ಒಆರ್ ಒಪಿ ಹಿಂದಿನ ಹೋರಾಟದ ಕಥೆ

ನಾಲ್ಕು ದಶಕಗಳ ಸೈನಿಕರ ಹೋರಾಟ ಅಂತ್ಯಗೊಂಡಿದೆ. ಪ್ರಜೆಗಳನ್ನು ರಕ್ಷಿಸುವುದಕ್ಕೆ, ದೇಶವನ್ನು ಕಾಪಾಡುವುದಕ್ಕೆ ಶತ್ರುಗಳೊಂದಿಗೆ ಸೆಣಸಿದ ಲಕ್ಷಾಂತರ ಸೈನಿಕರು...
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಕರ್ನಲ್ ಸಿಂಗ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಕರ್ನಲ್ ಸಿಂಗ್

ನಾಲ್ಕು ದಶಕಗಳ ಸೈನಿಕರ ಹೋರಾಟ ಅಂತ್ಯಗೊಂಡಿದೆ. ಪ್ರಜೆಗಳನ್ನು ರಕ್ಷಿಸುವುದಕ್ಕೆ, ದೇಶವನ್ನು ಕಾಪಾಡುವುದಕ್ಕೆ ಶತ್ರುಗಳೊಂದಿಗೆ ಸೆಣಸಿದ ಲಕ್ಷಾಂತರ ಸೈನಿಕರು, ಗೌರವಯುತ ಪಿಂಚಣಿಗಾಗಿ ನಾಲ್ಕು ದಶಕಗಳ ಕಾಲ ಹೋರಾಟ ನಡೆಸಬೇಕಾಯಿತು. ಹೋರಾಟ ಈಗ ಜಯದೊಂದಿಗೆ ಅಂತ್ಯಕಂಡಿದೆ. ಸರ್ಕಾರ ಸೈನಿಕರಿಗೆ ಅವರ ಸೇವೆಗೆ ತಕ್ಕಂತೆ ಪಿಂಚಣಿಯನ್ನು ನೀಡುವುದಕ್ಕೆ ಒಪ್ಪಿ, ಸಮಾನ ಹುದ್ದೆ ಸಮಾನ ಪಿಂಚಣಿ ನೀತಿ ಜಾರಿಗೆ ಸಮ್ಮತಿ ಸೂಚಿಸಿದೆ

ಹರ್ಯಾಣದ ರೆವಾರಿ ಜಿಲ್ಲೆ. 2013ರ ಸೆಪ್ಟೆಂಬರ್ 15. ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು, ನೆರೆದ ಭಾರಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಾಜಿ ಸೈನಿಕರ ದೊಡ್ಡ ರ್ಯಾಲಿಗೆ ಉತ್ತರಿಸುತ್ತಾ, ಅಧಿಕಾರಕ್ಕೆ ಬಂದರೆ, ದಶಕಗಳಿಂದ ನನೆಗುದಿಗೆ ಬಿದ್ದಿರುವ ಸಮಾನ ಹುದ್ದೆ, ಸಮಾನ ಪಿಂಚಣಿ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಮೋದಿ ಎರಡು ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಗ ಈಡೇರಿಸಿದ್ದಾರೆ.

ಸರ್ಕಾರ ಸಮಾನ ಹುದ್ದೆ, ಸಮಾನ ಪಿಂಚಣಿ ಜಾರಿ ಮಾಡುವುದಾಗಿ ಶನಿವಾರ ರಕ್ಷಣಾ ಸಚಿವರು ಘೋಷಿಸಿದರು. ಈ ಹೇಳಿಕೆಯಿಂದ ಸಮಾಧಾನಗೊಳ್ಳದ ಸೈನಿಕರು ಸತ್ಯಾಗ್ರಹ ಮುಂದುವರೆ ಸುವ ಸೂಚನೆ ನೀಡಿದ್ದರು. ಆದರೆ ಪರಿಕ್ಕರ್ ಅವರೊಂದಿಗೆ ಸಂಜೆ ನಡೆದ ಸಭೆ ಮಾಜಿ ಸೈನಿಕ ಅನುಮಾನ ಗಳನ್ನು ಪರಿಹರಿಸಿದ್ದು, ಹೋರಾಟ ಜಯ ಕಂಡಿರುವುದಾಗಿ ಘೋಷಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಡೆದ ಈ ಹೋರಾಟದಲ್ಲಿ ಮಾಜಿ ಸೈನಿಕರು ತಮ್ಮ ಹಕ್ಕನ್ನು ಬೇಡಿ ಪಡೆಯುವ ಸ್ಥಿತಿ ತಲುಪಿದ್ದೇ ಶೋಚನೀಯ ಸಂಗತಿ. 1973ರಿಂದ ಇಲ್ಲಿಯವರೆಗೆ 10ಕ್ಕೂ ಹೆಚ್ಚು ಮಂದಿ ಪ್ರಧಾನಿ ಹುದ್ದೆಯನ್ನು ಅಲಕಂರಿಸಿದ್ದಾರೆ. ಆದರೆ ಯಾರೂ, ದೇಶ ರಕ್ಷಣೆಗೆ ದುಡಿದ ಸೈನಿಕನ ಬೇಡಿಕೆಯನ್ನು ಈಡೇರಿಸುವ ಮನಸ್ಸು ಮಾಡಲಿಲ್ಲ. ಆದರೂ ಅಧಿಕಾರವನ್ನು ಅನುಭವಿಸಿದರು. ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ 1973ರಲ್ಲಿ ಮೊದಲ ಬಾರಿಗೆ ಇಂದರ್‍ಜಿಂತ್ ಸಿಂಗ್ ಮಾಜಿ ಸೈನಿಕರ ಒಕ್ಕೂಟ ಕಟ್ಟಿ, ಸಮಾನ ಹುದ್ದೆ ಮತ್ತು ಸಮಾನ ಪಿಂಚಣಿಗಾಗಿ ಆಗ್ರಹಿಸಿದರು. ಇದಕ್ಕೆ ಕಾರಣ, ಮೂರನೇ ವೇತನ ಆಯೋಗದಲ್ಲಿ ಅಲ್ಲಿಯವರೆಗೆ ಇದ್ದ ಶೇ. 70ರಷ್ಟಿದ್ದ ಪಿಂಚಣಿಯನ್ನು ಶೇ. 50ಕ್ಕೆ ಇಳಿಸ ಲಾಗಿತ್ತು. ಇತರ ಸರ್ಕಾರಿ ಉದ್ಯೋಗಿಗಳ ಪಿಂಚಣಿ ಯನ್ನು ಶೇ. 50ರಷ್ಟು ಹೆಚ್ಚಿಸಿತ್ತು. ಸಿಂಗ್ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಹೋರಾಟಕ್ಕೆ ಇಳಿದರು. ಹೀಗೆ ಶುರುವಾದ ಮಾಜಿ ಸೈನಿಕರ ಹೋರಾಟ 1985ರಲ್ಲಿ ತೀವ್ರತೆ ಪಡೆದುಕೊಂಡಿತು. ಸೇನೆಯಲ್ಲಿ 14 ರೀತಿಯ ಪಿಂಚಣಿದಾರರಿದ್ದಾರೆ. ಸರ್ಕಾರ ಅನ್ಯಾಯ ನಡೆಸುತ್ತಿದೆ ಎಂಬ ಕೂಗು ವ್ಯಾಪಕವಾಯಿತು. ನಂತರ ದಲ್ಲಿ ನಾಲ್ಕನೇ ವೇತನದ ಆಯೋಗದಲ್ಲಿ ಈ ವಿಷಯವನ್ನು ಪರಿಗಣಿಸುವುದಾಗಿ ಆಶ್ವಾಸನೆ ನೀಡಿದ ಸರ್ಕಾರ ಯಾವುದೇ ಕ್ರಮವನ್ನೂ ಕೈಗೊಳಲಿಲ್ಲ. 1990-91ರಲ್ಲಿ ಅಧಿಕಾರದಲ್ಲಿದ್ದ ಚಂದ್ರಶೇಖರ ಅವರ ಅವಧಿಯಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಇದು ಒಆರ್‍ಒಪಿ ಬದಲು ಒಂದು ಅವಧಿಯ ಹೆಚ್ಚಳವನ್ನು ಶಿಫಾರಸು ಮಾಡಿತು.

1996ರಲ್ಲಿ ಸರ್ಕಾರ ವೇತನ ಆಯೋಗದಲ್ಲಿ ಪಿಂಚಣಿ ನೀಡುವ ಕುರಿತು ಮಾಡಿದ ಶಿಫಾರಸ್ಸು ಸೈನಿಕರನ್ನು ಕೆರಳಿಸಿತು. 1986ಕ್ಕೂ ಮುನ್ನ ಮತ್ತು ನಂತರದ ಪಿಂಚಣಿ ಪ್ರಮಾಣದಲ್ಲಿ ಭಿನ್ನವಾದ ಶಿಫಾರಸ್ಸು ಮಾಡಿತ್ತು. ಇದರ ಪರಿಣಾಮ ಸರ್ಕಾರದ ವಿರುದ್ಧ ಕಾನೂನು ಹೋರಾಟವೂ ಆರಂಭವಾಯಿತು. ಇಲ್ಲಿಂದ ಮುಂದೆ ಮಾಜಿ ಸೈನಿಕರು ಸರ್ಕಾರದ ಮೇಲೆ ಒತ್ತಡ ತರಲು ವಿವಿಧ ರೀತಿಯಲ್ಲಿ ಹೋರಾಟವನ್ನು ಮುಂದುವರೆಸಿದರು. ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಒಆರ್‍ಒಪಿ ಪರ 2006ರಲ್ಲಿ ಹೋರಾಟಕ್ಕೆ ಇಳಿದರು. ಸಂಸದೀಯ ಸಮಿತಿಗೆ ಅಹವಾಲು ಸಲ್ಲಿಸಿದರು. ಸಂಸತ್ತಿನಲ್ಲಿ ಮಾಜಿ ಸೈನಿಕರ ಪರವಾಗಿ ದನಿ ಎತ್ತಿದರು. ಈ ನಡುವೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು ಸಲ್ಲಿಸಿದ ವರದಿ, ಒಆರ್‍ಒಪಿ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಸರ್ಕಾರಿ ಸಿಬ್ಬಂದಿಗಳು ಸೈನಿಕರಂತೆ ಪಿಂಚಣಿಗೆ ಆಗ್ರಹಿಸಬಹುದು ಎಂದು ಹೇಳಿತು. 2011ರಲ್ಲಿ ಭಗತ್ ಸಿಂಗ್ ಕೊಶ್ಯಾರಿ ನೇತೃತ್ವದ ಸಮಿತಿ ರಚನೆಯಾಯಿತು. ಇದರಲ್ಲಿ ಕೋಶ್ಯಾರಿ ಜೊತೆ ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂದ್ರ ಸಿಂಗ್ ಮತ್ತು ಸಂಸದ ರಾಜೀವ್ ಚಂದ್ರಶೇಖರ್
ಇದ್ದರು. ಈ ಸಮಿತಿಯ ವರದಿ, `ಸಮಾನ ಹುದ್ದೆ, ಸಮಾನ ಪಿಂಚಣಿ' ಆಗ್ರಹ ಸಮಂಜಸ ವಾಗಿದೆ. ಸರ್ಕಾರಿ ಜಾರಿಗೊಳಿಸ ಬೇಕು ಎಂದು ಹೇಳಿತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಲಿಲ್ಲ. 2012ರಲ್ಲಿ ಒಆರ್‍ಒಪಿ ಜಾರಿಗೊಳಿ ಸುವುದಾಗಿ ಘೋಷಿಸಿತು. ಆದರೆ ಆಗಲೂ ಜಾರಿಯಾಗಲಿಲ್ಲ.

ಮೋದಿಯವರು ನೂರು ದಿನಗಳಲ್ಲಿ ಒಆರ್‍ಒಪಿ ಜಾರಿಗೆ ತರುವ ಮೂಲಕ ದಶಕಗಳ ಕಾಲ ನಿರೀಕ್ಷೆಯನ್ನು ಪೂರೈಸುತ್ತೇನೆ ಎಂದು ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಈಗ ಜಾರಿಯಾಗುತ್ತಿದೆ. ಜುಲೈ1, 2014ರಿಂದ ಪೂರ್ವನ್ವಯ ವಾಗುವಂತೆ ಒಆರ್‍ಒಪಿ ಜಾರಿಯಾಗುತ್ತಿದೆ. ಪ್ರತಿ 5 ವರ್ಷಕ್ಕೊಮ್ಮೆ ಪಿಂಚಣಿಯನ್ನು ಪರಿಷ್ಕರಿಸಲಾಗುತ್ತದೆ. ವೇತನದ ಬಾಕಿ ಹಣವನ್ನು ನಾಲ್ಕು ಕಂತುಗಳಲ್ಲಿ ನೀಡಲಾಗುವುದು. ಸರಾಸರಿ ಮೊತ್ತಕ್ಕಿಂತ ಹೆಚ್ಚು ಪಡೆಯುತ್ತಿರುವ ಪಿಂಚಣಿಯಲ್ಲಿ  ಬದಲಾವಣೆಯಾಗುವುದಿಲ್ಲ ಎಂಬ ಅಂಶಗಳು ಮುಖ್ಯವಾಗಿ ಪ್ರಸ್ತಾಪವಾಗಿವೆ. ಈ ಕುರಿತು ಗಮನ ಹರಿಸಲು ಏಕ ಸದಸ್ಯ ನ್ಯಾಯಾಂಗ ಸಮಿತಿ ರಚನೆಯಾಗಲಿದೆ.

ಛಲ ಸಾಧಿಸಿದ ಯೋಧ
ಕರ್ನಲ್ ಇಂದರ್‍ಜಿತ್ ಸಿಂಗ್‍ಗೆ ಇದು ಸಾರ್ಥಕ ಕ್ಷಣ. 34 ವರ್ಷದ ಹಿಂದೆ ಒಆರ್ ಒಪಿ ಹೋರಾಟಕ್ಕೆ ಚಾಲನೆ ನೀಡಿದ್ದೇ ಈ ಹಿರಿಯ ಸೇನಾನಿ. ವಿಶೇಷವೆಂದರೆ ನಿವೃತ್ತ ಸೇನಾನಿಗಳ ಬೇಡಿಕೆ ಸರ್ಕಾರ ಈಡೇರಿಸುವ ಕ್ಷಣದ ತನಕವೂ ಇಂದರ್‍ಜಿತ್ ಖುದ್ದು ದೆಹಲಿ ರಸ್ತೆಗಳಲ್ಲಿ ತಮ್ಮ ಹೋರಾಟ ಮುಂದುವರಿಸಿಕೊಂಡೇ ಬಂದರು. ಬಹುಶಃ ಮೊದಲ ದಿನದಿಂದ ಕೊನೆಯ ಕ್ಷಣದ ತನಕ ಹೋರಾಡಿದ ಏಕೈಕ ಸೇನಾನಿ ಇಂದರ್‍ಜಿತ್ ಸಿಂಗ್. ಇಂದಿರಾಗಾಂಧಿ ಪ್ರಧಾನಿಯಾದ ಅವಧಿಯಲ್ಲಿ(1966-77) ನಿವೃತ್ತ ಯೋಧರ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ ಆದಾಗ, ಕೆಳಮಟ್ಟದ ಅಧಿಕಾರಿಗಳ ಪಿಂಚಣಿ
ಮೇಲೆ ತೀವ್ರ ಪರಿಣಾಮವಾಗಿತ್ತು. ಆಗ ಹೋರಾಟ ಕೈಗೆತ್ತಿಕೊಂಡ ಕರ್ನಲ್ ಇಂದರ್ ಜಿತ್ ಸಿಂಗ್ ಇಂದಿನ ತನಕವೂ ನ್ಯಾಯಕ್ಕಾಗಿ ಹೋರಾಡಿ ಇಂದು ಸಾರ್ಥಕಗೆಲುವಿನ ನಗು ಚೆಲ್ಲಿದ್ದಾರೆ. 1984ರಲ್ಲಿ 68 ಸಲಹೆಗಳ ನ್ನೊಳಗೊಂಡ ಮತ್ತೊಂದು ಪರಿಷ್ಕೃತ ಬೇಡಿಕೆ ಪಟ್ಟಿ ಸಲ್ಲಿಸಿದ್ದ ಸಿಂಗ್ ನೇತೃತ್ವದ ತಂಡಕ್ಕೆ ಇಂದಿರಾಗಾಂಧಿ ಹತ್ಯೆಯಿಂದಾಗಿ ಮತ್ತೆ ಹಿನ್ನಡೆಯಾಗಿತ್ತು. ರಾಜೀವ್ ಗಾಂಧಿ ಪ್ರಧಾನಿಯಾದಾಗ ಪಟ್ಟಿಯನ್ನು ಕೈಗೆತ್ತಿ ಕೊಂಡು 52 ಬೇಡಿಕೆಗಳನ್ನು ಪುರಸ್ಕರಿಸಿದ ರಾದರೂ ಅತಿಮುಖ್ಯವಾದ 16 ಸಲಹೆಗಳನ್ನೇ ತಿರಸ್ಕರಿಸಿದ್ದರು. 1987ರಲ್ಲಿ ಐದು ಮಂದಿ ಸಹೋದ್ಯೋಗಿಗಳೊಂದಿಗೆ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನನ್ನೂ ಸಿಂಗ್ ಕೈಗೊಂಡಿದ್ದರು. ತಮ್ಮ ಅನಾರೋಗ್ಯ ಮತ್ತು ವಯಸ್ಸನ್ನೂ ಲೆಕ್ಕಿಸದೇ ಪ್ರತಿ ಹೊಸ ಸರ್ಕಾರ ಹೊಸ ಪ್ರಧಾನಿಯೆದುರೂ ತಮ್ಮ ಬೇಡಿಕೆಯೊಂದಿಗೆ ಹೋರಾಟ ಮುಂದುವರೆಸುತ್ತಲೇ ಬಂದ ಇಂದರ್‍ಜಿತ್‍ಗೆ ಕೊನೆಗೂ ದೇಶಕಾಯುವ ಯೋಧರಿಗೆ ನ್ಯಾಯ ಒದಗಿಸಿದ ನೆಮ್ಮದಿ ದೊರೆತಂತಾಗಿದೆ.

ಒಆರ್‍ಒಪಿ ಎಂದರೆ..
ನಿವೃತ್ತಿಯ ದಿನ ಗಣನೆಗೆ ತೆಗೆದುಕೊಳ್ಳದೆ ಸಮಾನ ಅವಧಿಯ ಸೇವೆ ಮತ್ತು ಸಮಾನ ಶ್ರೇಣಿಯಿಂದ ನಿವೃತ್ತರಾಗುವ ಸೇನಾ ಸಿಬ್ಬಂದಿಗೆ ಸಮಾನ ಪಿಂಚಣಿ ನಿಗದಿ ಮಾಡಬೇಕು ಎಂಬುದು ಸಮಾನ ಹುದ್ದೆ ಸಮಾನ ಪಿಂಚಣಿ ವಾದದ ಹಿಂದಿನ ತರ್ಕ. ಪಿಂಚಣಿ ಮೊತ್ತವನ್ನು ಅವರ ಅಂತಿಮ ವೇತನಕ್ಕನುಗುಣವಾಗಿ ನಿರ್ಧರಿಸಲಾಗುತ್ತಿದೆ. ಅಂದರೆ, 2005ರಲ್ಲಿ ನಿವೃತ್ತಿಯಾದ ಸೇನಾ ಅಧಿಕಾರಿಯೊಬ್ಬರಿಗಿಂತ ಅದೇ ಶ್ರೇಣಿಯ 2015ರಲ್ಲಿ ನಿವೃತ್ತನಾಗುವ ಅಧಿಕಾರಿ ಹೆಚ್ಚು ಪಿಂಚಣಿ ಪಡೆಯುತ್ತಾನೆ; ಏಕೆಂದರೆ, ಈತನ ವೇತನ ಹಿಂದಿನದಕ್ಕಿಂತ ಹೆಚ್ಚಿರುತ್ತದೆ. ಸದ್ಯ ಭಾರತೀಯ ಸೇನೆಯಲ್ಲಿ 14 ಲಕ್ಷ ಸಿಬ್ಬಂದಿ ಸೇವೆಯಲ್ಲಿದ್ದು, ಪ್ರತಿ ತಿಂಗಳು 5 ಸಾವಿರ ಮಂದಿ ನಿವೃತ್ತರಾಗುತ್ತಿದ್ದಾರೆ. ಒಆರ್‍ಒಪಿ ಜಾರಿಯಿಂದ 24 ಲಕ್ಷ ಮಾಜಿ ಯೋಧರು ಹಾಗೂ 6.45 ಲಕ್ಷ ಮಾಜಿ ಯೋಧರ  ವಿಧವಾ ಪತ್ನಿಯರು ಯೋಜನೆಯ ಲಾಭ ಪಡೆಯಲಿದ್ದಾರೆ.

ಸಮಾನತೆಯ ಕೂಗು

ಸರ್ಕಾರಿ ನಾಗರಿಕ ಸೇವೆಯಲ್ಲಿನ ನೌಕರರು ನಾಗರಿಕ ಸೇವಾ ನಿಯಮದ ವ್ಯಾಪ್ತಿಯಡಿ ಬರುತ್ತಿದ್ದು, ಅವರಿಗೆ ನಾನ್ ಫಂಕ್ಷನಲ್  ಅಪ್‍ಗ್ರೇಡ್(ಎನ್‍ಎಫ್) ಪ್ರಯೋಜನಕ್ಕೆ ಅರ್ಹರಾಗಿರುತ್ತಾ ರೆ. ಎನ್‍ಎಫ್ ಯುನಡಿ ಒಂದು ನಿರ್ದಿಷ್ಟ ತಂಡ(ಬ್ಯಾಚ್)ದ ಎಲ್ಲಾ ಅಧಿಕಾರಿಗಳೂ ಕೆಲವು ನಿರ್ದಿಷ್ಟ ವರ್ಷಗಳ ಸೇವೆಯ ಬಳಿಕ, ಅಧಿಕ ಬಡ್ತಿ ಮೂಲಕ ಆಯಾ ತಂಡದ ಅತಿ ಉನ್ನತ ದರ್ಜೆಗೇರಿದ ಅಧಿಕಾರಿಯ ಸಮಾನ ವೇತನ ಪಡೆಯಲು ಅರ್ಹರಾಗುತ್ತಾರೆ. ಇತರ ಕಾರಣಗಳಿಂದಾಗಿ ಬಡ್ತಿಯಿಂದ ವಂಚಿತರಾಗುವ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯದಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಎನ್ ಎಫ್ ಯು ವ್ಯವಸ್ಥೆ ಜಾರಿಯಲ್ಲಿದೆ. ಪ್ರತಿ ತಂಡದಲ್ಲೂ ಯಾರಾದರೊಬ್ಬರು ಅತ್ಯುನ್ನತ ದರ್ಜೆಗೇರುವುದು ಸಾಧ್ಯವಿರುವುದರಿಂದ ಆ ತಂಡದ ಉಳಿದ ಅಧಿಕಾರಿಗಳೂ ಬಡ್ತಿಯ ಹೊರತಾಗಿಯೂ ಅತ್ಯುತ್ತಮ ವೇತನಕ್ಕೆ ಅರ್ಹರಾಗುತ್ತಾರೆ. ಆದರೆ, ಸೇನೆಯಲ್ಲಿ ಈ ವ್ಯವಸ್ಥೆ ಜಾರಿಯಲಿಲ್ಲ.

ಬಜೆಟ್ ಚಿತ್ರಣ

ಭಾರತ ಸರ್ಕಾರ ತನ್ನ ಬಜೆಟ್‍ನಲ್ಲಿ ಸದ್ಯ ಸೇನಾ ಸಿಬ್ಬಂದಿಯ ನಿವೃತ್ತಿ ವೇತನಕ್ಕಾಗಿ ರೂ. 54,500 ಕೋಟಿ ತೆಗೆದಿರಿಸಿದೆ. ಆ ಪೈಕಿ ರೂ. 32 ಸಾವಿರ ಕೋಟಿ ಸೇನಾ ಸಿಬ್ಬಂದಿಯೇತರ ನಾಗರಿಕ ಸೇವೆಯರ ಪಿಂಚಣಿಗೆ ಹೋದರೆ, ಉಳಿದ ಮೊತ್ತ ಸೇನಾ ಯೋಧರ ನಿವೃತ್ತಿ ವೇತನಕ್ಕೆ ಬಳಕೆಯಾಗುತ್ತದೆ. ಸೇನಾ ಸಿಬ್ಬಂದಿ ವೇತನ ನಾಗರಿಕ ಸೇವೆಯವರು ನಾಗರಿಕ ಸೇವಾ ನಿಯಮದಡಿ ಬರುವುದರಿಂದ ಅವರಿಗೆ ಎನ್ ಎಫ್ ಯು ಸೌಲಭ್ಯ ಲಭ್ಯವಿದೆ. ಆದರೆ, ಈ ಸೌಲಭ್ಯ ಸೇನಾ ಸಿಬ್ಬಂದಿಗೆ ದೊರೆಯುವುದಿಲ್ಲ.

ಒಆರ್‍ಒಪಿ ಜಾರಿ ವೆಚ್ಚ

ರಕ್ಷಣಾ ಸಚಿವಾಲಯ, ಸೇನಾಪಡೆಗಳ ಮುಖ್ಯಸ್ಥರು, ರಕ್ಷಣಾ ಮಹಾಲೆಕ್ಕಪಾಲರು ನಿರ್ಧರಿಸಿರುವ ಸೂತ್ರದ ಪ್ರಕಾರ; 2013-14ನ್ನು ಮೂಲ ವರ್ಷವಾಗಿ ಪರಿಗಣಿಸಿದರೆ, ಎರಡು ವರ್ಷಗಳ ಅವಧಿಗೆ ಒಆರ್‍ಒಪಿ ವೆಚ್ಚ ವಾರ್ಷಿಕ ರೂ. 8,293 ಕೋಟಿ ಆಗಲಿದೆ. ಇದೇ ಸೂತ್ರದ ಪ್ರಕಾರ, ಮುಂದಿನ ವರ್ಷಗಳಿಗೆ ಒಆರ್ ಒಪಿ ವೆಚ್ಚ ವಿವರ ಇಂತಿದೆ. ಮೊದಲ ವರ್ಷ ರೂ. 8,293 ಕೋಟಿಯ ಶೇ.0.86, ಅಂದರೆ; ಸುಮಾರು ರೂ.71 ಕೋಟಿ, ಎರಡನೇ ವರ್ಷಕ್ಕೆ ಶೇ.0.6 ಅಥವಾ ರೂ. 49.7 ಕೋಟಿ, ಮೂರನೇ ವರ್ಷಕ್ಕೆ ಶೇ.0.4 ಅಥವಾ ರೂ. 33 ಕೋಟಿ, ನಾಲ್ಕನೇ ವರ್ಷಕ್ಕೆ ಶೇ.0.23 ಅಥವಾ ರೂ. 19 ಕೋಟಿ ಆಗಲಿದೆ. ಐದರಿಂದ ಹತ್ತು ವರ್ಷದ ಅವಧಿಗೆ ವೇತನ ಸಮಾನತೆ ಗುರಿ ಮುಟ್ಟುವುದರಿಂದ ಆ ಅವಧಿಗೆ ಯಾವುದೇ ಹೆಚ್ಚುವರಿ ವೆಚ್ಚವಿರುವುದಿಲ್ಲ. ಹತ್ತನೇ ವರ್ಷದ ಹೊತ್ತಿಗೆ ಹೊಸ ವೇತನ ಆಯೋಗ ಅಸ್ತಿತ್ವಕ್ಕೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com