2017: ತೃತೀಯಲಿಂಗಿಗಳಿಗೆ ಆಶಾದಾಯಕ ಸುದ್ದಿಗಳನ್ನು ನೀಡಿದ ವರ್ಷ
2017 ತೃತೀಯ ಲಿಂಗಿಗಳಿಗೆ ಆಶಾದಾಯಕ ವರ್ಷವಾಗಿದ್ದು, ಮಂಗಳ ಮುಖಿಯರನ್ನೂ ಕೂಡ ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಸ್ವೀಕರಿಸಿದ ವರ್ಷವಾಗಿದೆ. ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಅವುಗಳ ಕೆಲ ಪ್ರಮುಖ ಮತ್ತು ಸಂಕ್ಷಿಪ್ತ ವರದಿ ಇಲ್ಲಿದೆ.
2017 ತೃತೀಯ ಲಿಂಗಿಗಳಿಗೆ ಆಶಾದಾಯಕ ವರ್ಷವಾಗಿದ್ದು, ಮಂಗಳ ಮುಖಿಯರನ್ನೂ ಕೂಡ ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಸ್ವೀಕರಿಸಿದ ವರ್ಷವಾಗಿದೆ. ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಅವುಗಳ ಕೆಲ ಪ್ರಮುಖ ಮತ್ತು ಸಂಕ್ಷಿಪ್ತ ವರದಿ ಇಲ್ಲಿದೆ.
ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ
ಕರ್ನಾಟಕದ ಸಾಂಸ್ಕತಿಕ ರಾಜಧಾನಿ ಮೈಸೂರಿನಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಬಳಿಕ ಭೋಪಾಲ್ ನಲ್ಲಿ ನಂತರ ಪಂಜಾಬ್ ವಿವಿ ಆವರಣದಲ್ಲಿ, ಕೇರಳದ ಕೊಚ್ಚಿ ಮೆಟ್ರೋ ರೈಲು ನಿಲ್ದಾಣದಲ್ಲಿ ಬಳಿಕ ಒಡಿಶಾದ ಭುವನೇಶ್ವರದಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿತ್ತು.
ಪಿಂಚಣಿ ವ್ಯವಸ್ಥೆ ಕಲ್ಪಿಸಿದ ಆಂಧ್ರ ಸರ್ಕಾರ
ಇನ್ನು ಡಿಸೆಂಬರ್ 17ರಂದು ಆಂಧ್ರ ಪ್ರದೇಶ ಸರ್ಕಾರ ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡುವ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿತು. ಆಂಧ್ರ ಪ್ರದೇಶದ 18 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೆ ಮಾಸಿಕ ತಲಾ 1, 500 ರು. ಪಿಂಚಣಿ ನೀಡುವ ನಿರ್ಧಾರಕ್ಕೆ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.
ಸ್ಟಾರ್ಟ್ ಅಪ್ ಮೂಲಕ ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ ಯುವ ಉದ್ಯಮಿ
ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ 23 ವರ್ಷದ ಯುವ ಉದ್ಯಮಿ ನೀಲಂ ಜೈನ್ ಎಂಬುವವರು ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ತೃತೀಯ ಲಿಂಗಿಗಳಿಗೆಂದೇ ಪೆರ್ರಿ ಫೆರ್ರಿ ಎಂಬ ಸ್ಟಾರ್ಟ್ ಅಪ್ ಆರಂಭಿಸಿದ್ದರು. ಈ ಸಂಸ್ಥೆ ಮೂಲಕ ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಉದ್ಯಮಿಯ ಉದ್ದೇಶವಾಗಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಈ ಸಂಸ್ಥೆ ಆರಂಭವಾಗಿತ್ತು. ಆರಂಭದಲ್ಲಿ ಈ ಸಂಸ್ಥೆ ಒಟ್ಟು 12 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು.
ಕರ್ನಾಟಕದ ಮೊದಲ ತೃತೀಯ ಲಿಂಗಿ ಆರ್ ಜೆ (ರೇಡಿಯೋ ಜಾಕಿ)
ದೇಶದ ವಿವಿಧ ಕ್ಷೇತ್ರಗಳಲ್ಲಿ ಕ್ರಮೇಣ ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಿದಂತೆಯೇ ಇತ್ತ ಕರ್ನಾಟಕದಲ್ಲೂ ಕೂಡ ಸಾಕಷ್ಟು ತೃತೀಯ ಲಿಂಗಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅದರಂತೆ ಕಳೆದ ನವೆಂಬರ್ 21ರಂದು ಕಾಜಲ್ ಎನ್ನುವ ತೃತೀಯ ಲಿಂಗಿ ರೇಡಿಯೋ ಜಾಕಿಯಾಗಿ ತಮ್ಮದೇ ನೂತನ ಕಾರ್ಯಕ್ರಮ ಆರಂಭಿಸಿದ್ದರು. ಕರಾವಳಿಯ ರೇಡಿಯೋ ಸಾರಂಗ್ 107.8 ನಲ್ಲಿ ಕಾಜಲ್ ಶುಭಮಂಗಳ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮ ಪ್ರತೀ ಮಂಗಳವಾರ ಸಂಜೆ 5 ರಿಂದ 6ವರೆಗೂ ಪ್ರಸಾರವಾಗುತ್ತಿದೆ.
ಭಾರತದ ಮೊದಲ ತೃತೀಯ ಲಿಂಗಿ ನ್ಯಾಯಾಧೀಶರು
ಪಶ್ಚಿಮ ಬಂಗಾಳದ ಜೋಯಿತಾ ಮಂಡಲ್ ಭಾರತದ ಮೊದಲ ತೃತೀಯ ಲಿಂಗಿ ನ್ಯಾಯಾಧೀಶರು ಎಂಬ ಕೀರ್ತಿಗೆ ಭಾಜನರಾಗಿದ್ದರು. 29 ವರ್ಷದ ಜೋಯಿತಾ 2010ರಲ್ಲಿ ದೂರಶಿಕ್ಷಣದ ಮೂಲಕ ಕಾನೂನು ಪದವಿ ಪೂರ್ಣ ಗೊಳಿಸಿದ್ದಾರೆ. ಅಂತೆಯೇ ಅವರ ಜಿಲ್ಲೆಯಲ್ಲಿ ಇವರೇ ಮೊದಲು ಮತದಾನ ಗುರುತಿನ ಚೀಟಿ ಪಡೆದ ಮೊದಲ ತೃತೀಯ ಲಿಂಗಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದೀಗ ಜೋಯಿತಾ ಕೋಲ್ಕತಾ ಸಿವಿಲ್ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ತೃತೀಯ ಲಿಂಗಿ ಪ್ರಿತಿಕಾ ಯಶಿನಿ
ಕಳೆದ ಅಕ್ಟೋಬರ್ ತೃತೀಯ ಲಿಂಗಿ ಪ್ರಿತಿಕಾ ಯಶಿನಿ ಅವರು ಭಾರತದ ಮೊದಲ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಭಾಜನರಾದರು. ತಮಿಳುನಾಡಿನ ಚೂಲೈಮೇಡು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಿತಿಕಾ ಅಧಿಕಾರ ಸ್ವೀಕರಿಸಿದ್ದಾರೆ.
ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆಗೆ ರಜೆ ಕೇಳಿದ್ದ ಮಹಿಳಾ ಪೊಲೀಸ್ ಪೇದೆ
ಮಹಾರಾಷ್ಟ್ರದ 28 ವರ್ಷದ ಮಹಿಳಾ ಪೊಲೀಸ್ ಪೇದೆ ಲಲಿತಾ ಸಾಳ್ವೆ ಎಂಬುವವರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಸಲುವಾಗಿ ರಜೆ ಕೇಳಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ತಮ್ಮ ಲಿಂಗವನ್ನು ಪುರುಷಲಿಂಗವಾಗಿ ಪರಿವರ್ತನೆ ಮಾಡಿಕೊಳ್ಳಲು ಒಂದು ತಿಂಗಳ ರಜೆ ಬೇಕು ಎಂದು ಮಹಾರಾಷ್ಟ್ರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕರಿಗೆ ತಾವು ಅರ್ಜಿ ಸಲ್ಲಿಸಿದ್ದೆ. ಆದರೆ ರಜೆ ನೀಡಲು ನಿರಾಕರಿಸಿದ್ದರು. ಹೀಗಾಗಿ ಹೈಕೋರ್ಟ್ ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ಲಲಿತಾ ಹೇಳಿಕೊಂಡಿದ್ದರು.