ಪಾಕಿಸ್ತಾನದ ಭಜರಂಗಿ ಭಾಯಿಜಾನ್ "ಅಬ್ದುಲ್ ಸತ್ತಾರ್ ಈಧಿ"

ಈಧಿ ಫೌಂಡೇಷನ್, ಗೀತಾ ಪ್ರಕರಣದಿಂದಾಗಿ ವಿಶ್ವಾದ್ಯಂತ ಸುದ್ದಿಯಾಗುತ್ತಿರುವ ಸಾಮಾಜಿಕ ಸಂಘಟನೆ ಇದು. 15 ವರ್ಷಗಳ ಹಿಂದೆ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಭಾರತದ ಗೀತಾ ಎಂಬ ಬಾಲಕಿಯನ್ನು ಸಾಕಿ-ಸಲಹಿ ಇಂದು ಆಕೆಯ ಪೋಷಕರು ಭಾರತದವರೇ ಎಂದು ಪತ್ತೆ ಮಾಡಿ ಆಕೆಯನ್ನು..
ಭಾರತದ ಗೀತಾಳೊಂದಿಗೆ ಈಧಿ ಸಂಸ್ಥೆಯ ಸಂಸ್ಥಾಪಕ (ಚಿತ್ರಕೃಪೆ: ಟ್ರಿಬ್ಯೂನ್)
ಭಾರತದ ಗೀತಾಳೊಂದಿಗೆ ಈಧಿ ಸಂಸ್ಥೆಯ ಸಂಸ್ಥಾಪಕ (ಚಿತ್ರಕೃಪೆ: ಟ್ರಿಬ್ಯೂನ್)

ಈಧಿ ಫೌಂಡೇಷನ್, ಗೀತಾ ಪ್ರಕರಣದಿಂದಾಗಿ ವಿಶ್ವಾದ್ಯಂತ ಸುದ್ದಿಯಾಗುತ್ತಿರುವ ಸಾಮಾಜಿಕ ಸಂಘಟನೆ ಇದು. 15 ವರ್ಷಗಳ ಹಿಂದೆ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಭಾರತದ ಗೀತಾ ಎಂಬ ಬಾಲಕಿಯನ್ನು ಸಾಕಿ-ಸಲಹಿ ಇಂದು ಆಕೆಯ ಪೋಷಕರು ಭಾರತದವರೇ ಎಂದು ಪತ್ತೆ ಮಾಡಿ ಆಕೆಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುವಲ್ಲಿ ನೆರವಾದ ಭಾಯಿಜಾನ್ ಸಂಘಟನೆ.

ಗೀತಾ ಪ್ರಕರಣವನ್ನು ಹೊರತು ಪಡಿಸಿದರೆ ಈಧಿ ಫೌಂಡೇಷನ್ ಕುರಿತಂತೆ ಭಾರತೀಯರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಆದರೆ ಈಧಿ ಫೌಂಡೇಷನ್ ನ ಇತಿಹಾಸ ಕೆದಕಿದರೆ ಸಾಕಷ್ಟು ಕುತೂಹಲಕರ ಮಾಹಿತಿಗಳು ಹೊರ ಬೀಳುತ್ತವೆ. ಮೂಲಗಳ ಪ್ರಕಾರ ಗೀತಾಳಂತಹ ಸುಮಾರು 35 ಸಾವಿರಕ್ಕೂ ಅಧಿಕ ಮಕ್ಕಳನ್ನು ಈಧಿ ಫೌಂಡೇಷನ್ ರಕ್ಷಣೆ ಮಾಡಿದೆ. ತನ್ನ ಸಾಮಾಜಿಕ ಸೇವಾ ಕಾರ್ಯಗಳಿಂದಲೇ ಪಾಕಿಸ್ತಾನದಾದ್ಯಂತ ಮನೆಮಾತಾಗಿರುವ ಈಧಿಗೆ ದಶಕಗಳ ಇತಿಹಾಸವಿದೆ. ಈಧಿ ಫೌಂಡೇಷನ್ ಅನ್ನು ನಿರ್ಮಾಣ ಮಾಡಿದ್ದು, ಅಬ್ದುಲ್ ಸತ್ತಾರ್ ಈಧಿ.

ಪಾಕಿಸ್ತಾನದ ಅತ್ಯಂತ ಪೂಜ್ಯನೀಯ ವಕ್ತಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಪಾಕಿಸ್ತಾನದ ನಿರ್ಮಾತೃ ಮಹಮದ್ ಅಲಿ ಜಿನ್ನಾ, ಆದರೆ ಕೆಲ ಮಾಧ್ಯಮಗಳ ವರದಿಯಂತೆ ಜಿನ್ನಾ ಬಳಿಕ  ಪಾಕಿಸ್ತಾನದ ಮಂದಿ ಯಾರನ್ನಾದರೂ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎಂದರೆ ಅದು ಇದೇ ಈಧಿ ಫೌಂಡೇಷನ್ ನ ನಿರ್ಮಾತೃ "ಅಬ್ದುಲ್ ಸತ್ತಾರ್ ಈಧಿ"ಯನ್ನು ಮಾತ್ರ. ಏಕೆಂದರೆ ಈಧಿ ಟ್ರಸ್ಟ್ ನ ಹೆಸರಿನಲ್ಲಿ ಅಬ್ದುಲ್ ಸತ್ತಾರ್ ಈಧಿ ಅವರು ಪಾಕಿಸ್ತಾನದಾದ್ಯಂತ ಸಾಕಷ್ಟು ಸಮಾಜ ಸೇವಾ ಕೇಂದ್ರಗಳನ್ನು, ಬಡವರಿಗಾಗಿ ಆಸ್ಪತ್ರೆಗಳನ್ನು ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು  ನಿರ್ಮಾಣ ಮಾಡಿದ್ದಾರೆ.

ಮೂಲತಃ ಗುಜರಾತ್ ಮೂಲದವರಾದ ಅಬ್ದುಲ್ ಸತ್ತಾರ್ ಈಧಿ ಅವರು ಜನಿಸಿದ್ದು 1928ರಲ್ಲಿ. ಗುಜರಾತ್ ನ ಜೂನ ಘಡ್ ಸಮೀಪದ ಬಂಟ್ವಾ ಗ್ರಾಮ ಇವರ ಹುಟ್ಟೂರು. 1974ರಲ್ಲಿ  ಭಾರತ-ಪಾಕಿಸ್ತಾನ ದೇಶಗಳ ಇಬ್ಭಾಗದ ಬಳಿಕ ಅಬ್ದುಲ್ ಸತ್ತಾರ್ ಈಧಿ ಅವರು, ಪಾಕಿಸ್ತಾನಕ್ಕೆ ವಲಸೆ ಹೋಗುತ್ತಾರೆ. ಕೈಯಲ್ಲಿ ಕೆಲಸವಿಲ್ಲ. ಜೇಬಲ್ಲಿ ದುಡ್ಡಿಲ್ಲ ಇಂತಹ ಸಂದಿಗ್ಧ  ಸಮಯದಲ್ಲಿಯೇ ಅಬ್ದುಲ್ ಸತ್ತಾರ್ ಈಧಿ ಅವರ ತಾಯಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪುತ್ತಾರೆ. ಇದರಿಂದ ತೀವ್ರ ದುಃಖಕ್ಕೀಡಾದ ಅಬ್ದುಲ್ ಸತ್ತಾರ್ ಈಧಿ ಅವರು, ತಮ್ಮ ತಾಯಿಗೆ ಬಂದ  ಸ್ಥಿತಿ ಬೇರಾರಿಗೂ ಬಾರದಿರಲಿ ಎಂದು ಈಧಿ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ.

ಈಧಿ ಸಂಸ್ಥೆಯ ಅಧಿಕೃತ ಸಾಮಾಜಿಕ ತಾಣವೇ ಹೇಳಿಕೊಂಡಂತೆ, ಅಬ್ದುಲ್ ಸತ್ತಾರ್ ಈಧಿ ಅವರು, ಸಮಾಜ ಕಲ್ಯಾಣ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಕೇಂದ್ರಗಳನ್ನು ನಿರ್ಮಿಸುವ  ಆಸೆ ಹೊಂದಿದ್ದರು. ತಮ್ಮ ಈ ಕೇಂದ್ರಗಳ ಮೂಲಕ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದ ಮಾನಸಿಕ ಅಸ್ವಸ್ಥರನ್ನು, ಮನೋ ರೋಗಿಗಳನ್ನು ಹುಡುಕಿ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಈಧಿ  ಬಯಸಿದ್ದರು. ಇದೇ ಕಾರಣಕ್ಕಾಗಿ ಈಧಿ ಸಂಸ್ಥೆಯನ್ನು ನಿರ್ಮಾಣ ಮಾಡಿದರು.

ಅದರಂತೆ ಈಧಿ ಸಂಸ್ಥೆಯೂ ಕೂಡ ನಿರ್ಮಾಣವಾಯಿತು. ಅವರು ಅಂದುಕೊಂಡಂತೆಯೇ ಸಂಸ್ಥೆ ಸಾಕಷ್ಟು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿತು. ಸಂಸ್ಥೆಯ ಕಾರ್ಯಗಳನ್ನು ಕಂಡ ಜನರು   ಇವರನ್ನು ಕರುಣಾ ದೇವತೆ ಎಂದೂ ಕೂಡ ಕರೆದರು. 1965ರಲ್ಲಿ ಅಬ್ದುಲ್ ಸತ್ತಾರ್ ಈಧಿ ಅವರು ತಮ್ಮದೇ ಔಷಧಾಲಯದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿಲ್ಕಿಸ್ ಎಂಬುವವರನ್ನು  ವಿವಾಹವಾದರು. ದಂಪತಿಗಳಿಗೆ ನಾಲ್ಕು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.

ಪತ್ನಿಯಿಂದ ಉಚಿತ ಹೆರಿಗೆ ಆಸ್ಪತ್ರೆ
ಈಧಿ ಅವರ ಪತ್ನಿ ಕೂಡ ಸಮಾಜ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದು, ಕರಾಚಿಯಲ್ಲಿ ಬಡವರಿಗಾಗಿ ಉಚಿತ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಿ ಅದರ ಮೇಲ್ವಿಚಾರಣೆ  ನೋಡಿಕೊಳ್ಳುತ್ತಿದ್ದಾರೆ. ಕೇವಲ ಹೆರಿಗೆ ಮಾತ್ರವಲ್ಲದೇ ಅನಾಥ ಶಿಶುಗಳನ್ನು ಕೇಂದ್ರಕ್ಕೆ ತಂದು ಅವುಗಳ ಪಾಲನೆ ಕೂಡ ಮಾಡುತ್ತಿದ್ದಾರೆ. ಎಲೆಮರೆ ಕಾಯಿಯಂತೆ ಈಧಿ ಸಂಸ್ಥೆ ತನ್ನ ಸಮಾಜ  ಸೇವಾ ಕಾರ್ಯದಲ್ಲಿ ತೊಡಗಿದ್ದರೂ ಕೂಡ ದಿನಕಳದಂತೆ ಈಧಿ ಸಂಸ್ಥೆಯ ಕಾರ್ಯಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವು. ಇದೇ ಕಾರಣಕ್ಕಾಗಿ ಸಂಸ್ಥೆಗೆ ಹರಿದು  ಬರುತ್ತಿದ್ದ ದೇಣಿಗೆ ದಿನಕಳೆದಂತೆ ಹೆಚ್ಚಾಯಿತು. ಈ ಹಣದಿಂದ ಅಬ್ದುಲ್ ಸತ್ತಾರ್ ಈಧಿ ಅವರು ತಮ್ಮ ಆಸ್ಪತ್ರೆಗೆ ಆ್ಯಂಬುಲೆನ್ಸ್ ಗಳನ್ನು ಖರೀದಿಸಿದರು. ಕೇವಲ ಖರೀದಿಸುವುದು ಮಾತ್ರವಲ್ಲದೇ  ಕೆಲ ಕಾಲ ಆ ಆ್ಯಂಬುಲೆನ್ಸ್ ಗಳಿಗೆ ತಾವೇ ಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಈಧಿ ಸಂಸ್ಥೆಯ ಕುರಿತು ಮಾಹಿತಿ ಪಡೆದ ಪತ್ರಕರ್ತ ಪೀಟರ್ ಒಬಾರ್ನ್, ಸಂಸ್ಥೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಚಿತ್ರವನ್ನೂ ಕೂಡ ಮಾಡಿದ. ಅಲ್ಲದೆ ಅಬ್ದುಲ್ ಸತ್ತಾರ್ ಈಧಿ ಅವರನ್ನು "ಜೀವಂತ ಸಂತ" ಎಂದು ಬಣ್ಣಿಸಿದ್ದ. 2011ರಲ್ಲಿ ಖ್ಯಾತ ಆಂಗ್ಲ ಪತ್ರಿಕೆ "ದಿ ಡೈಲಿ ಟೆಲಿಗ್ರಾಫ್" ಗೆ ಈಧಿ ಸಂಸ್ಥೆ ಕುರಿತಂತೆ ಇದೇ ಪೀಟರ್ ಒಬಾರ್ನ್ ಒಂದು ಲೇಖನ ಕೂಡ ಬರೆದಿದ್ದ. ತನ್ನ ಲೇಖನದಲ್ಲಿ ಈಧಿಯಂತಹ ಜೀವಂತ ಸಂತನನ್ನು ತಾನು ಎಂದಿಗೂ ನೋಡಿಯೇ ಇಲ್ಲ ಎಂದು ಬಣ್ಣಿಸಿದ್ದ.

ಅನಾಥ ಶಿಶುಗಳ ಸಂರಕ್ಷಕ
ಅನಾಥ ಶಿಶುಗಳ ಕುರಿತಂತೆ ಅಬ್ದುಲ್ ಸತ್ತಾರ್ ಈಧಿ ಅವರು ತುಂಬಾ ದುಃಖ ಪಡುತ್ತಿದ್ದರು. 1991ರಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಈಧಿ ತಮ್ಮ  ದುಃಖವನ್ನು ತೋಡಿಕೊಂಡಿದ್ದರು. "ನಾನಾ ಕಾರಣಗಳಿಂದಾಗಿ ಮಕ್ಕಳ ಪೋಷಕರು ಅವರನ್ನು ಅನಾಥರನ್ನಾಗಿ ಮಾಡುತ್ತಾರೆ. ಮಕ್ಕಳ ಭವಿಷ್ಯವನ್ನು ಲೆಕ್ಕಿಸದೇ ಅವರನ್ನು ರಸ್ತೆಬದಿಯಲ್ಲಿ ಎಸೆದು  ಹೋಗುತ್ತಾರೆ. ಇದೇ ಕಾರಣಕ್ಕಾಗಿ ತಾವು ಅನಾಥ ಮಕ್ಕಳಿಗಾಗಿ ಅನಾಥಾಶ್ರಮ ನಿರ್ಮಿಸಿದ್ದು" ಎಂದು ಈಧಿ ಹೇಳಿದ್ದರು. ಅವರ ಆಶ್ರಮದ ಮೇಲೆ "ಮತ್ತೊಂದು ಪಾಪ ಮಾಡಬೇಡಿ, ನಿಮ್ಮ ಮಕ್ಕಳನ್ನು ನಮ್ಮ ರಕ್ಷಣೆಯಲ್ಲಿ ಇಡಿ" ಎಂದು ಬರೆಸಲಾಗಿತ್ತು. ಒಂದು ಮೂಲದ ಪ್ರಕಾರ ಈಧಿ ಸಂಸ್ಥೆ ಇಲ್ಲಿಯವರೆಗೂ ಸುಮಾರು 35 ಸಾವಿರಕ್ಕೂ ಅಧಿಕ ಮಕ್ಕಳ ಸಂರಕ್ಷಣೆ ಮಾಡಿದೆ.

ಮಹಿಳಾ ಉದ್ಯೋಗಿಗಳ ಬೆಂಬಲಕ್ಕೆ ಈಧಿ
ಅಲ್ಲದೆ ಇಸ್ಲಾಂ ಮೂಲಭೂತವಾದಿಗಳು ಹೇಳುವಂತೆ ಮಹಿಳೆಯರು ಕೆಲಸಕ್ಕೆ ಹೋಗಬಾರದು ಎಂಬ ವಾದವನ್ನು ವಿರೋಧಿಸುವ ಈಧಿ, ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸುತ್ತಾರೆ. ಪ್ರಸ್ತುತ  ಈಧಿ ಸಂಸ್ಥೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ನೌಕರರು ಇದ್ದು, ಇದರಲ್ಲಿ ಸುಮಾರು 500 ಮಂದಿ ಮಹಿಳಾ ಸೇವಕರೂ ಇದ್ದಾರೆ ಎನ್ನುವುದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com