
ಬ್ರಹ್ಮಾಂಡ ಸೃಷ್ಟಿ ಎಂಬ ವಿಚಾರ ಇಂದಿಗೂ ಪ್ರಪಂಚ ಬಹುತೇಕ ಪ್ರಪಂಚದ ಖ್ಯಾತ ನಾಮ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿರುವ ಒಂದು ನಿಗೂಢ ವಿಚಾರ. ಹಲವು ವಿಜ್ಞಾನಿಗಳು ತಮ್ಮದೇ ಆದ ಶೈಲಿಯಲ್ಲಿ ಬ್ರಹ್ಮಾಂಡ ಸೃಷ್ಟಿ ಕುರಿತು ಹಲವು ವ್ಯಾಖ್ಯಾನಗಳನ್ನು ನೀಡಿದ್ದರಾದರೂ ನಿಖರ ಕಾರಣ ಮಾತ್ರ ಈ ವರೆಗೂ ತಿಳಿದಿಲ್ಲ.
ಅಮೆರಿಕ, ಜಪಾನ್, ರಷ್ಯಾ, ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇದೊಂದು ಉತ್ತರಕ್ಕಾಗಿ ದಶಕಗಳಿಂದ ಪ್ರಯತ್ನಿಸುತ್ತಿವೆಯಾದರೂ ನಿರ್ದಿಷ್ಠ ಪ್ರತಿಫಲ ದೊರೆತಿಲ್ಲ. ಆಧುನಿಕ ಖಗೋಳ ವಿಜ್ಞಾನಿಗಳು ಬ್ರಹ್ಮಾಂಡದ ಸೃಷ್ಟಿ ಮತ್ತು ಮಹಾಸ್ಪೋಟದ ಆ ಸಂದರ್ಭದಲ್ಲಿ ಸಂಭವಿಸಿದ ವಿದ್ಯಮಾನ, ಆಗ ಹೊರಚೆಲ್ಲಿದ ವಿಕಿರಣ, ಕ್ಷಕಿರಣಗಳು ಧೂಳು, ರಾಸಾಯನಿಕಗಳು, ಅನಿಲಗಳು, ಆಕಾಶಕಾಯಗಳು, ಗ್ರಹ, ನಕ್ಷತ್ರಗಳ ಜಾಡನ್ನು ಹಿಡಿದು ತಮ್ಮ ಸಂಶೋಧನೆ ನಡೆಸುತ್ತಿದ್ದಾರೆ.
ಭೂಮಿ ಮತ್ತು ಅದರಲ್ಲಿನ ಜೀವಿಗಳ ಉಗಮಕ್ಕೆ ಎಲ್ಲಾದರೊಂದು ನಿಖರ ಕಾರಣ ಸಿಗಬಹುದೇ ಎಂಬುದು ವಿಜ್ಞಾನಿಗಳ ಕಾತರ. ಕೆಲ ನಿರ್ದಿಷ್ಟ ಆಮ್ಲಗಳು ಮತ್ತು ರಾಸಾಯನಿಕಗಳು ಭೂಮಿಯಲ್ಲಿ ಏಕಾಣು ಜೀವಿಯ ಹುಟ್ಟಿಗೆ ಕಾರಣ ಎಂಬುದು ಕೆಲ ವಿಜ್ಞಾನಿಗಳ ತರ್ಕ. ಹೀಗೆ ಸೃಷ್ಟಿಯ, ಜೀವಿಗಳ ಉಗಮದ ಜಾಡು ಹಿಡಿದು ಹೊರಟ ಖಗೋಳ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಎಷ್ಟೋ ವಿಸ್ಮಯಗಳು, ವಿದ್ಯಮಾನಗಳು ಜರುಗುವುದನ್ನು ಕಂಡು ಬೆರಗಾಗಿದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳು ಈ ಬಗ್ಗೆ ಅಧ್ಯಯನಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ವ್ಯಯಿಸುತ್ತಲೇ ಇವೆ. ಅಂತರಿಕ್ಷದಲ್ಲಿ ಇಂತಹ ವಿದ್ಯಮಾನಗಳ ಬಗ್ಗೆ ಕಣ್ಣಿಟ್ಟು ಗಮನಿಸಲು ಅತ್ಯಂತ ಶಕ್ತಿಶಾಲಿ ಕ್ಯಾಮೆರಾಗಳನ್ನು ಹೊತ್ತ ಉಪಗ್ರಹಗಳನ್ನು ಬಹುತೇಕ ಹಾರಿ ಬಿಟ್ಟಿರುವುದು ಅಮೆರಿಕದ ನಾಸಾ. ಜಪಾನ್ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ನಾಸಾ ನೆರವಿನಿಂದ ಬಾಹ್ಯಾಕಾಶ ವೀಕ್ಷಣಾ ಉಪಗ್ರಹಗಳನ್ನು ಹಾರಿಬಿಟ್ಟಿವೆ.
ಭಾರತ ಕೂಡ ಇಂತಹ ಮಾಹಿತಿಗಳಿಗಾಗಿ ವಿವಿಧ ದೇಶಗಳೊಂದಿಗೆ ಕೈ ಜೋಡಿಸಿದ್ದು, ಪ್ರಸ್ತುತ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅಷ್ಟೂ ಮಾಹಿತಿಗಳು ಸದ್ಯಕ್ಕೆ ಸಿಗುತ್ತಿರುವುದು ಮಾತ್ರ ನಾಸಾ ಮತ್ತು ಇತರೆ ಬಾಹ್ಯಾಕಾಶ ಸಂಸ್ಥೆಗಳ ಮೂಲಗಳಿಂದ. ಆದರೆ ಭಾರತ ಇದೀಗ ತನ್ನದೇ ಆದ ಸ್ವದೇಶಿ ನಿರ್ಮಿತ ಉಪಗ್ರಹವನ್ನು ನಭಕ್ಕೆ ಹಾರಿಸಿದ್ದು, ಆ ಮೂಲಕ ಬಾಹ್ಯಾಕಾಶ ವೀಕ್ಷಣಾ ಉಪಗ್ರಹಗಳ ಹಾರಿಬಿಟ್ಟ ದೇಶಗಳ ಪಟ್ಟಿಗೆ ಭಾರತ ಸೇರಿದೆ.
ಆಸ್ಟ್ರೋಸ್ಯಾಟ್ ಎಂಬ ಮೈಲಿಗಲ್ಲು
ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇಸ್ರೋ ಚಂದ್ರಯಾನ ಮತ್ತು ಮಂಗಳಯಾನ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಪ್ರಮುಖ ಯೋಜನೆಗೆ ಕೈ ಹಾಕಿದೆ. ಇದೇ ಆಸ್ಟ್ರೋಸ್ಯಾಟ್. ಆಸ್ಟ್ರೋಸ್ಯಾಟ್ ಮೂಲಕ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ. ಆಸ್ಟ್ರೋಸ್ಯಾಟ್ ಬಾಹ್ಯಾಕಾಶದಲ್ಲಿನ ವಿಸ್ಮಯಕಾರಿ ವಿದ್ಯಮಾನಗಳ ಮೇಲೆ ಕಣ್ಣಿಟ್ಟು ವೈಜ್ಞಾನಿಕ ಸಂಶೋಧನೆಗೆ ನೆರವಾಗುವ ಮಾಹಿತಿಗಳು ಮತ್ತು ಚಿತ್ರಗಳನ್ನು ನೀಡಲಿದೆ. ಬ್ರಹ್ಮಾಂಡದ ಮೂಲ ಸ್ವಭಾವ, ಅಲ್ಲಿನ ವಿಕಿರಣ ಪ್ರಕ್ರಿಯೆ ಮತ್ತು ಪರಿಸರ, ವಿಶಾಲ ಹರವಿನ ವಿದ್ಯುತ್ ಅಯಸ್ಕಾಂತೀಯ ಕ್ಷೇತ್ರ (ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ದಿಂದ ಹೊರಚಿಮ್ಮುವ ಕಿರಣಗಳನ್ನು ಮಾಪನ ಮಾಡುವುದು) ಹೀಗೆ ಹತ್ತು ಹಲವು ಮಾಹಿತಿಗಳನ್ನು ಕಲೆಹಾಕುವುದು ಈ ಉಪಗ್ರಹದ ಮುಖ್ಯ ಕೆಲಸ.
ಆಸ್ಟ್ರೋಸ್ಯಾಟ್ ವಿಶೇಷ
ಬಾಹ್ಯಾಕಾಶದ ಕಾಂತೀಯ ತೀವ್ರತೆ ಕಾಲದಿಂದ ಕಾಲಕ್ಕೆ ಭಿನ್ನವಾಗುತ್ತಲೇ ಇರುತ್ತದೆ. ಈ ವ್ಯತ್ಯಾಸ ತರಂಗಾಂತರವನ್ನು ಆಧರಿಸಿರುತ್ತದೆ. ಏಕಕಾಲದಲ್ಲಿ ಇವೆಲ್ಲವುಗಳ ಮೇಲೆ ನಿಗಾ ಇಡಬೇಕಾದರೆ, ವಿಭಿನ್ನ ವೇವ್ಬ್ಯಾಂಡ್ನಿಂದ ಮಾತ್ರ ಸಾಧ್ಯ. ಪ್ರಸ್ತುತ ಜಗತ್ತಿನ ಖಗೋಳ ವೀಕ್ಷಣಾಲಯಗಳು ನಿರ್ದಿಷ್ಟ ವೇವ್ಬ್ಯಾಂಡ್ಗಳಿಗಷ್ಟೇ ಸೀಮಿತವಾಗಿವೆ. ಉದಾಹರಣೆಗೆ ಎಕ್ಸ್ರೇ, ಯುವಿ ಇತ್ಯಾದಿ. ಸಾಮಾನ್ಯವಾಗಿ, ಬಹುತರಂಗಾಂತರ ಅಧ್ಯಯನಗಳನ್ನು ವಿವಿಧ ಉಪಗ್ರಹಗಳ ಸಂಯೋಜಿತ ವೀಕ್ಷಣೆಯಿಂದ ನಡೆಸಲಾಗುತ್ತದೆ. ಇದು ನಿಜಕ್ಕೂ ಕಷ್ಟದ ಕೆಲಸ. ಆದರೆ, ಆಸ್ಟ್ರೋಸ್ಯಾಟ್ನಲ್ಲಿ ಎಲ್ಲ ಕೆಲಸಗಳನ್ನು ಒಟ್ಟಿಗೇ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ, ಈ ಕಾರ್ಯಕ್ಕೆಂದೇ ನಿಯೋಜಿಸಲ್ಪಟ್ಟ ಬಹು ಸಂಯೋಜಿತ ಸಾಧನಗಳಿವೆ.
ಎಲ್ಲ ಉಪಕರಣಗಳು ಖಗೋಳ ವಿಜ್ಞಾನಿಗಳ ಅಪೇಕ್ಷೆಗೆ ತಕ್ಕಂತೆ ವೇವ್ಬ್ಯಾಂಡ್ಗಳಲ್ಲಿ ಕಾರ್ಯ ನಿರ್ವಹಿಸಬಲ್ಲವು. ಇದರ ಉಪಕರಣಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ವಿಶೇಷ. ಆಸ್ಟ್ರೋಸ್ಯಾಟ್ ಮೂಲಕ ಭಾರತೀಯ ಖಗೋಳ ವಿಜ್ಞಾನಿಗಳು ನಕ್ಷತ್ರ ಲೋಕದ ಅಧ್ಯಯನ ನಡೆಸಲಿದ್ದಾರೆ. ಉಪಗ್ರಹ ತನ್ನ ಕಕ್ಷೆಯಲ್ಲಿ ಸುತ್ತುತ್ತಲೇ ಭೂಮಿಗೆ ಸಮೀಪದ ಆಕಾಶಗಂಗೆಯಲ್ಲಿ ನಕ್ಷತ್ರಗಳ ರಚನೆ ಹೇಗಾಯಿತು? ಆಕಾಶಗಂಗೆಯಲ್ಲಿ ಪರಸ್ಪರ ಪ್ರಭಾವಕ ನಕ್ಷತ್ರಗಳ ರಚನೆ ಮತ್ತು ಹುಟ್ಟು ಹೇಗಾಯಿತು? ಗೋಳಾಕೃತಿಯ ನಕ್ಷತ್ರ ಸಮುಚ್ಚಯದಲ್ಲಿರುವ ಬಿಸಿ ನಕ್ಷತ್ರ, ತಾರಾ ಸಮೂಹದ ಮೋಡಗಳ ಬಗ್ಗೆಯೂ ಚಿತ್ರ ಸಮೇತ ಮಾಹಿತಿ ಸಂಗ್ರಹಿಸುತ್ತಲೇ ಭೂಮಿಗೆ ರವಾನಿಸುತ್ತದೆ.
ಪ್ರಯೋಜನವೇನು?
ಆಸ್ಟ್ರೋಸ್ಯಾಟ್ ಸೃಷ್ಟಿಯ ರಹಸ್ಯದ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಮುಂದಾಗಿದೆ. ಇದು ಭಾರತದ ಖಗೋಳವಿಜ್ಞಾನದಲ್ಲಿ ಮೈಲಿಗಲ್ಲು. ನಾಸಾ ಮತ್ತು ಯುರೋಪಿಯನ್ ದೇಶಗಳು ಇದನ್ನು ಮಾಡಿರಬಹುದು, ಆದರೆ, ಭಾರತೀಯ ಖಗೋಳ ವಿಜ್ಞಾನಿಗಳು ಇದರಿಂದ ಬ್ರಹ್ಮಾಂಡವನ್ನು ಹೊಸದೃಷ್ಟಿಕೋನದಲ್ಲಿ ನೋಡಲು, ಹೊಸ ಹೊಳಹುಗಳನ್ನು ನೀಡಲು ಸಾಧ್ಯವಿದೆ. ಚಂದ್ರನಲ್ಲಿ ಜಲನಿಕ್ಷೇಪ ಇದೆ ಎಂಬುದನ್ನು ಚಂದ್ರಯಾನ-1 ಪತ್ತೆಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
Advertisement