ಮೇಲೆ ಹೇಳಿದಂತೆ ಅಮೆರಿಕಾದಲ್ಲಿ ಜ್ಯೂಗಳು ಬಹುತೇಕ ವಿಷಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಂತೆಯೇ ಚುನಾವಣೆ ಸಂದರ್ಭದಲ್ಲಿ ಜ್ಯೂಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಟ್ರಂಪ್ ಗೆ ಅನಿವಾರ್ಯವಾಗಿ ಮಾರ್ಪಟ್ಟು ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಘೋಷಿಸುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಭರವಸೆಗಳಲ್ಲಿ ಪ್ರಮುಖ ಭರವಸೆಯಾಗಿತ್ತು. ಅಧ್ಯಕ್ಷರಾದ ನಂತರ ಆಡಳಿತ, ರಾಜಕೀಯ ವಲಯದಲ್ಲಿ ಟ್ರಂಪ್ ಗೆ ಎಡತಾಕುತ್ತಿದ್ದ ಜ್ಯೂಗಳಿಂದ ಜೆರುಸಲೇಮ್ ಕುರಿತ ನಿರ್ಣಯಕ್ಕೆ ಒತ್ತಡವೂ ಹೆಚ್ಚಿತ್ತು ಎಂದಿಟ್ಟುಕೊಳ್ಳಿ. ಈ ಹಿನ್ನೆಲೆಯಲ್ಲಿಯೇ ಅತ್ತ ಡೊನಾಲ್ಡ್ ಟ್ರಂಪ್ ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿ ಎಂದು ಘೋಷಣೆ ಮಾಡುವುದರ ಬಗ್ಗೆ ಮಾತನ್ನಾಡುತ್ತಿದ್ದಂತೆಯೇ ಫ್ರಾನ್ಸ್, ಸೌದಿ ಅರೇಬಿಯಾ, ಚೀನಾ ಆದಿಯಾಗಿ ಅಂತಾರಾಷ್ಟ್ರೀ ಸಮುದಾಯ ಎಚ್ಚರಿಕೆ ನೀಡಿತ್ತು. ಟ್ರಂಪ್ ಘೋಷಣೆಯಿಂದ ಎದುರಾಗಬಹುದಾಗಿದ್ದ ಉದ್ವಿಗ್ನತೆಯ ಮುನ್ಸೂಚನೆ ಅರಿತು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ "ಬುದ್ಧಿವಂತಿಕೆ ಮತ್ತು ವಿವೇಕ ಮೇಲುಗೈ ಸಾಧಿಸಲಿ" ಎಂದು ವಿಶ್ವ ನಾಯಕರಿಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಜೆರುಸಲೇಮ್ ನಲ್ಲಿದ್ದ ಅಮೆರಿಕದ ದೂತವಾಸ ಕಚೇರಿ ಸಹ ಅಮೆರಿಕದ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬದವರು ಜೆರುಸಲೇಮ್ ನ ಹಳೆಯ ನಗರ ಅಥವಾ ವೆಸ್ಟ್ ಬ್ಯಾಂಕ್ ಗೆ ತೆರಳದಂತೆ ನಿರ್ಬಂಧ ವಿಧಿಸಿ ಭದ್ರತೆ ಹೆಚ್ಚಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯಿಂದ ನಿರೀಕ್ಷಿತ ಮಟ್ಟದ ಪ್ರತಿಭಟನೆಗಳು, ಕೋಲಾಹಲವೇನೂ ಸಂಭವಿಸಲಿಲ್ಲ. ಜೆರುಸಲೇಮ್ ನ ಘೋಷಣೆಗೂ ಮುನ್ನವೇ ಹಲವು ಬಾರಿ ಟ್ರಂಪ್ ತಮ್ಮ ಆಡಳಿತ ನಿಸ್ಸಂದಿಗ್ಧವಾಗಿ ತಾನು ಇಸ್ರೇಲ್ ನೊಂದಿಗೆ ಇದ್ದೇನೆ ಎಂಬ ದೃಷ್ಟಿಕೋನವನ್ನು ಅದಾಗಲೇ ಜಗತ್ತಿಗೆ ರವಾನೆ ಮಾಡಿಯಾಗಿತ್ತು, ಪ್ರತಿಭಟನೆ, ಅಂತಾರಾಷ್ಟ್ರೀಯ ಸಮುದಾಯದಕೆಂಗಣ್ಣಿಗೆ ಗುರಿಯಾಗಲು ಇಷ್ಟು ಸಾಕಾಗಿತ್ತು.