ನಿಮಗೆ ಗೊತ್ತೆ.. ಜೇಡಗಳು ಪ್ರತೀ ವರ್ಷ 800 ಮಿಲಿಯನ್ ಟನ್ ತೂಕದಷ್ಟು ಬೇಟೆಯನ್ನು ಸ್ವಾಹ ಮಾಡುತ್ತವೆ!

ಭೂಮಿಯಲ್ಲಿರುವ ಜೇಡಗಳು ಪ್ರತೀ ವರ್ಷ 800 ಮಿಲಿಯನ್ ಟನ್ ತೂಕದಷ್ಟು ಬೇಟೆಯನ್ನು ಸ್ವಾಹ ಮಾಡುತ್ತವೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಭೂಮಿಯಲ್ಲಿರುವ ಜೇಡಗಳು ಪ್ರತೀ ವರ್ಷ 800 ಮಿಲಿಯನ್ ಟನ್ ತೂಕದಷ್ಟು ಬೇಟೆಯನ್ನು ಸ್ವಾಹ ಮಾಡುತ್ತವೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

ಸ್ವಿಟ್ಜರ್ಲೆಂಡ್ ನ ಬಸೆಲ್ ವಿಶ್ವವಿದ್ಯಾಲಯ ಹಾಗೂ ಸ್ವೀಡನ್ ನ ಲಂಡ್ ವಿಶ್ವವಿದ್ಯಾಲಯಗಳು ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಭೂಮಿಯಲ್ಲಿ ಸುಮಾರು 25 ಮಿಲಿಯನ್ ಟನ್ ತೂಕದಷ್ಟು ಜೇಡಗಳ  ಸಂಖ್ಯೆ ಇದೆಯಂತೆ. ಈ ಜೇಡಗಳು ಪ್ರತೀ ವರ್ಷ ಸುಮಾರು 400ರಿಂದ 800 ಮಿಲಿಯನ್ ತೂಕದಷ್ಟು ಬೇಟೆಗಳನ್ನು ತಿನ್ನುತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆ ಮೂಲಕ ಜೇಡಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ  ಪ್ರಕೃತಿಯ ಪರಿಸರ ಸಮತೋಲನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಜೇಡಗಳ ಬೇಟೆಯಲ್ಲಿ ಬಹುತೇಕ ಕೀಟಗಳು ಮತ್ತು ಸ್ಪ್ರಿಂಗ್ ಟೇಲ್ಸ್ (ಇರುವೆ ಜಾತಿಯ ಕೀಟ)ಗಳೇ ಇರಲಿದ್ದು, ಕೆಲವು ವಿಶಿಷ್ಟ ಮತ್ತು ದೈತ್ಯ ಜೇಡಗಳು ಪುಟ್ಟ ಜೇಡಗಳನ್ನು, ಕಪ್ಪೆಗಳನ್ನು, ಹಾವುಗಳನ್ನು, ಮೀನು ಮತ್ತು ಪಕ್ಷಿಗಳನ್ನು  ಬೇಟೆಯಾಡುತ್ತವೆ. ಇದಲ್ಲದೆ ಕೆಲ ವಿಷಕಾರಿ ಜೇಡಗಳು ಮರದಮೇಲಿನ ಬಾವುಲಿಗಳನ್ನೂ ಕೂಡ ಬೇಟೆಯಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ದಿ ಸೈನ್ಸ್ ಆಫ್ ನೇಚರ್ ಎಂಬ ಪುಸ್ತಕದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು, ಜೇಡಗಳು ಪಕ್ಷಿಗಳು ಮತ್ತು ಇರುವೆಗಳನ್ನು ಸ್ವಾಹ ಮಾಡುವ ಮೂಲಕ ಅವುಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯದಂತೆ ತಡೆಯುತ್ತದೆ.  ಆ ಮೂಲಕ ಜೇಡಗಳು ಪ್ರಕೃತಿಯ ಪರಿಸರ ಸಮತೋಲನದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿವೆ ಎಂದು ವಿಜ್ಞಾನ ಲೇಖಕ ಮಾರ್ಟಿನ್ ನಿಫ್ಫೆಲ್ಲರ್ ಹೇಳಿದ್ದಾರೆ. ಅಂತೆಯೇ ಇಡೀ ಭೂವಿಜ್ಞಾನ ಪರಿಸರದಲ್ಲಿ ಜೇಡಗಳು ಅತೀಹೆಚ್ಚು  ಸಂತತಿ ಹೊಂದಿದ್ದು, ಭೂಮಿಯಲ್ಲಿ ಸುಮಾರು 45 ಸಾವಿರ ಜೇಡ ಸಂತತಿಗಳಿವೆ. ಒಂದೊಂದು ಸಂತತಿಯ ಸಂಖ್ಯೆಯೂ ಪ್ರತೀ ಸ್ಕ್ವೇರ್ ಮೀಟರ್ ಗೆ 1 ಸಾವಿರದಷ್ಟಿದೆ. ಹೀಗಾಗಿ ಪ್ರಕೃತಿಯ ದೊಡ್ಡ ಶತ್ರುಗಳಾದ ಕೀಟಗಳನ್ನು  ಭಕ್ಷಿಸುವ ಮೂಲಕ ಪ್ರಕೃತಿ ರಕ್ಷಣೆಯಲ್ಲಿ ಜೇಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಂಕಿಅಂಶಗಳ ಪ್ರಕಾರ ಭೂಮಂಡಲದಾದ್ಯಂತ ಹಬ್ಬಿರುವ ಮನುಷ್ಯ ಜೀವಿ ಪ್ರತೀ ವರ್ಷ 400 ಮಿಲಿಯನ್ ಟನ್ ಮಾಂಸ ಮತ್ತು ಮೀನನ್ನು ಭಕ್ಷಿಸುತ್ತಾನೆ. ಆದರೆ ಜೇಡಗಳ ಆಹಾರ  ಪ್ರಮಾಣ ಮನುಷ್ಯನನ್ನೂ ಮೀರಿಸುವಂತಿದ್ದು, ಇವು ಪ್ರತೀ ವರ್ಷ ಕನಿಷ್ಠ 250ರಿಂದ 500 ಮಿಲಿಯನ್ ಟನ್ ಬೇಟೆಯನ್ನು ಭಕ್ಷಿಸುತ್ತದೆ. ಸಂಶೋಧನೆಯಿಂದ ಬೆಳಕಿಗೆ ಬಂದ ಮತ್ತೊಂದು ಅಂಶವೆಂದರೆ ಭೂಮಿಯ ಇತರೆ  ಪ್ರದೇಶಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೀಟಗಳನ್ನು ಅರಣ್ಯದಲ್ಲಿ ಮತ್ತು ಹುಲ್ಲುಗಾವಲಿನಲ್ಲಿರುವ ಜೇಡಗಳು ಭಕ್ಷಿಸುತ್ತಿವೆ ಎಂದು ತಿಳಿದುಬಂದಿದೆ.

ಪರೋಕ್ಷವಾಗಿ ರೈತರಿಗೆ ನೆರವಾಗುತ್ತಿರುವ ಜೇಡಗಳು
ಇನ್ನು ವರದಿಯಲ್ಲಿ ಜೇಡಗಳು ಹೇಗೆ ರೈತರಿಗೆ ನೆರವಾಗುತ್ತಿವೆ ಎಂಬುದನ್ನು ತಿಳಿಸಿರುವ ಸಂಶೋಧಕರು, ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಮಾರಕವಾಗಿ ಪರಿಣಮಿಸುವ ಕೀಟಗಳ ಸಂಹಾರದಲ್ಲೂ ಜೇಡಗಳು ಪ್ರಮುಖ  ಪಾತ್ರ ನಿರ್ವಹಿಸುತ್ತವೆ. ಬೆಳೆಗಳಿಗೆ ಮಾರಕವಾಗಬಲ್ಲ ಕೀಟಗಳನ್ನು ಜೇಡಗಳು ಭಕ್ಷಿಸುವ ಮೂಲಕ ಬೆಳೆಗಳ ರಕ್ಷಣೆ ಮಾಡಿ ರೈತರಿಗೂ ನೆರವಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಕೃಷಿಗೆ ಮಾರುಹೋಗಿರುವ ರೈತ  ವರ್ಗದಿಂದಾಗಿ ಜೇಡಗಳು ನೆಲೆಸಲು ಬೇಕಾದ ವಾತಾವರಣ ಕೃಷಿ ಭೂಮಿಗಳಲ್ಲಿ ಇಲ್ಲದ ಕಾರಣ ಅವು ಬೇರೆಡೆ ವಲಸೆ ಹೋಗುತ್ತಿವೆ. ಕೃಷಿ ಭೂಮಿಯಲ್ಲಿ ನೆಲೆಸುವ ಜೇಡಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ  ಇಳಿಕೆಯಾಗಿದೆ ಎಂದು ಮಾರ್ಟಿನ್ ನಿಫ್ಫೆಲ್ಲರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com