ಕೋಮಾದಿಂದ ಚೀನಾದೆಡೆಗೆ

ಆಸ್ಟ್ರೇಲಿಯಾದ 22ರ ಹರೆಯದ ಯುವಕ ಬೆನ್ ಮೆಕ್‌ಮಹೋನ್, ಕಾರು ಅಪಘಾತಕ್ಕೊಳಗಾಗಿ ತಲೆಗೆ ಪೆಟ್ಟಾಗಿ ಕೋಮಾಗೆ ಜಾರಿದ್ದ. ಅಪಘಾತದಲ್ಲಿ ಬದುಕುಳಿದದ್ದೇ...
ಚೀನೀ ಕಾರ್ಯಕ್ರಮ ನಿರೂಪಿಸುತ್ತಿರುವ ಬೆನ್
ಚೀನೀ ಕಾರ್ಯಕ್ರಮ ನಿರೂಪಿಸುತ್ತಿರುವ ಬೆನ್

ಆಸ್ಟ್ರೇಲಿಯಾದ 22ರ ಹರೆಯದ ಯುವಕ ಬೆನ್ ಮೆಕ್‌ಮಹೋನ್, ಕಾರು ಅಪಘಾತಕ್ಕೊಳಗಾಗಿ ತಲೆಗೆ ಪೆಟ್ಟಾಗಿ ಕೋಮಾಗೆ ಜಾರಿದ್ದ. ಅಪಘಾತದಲ್ಲಿ ಬದುಕುಳಿದದ್ದೇ ಹೆಚ್ಚಾದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನ ಜೀವದ ಬಗ್ಗೆ ಹೆಚ್ಚು ಚಿಂತೆಗೊಳಗಾಗುವ ಅಗತ್ಯವಿಲ್ಲವೆಂದು ವೈದ್ಯರು ಮನೆಯವರಿಗೆ ಹೇಳಿದ್ದರು. ಆತನ ದೇಹ, ವೈದ್ಯರ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಬೆನ್ ಕೋಮಾದಿಂದ ಹೊರಬರುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದರು. ಅದರಂತೆ ಕೆಲ ದಿನಗಳಲ್ಲಿ ಕೋಮಾದಿಂದ ಹೊರಬಂದಿದ್ದ. ಎಚ್ಚರವಾದಾಗ ಬಳಿಯಲ್ಲಿ ಮನೆಯವರಿರಲಿಲ್ಲ. ಆತನಿಗೆ ನರ್ಸ್ ಒಬ್ಬಳು ಕಣ್ಣಿಗೆ ಬಿದ್ದಿದ್ದಳು, ಅವಳು ಏಷ್ಯಾ ಮೂಲದವಳಾಗಿದ್ದಳು. ಬೆನ್, ಅವಳನ್ನು ಕರೆದು ತನ್ನ ಮೈಯೆಲ್ಲಾ ನೋಯುತ್ತಿದೆ ಎಂದು ದುಃಖ ತೋಡಿಕೊಂಡ. ಅಲ್ಲೇ ನಿಂತಿದ್ದ ನರ್ಸ್ ಮೂರ್ಛೆ ಹೋಗುವುದೊಂದು ಬಾಕಿ. ಇಂಗ್ಲೀಷಿಗನಾದ ಬೆನ್ ಸುಲಲಿತವಾಗಿ ಚೈನಾದ ಮ್ಯಾಂಡರಿನ್ ಭಾಷೆಯಲ್ಲಿ ಮಾತನಾಡಿದ್ದ. ಸಾಲದೆಂಬಂತೆ ಯಾವತ್ತೂ ಮ್ಯಾಂಡರಿನ್‌ನಲ್ಲಿ ಮಾತನಾಡದ ಬೆನ್ ಪೇಪರ್ ಚೂರಿನ ಮೇಲೆ ಅದೇ ಭಾಷೆಯಲ್ಲಿ 'ತಾನು ಅಪ್ಪ ಅಮ್ಮನನ್ನು ಪ್ರೀತಿಸುತ್ತೇನೆ' ಎಂದು ಬೇರೆ ಬರೆದಿದ್ದ. ಮನೆಯವರಿಗಂತೂ ಇದು ಅಘಾತವಾಗಿ ಪರಿಣಮಿಸಿತು. ಆತನಿಗೆ ಮ್ಯಾಂಡರಿನ್‌ನ ಗಂಧಗಾಳಿ ಗೊತ್ತಿರಲಿಲ್ಲವೆಂದೇನಲ್ಲ, ಹೈಸ್ಕೂಲಿನಲ್ಲಿ ಆತ ಮ್ಯಾಂಡರಿನ್‌ಅನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದ. ಆದರೆ ಮುಂದೆಂದೂ ಆ ಭಾಷೆಯನ್ನು ಬಳಸಿದ್ದೇ ಇಲ್ಲ. ಕಾರು ಅಪಘಾತ ಮೆದುಳಿನ ಯಾವುದೋ ಮೂಲೆಯಲ್ಲಿ ಮುದುಡಿಕೊಂಡಿದ್ದ ಮ್ಯಾಂಡರಿನ್‌ಅನ್ನು ಜಾಗೃತಗೊಳಿಸಿತ್ತು. ಹೀಗಾಗಿದ್ದು ಮೊದಲ ಘಟನೆಯೇನಲ್ಲ, ಅಮೆರಿಕದ ಸೈನಿಕನೊಬ್ಬ ಹಠಾತ್ ಸ್ವೀಡಿಷ್ ಭಾಷೆ ಮಾತನಾಡಿದ್ದು, ಕ್ರೊವೇಷಿಯನ್ ಹುಡುಗಿ ಮಾತೃಭಾಷೆ ಮರೆತು ನಿರರ್ಗಳ ಜರ್ಮನ್‌ನಲ್ಲಿ ಮಾತಾನಾಡಿದ ಉದಾಹರಣೆಗಳೂ ಇವೆ. ಬೆನ್ ತನ್ನ ಮಾತೃಭಾಷೆ ಇಂಗ್ಲೀಷನ್ನು ಪೂರ್ತಿ ಮರೆತಿರಲಿಲ್ಲ, ಆದರೆ ಇಂಗ್ಲೀಷ್ ಅಭ್ಯಾಸವಾಗಲು ಅನೇಕ ತಿಂಗಳುಗಳೇ ಹಿಡಿದವು. ಈಗ ಬೆನ್ ಮ್ಯಾಂಡರಿನ್ ಭಾಷೆಯ ಟಿವಿ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಡುತ್ತಾನೆ, ಆಸ್ಟ್ರೇಲಿಯಾಗೆ ಬರುವ ಚೈನೀಸರಿಗೆ ಟೂರ್ ಗೈಡ್ ಆಗಿಯೂ ಕಾರ್ಯ ನಿರ್ವಹಿಸುತ್ತಾನೆ. ನಮ್ಮ ಸಿನೆಮಾಗಳಲ್ಲಿ ಅತಿಯಾಗಿ ತೋರಿಸಿದರೂ ನಿಜಜೀವನದಲ್ಲಿ ಈ ರೀತಿಯ ನಿದರ್ಶನಗಳಿರುವುದು ಸೋಜಿಗವೇ ಸರಿ.

ಅವನ ಹೊಟ್ಟೆಯೊಳಗೆ ಇದ್ದುದೇನು?
ಸಂಜು ಭಗತ್, ರೈತ, ನಾಗ್‌ಪುರದ ನಿವಾಸಿ. ದೈನಂದಿನ ಚಟುವಟಿಕೆಗಳಲ್ಲಿ ಎಲ್ಲರಂತೆ ಭಾಗಿಯಾಗುತ್ತಿದ್ದ ಆತನ ಒಂದೇ ಸಮಸ್ಯೆಯೇನೆಂದರೆ ಅನಿಯಮಿತವಾಗಿ ಬೆಳೆದಿದ್ದ ಹೊಟ್ಟೆ. ಆತನ ದೇಹಕ್ಕೂ ಹೊಟ್ಟೆಗೂ ಸಾಮ್ಯತೆಯೇ ಇರಲಿಲ್ಲ. ದೇಹ ನೋಡಿದರೆ ಸಣಕಲು, ಆದರೆ ಹೊಟ್ಟೆ ಮಾತ್ರ ಗರ್ಭ ಧರಿಸಿದವನಂತೆ ಬೆಳೆದಿತ್ತು. ಅದರ ದೆಸೆಯಿಂದಾಗಿ ಗರ್ಭಿಣಿ ಎಂದು ಕರೆಸಿಕೊಂಡು ಊರವರ ನಗೆಪಾಟಲಿಗೂ ಈಡಾಗುತ್ತಿದ್ದ ಸಂಜು ಭಗತ್. ಒಂದು ದಿನ ರಾತ್ರಿ, ಮುಂಚಿನಿಂದಲೂ ಇದ್ದ ಹೊಟ್ಟೆನೋವು ತೀವ್ರವಾಯಿತು, ಅದರ ಮೇಲೆ ಉಸಿರಾಟದ ಸಮಸ್ಯೆಯೂ ಪ್ರಾರಂಭವಾಯಿತು. ಮನೆಯವರು ಆತನನ್ನು ದೊಡ್ಡಾಸ್ಪತ್ರೆಗೆ ದಾಖಲಿಸಿದರು. ಆತನನ್ನು ಕಂಡ ತಕ್ಷಣ ಡಾಕ್ಟರರಿಗೆ ಇದು ಗೆಡ್ಡೆ (ಟ್ಯೂಮರ್) ಎಂದು ತಿಳಿದುಹೋಯಿತು. ಕೂಡಲೆ ಆಪರೇಷನ್‌ಗೆ ಸಿದ್ಧರಾದರು. ಆದರೆ ಡಾಕ್ಟರ್‌ಗೆ ಆಶ್ಚರ್ಯ ಕಾದಿತ್ತು, ಸಂಜು ಭಗತ್‌ನ ಹೊಟ್ಟೆ ತೆರೆಯುತ್ತಿದ್ದಂತೆ ಇದು ಗೆಡ್ಡೆಯಲ್ಲ ಎಂಬ ಸಂಗತಿ ಮನದಟ್ಟಾಗಿತ್ತು. ಏಕೆಂದರೆ ಅವರಿಗೆ ಅಲ್ಲಿ ಮನುಷ್ಯನ ಕೈಮೂಳೆಗಳು, ದವಡೆ, ಜೊತೆಗೇ ಅರ್ಧಂಬರ್ಧ ಬೆಳೆದ ಮನುಷ್ಯ ದೇಹದ ಅವಶೇಷಗಳು ಸಿಕ್ಕಿದ್ದವು. ಆಪರೇಷನ್ ಥಿಯೇಟರ್‌ನಲ್ಲಿದ್ದವರೆಲ್ಲರೂ ಒಂದು ಕ್ಷಣ ಭಯಭೀತರಾದರು. ಗೆಡ್ಡೆಯನ್ನು ನಿರೀಕ್ಷಿಸುತ್ತಿದ್ದವರಿಗೆ ಅರ್ಧಂಬರ್ಧ ಬೆಳೆದ ದೇಹದ ಅವಶೇಷ ಸಿಕ್ಕರೆ ಯಾರು ತಾನೆ ನೆಟ್ಟಗೆ ನಿಂತಾರು ಹೇಳಿ. ಈ ಕ್ಷಣದಲ್ಲಿ ನಿಮಗೂ ಊರಿನವರಂತೆ ಆತ ಗರ್ಭ ಧರಿಸಿದ್ದ ಎಂದನುಮಾನ ಬಂದಿದ್ದರೆ ಅದು ನಿಮ್ಮ ತಪ್ಪಲ್ಲ. ಆದರೆ ಡಾಕ್ಟರರಿಗೆ ಈ ಅನುಮಾನ ಬರಲಿಲ್ಲ ಏಕೆಂದರೆ ಹೊಟ್ಟೆಯೊಳಗಿನ ಆ ಅವಶೇಷದ ಕೈಗಳಲ್ಲಿ ಹೆದರಿಕೆ ಹುಟ್ಟಿಸುವಷ್ಟು ದೊಡ್ಡದಾಗಿ ಉಗುರುಗಳು ಬೆಳೆದಿದ್ದವು, ತಲೆಗೂದಲು ಕೂಡ ಬೆಳೆದಿತ್ತು. ಆದ್ದರಿಂದ ಅದು ಮಗುವಾಗಿರಲು ಸಾಧ್ಯವೇ ಇಲ್ಲ ಎಂಬುದು ಡಾಕ್ಟರರಿಗೆ ಮನವರಿಕೆಯಾಗಿತ್ತು, ಅವರ ತಲೆಯಲ್ಲಿ ಪದವೊಂದು ಮೂಡತೊಡಗಿತ್ತು 'ಫೀಟಸ್ ಇನ್ ಫೀಟು'. ಅದೊಂದು ವಿಚಿತ್ರವಾದ ನ್ಯೂನತೆ. ಅದರ ಪ್ರಕಾರ ಆ ಅವಶೇಷ ಮತ್ಯಾರದೂ ಆಗಿರದೆ ಆತನ ಸ್ವಂತ ತಮ್ಮನದಾಗಿತ್ತು. ಸಂಜು ಭಗತ್‌ನ ತಾಯಿ ಗರ್ಭ ಧರಿಸಿದ್ದಾಗ ಅವಳಿ ಜವಳಿ ಮಕ್ಕಳಾಗಬೇಕಿತ್ತು, ಆದರೆ ನ್ಯೂನತೆಯಿಂದಾಗಿ ಇನ್ನೂ ಬೆಳೆಯುವ ಹಂತದಲ್ಲಿದ್ದಾಗ ಗರ್ಭ ಒಂದರೊಳಗೊಂದು ಸೇರಿಕೊಂಡು ಬಿಟ್ಟಿದ್ದವು. ಹಾಗೆ ಸಂಜುವಿನ ಹೊಟ್ಟೆಯೊಳಗೆ ಆತನ ತಮ್ಮನ ಗರ್ಭ ಸೇರಿತ್ತು. ಒಳಗೆ ಸೇರಿಕೊಂಡ ಗರ್ಭ ಪೂರ್ತಿಯಾಗಿ ಬೆಳೆದಿರುವುದಿಲ್ಲ, ಅದಕ್ಕೆ ಸ್ಮೃತಿಯೂ ಇರುವುದಿಲ್ಲ. ಈ ಸರ್ಜರಿಯಲ್ಲಿ ಒಳಗಿದ್ದುದನ್ನು ಹೊರತೆಗೆದ ನಂತರ ಸಂಜು ಭಗತ್‌ನ ಆರೋಗ್ಯ ನಿಯಂತ್ರಣಕ್ಕೆ ಬಂದಿತು. 39 ವರ್ಷಗಳ ಕಾಲ ಹೊಟ್ಟೆಯಲ್ಲೇ ಆ ವಸ್ತು ಠಿಕಾಣಿ ಹೂಡಿತ್ತು ಎಂಬುದನ್ನು ನೆನೆಸಿಕೊಂಡರೆ ಮೈಜುಮ್ಮೆನ್ನುತ್ತದೆ, ಅಲ್ಲವೆ?
-ಹರ್ಷವರ್ಧನ್
harsh.9mile@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com