2017ನೇ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರು

ಆಲ್ಫ್ರೆಡ್ ನೊಬೆಲ್ 'ಡೈನಮೈಟ್' ವಿಸ್ಫೋಟವನ್ನು ಆವಿಷ್ಕರಿಸಿದ್ದ. ಇದನ್ನು ಯುದ್ದಗಳಲ್ಲಿ ಹೆಚ್ಚಾಗಿ...
2017ರಲ್ಲಿ ಸಾಹಿತ್ಯ ಮತ್ತು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು
2017ರಲ್ಲಿ ಸಾಹಿತ್ಯ ಮತ್ತು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು
ಆಲ್ಫ್ರೆಡ್ ನೊಬೆಲ್  'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದ್ದ. ಇದನ್ನು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ ಶೇಕಡಾ 94 ಭಾಗವನ್ನು ಪ್ರಶಸ್ತಿಗೆ ಮೀಸಲಿಡಬೇಕೆಂದು ಉಯಿಲಿನಲ್ಲಿ ಬರೆದಿಟ್ಟನಂತೆ. ಇದರಂತೆ 1901ರಲ್ಲಿ  ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಕೊಡಲು ಆರಂಭಿಸಲಾಯಿತು. 
ಅದರ ಪ್ರಕಾರ ವ್ಯಕ್ತಿಗಳ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ಆಲ್ ಫ್ರೆಡ್ ಹೆಸರಿನಲ್ಲಿ ಪ್ರಶಸ್ತಿ ನೀಡಿಕೊಂಡು ಬರಲಾಗುತ್ತಿದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಿ ನೀಡಲಾಗುತ್ತದೆ. 
ಭಾರತೀಯ ಗಣ್ಯರಿಗೆ ಕೂಡ ನೊಬೆಲ್ ಪ್ರಶಸ್ತಿ ಸಂದಾಯವಾಗಿದೆ. ರವೀಂದ್ರನಾಥ ಠಾಗೋರ್ ಅವರಿಗೆ ಸಾಹಿತ್ಯದಲ್ಲಿ 1913ರಲ್ಲಿ, ಸರ್. ಸಿ. ವಿ. ರಾಮನ್ ರಿಗೆ ಭೌತಶಾಸ್ತ್ರದಲ್ಲಿ 1930ರಲ್ಲಿ, ಡಾ. ಹರಗೋಬಿಂದ ಖುರಾನರಿಗೆ ವೈದ್ಯಶಾಸ್ತ್ರದಲ್ಲಿ 1968ರಲ್ಲಿ, ಮದರ್ ತೆರೇಸಾರಿಗೆ ಶಾಂತಿ ಪ್ರಶಸ್ತಿ 1979ರಲ್ಲಿ, ಸುಬ್ರಮಣ್ಯಮ್ ಚಂದ್ರಶೇಖರ್ ಅವರಿಗೆ ಭೌತಶಾಸ್ತ್ರದಲ್ಲಿ 1983ರಲ್ಲಿ, ಅಮರ್ತ್ಯ ಸೇನ್ ರಿಗೆ ಅರ್ಥಶಾಸ್ತ್ರದಲ್ಲಿ 1998ರಲ್ಲಿ, ಡಾ. ರಾಜೇಂದ್ರಕುಮಾರ್ ಪಚೌರಿಯವರ 'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' 2007ರಲ್ಲಿ, ವೆಂಕಟರಾಮನ್ ರಾಮಕೃಷ್ಣನ್ ರಿಗೆ ರಸಾಯನಶಾಸ್ತ್ರದಲ್ಲಿ 2009ರಲ್ಲಿ, 2014ರಲ್ಲಿ ಗಾಂಧಿವಾದಿ, ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಕೈಲಾಶ್ ಸತ್ಯರ್ಥಿಯವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿತ್ತು. ಇದುವರೆಗೆ 9 ಮಂದಿ ಭಾರತೀಯರಿಗೆ ವಿವಿಧ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿದೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆ ದೇಶದಿಂದ ಮತ್ತು ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಭೌತಶಾಸ್ತ್ರ ಮತ್ತು ಶರೀರ ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಸ್ವೀಡನ್ ದೇಶ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.
2017ನೇ ಸಾಲಿನ ನೊಬೆಲ್ ಪ್ರಶಸ್ತಿ ಪಡೆದವರ ವಿವರ ಇಂತಿದೆ.
ನೊಬೆಲ್ ಶಾಂತಿ ಪ್ರಶಸ್ತಿ: ನೊಬೆಲ್ ಪ್ರಶಸ್ತಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸುವುದು ಮತ್ತು ಸುದ್ದಿಯಾಗುವುದು ಶಾಂತಿ ಪುರಸ್ಕಾರ. 2017ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧಿ ಆಂದೋಲನ (ಐಸಿಎಎನ್)ಕ್ಕೆ  ನೊಬೆಲ್‌ ಶಾಂತಿ ಪ್ರಶಸ್ತಿ ಸಂದಿದೆ.ಐಸಿಎಎನ್ ಸಂಘಟನೆಯು ಅಣ್ವಸ್ತ್ರ ವಿರೋಧಿ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ.
ಅರ್ಥಶಾಸ್ತ್ರ: 2017 ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಯೂನಿವರ್ಸಿಟಿ ಆಫ್ ಚಿಕಾಗೋದ ರಿಚರ್ಡ್ ಥಲೇರ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಹೇವಿಯರಲ್ ಎಕೆನಾಮಿಕ್ಸ್ ಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ನೊಬೆಲ್ ಪ್ರಶಸ್ತಿಗೆ ರಿಚರ್ಡ್ ಥಲೇರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಂಡರ್ಸ್ಟಾಂಡಿಂಗ್ ದಿ ಸೈಕಾಲಜಿ ಆಫ್ ಎಕೆನಾಮಿಕ್ಸ್ ಗಾಗಿ  ರಿಚರ್ಡ್ ಥಲೇರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಶಸ್ತಿ ನೀಡುತ್ತಿರುವ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ನ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ತಿಳಿಸಿದ್ದಾರೆ. 
ಮನುಷ್ಯನ ಚಿಂತನೆಗಳು ವೈಯಕ್ತಿಕ ಹಾಗೂ ಮಾರುಕಟ್ಟೆ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ರಿಚರ್ಡ್ ಥಲೇರ್ ತಮ್ಮ ಕೆಲಸದ ಮೂಲಕ ವಿವರಿಸಿದ್ದಾರೆ. 
ಭೌತಶಾಸ್ತ್ರ ಪ್ರಶಸ್ತಿ: 'ಗುರುತ್ವ ತರಂಗ'ಗಳ ಅನ್ವೇಷಣೆಗೆ 2017ನೇ ಸಾಲಿನ ನೊಬೆಲ್ ಪ್ರಶಸ್ತಿ ಅಮೆರಿಕಾದ ಭೌತ ವಿಜ್ಞಾನಿಗಳಾದ ರೈನರ್ ವೆಯಿಸ್, ಬ್ಯಾರಿ ಬ್ಯಾರಿಶ್ ಮತ್ತು ಕಿಪ್ ಥಾರ್ನೆ ಅವರಿಗೆ ಸಂದಿದೆ. ಈ ಗುರುತ್ವ ಅಲೆಗಳ ಅನ್ವೇಷಣೆಯಲ್ಲಿ ಇಬ್ಬರು ಭಾರತೀಯ ವಿಜ್ಞಾನಿಗಳಾದ ದಿವಂಗತ ಸಿ.ವಿ.ವಿಶ್ವೇಶ್ವರ ಮತ್ತು ಸಂಜೀವ್ ಧುರಂಧರ್ ಪಾಲ್ಗೊಂಡಿದ್ದರು ಎಂಬುದು ಹೆಮ್ಮೆಯ ಸಂಗತಿ.
ರಸಾಯನ ಶಾಸ್ತ್ರ ನೊಬೆಲ್: ಪರಮಾಣುಗಳ ಮಟ್ಟದಲ್ಲಿ ಕೆಲಸ ಮಾಡುವ ಮಾನವ ಜೀವಕೋಶಗಳ ವೀಕ್ಷಣೆಯ ಸಂಶೋಧನೆಗೆ ರಸಾಯನಿಕ ವಿಭಾಗದ ನೊಬೆಲ್ ಪ್ರಶಸ್ತಿ ಸ್ವಿಟ್ಜರ್ಲಾಂಡ್ ನ ಸಂಶೋಧಕ ಜಾಕ್ವೆಸ್ ಡುಬೋಶೆಟ್, ಅಮೆರಿಕಾದ ಜೋಕಿಮ್ ಫ್ರಾಂಕ್ ಮತ್ತು ಬ್ರಿಟನ್ ನ ರಿಚರ್ಡ್ ಹೆಂಡರ್ಸನ್ ಅವರಿಗೆ ಸಿಕ್ಕಿದೆ.
ಸಾಹಿತ್ಯದಲ್ಲಿ ನೊಬೆಲ್: ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿ ಖ್ಯಾತಿಯ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್‌ ಪ್ರಶಸ್ತಿ ಲಭಿಸಿದೆ.9 ಮಿಲಿಯನ್ (1.1 ಮಿಲಿಯನ್ ಡಾಲರ್) ಮೊತ್ತದ ಪ್ರಶಸ್ತಿ ಇಶಿಗುರೋ ಮುಡಿಗೇರಿದೆ.62 ವರ್ಷದ ಇಶಿಗುರೊ ಅವರು ‘ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿಗಾಗಿ 1989ರಲ್ಲಿ ಮ್ಯಾನ್ ಬುಕರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಕಝುವೋ ಇಶಿಗುರೋ ಅವರು 8 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ ಸಿನಿಮಾ ಹಾಗೂ ಟೆಲಿವಿಷನ್ ಗೆ ಕಥೆ ಬರೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ವೈದ್ಯಕೀಯ: 2017ನೇ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಮೂವರು ಅಮೆರಿಕನ್ನರು ಭಾಜನರಾಗಿದ್ದಾರೆ. ಅಮೆರಿಕ ಮೂಲದವರಾದ ಜೆಫ್ರಿ ಹಾಲ್, ಮೈಕೆಲ್ ರೋಸ್ಬಾಶ್ ಮತ್ತು ಮೈಕೆಲ್ ಡಬ್ಲ್ಯೂ. ಯಂಗ್ ಈ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದಿರುವ ವಿಜ್ಞಾನಿಗಳು. ಈ ಮೂವರು 7.19 ಕೋಟಿ ಬಹುಮಾನ ಮೊತ್ತವನ್ನು ಹಂಚಿಕೊಂಡಿದ್ದಾರೆ. ಜೀವಿಗಳ ಆಂತರಿಕ ಜೈವಿಕ ಗಡಿಯಾರದ ಕುರಿತ ಕೈಗೊಂಡ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದ್ದು, ಇವರ ಸಂಶೋಧನೆಗೆ 'ಸರ್ಕಾಡಿಯನ್ ಗಡಿಯಾರ' ಎಂದು ಹೆಸರಿಸಲಾಗಿದೆ.
ವಿವಿಧ ಸಮಯ ವಲಯಗಳಲ್ಲಿ ಸಂಚರಿಸುವಾಗ ಜನರು ಜೆಟ್​ಲ್ಯಾಗ್​ಗೆ ಏಕೆ ಒಳಗಾಗುತ್ತಾರೆ ಮತ್ತು ಅದರಿಂದ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳು ಏನು ಎಂಬುದನ್ನು ಸಂಶೋಧಕರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com