ನಿವೃತ್ತ ಐಎನ್ಎಸ್ ವಿರಾಟ್ ನ ಮುಂದಿನ ಹಾದಿ ಏನು?

ಸೇವೆಯಲ್ಲಿರುವ ವಿಶ್ವದ, ಭಾರತದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಪಡೆದಿರುವ ಐಎನ್ಎಸ್ ವಿರಾಟ್ ಮಾ.6 ರಂದು ನಿವೃತ್ತಿಯಾಗಿದ್ದು, ಸಕ್ರಿಯ ಕಾರ್ಯಾಚರಣೆಯ ಮಟ್ಟಿಗೆ ಇತಿಹಾಸದ ಪುಟ ಸೇರಿದೆ.
ಐಎನ್ಎಸ್ ವಿರಾಟ್
ಐಎನ್ಎಸ್ ವಿರಾಟ್
ಮುಂಬೈ: ಸೇವೆಯಲ್ಲಿರುವ ವಿಶ್ವದ, ಭಾರತದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಪಡೆದಿರುವ ಐಎನ್ಎಸ್ ವಿರಾಟ್ ಮಾ.6 ರಂದು ನಿವೃತ್ತಿಯಾಗಿದ್ದು, ಸಕ್ರಿಯ ಕಾರ್ಯಾಚರಣೆಯ ಮಟ್ಟಿಗೆ ಇತಿಹಾಸದ ಪುಟ ಸೇರಿದೆ. 55 ವರ್ಷಗಳ ಕಾಲ ಸಕ್ರಿಯವಾಗಿದ್ದ ಐಎನ್ಎಸ್ ವಿರಾಟ್ ಯುದ್ಧ ನೌಕೆ ಸೇವೆಯಲ್ಲಿದ್ದ ವಿಶ್ವದ, ಭಾರತದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಪಡೆದಿತ್ತು. ಹಾಗಾದರೆ ನಿವೃತ್ತಿಯ ನಂತರ ಐಎನ್ಎಸ್ ವಿರಾಟ್ ನ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿದೆ. 
1959 ರಲ್ಲಿ ಪೂರ್ಣಗೊಂಡು ಬ್ರಿಟನ್ ನ ರಾಯಲ್ ನೇವಿಯಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಹೆಚ್ಎಂಎಸ್ ಹರ್ಮಿಸ್ ನ್ನು ಅಲ್ಲಿನ ನೌಕಾಪಡೆ 1984 ರಲ್ಲಿ ಹೆಚ್ಎಂಎಸ್ ಹರ್ಮಿಸ್ ನ್ನು ಸೇವೆಯಿಂದ ನಿವೃತ್ತಿಗೊಳಿಸಿತ್ತು. ನಂತರ 1987 ಮೇ. 12 ರಂದು ಭಾರತೀಯ ನೌಕಾ ಪಡೆ ಅದನ್ನು ಸೇವೆಗೆ ನಿಯುಕ್ತಿಗೊಳಿಸಿತ್ತು. ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ 1989 ರಲ್ಲಿ ನಡೆದ ಆಪರೇಷನ್ ಜುಪಿಟರ್, 1999 ರ ಕಾರ್ಗಿಲ್ ಯುದ್ಧದ ವೇಳೆ ನಡೆದ ಆಪರೇಷನ್ ವಿಜಯ್ ಕಾರ್ಯಾಚರಣೆಗಳಲ್ಲಿ  ಪ್ರಮುಖ ಪಾತ್ರ ವಹಿಸಿದ್ದ ಐಎನ್ಎಸ್ ವಿರಾಟ್ ಯುದ್ಧ ನೌಕೆ ಸೇವೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ
ಇಷ್ಟೆಲ್ಲಾ ಇತಿಹಾಸ ಹೊಂದಿರುವ ಯುದ್ಧ ನೌಕೆ ಗುಜರಿಗೆ (ಗುಜರಿ ಎಂದರೆ ಯುದ್ಧ ನೌಕೆಯ ಬಿಡಿ ಭಾಗಗಳನ್ನು ಮಾರಾಟ ಮಾಡುವುದು) ಮಾರಾಟ ಎಂಬ ಸುದ್ದಿಗಳು ಹರಿದಾಡಿದ್ದವಾದರೂ, ಈಗ ಬೇರೆಯದ್ದೇ ಸುದ್ದಿ ಹರಿದಾಡುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಐಎನ್ಎಸ್ ವಿರಾಟ್ ನ್ನು ಎರಡು ರೀತಿಯಲ್ಲಿ ಮರು ಬಳಕೆ ಮಾಡುವ ಸಾಧ್ಯತೆ ಇದೆ. ವಿರಾಟ್ ಯುದ್ಧ ನೌಕೆಯ ಭಾಗಗಳನ್ನು ಮುಳುಗಿಸಿ ಈಜುಗಾರರಿಗೆ (ಅಥವಾ ನೀರಿನ ಆಳದಲ್ಲಿ ಈಜಲು ತಿಳಿದಿರುವವರಿಗೆ) ಪ್ರಮುಖ ಆಕರ್ಷಣೀಯ ತಾಣವನ್ನಾಗಿಸುವುದು ಒಂದಾದರೆ, ಯುದ್ಧ ನೌಕೆಯನ್ನು ಐಷಾರಾಮಿ ಹೋಟೆಲ್ ನ್ನಾಗಿ ಪರಿವರ್ತಿಸಲು ಚಿಂತಿಸುತ್ತಿದೆ ಆಂಧ್ರ ಪ್ರದೇಶದ ಸರ್ಕಾರ. 
ವಿರಾಟ್ ಯುದ್ಧ ನೌಕೆಯ ಭಾಗಗಳನ್ನು ಮುಳುಗಿಸಿ ನೀರಿನಾಳದಲ್ಲಿ ಈಜುಗಾರರಿಗೆ ಆಕರ್ಷಣೀಯ ತಾಣವನ್ನಾಗಿಸುವ ಯೋಜನೆಯ ಬಗ್ಗೆ ಸ್ವತಃ ನೌಕಾ ಪಡೆಯ ಮುಖ್ಯಸ್ಥರಾದ ಸುನಿಲ್ ಲಾನ್ಬಾ ಮಾಹಿತಿ ನೀಡಿದ್ದರೆ. ಇನ್ನು ಐಎನ್ಎಸ್ ವಿಕ್ರಾಂತ್ ಗೆ ಬಂದೊದಗಿದ ಪರಿಸ್ಥಿತಿ (ಐಎನ್ಎಸ್ ವಿಕ್ರಾಂತ್ ನ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗಿತ್ತು) ವಿರಾಟ್ ಗೆ ಬಾರದಂತೆ ತಡೆಯಲು ರಕ್ಷಣಾ ಸಚಿವಾಲಯ ಕ್ರಮಗಳನ್ನು ಕೈಗೊಂಡಿದೆ. 
ಐಎನ್ಎಸ್ ವಿರಾಟ್ ನ ನಿವೃತ್ತಿಗೂ ಮುನ್ನವೇ ಎಲ್ಲಾ ಕರಾವಳಿ ರಾಜ್ಯಗಳಿಗೂ ಕಳೆದ ವರ್ಷವೇ ವಿರಾಟ್ ನ ನಿವೃತ್ತಿಯ ನಂತರದ ಹಾದಿಗೆ ಪ್ರಸ್ತಾವನೆ ಸಲ್ಲಿಸುವಂತೆ ರಕ್ಷಣಾ ಸಚಿವಾಲಯ ಸೂಚನೆ ನೀಡಿತ್ತು. ರಕ್ಷಣಾ ಸಚಿವಾಲಯದ ಸೂಚನೆಯ ಪ್ರಕಾರ ಪ್ರಸ್ತಾವನೆ ಕಳಿಸಿರುವ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಯುದ್ಧ ನೌಕೆಯನ್ನು ಐಷಾರಾಮಿ ಹೋಟೆಲ್ ನ್ನಾಗಿ ಪರಿವರ್ತಿಸುವ ಸಲಹೆ ನೀಡಿದೆ. ಈ ಬಗ್ಗೆ ಫೆಬ್ರವರಿಯಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಐಎನ್ಎಸ್ ವಿರಾಟ್ ನ್ನು ಐಷಾರಾಮಿ ಹೋಟೆಲ್ ನ್ನಾಗಿ ಪರಿವರ್ತಿಸಿ ಅದರ ಸುತ್ತಲೂ ಮನರಂಜನಾ ವಲಯವನ್ನು ನಿರ್ಮಿಸುವ ಪ್ರಸ್ತಾವನೆ ನೀಡಿದ್ದರು. ಸುಮಾರು 1,000 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ಹಾಗೂ ಆಂಧ್ರಪ್ರದೇಶ ಸರ್ಕಾರ ಸಮವಾಗಿ ವೆಚ್ಚವನ್ನು ಹಂಚಿಕೊಳ್ಳಬೇಕೆಂಬ ಸಲಹೆಯನ್ನೂ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com