34 ಬಾರಿ ಹಾವು ಕಡಿದರೂ ಯುವತಿ ಜೀವಂತ, ಇದು "ಸಾಮಾನ್ಯ" ಎನ್ನುವ ತಂದೆ!

ಹಿಮಾಚಲದ ಯುವತಿಯೊಬ್ಬಳು ಬರೊಬ್ಬರಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಹಾವಿನಿಂದ ಕಚ್ಚಿಸಿಕೊಂಡ ಯುವತಿ
ಹಾವಿನಿಂದ ಕಚ್ಚಿಸಿಕೊಂಡ ಯುವತಿ

ಶಿಮ್ಲಾ: ಹಿಮಾಚಲದ ಯುವತಿಯೊಬ್ಬಳು ಬರೊಬ್ಬರಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶದ ಸಿರ್ಮಾರ್ ಪ್ರದೇಶದ ನಿವಾಸಿ 18 ವರ್ಷ ವಯಸ್ಸಿನ ಮನೀಶಾ ಎಂಬ ಯುವತಿ ಕಳೆದ ಮೂರು ವರ್ಷಗಳಿಂದ ಸುಮಾರು 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ. ಶಾಲೆಗೆ ತೆರಳುವ ವೇಳೆ, ಅಡುಗೆ  ಮಾಡುವ ವೇಳೆ, ಅಂಗಡಿಗೆ ತೆರಳಿದ್ದ ವೇಳೆ ಹೀಗೆ ಮನೀಷಾ ತೆರಳಿದ ಜಾಗಕ್ಕೆಲ್ಲಾ ಬರುವ ಹಾವುಗಳು ಆಕೆಯನ್ನು ಕಚ್ಚಿವೆಯಂತೆ. ಮನೀಶಾಗೆ ಹಾವು ಕಚ್ಚುವ ವಿಚಾರ ಅವರ ಕುಟುಂಬ ವರ್ಗಕ್ಕೆ ಸಾಮಾನ್ಯ ಎಂಬಂತಾಗಿ ಬಿಟ್ಟಿವೆ.  ಹಾವು ಕಚ್ಚಿದಾಗಲೆಲ್ಲಾ ಆಕೆಯನ್ನು ಆಸ್ಪತ್ರೆಗೆ ಸೇರಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಅವರ ತಂದೆ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಸ್ವತಃ ಮಾತನಾಡಿರುವ ಯುವತಿ ಕಳೆದ ಮೂರು ವರ್ಷದಿಂದ ನಾನು 30ಕ್ಕೂ ಅಧಿಕ ಬಾರಿ ಕಚ್ಚಿಸಿಕೊಂಡಿದ್ದೇನೆ. ಮೊದಲ ಬಾರಿಗೆ ನಾನು ಹಾವಿನ ಕಡಿತಕ್ಕೊಳಗಾಗಿದ್ದು, ನೀರು ತರಲು ನದಿಗೆ ತೆರಳಿದ್ದಾಗ. ನೀರು  ತರುತ್ತಿದ್ದಾಗ ಕಾಲಿಗೆ ಹಾವು ಕಚ್ಚಿತ್ತು. ಆಗಿಂದ ಹಾವು ಕಡಿಕ ಸಾಮಾನ್ಯವಾಗಿ ಬಿಟ್ಟಿದ್ದು, ಹಾವುಗಳನ್ನು ನೋಡುತ್ತಿದ್ದಂತೆಯೇ ನಾನು ಸ್ತಬ್ದಳಾಗಿ ಬಿಡುತ್ತೇನೆ. ಅವು ನನ್ನು ಕಚ್ಚಿ ಹೊರಟು ಹೋಗುತ್ತವೆ. ಒಂದೇ ದಿನ 2-3 ಬಾರಿ ಹಾವು  ಕಚ್ಚಿದ್ದೂ ನನಗೆ ನೆನಪಿದೆ. ಈ ಬಗ್ಗೆ ಹಲವು ಜ್ಯೋತಿಷಿಗಳನ್ನು ವಿಚಾರಿಸಿದಾಗ ನಾಗದೋಷದ ಕುರಿತು ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಪೂಜೆಗಳನ್ನು ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಯುವತಿ ಅಳಲು  ತೋಡಿಕೊಂಡಿದ್ದಾಳೆ.

ಇನ್ನು ಈಕೆಗೆ ಹಾವು ಕಚ್ಚಿದ ಪ್ರತೀ ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆಯಾದರೂ ಅಂತಹ ಪ್ರಭಾವಿ ವಿಷದ ಅಂಶಗಳು ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಂತೆಯೇ ಮನೀಶಾಳ ಹಾವಿನ ಸಮಸ್ಯೆ ಕುರಿತಂತೆ  ಕೇಳಿದಾಗ ನಾಗದೋಷ ಇತ್ಯಾದಿಗಳನ್ನು ಅಲ್ಲ ಗಳೆಯುವ ವೈದ್ಯರು, ಪ್ರಪಂಚದಲ್ಲಿರುವ ಹಾವುಗಳ ಪೈಕಿ ಶೇ.80ರಷ್ಟು ಹಾವುಗಳ ಸಂಪೂರ್ಣ ವಿಷಕಾರಿಗಳಲ್ಲ. ಕೇವಲ 20 ರಷ್ಟು ಹಾವುಗಳು ಮಾತ್ರ ವಿಷಕಾರಕ ಎಂದು ವೈಎಸ್  ಪಾರ್ಮರ್ ವೈದ್ಯಕೀಯ ಕಾಲೇಜು ಸೂಪರಿಂಟೆಂಡ್, ಅಕೆಯ ಒಟ್ಟಾರೆ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಕಚ್ಚಿದ ಹಾವುಗಳ ಪೈಕಿ ಬಹುತೇಕ ಹಾವುಗಳು ವಿಷಕಾರಿಯಲ್ಲ. ಅಥವಾ ಕಡಿಮೆ ವಿಷದಿಂದ ಕೂಡಿದ ಹಾವುಗಳು  ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಮನೀಶಾ ಅವರ ತಂದೆ ಹಾವು ಕಡಿತ ಸಾಮಾನ್ಯವಾಗಿ ಬಿಟ್ಟಿದೆ. ಈ ಬಗ್ಗೆ ಹಲವು ಜ್ಯೋತಿಷಿಗಳನ್ನು ಕಂಡು ಪರಿಹಾರದ ಪೂಜೆ ಮಾಡಿಸಿದ್ದೇನೆ. ನಾನಾ ದೇವಾಲಯಗಳನ್ನು ಸುತ್ತಿದ್ದೇನೆ.  ಇಷ್ಟು  ಸಾಲದೇ ಮನೆಯಲ್ಲೇ ಮಗಳಿಗಾಗಿ ಒಂದು ನಾಗಿನಿಯ ಪುಟ್ಟ ದೇವಾಲಯವನ್ನೂ ಕೂಡ ಕಟ್ಟಿಸಿದ್ದೇನೆ. ಆದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿರೋಧಕ ಔಷಧಿಗಳಿಂದ ಆಕೆ ಬಚಾವ್ ಆಗುತ್ತಿರಬಹುದು
ಪ್ರತೀ ಬಾರಿ ಆಕೆಗೆ ಹಾವು ಕಚ್ಚಿದಾಗಲೂ ಹಾವಿನ ವಿಷ ತಲೆಗೆ ಏರದಂತೆ ತಡೆಯಲು ಪ್ರತಿರೋಧಕ ಔಷಧಿಗಳನ್ನು ನೀಡಲಾಗುತ್ತಿತ್ತು. ಬಹುಶಃ ಇದೇ ಕಾರಣಕ್ಕೇನೋ ಆಕೆ 34 ಬಾರಿ ಹಾವು ಕಚ್ಚಿದರೂ ಜೀವಂತವಾಗಿದ್ದಾಳೆ. ಆದರೆ  ಕಚ್ಚುವ ಪ್ರತಿಯೊಂದು ಹಾವೂ ವಿಷಕಾರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶದ ಅರಣ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ರೋಹಿತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com