ಅಮೆರಿಕ ಪ್ರವಾಸಿಗನ ಪ್ರಾಣಕ್ಕೆ ಎರವಾದ ನಿಗೂಢ ಸೆಂಟಿನೆಲ್ ದ್ವೀಪದ ಕುರಿತು ತಿಳಿದುಕೊಳ್ಳಿ!

ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌ ಸಾವಿನೊಂದಿಗೆ ಇಷ್ಟು ದಿನ ನಿಗೂಢವಾಗಿದ್ದ ಅಂಡಮಾನ್ ಮತ್ತು ನಿಕೋಬಾರ್ ನ ಸೆಂಟಿನೆಲ್ ದ್ವೀಪ ಇದೀಗ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪೋರ್ಟ್ ಬ್ಲೇರ್: ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌ ಸಾವಿನೊಂದಿಗೆ ಇಷ್ಟು ದಿನ ನಿಗೂಢವಾಗಿದ್ದ ಅಂಡಮಾನ್ ಮತ್ತು ನಿಕೋಬಾರ್ ನ ಸೆಂಟಿನೆಲ್ ದ್ವೀಪ ಇದೀಗ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಯಾವುದೇ ಪತ್ರಿಕೆ, ವಾಹಿನಿಗಳ ನೋಡಿದರೂ ಈ ದ್ವೀಪದ್ದೇ ಸುದ್ದಿ. ಭಾರತ ಸ್ವತಂತ್ರವಾಗಿ 7 ದಶಕಗಳೇ ಕಳೆದರೂ ಇಂದಿಗೂ ಭಾರತ ಸರ್ಕಾರಕ್ಕೆ ತನ್ನ ಕೂಗಳತೆ ದೂರದಲ್ಲಿರುವ ಈ ದ್ವೀಪವನ್ನು ತಲುಪಲು ಸಾಧ್ಯವಾಗಿಯೇ ಇಲ್ಲ? ಇಷ್ಟಕ್ಕೂ ಈ ದ್ವಿಪ ನಿವಾಸಿಗಳೇಕೆ ಹೊರ ಜಗತ್ತಿನ ಸಂಪರ್ಕಕ್ಕೆ ಸಿಗುತ್ತಿಲ್ಲ? ಯಾರಾದರೂ ಈ ದ್ವೀಪಕ್ಕೆ ತೆರಳಿ ಮರಳಿ ಬಂದಿದ್ದಾರೆಯೇ? .. ಭಾರತ ಸರ್ಕಾರವೇಕೆ ಈ ದ್ವೀಪವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಅಂಡಮಾನ್ ಮತ್ತು ನಿಕೋಬಾರ್ ನ ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಸೆಂಟಿನೆಲ್ ದ್ವೀಪ ಇಂದಿಗೂ ಹೊರಜಗತ್ತಿನ ಸಂಪರ್ಕವನ್ನೇ ಕಂಡಿಲ್ಲ. ತಂತ್ರಜ್ಞಾನ ಹಾಗಿರಲಿ ಆಧುನಿಕ ಪದ್ಧತಿ ಜೀವನ ಶೈಲಿಯೂ ಇವರಿಗೆ ತಿಳಿದಿಲ್ಲ. ಶಿಲಾಯುಗದ ಮಾನವರಂತೆ ಇಂದಿಗೂ ಇಲ್ಲಿನ ಬುಡಕಟ್ಟು ನಿವಾಸಿಗಳು ಬದುಕುತ್ತಿದ್ದಾರೆ. ಅಷ್ಟೇ ಏಕೆ 2004ರಲ್ಲಿ ಭೀಕರ ಸುನಾಮಿಗೆ ತುತ್ತಾದಾಗ ಅಂದು ಭಾರತ ಸರ್ಕಾರ ಈ ದ್ವೀಪಕ್ಕೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ಪರಿಹಾರ ಸಾಮಗ್ರಿ ತಂದಿದ್ದ ಸೇನಾ ಹೆಲಿಕಾಪ್ಟರ್ ಅನ್ನು ತಮ್ಮ ಶೃತ್ರುಗಳೆಂದು ತಿಳಿದು ಅದರ ಮೇಲೆಯೇ ಇಲ್ಲಿನ ನಿವಾಸಿಗಳು ಬಿಲ್ಲುಬಾಣಗಳಿಂದ ದಾಳಿ ಮಾಡಿದ್ದರು.
ಇಲ್ಲಿನ ಬುಡಕಟ್ಟು ನಿವಾಸಿಗಳನ್ನು ತಲುಪಲು ಭಾರತ ಸರ್ಕಾರ ಈ ಹಿಂದೆ ಹಲವು ಪ್ರಯತ್ನಗಳನ್ನು ಮಾಡಿತ್ತಾದರೂ ಎಲ್ಲವೂ ವಿಫಲವಾಗಿವೆ. ಕೆಲ ಸಮಾಜಶಾಸ್ತ್ರ ತಜ್ಞರ ಪ್ರಕಾರ ಇಲ್ಲಿನ ನಿವಾಸಿಗಳು ಮೂಲ ನಿವಾಸಿಗಳಲ್ಲ. ಬದಲಿಗೆ ಆಫ್ರಿಕಾದಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದಾರೆ. ಇಲ್ಲಿ ಇಂದಿಗೂ ಹೊರಗಿನವರಿಗೆ ಅಕ್ಷರಶಃ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಯಾರಾದರೂ ದ್ವೀಪಕ್ಕೆ ಬರುವ ಪ್ರಯತ್ನ ಮಾಡಿದರೆ ಅವರಿಗೆ ಅಪಾಯ ಕಟ್ಟಿಟ್ಟಬುತ್ತಿ, ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಕೇವಲ 50 ಕಿ.ಮೀ ದೂರದಲ್ಲಿದ್ದರೂ, ಇಂದಿಗೂ ಇವರು ಹೊರಜಗತ್ತಿಗೆ ಪರಿಚಿತರಲ್ಲ. ಈ ದ್ವೀಪದಲ್ಲಿ ಇವರ ಸಂಖ್ಯೆ ಕನಿಷ್ಟ 40 ರಿಂದ ಗರಿಷ್ಟ 150 ಸಂಖ್ಯೆಗಳಿಲ್ಲಿವೆ ಅಷ್ಟೇ..
ಇವರ ಮೀನು ಮತ್ತು ತೆಂಗಿನಕಾಯಿಗಳನ್ನು ತಿಂದೇ ಇವರು ಬುದುಕುತ್ತಿದ್ದಾರೆ. ಸುಮಾರು 60 ಸಾವಿರ ವರ್ಷಗಳ ಹಿಂದಿನ ಶಿಲಾಯುಗದ ಆದಿಮಾನವರಂತೆಯೇ ಇವರು ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. 
1960ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರ್ಕಾರ ಇವರನ್ನು ಸಂಪರ್ಕಿಸುವ ಕೆಲಸಕ್ಕೆ ಕೈ ಹಾಕಿತ್ತು. ಸೇನೆ ಮೂಲಕ ಈ ದ್ವೀಪ ಪ್ರವೇಶಕ್ಕೆ ಯತ್ನಿಸಲಾಗಿತ್ತಾದರೂ ಇಲ್ಲಿನ ನಿವಾಸಿಗಳ ಆಕ್ರಮಣಕಾರಿ ಮನೋಭಾವದಿಂದ ಅದು ವಿಫಲವಾಗಿತ್ತು. ಈ ದ್ವೀಪ ನಿವಾಸಿಗಳನ್ನು ಯಶಸ್ವಿಯಾಗಿ ತಲುಪಿದ ಏಕೈಕ ವ್ಯಕ್ತಿಯೆಂದರೆ ಅದು ಭಾರತೀಯ ಮಾನವಶಾಸ್ತ್ರಜ್ಞ ತ್ರಿಲೋಕ ನಾಥ್ ಪಂಡಿತ್. 1991ರಲ್ಲಿ ಮೊಟ್ಟ ಮೊದಲ ಬಾರಿಗೆ ತ್ರಿಲೋಕ ನಾಥ್ ಪಂಡಿತ್ ಅವರು ಈ ಬುಡಕಟ್ಟು ಜನಾಂಗವನ್ನು ಭೇಟಿ ಮಾಡಿದ್ದರು. ಆಫ್ರಿಕನ್ ಶೈಲಿಯ ಭಾಷೆಯನ್ನು ಇವರು ಮಾತನಾಡುತ್ತಿದ್ದರು. 
ಆ ಬಳಿಕ 1981ರಲ್ಲಿ ಸರಕು ಸಾಗಣೆ ಹಡಗು ಎಂವಿ ಪ್ರೈಮೋಸ್ ಎಂಬ ಹಡಗು ತಾಂತ್ರಿಕ ದೋಷ ಕಾರಣದಿಂದಾಗಿ ಈ ದ್ವೀಪದಲ್ಲಿ ಲಂಗರು ಹಾಕಿತ್ತು. ಆದರೆ ಈ ಹಡಗಿನ ಮೇಲೂ ಇಲ್ಲಿನ ಬುಡಕಟ್ಟು ನಿವಾಸಿಗಳು ದಾಳಿ ಮಾಡಿದ್ದರು. ಶಿಪ್ ನೊಳಗೆ ಸಿಬ್ಬಂದಿ ಅಡಗಿ ಕುಳಿತಿದ್ದರಿಂದ ಅವರಿಗೆ ಅಪಾಯವೇನೂ ಆಗಿರಲಿಲ್ಲ. ಆ ಬಳಿಕ ಸುಮಾರು 1 ವಾರದ ಬಳಿಕ ಭಾರತೀಯ ನೌಕಾಪಡೆ ಈ ಹಡಗಿನ ಸಿಬ್ಬಂದಿಗಳನ್ನು ರಕ್ಷಣೆ ಮಾಡಿತ್ತು. ಇಂದಿಗೂ ಉಪಗ್ರಹ ಚಿತ್ರಗಳಲ್ಲಿ ಈ ಹಡಗಿನ ಅವಶೇಷಗಳನ್ನು ನಾವು ಕಾಣಬಹುದಾಗಿದೆ. 
ಬಳಿಕ ಈ ದ್ವೀಪ ಮತ್ತೆ ಸುದ್ದಿಗೆ ಬಂದಿದ್ದು 2006ರಲ್ಲಿ. ಅಂದು ಇಬ್ಬರು ಮೀನುಗಾರರು ಈ ದ್ವೀಪಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಬುಡಕಟ್ಟು ನಿವಾಸಿಗಳು ಬಿಲ್ಲುಬಾಣಗಳಿಂದ ಕೊಂದು ಹಾಕಿದ್ದರು. 2004ರಲ್ಲಿ ಸಂಭವಿಸಿದ್ದ ಭೀಕರ ಸುನಾಮಿ ವೇಳೆಯಲ್ಲೂ ಕೂಡ ಈ ಬುಡಕಟ್ಟು ಜನರರು ಹೊರಗಿನವರ ನೆರವು ನಿರಾಕರಿಸಿದ್ದರು. ರಕ್ಷಣೆಗೆ ಆಗಮಿಸಿದ ಸೇನಾ ಹೆಲಿಕಾಪ್ಟರ್ ಮೇಲೆಯೇ ದಾಳಿ ಮಾಡಿದ್ದರು. ಹೀಗಾಗಿ ಸೇನಾ ಹೆಲಿಕಾಪ್ಟರ್ ಇಲ್ಲಿಂದ ವಾಪಸ್ ಆಗಿತ್ತು.
ಭಾರತ ಸರ್ಕಾರ ಇಲ್ಲಿ ಕಠಿಣ ಕಾನೂನು ಜಾರಿಗೆ ತಂದಿದ್ದು, ಈ ದ್ವೀಪವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇಲ್ಲಿಗೆ ಯಾರೂ ಭೇಟಿ ನೀಡುವಂತಿಲ್ಲ, ಸ್ವತಃ ಅಧಿಕಾರಿಗಳೇ ಭೇಟಿ ನೀಡಬೇಕು ಎಂದರೂ ಭಾರತೀಯ ಸೇನೆಯ ಅನುಮತಿ ಕಡ್ಡಾಯ. ಈ ಬಡುಕಟ್ಟು ಜನರ ಜನ ಜೀವನಕ್ಕೆ ಧಕ್ಕೆಯಾಗದಿರಲಿ ಎಂದು ಸರ್ಕಾರ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವ ಮೂಲಕ ಇಲ್ಲಿಗೆ ಹೊರಗಿನವರು ಭೇಟಿ ನೀಡದಂತೆ ಕಾನೂನು ರಚಿಸಿದೆ. ಆದರೆ ಇತ್ತೀಚೆಗಷ್ಟೇ ಈ ಕಾನೂನನ್ನು ಸರ್ಕಾರ ಸಡಿಲಗೊಳಿಸಿತ್ತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಈ ದ್ವೀಪವೂ ಸೇರಿದಂತೆ 28 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕಾನೂನನ್ನು ಸರ್ಕಾರ ಸಡಿಲಗೊಳಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ವಿದೇಶಿಗರೂ ಇಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com