ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ಊರಲ್ಲಿ ಜನಗಳ ಹೆಸರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸ್ಯಾಮ್ ಸಂಗ್, ಆ್ಯಂಡ್ರಾಯ್ಡ್ ಇತ್ಯಾದಿ...!

ರಾಷ್ಟ್ರಪತಿ ಆಡುಗಳನ್ನು ಮೇಯಿಸಲು ಹೋಗಿದ್ದಾರೆ, ಪ್ರಧಾನ ಮಂತ್ರಿ ಮಾರ್ಕೆಟ್ ಗೆ...
ಬುಂಡಿ(ರಾಜಸ್ತಾನ):  ರಾಷ್ಟ್ರಪತಿ ಆಡುಗಳನ್ನು ಮೇಯಿಸಲು ಹೋಗಿದ್ದಾರೆ, ಪ್ರಧಾನ ಮಂತ್ರಿ ಮಾರ್ಕೆಟ್ ಗೆ ಸಾಮಾನು ತರೋದಿಕ್ಕೆ ಹೋಗಿದ್ದಾರೆ. ಸ್ಯಾಮ್ ಸಂಗ್, ಆಂಡ್ರೋಯ್ಡ್ ಅಜೀರ್ಣದಿಂದ ಬಳಲುತ್ತಿದ್ದು ವೈದ್ಯರು ಔಷಧಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. 
ಇದನ್ನೆಲ್ಲಾ ಕೇಳಿದರೆ ಏನಪ್ಪಾ ಇದು ಏನು ರಾಷ್ಟ್ರಪತಿ ಆಡು ಮೇಯ್ಸೊದಿಕ್ಕೆ ಹೋಗ್ತಾರಾ, ಪ್ರಧಾನ ಮಂತ್ರಿ ಮಾರ್ಕೆಟ್ ಗೆ ಹೋಗ್ತಾರ ಅಂತ ನಿಮಗೆ ಆಶ್ಚರ್ಯವುಂಟಾಗಬಹುದು, ಜೊತೆಗೆ ಗೊಂದಲ ಕೂಡ ಆಗಬಹುದು. 
ಇದು ಒಂದು ಊರಿನ ಜನರ ಹೆಸರುಗಳು. ದೇಶದ ಅತ್ಯುನ್ನತ ಹುದ್ದೆಗಳು, ಖ್ಯಾತನಾಮರ ಮತ್ತು ಪ್ರಖ್ಯಾತ ಕಂಪೆನಿಗಳ ಹೆಸರುಗಳನ್ನು ಇಲ್ಲಿ ಜನರಿಗೆ ಇಡುತ್ತಾರೆ. ಸಿಮ್ ಕಾರ್ಡು, ಚಿಪ್, ಜಿಯೊನಿ, ಮಿಸ್ ಕಾಲ್, ರಾಜ್ಯಪಾಲ, ಹೈಕೋರ್ಟ್ ಇತ್ಯಾದಿ ಹೆಸರುಗಳೂ ಮನುಷ್ಯರಿಗಿವೆ.
ರಾಜಸ್ತಾನದ ಬುಂಡಿ ಜಿಲ್ಲೆಯಿಂದ 10 ಕಿಲೋ ಮೀಟರ್ ದೂರದಲ್ಲಿ ರಾಮ್ ನಗರ ಎಂಬ ಗ್ರಾಮವಿದೆ. ಇಲ್ಲಿನ ಜನಸಂಖ್ಯೆ ಸುಮಾರು 500. ಕಂಜಾರ ಸಮುದಾಯದ ಜನರು ಇರುವ ಈ ಊರಿನಲ್ಲಿ ಜನರಿಗೆ ದೇಶದ ಉನ್ನತ ಹುದ್ದೆಗಳು, ಖ್ಯಾತನಾಮರು, ಪ್ರಮುಖ ಕಟ್ಟಡಗಳು, ವಸ್ತುಗಳು, ಕಂಪೆನಿಗಳ ಹೆಸರುಗಳನ್ನು ಇಡುತ್ತಾರೆ.
ಈ ಗ್ರಾಮದ ಬಹುಪಾಲು ಮಂದಿ ಅನಕ್ಷರಸ್ಥರು. ಆದರೆ ಅವರ ಹೆಸರುಗಳು ಅದಕ್ಕೆ ವಿರುದ್ದವಾಗಿರುತ್ತದೆ. ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯ ವ್ಯಕ್ತಿತ್ವದಿಂದ ಪ್ರಭಾವಿತರಾದ ಇಳಿ ವಯಸ್ಸಿನ ಮಹಿಳೆಯೊಬ್ಬರು ತಮ್ಮ ಮೊಮ್ಮಗನಿಗೆ ಕಲೆಕ್ಟರ್ ಎಂದು ಹೆಸರಿಟ್ಟರು. ಆದರೆ ಆ ಮೊಮ್ಮಗ ಎಂದಿಗೂ ಶಾಲೆಗೆ ಹೋಗಲೇ ಇಲ್ಲ. ಈಗ ಅವರ ವಯಸ್ಸು 50.
ಇಲ್ಲಿನ ಜನರು ಹಲವು ಬಾರಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಎಂದು ಹೋಗುತ್ತಿರುತ್ತಾರೆ. ಆಗ ಅಲ್ಲಿನ ಅಧಿಕಾರಿಗಳನ್ನು ಕಂಡು ಅವರ ಹುದ್ದೆ, ಉದ್ಯೋಗಗಳನ್ನು ಇಷ್ಟಪಟ್ಟು ತಮ್ಮ ಮಕ್ಕಳಿಗೆ ಐಜಿ, ಎಸ್ ಪಿ, ಹವಲ್ದಾರ್, ಮ್ಯಾಜಿಸ್ಟ್ರೇಟ್ ಇತ್ಯಾದಿ ಹೆಸರುಗಳನ್ನಿಡುತ್ತಾರೆ ಎನ್ನುತ್ತಾರೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು.
ಗ್ರಾಮದ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿಯವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಮಕ್ಕಳಿಗೆ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಎಂದು ಹೆಸರಿಟ್ಟಿದ್ದಾರೆ.ಗ್ರಾಮದ ಒಬ್ಬ ವಿಶೇಷ ಚೇತನ ವ್ಯಕ್ತಿಯ ಹೆಸರು ಹೈಕೋರ್ಟ್ ಎಂದು. ಈತನ ಜನ್ಮದ ಸಮಯದಲ್ಲಿ ಅವನ ತಾತನಿಗೆ ಅಪರಾಧ ಪ್ರಕರಣವೊಂದರಲ್ಲಿ ಜಾಮೀನು ಸಿಕ್ಕಿತ್ತು. ಹೀಗಾಗಿ ಹೈಕೋರ್ಟ್ ಎಂಬ ಹೆಸರನ್ನಿಡಲಾಯಿತು.
ಬುಂಡಿ ಜಿಲ್ಲೆಯ ನೈನ್ವಾ ಪ್ರಾಂತ್ಯದ ಮೊಗ್ಗಿಯಾ ಮತ್ತು ಬಂಜಾರಾ ಸಮುದಾಯದವರು ತಮ್ಮ ಮಕ್ಕಳಿಗೆ ಇಡುವ ಹೆಸರು ಹೆಚ್ಚಾಗಿ ಮೊಬೈಲ್ ಕಂಪೆನಿಗಳದ್ದು ಮತ್ತು ಉಪಕರಣಗಳದ್ದು. ನೊಕಿಯಾ, ಸ್ಯಾಮ್ ಸಂಗ್, ಸಿಮ್ ಕಾರ್ಡು,ಚಿಪ್, ಜಿಯೊನಿ ಮೊದಲಾದ ಹೆಸರುಗಳನ್ನು ಬರ್ಗಾನಿ, ಅರ್ನಿಯಾ, ಹನುಮಂತಪುರ, ಸುವಾಲಿಯಾ, ಸೆಸೊಲ ಗ್ರಾಮದಲ್ಲಿ ಕಾಣಬಹುದು ಎನ್ನುತ್ತಾರೆ ಹೆಸರು ದಾಖಲಾತಿ ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರ ರಮೇಶ್ ಚಂದ್ರ ರಾಥೋಡ್.
ಇನ್ನು ಅರ್ನಿಯಾ ಗ್ರಾಮದ ಮೀನಾ ಸಮುದಾಯದ ಜನರಿಗೆ ಇಡುವ ಹೆಸರು ಮತ್ತಷ್ಟು ವಿಚಿತ್ರವಗಾದೆ. ತಿಂಡಿ ತಿನಿಸುಗಳ ಹೆಸರುಗಳು, ನಮ್ಕೀನ್, ಪೊಟೊಬಾಯ್, ಜೆಲೇಬಿ, ಮಿತೈ, ಫಲ್ಟು ಇತ್ಯಾದಿ. ನಾವು ಆರಂಭದಲ್ಲಿ ಹೆಸರು ದಾಖಲಾತಿ ಮಾಡಿಕೊಳ್ಳುವಾಗ ಆಶ್ಚರ್ಯಗೊಂಡೆವು.ಆದರೆ ಈಗ ಅಂತಹ ಹೆಸರುಗಳನ್ನು ಬರೆಯುವುದು ರೂಢಿಯಾಗಿಬಿಟ್ಟಿದೆ ಎನ್ನುತ್ತಾರೆ ರಾಥೋಡ್. 

Related Stories

No stories found.

Advertisement

X
Kannada Prabha
www.kannadaprabha.com