದು ಅಂದರೆ ನಗೆಯ ವಿಷಯವಾ? ಜಗತ್ತೇ ತನ್ನನ್ನು ಮೂರ್ಖ ಮಾಡಲು ಹೊಂಚು ಹಾಕ್ತಾ ಇದೆ ಅಂತ ಗೊತ್ತಿದ್ದರೂ ಮತ್ತೆ ಮತ್ತೆ ಮೂರ್ಖನಾಗ್ತಾನಲ್ಲ ನಮ್ಮ ಶ್ರೀಸಾಮಾನ್ಯ, ಅಂವ ನಗೆಯ ವಸ್ತುವಾ? ದಿಲ್ಲಿಯಲ್ಲಿ ಅಷ್ಟೆಲ್ಲ ಬಹುಮತ ಕೊಟ್ಟು ಪೊರಕೆ ಪಕ್ಷವನ್ನು ಗದ್ದುಗೆಗೆ ತಂದ ಜನ, ಈಗ ಪೊರಕೆಯಿಂದಲೇ ತಮಗೆ ತಾವೇ ಹೊಡೆದುಕೊಳ್ಳುತ್ತಿರುವ ದೃಶ್ಯ ನೋಡಿದ್ರೆ ನಗು ಬರದಿರುತ್ತದಾ? ಡಿ.ಕೆ. ರವಿಯ ಸಾವಿಗೆ ದಿನಕ್ಕೊಂದು ಕತೆ ಕಟ್ಟಿದೆವಲ್ಲ, ಈಗ  ಅವೆಲ್ಲಾ ಉಲ್ಟಾ ಹೊಡೆಯುತ್ತಿರುವ ರೀತಿ ನೋಡಿದ್ರೆ ನಗು ಬರುತ್ತಾ ಮಂಡೆ ಬೆಚ್ಚ ಆಗುತ್ತಾ? ಇವರು ಗೆದ್ರೆ ನಮ್ಗೆಲ್ಲಾ ತಲಾ ಹದಿನೈದು ಲಕ್ಷ ಸಿಕ್ಕಿಬಿಡುತ್ತೆ, ಕಪ್ಪು ಹಣವೆಲ್ಲಾ ಬಂದುಬಿಡುತ್ತೆ ಅಂತ ಅಧಿಕಾರಕ್ಕೆ ತಂದೆವಲ್ಲಾ, ಈಗ ಎಲ್ಲಿದ್ದಾರೆ ಹಾಗಂದವರು ಅಂತ ಹುಡುಕಹೋದರೆ ಅವರೆಲ್ಲ ಬಾಲ ಮಡಚಿ ಎಲ್ಲೋ ಸಿಕ್ಕಿಸಿಕೊಂಡು ಗಲ್ಲಿ ನುಗ್ಗಿ ಪರಾರಿಯಾಗುವುದನ್ನು ಕಂಡರೆ ನಗು ಬರದಿರುತ್ತದಾ?

ಬೆಂಗಳೂರಿನಲ್ಲೂ ಅದರ ಸುತ್ತಮುತ್ತಲೂ ಎಲ್ಲೂ ಸರಿಯಾದ ಭೂದಾಖಲೆ ಇರೋ ಜಾಗವಿಲ್ಲ ಅಂತ ಗೊತ್ತಿದ್ದರೂ ಲಕ್ಷಗಟ್ಟಲೆ ತಂದು ಸುರುವಿ ಜಾಗ ಖರೀದಿಸಿ ಕ್ಯಾತೆ ಸೃಷ್ಟಿಸಿಕೊಳ್ಳುವವರನ್ನು ನೋಡಿದ್ರೆ ಏನನ್ಸುತ್ತೆ? ಮಗುವಿಗೆ ಇಷ್ಟವಿಲ್ಲ ಅಂತ ಗೊತ್ತಿದ್ದೂ ಸೈನ್ಸ್ ಗೆ ಸೇರಿಸಿ ರ್ಯಾಂಕ್ ತೆಗೀ ಅಂತ ದಿನಾ ಪ್ರಾಣ ಹಿಂಡುವ ಪೋಷಕರನ್ನು ನೋಡಿದ್ರೆ ಏನನ್ಸುತ್ತೆ? ಬೆಂಗಳೂರು ಟ್ರಾಫಿಕ್‍ನಲ್ಲಿ ಅಕಸ್ಮಾತ್ ಗಾಡಿ ಸ್ವಲ್ಪ ಟಚ್ಚಾದ್ರೂ ಕೊಲೆ ಮಾಡುವವರಂತೆ ಮೈಮೇಲೇರಿ ಬರುವ ಆಟೋ ಡ್ರೈವರುಗಳನ್ನು ಕಂಡಾಗ ಏನನ್ಸುತ್ತೆ? ಹಾಸ್ಯೋತ್ಸವಗಳಲ್ಲಿ ಹಳೇ ಜೋಕುಗಳನ್ನೇ ರಿಸೈಕಲ್ ಮಾಡಿ ನಗಿಸಲು ತ್ರಾಸಪಡುವ, ತನ್ನ ಜೋಕನ್ನು ಇನ್ನೊಬ್ಬ ಹೇಳಿದಾಗ ಬತ್ತಳಿಕೆ ಬರಿದಾದಂತೆ ಅವಮಾನ ಅನುಭವಿಸುವ ಜೋಕರ್‍ಗಳನ್ನು ನೋಡಿದರೆ ಎಲ್ಲಿ ನಗು ಬರುತ್ತೆ? ಇದನ್ನೆಲ್ಲಾ ನೋಡಿದರೆ ಈ ಜಗತ್ತೇ ಮೂರ್ಖನಾಗಲು ಕಾದಿರುವಂತೆ, ಇಡೀ ಜಗತ್ತೇ ನಮ್ಮನ್ನೆಲ್ಲ ಮೂರ್ಖನಾಗಿಸಲು ಕಾದಿರುವಂತೆ ಕಾಣಿಸೋಲ್ಲವೆ?

ಯಾರು ಮೂರ್ಖ, ಯಾರು ಶಾಣ್ಯಾ ಎಂದು ಗೊತ್ತಾಗದಂತಾಗಿ ಬಿಟ್ಟಿರುವ ಈ ಪರಿಸ್ಥಿತಿಯಲ್ಲಿ, ನಕ್ಕವನೇ ಜಾಣ ಎಂದಾಗಿಬಿಟ್ಟಿದೆ. ನಾನಂತೂ ಮೂರ್ಖನಾಗಲು ರೆಡಿ. ಮೂರ್ಖನನ್ನು ಮೂರ್ಖ ಮಾಡೋಕೆ ಏನು ಉಳಿದಿರುತ್ತೆ ಹೇಳಿ!??

- ಇಂತಿ ನಿಮ್ಮ ಶತಮೂರ್ಖ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com