ಹಾಯಿದೋಣಿಯ ಅಂಬಿಗನ ವಿಶ್ವಮಾನವ ಕನಸಿಗೆ ವರ್ಣವ್ಯಾಧಿ

ಇಲ್ಲಿ ಮೂಡಿರುವ ಪದಗಳಿಗೆ ಯಾವುದೋ ದಿವ್ಯ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ...
ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ
ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ

ಇಲ್ಲಿ ಮೂಡಿರುವ ಪದಗಳಿಗೆ ಯಾವುದೋ ದಿವ್ಯ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ. ಆದರೆ ಒಡಲಾಳದಲ್ಲೆಲ್ಲೋ ಸದಾಶಯವೊಂದರ ವ್ಯರ್ಥ ಆಧಾರ ಇದೆ ಎನ್ನುವುದನ್ನು ನಿರಾಕರಿಸುವುದಕ್ಕೆ ಸ್ವಲ್ಪ ಕಷ್ಟ ಅನಿಸುತ್ತದೆ.

ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕøತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕøತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕøತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕøತಿಯ ಉತ್ಕøಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.

ಇಂತಹ ಶರಣ ಸಂಸ್ಕøತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ  ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕøತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.

“ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ”

“ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ”

“ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ”

“ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು
ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ನೋಡಿರೆಂದನಮ್ಮಂಬಿಗರ ಚೌಡಯ್ಯ”

“ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು!
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ!
ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ”

ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು  ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ  ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.

ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು ಅಂಬಿಗರ  ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ  ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ  ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಸ್ವಾರ್ಥ ರೀತಿಯಲ್ಲಿ ಹೋರಾಡಿ  ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ  ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ,  ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕøತಿಯ ವೈಫಲ್ಯದ ಒಂದು ಪಾಶ್ರ್ವವನ್ನು  ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ. 

ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು.  ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತ:ಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ  ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ  ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕøತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.

ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲಾ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ. ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕøತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.

1. ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.

ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ 1968ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ  ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಬೇಧಗಳು ಚೌಡಯ್ಯನ  ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ. ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.

ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.

2. ಕಳೆದ ಎಂಟು ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅಂಬಿಗರ ಚೌಡಯ್ಯನ ಪೀಠ ಸ್ಥಾಪನೆಯಾಗಿದೆ. ಸರ್ಕಾರ ನೀಡಿದ ಎರಡು ಕೋಟಿ ಅನುದಾನದಲ್ಲಿ ಒಂದೂವರೆ ಕೋಟಿಯಷ್ಟು ಹಣವನ್ನು ಸ್ಮಾರಕ ಭವನ ನಿರ್ಮಿಸಿ ಅದರೊಳಗೆ ಮೌನ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಉಳಿದ ಐವತ್ತು ಲಕ್ಷವನ್ನು ಬ್ಯಾಂಕಿನಲ್ಲಿ ಸ್ಥಿರಠೇವಣಿ ಇಟ್ಟು ಅದರಿಂದ ಬರುವ ಸಣ್ಣ ಮೊತ್ತದ ಬಡ್ಡಿಯ ಮೂಲಕ ವರ್ಷಕ್ಕೊಮ್ಮೆ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಆಗಾಗ್ಗೆ ಒಂದೆರಡು ವಿಚಾರ ಸಂಕಿರಣಗಳನ್ನೂ ನಡೆಸಿ ಖರ್ಚು ಭರಿಸುವ ಶಾಸ್ತ್ರ ಮಾಡಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ದೈನಂದಿನ ಪಾಠ ಮಾಡಲೂ ಲಭ್ಯವಿಲ್ಲದ ಹಾಗಿರುವ ಪ್ರೊಫೆಸರ್‍ಗಳ ಕೊರತೆ ಪೀಠ ನಿರ್ವಹಣೆಗೂ ವ್ಯಾಪಿಸಿದೆ. ಆ ಸ್ಥಳಕ್ಕೆ ಆಗಾಗ್ಗೆ ಎಡತಾಕುವ ಅಂಬಿಗರ ಚೌಡಯ್ಯನ ‘ಸಮಾಜ’ದ ವ್ಯಕ್ತಿಗಳು ತಮ್ಮ ಜಾತಿಯವರನ್ನೇ ಪೀಠದ ನಿರ್ದೇಶಕರನಾಗಿ ಮಾಡಬೇಕೆಂದು ಆಗ್ರಹಿಸುತ್ತಾರೆ. ಅಲ್ಲಿರುವ ಪ್ರತಿಕೂಲ ಪರಿಸ್ಥಿತಿಯ ಕಾರಣ ಉತ್ತರ ದೊರಕದೇ ಇನ್ನೊಮ್ಮೆ ಬರುತ್ತೇವೆಂದು ಗಡುವು ನೀಡಿ ಹೋಗುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಂಬಿಗರ ಚೌಡಯ್ಯನ ಪೀಠ 2012ರಿಂದ ಇದ್ದು ಅಲ್ಲಿಯೂ ಪರಿಸ್ಥಿತಿ ಭಿನ್ನವಿಲ್ಲ. ವಿಚಾರ ಸಂಕಿರಣ, ಜಯಂತಿಗಳನ್ನು ಹೊರತು ಪಡಿಸಿದರೆ ಚೌಡಯ್ಯನ ತತ್ವ, ಜೀವನ, ಸಿದ್ಧಾಂತಗಳನ್ನು,  ಜನಸಾಮಾನ್ಯರ ಮನಸ್ಸುಗಳಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನಗಳೇನೂ ಆಗಿಲ್ಲ. ಒಂದು ಪುಸ್ತಕ  ಪ್ರಕಟವಾಗಿದ್ದರೂ ಸಾಮಾನ್ಯ ಜನರ ಮನಸ್ಸುಗಳನ್ನೂ ಹೇಗೆ ಮುಟ್ಟಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಂಬಿಗರ ಚೌಡಯ್ಯನ ಮತಸ್ಥರೆನ್ನುವ ಮೊಗವೀರರು ಈ ಪೀಠದ ಕಾರಣ ಎಷ್ಟು ಲಾಭ ಪಡೆದಿದ್ದಾರೆ? ತಿಳಿಯುವುದಿಲ್ಲ. ಅಲ್ಲಿಗೂ ಸರ್ಕಾರ ನೀಡಿರುವ ಐವತ್ತೇ ಲಕ್ಷದ ಅನುದಾನದಲ್ಲಿ ಬೇರೇನಾದರೂ ಹೇಗೆ ಮಾಡಲು ಸಾಧ್ಯ?

ಅಂಬಿಗರ ಚೌಡಯ್ಯ ನಮ್ಮನ್ನು ಬಿಟ್ಟೂ ಬಿಡದೇ, ಶಿಲುಬೆಯೇರಿದ ಏಸುಕ್ರಿಸ್ತನನ್ನು ನೆನಪಿಸುತ್ತಾನೆ. ಒಂಟಿಯಾಗಿ ನಡೆದು ಹೋದ ಬುದ್ಧನನ್ನೂ ಜ್ಞಾಪಿಸುತ್ತಾನೆ. ಏಸು ಕ್ರಿಸ್ತ ಯಹೂದಿಯಾಗಿಯೇ ಶಿಲುಬೆಗೇರಿದ. ತದನಂತರ ಕ್ರೈಸ್ತಧರ್ಮ ಉದಯವಾಯಿತು. ಗೌತಮ ಬುದ್ಧ ಸಾಗಿಹೋದ ಬಳಿಕವೇ ಬೌದ್ಧ ಧರ್ಮ ಚಿಗುರೊಡೆಯಿತು. ಅವರಿಬ್ಬರಿಗೂ,  ಮಾನವಪ್ರೀತಿಯ ಹೊರತು ಹೊಸದೊಂದು ಧರ್ಮ ಸ್ಥಾಪನೆಯ ಕನಸಿರಲಿಲ್ಲ. ಅಂಬಿಗರ ಚೌಡಯ್ಯನೂ ಸನಾತನ ಧರ್ಮದ  ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು  ನಿರಾಕರಿಸಿದ. ತನ್ನದೇ ರೀತಿಯಲ್ಲಿ ವಿಶ್ವ ಮಾನವತಾವಾದವನ್ನು  ಪ್ರತಿಪಾದಿಸಿ ಸಾಗಿಹೋದ. ಆದರೆ, ಆತನ ಆತ್ಮವನ್ನು ಇಂದು ಜಾತಿಯ  ಸಂಕೋಲೆಗಳಿಂದ ಬಿಗಿದು ಬಂಧಿಸಲಾಗಿದೆ. ಮಗ್ಗುಲು ಬದಲಿಸಲು ಆತನ ಚೇತನ ಇನ್ನೆಷ್ಟು ದಿನ ಕಾಯಬೇಕೋ?  

ಕುವೆಂಪುರವರು “ಭಾರತೀಯತೆಯ ಹೆಸರಿನಲ್ಲಿ ಎಲ್ಲಾ ಜಾತಿ ಮತಗಳನ್ನು ಉಳಿಸಿಕೊಳ್ಳುವುದಾದರೆ ಅಂತಹ ಭಾರತೀಯತೆ ಎಂದಿಗೂ ಪ್ರಸ್ತುತವಾಗುವುದಿಲ್ಲ. ವಿಶ್ವಮಾನವ ತತ್ವದ ಹೊರತು ಬದುಕಿಗೆ ಬೇರೆ ಯಾವುದೇ ಪರ್ಯಾಯವಿಲ್ಲ” ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಸ್ತುತತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೇ ಎನ್ನುವ ಪ್ರಶ್ನೆಗೆ ಮನಸ್ಸು ಮೌನವನ್ನು ಮುರಿಯುವುದಿಲ್ಲ.

ಅಂದಹಾಗೆ ಅಂಬಿಗರ ಚೌಡಯ್ಯನ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಜನವರಿ 21ರಂದು ಆಚರಿಸುತ್ತದೆ. ಅಂದು, ಚೌಡಯ್ಯನ ಸಮುದಾಯಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಬೇಕು, ಮತ್ತು ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗಲೇ ಸಮುದಾಯದ ಬೇಡಿಕೆಗಳಿಗೆ ಬಲ ದಕ್ಕುತ್ತದೆ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆತನ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಸಾಹಿತಿಗಳು ತಮ್ಮ ಮಾತುಗಳನ್ನು ಪುನರಾವರ್ತಿಸುತ್ತಾರೆ. ಜನಸಾಮಾನ್ಯರ ಬದುಕು ತುಂಗಭದ್ರೆಯ ತಿಳಿನೀರಿನಂತೆಯೇ ಎಲ್ಲವನ್ನೂ ಉಪೇಕ್ಷಿಸುತ್ತಾ, ಮರೆಯುತ್ತಾ ಮುಂದೆ ಸಾಗುತ್ತದೆ.

ನಿಜ, ಈ ಪದಗಳಿಗೆ ಯಾವುದೇ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ! ಮಥನವೊಂದಕ್ಕೆ ಮನಸ್ಸು ಆಸೆ ಪಡುವುದು ತಪ್ಪಾ? ತಪ್ಪು ಬಿಡಿ!

- ಫಣಿಕುಮಾರ್.ಟಿ.ಎಸ್
phani8474@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com