ವಿಶ್ವ ಮಾನಸಿಕ ಆರೋಗ್ಯ ದಿನ: ಯುವಜನತೆಯನ್ನು ಕಾಡುವ ಮಾನಸಿಕ ಸಮಸ್ಯೆ, ಖಿನ್ನತೆಗೆ ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ

ನಾನು ನಿಜವಾಗಿಯೂ ಈ ವೃತ್ತಿಯ ಕುರಿತು ಕನಸು ಕಂಡಿದ್ದೆನೋ!? ಅಥವಾ ಅದು ಇತರರೊಂದಿಗೆ ನಾನೂ ಕೂಡಾ ಎಂಬ ಮೂರ್ಖತನವೋ!? ಗೊತ್ತಿಲ್ಲ! ಗಲಿಬಿಲಿ ಮನದಲ್ಲಿ! ಎಡೆಯೇ ಇಲ್ಲ ಚಿಂತೆಯ ಚಿತೆಯಲ್ಲಿ....
ವಿಶ್ವ ಮಾನಸಿಕ ಆರೋಗ್ಯ ದಿನ: ಯುವಜನತೆಯನ್ನು ಕಾಡುವ ಮಾನಸಿಕ ಸಮಸ್ಯೆ, ಖಿನ್ನತೆಗೆ  ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ
ವಿಶ್ವ ಮಾನಸಿಕ ಆರೋಗ್ಯ ದಿನ: ಯುವಜನತೆಯನ್ನು ಕಾಡುವ ಮಾನಸಿಕ ಸಮಸ್ಯೆ, ಖಿನ್ನತೆಗೆ ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ
"ನಾನು ಯಾಕೆ ಈ ಉದ್ಯೋಗದಲ್ಲಿ ಇದ್ದೇನೆ ಅನ್ನುವುದೇ ಒಂದು ದೊಡ್ಡ ಪ್ರಶ್ನೆ! ನನಗೆ ಈ ಒತ್ತಡವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಿಟ್ಟರೆ ಎಲ್ಲಿ ಹೋಗುವುದು ಅಂತ ಗೊತ್ತಿಲ್ಲ! ಏನು ಮಾಡಲಿ!? ನಾನು ನಿಜವಾಗಿಯೂ ಈ ವೃತ್ತಿಯ ಕುರಿತು ಕನಸು ಕಂಡಿದ್ದೆನೋ!? ಅಥವಾ ಅದು ಇತರರೊಂದಿಗೆ ನಾನೂ ಕೂಡಾ ಎಂಬ ಮೂರ್ಖತನವೋ!? ಗೊತ್ತಿಲ್ಲ! ಗಲಿಬಿಲಿ ಮನದಲ್ಲಿ! ಎಡೆಯೇ ಇಲ್ಲ ಚಿಂತೆಯ ಚಿತೆಯಲ್ಲಿ, ಅಸಹಾಯಕತೆಯ ಬೇಗೆಯಲ್ಲಿ" 
ಇದು ಇಂದು ಅನೇಕ ಯುವ ಜನರನ್ನು ಕಾಡುತ್ತಿರುವ ಸಮಸ್ಯೆ! ಯಾಕೆ, ಹೇಗೆ, ಏನು, ಎಂತ ಎಂಬ ಅನೇಕ ಪ್ರಶ್ನೆಗಳನ್ನೇ ಇಟ್ಟುಕೊಂಡು, ಉತ್ತರ ಕಂಡುಕೊಳ್ಳದೆ ವಿಲವಿಲ ಒದ್ದಾಡುತ್ತಿರುವ ಯುವ ಮನಸ್ಸುಗಳು! ಇಂದು ವಿಶ್ವ ಮಾನಸಿಕ ಆರೋಗ್ಯ ದಿನ. 1992 ಒಕ್ಟೋಬರ್ 10 ರಂದು ಪ್ರಥಮ ಬಾರಿಗೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಯಿತು. 1994 ರ ನಂತರ ಪ್ರತಿ ವರ್ಷವೂ ಖಿನ್ನತೆ, ಉದ್ಯೋಗದಲ್ಲಿ ಮಾನಸಿಕ ಆರೋಗ್ಯ, ಸ್ಕಿಜೋಫ್ರೀನಿಯಾ ಹೀಗೆ  ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಆ ನಿಟ್ಟಿನಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. 
ವಿಶ್ವದೆಲ್ಲೆಡೆ ಪ್ರಸ್ತುತ ಒಂದು ಬಹಳ ಮುಖ್ಯವಾದ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿರುವುದು ಮಾನಸಿಕ ಸ್ವಾಸ್ಥ್ಯದ ಕುರಿತು. ಹಾಗಾಗಿಯೇ ಈ ವರ್ಷ"ಬದಲಾಗುತ್ತಿರುವ ಜಗತ್ತಿನಲ್ಲಿ ಯುವ ಜನರು ಮತ್ತು ಮಾನಸಿಕ ಆರೋಗ್ಯ" ಎಂಬ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಯಾಕೆಂದರೆ ಬದಲಾಗುತ್ತಿರುವ ಜಗತ್ತಿನ ವೇಗವು ಬಹುಷಃ ನಾವು ಅರ್ಥ ಮಾಡಿಕೊಳ್ಳುವ ವೇಗಕ್ಕಿಂತಲೂ ಹೆಚ್ಚಿದೆ. ನಮ್ಮ ಪರಿಸರ, ವ್ಯವಸ್ಥೆ ಇವೆಲ್ಲವೂ ಬದಲಾಗುತ್ತಿವೆ! ಇದರ ಜೊತೆಗೆ ಮನಸ್ಸು ಕೂಡಾ! 
ಜಾಗತಿಕ ಮಟ್ಟದಲ್ಲಿ ಒಂದು ಕಡೆ ಯುದ್ಧಗಳು, ದೇಶ ದೇಶಗಳ ನಡುವಿನ ಕಚ್ಚಾಟಗಳು, ಹಿಂಸಾತ್ಮಕ ಕೃತ್ಯಗಳು ಲಕ್ಷಾಂತರ ಜನರ ಜೀವ ಮತ್ತು ಜೀವನವನ್ನು ಕಿತ್ತುಕೊಂಡು ಬಿಟ್ಟಿದ್ದರೆ, ಬದುಕುಳಿದವರು ಕಿತ್ತು ತಿನ್ನುವ ಬಡತನ ಮತ್ತು ಹಸಿವಿನ ಜೊತೆಗೆ ತೀವ್ರವಾದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೂ ಕೂಡಾ ಮಕ್ಕಳು ಹಾಗೂ ಯುವಜನರು ಅನುಭವಿಸುತ್ತಿರುವ ಮಾನಸಿಕ ಆಘಾತವು, ಅನೇಕರಲ್ಲಿ ಇನ್ನೂ ಕೆಲವು ತಲೆಮಾರುಗಳಿಗೆ ಉಳಿದು ಹೋಗಬಹುದು.  ಇದರ ಜೊತೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆಗಳು ಮತ್ತು ಅವುಗಳಿಂದಾಗುವ ಮಾನಸಿಕ ಒತ್ತಡಗಳು ವಿಶ್ವದೆಲ್ಲೆಡೆ ಕಂಡುಬರುತ್ತಿವೆ. 
ಮಾನಸಿಕ ಒತ್ತಡ ಮತ್ತು ಖಿನ್ನತೆ: 
ಇತ್ತೀಚೆಗಿನ ದಿನಗಳಲ್ಲಿ ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆ ಎಂದರೆ ಮಾನಸಿಕ ಒತ್ತಡ. ಎಳೆಯ ಪ್ರಾಯದಿಂದ ತೊಡಗಿ ವೃದ್ಧಾಪ್ಯದ ವಯೋಮಾನದ ಅನೇಕರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ನಿರಂತರ ಒತ್ತಡದಲ್ಲೇ ಜೀವನ ನಡೆಸಿ ಅದು ಕೆಲವೊಮ್ಮೆ ಖಿನ್ನತೆಗೂ ಕಾರಣವಾಗುವುದನ್ನು ನಾವು ಗಮನಿಸಬಹುದು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಪ್ರತಿ ಇಪ್ಪತ್ತು ಮಂದಿಯಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯು ತೀವ್ರವಾದಾಗ ಅದು ಆತ್ಮಹತ್ಯೆಗೂ ಕಾರಣವಾಗುತ್ತದೆ. 
ಆತ್ಮಹತ್ಯೆ: 
ಇಂದು ವಿಶ್ವದಲ್ಲಿ ಜನರ ಸಾವಿಗೆ ಪ್ರಮುಖ 3 ಕಾರಣಗಳಲ್ಲಿ ಆತ್ಮಹತ್ಯೆಯೂ ಒಂದು. ವಿಶ್ವದಲ್ಲೇ ಆಗುವ ಒಟ್ಟು ಆತ್ಮಹತ್ಯೆಗಳಲ್ಲಿ ಶೇಕಡಾ 17 ರಷ್ಟು ಭಾರತದಲ್ಲಿ ನಡೆಯುತ್ತಿರುವುದು ಬಹಳ ಖೇದಕರ ಸಂಗತಿ. ಅದರಲ್ಲೂ ಶೇಕಡಾ 80ರಷ್ಟು ಮಂದಿ ಅಕ್ಷರಸ್ಥರು ಎನ್ನುವುದು ಇನ್ನೊಂದು ಗಮನೀಯ ಅಂಶ. ಇನ್ನೊಂದು ದುಃಖದ ವಿಚಾರವೆಂದರೆ, ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ /ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ / ಳೆ. ಯುವ ಜನರು ಈ ರೀತಿಯ ಕೃತ್ಯಗಳಿಗೆ ತುತ್ತಾಗಿ ಜೀವ ಕಳೆದುಕೊಂಡರೆ ಅದು ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯೇ ಸರಿ. 
ಮಾದಕ ವ್ಯಸನ: 
ಯುವಕ ಯುವತಿಯರನ್ನು ಕಾಡುತ್ತಿರುವ ಮತ್ತೊಂದು ಮುಖ್ಯ ಸಮಸ್ಯೆ ಎಂದರೆ ಮಾದಕ ವ್ಯಸನ! ಇತ್ತೀಚೆಗಿನ ಒಂದು ವರದಿಯ ಪ್ರಕಾರ ಸುಮಾರು 30 ಲಕ್ಷ ಜನರು ಮಾದಕ ವ್ಯಸನಿಗಳಾಗಿದ್ದಾರೆ. ಈ ವ್ಯಸನವು ಅನೇಕ ದುಷ್ಕೃತ್ಯಗಳಿಗೂ ಕಾರಣವಾಗಿದೆ. ಸಮಾಜದಲ್ಲಿ ಹೆಚ್ಚಾಗಿರುವ ಆಪರಾಧಗಳಿಗೆ ಮಾದಕ ದ್ರವ್ಯಗಳು ಕೂಡಾ ಕಾರಣವಾಗಿವೆ.  ದೇಶದಲ್ಲಿ ಪ್ರತಿ 2 ಗಂಟೆಗೆ ಒಬ್ಬ ವ್ಯಸನಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ ಮತ್ತು ಕರ್ನಾಟಕದಲ್ಲಿ ಪ್ರತಿ ದಿನ ಇಂತಹ ಒಂದು ಪ್ರಕರಣ ನಡೆಯುತ್ತಿದೆ. 
ಎಲೆಕ್ಟ್ರಾನಿಕ್ ಗ್ಯಾಜೆಟ್ ವ್ಯಸನ: 
ಇವೆಲ್ಲವುಗಳ ಜೊತೆಗೆ ನಮಗೆ ಗೊತ್ತಿಲ್ಲದೆ ಆವರಿಸಿಕೊಳ್ಳುತ್ತಿರುವ ವ್ಯಸನವೆಂದರೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳದ್ದು. ಯುವಕರಷ್ಟೆ ಅಲ್ಲ, ಹಸುಳೆಗಳಿಂದ ತೊಡಗಿ ವಯೋವೃದ್ಧಾರವರೆಗೂ ಚಾಚಿಕೊಂಡಿರುವ ಈ ವ್ಯಸನವು ಮನುಷ್ಯರ ನಡುವಿನ ಸಂಬಂಧಗಳೇ ಕಳಚಿಕೊಳ್ಳುವಂತೆ ಮಾಡಿದೆ. ದಿನೇ ದಿನೇ ಹೆಚ್ಚುತ್ತಿರುವ ಸ್ಕ್ರೀನ್ ಟೈಂ, ದೈಹಿಕ ಹಾಗೂ ಮಾನಸಿಕ ಆರೋಗ್ಯಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳು ಇತರರೊಂದಿಗೆ ಬೆರೆಯುವುದನ್ನು ಬಿಟ್ಟುಬಿಡುತ್ತಿದ್ದಾರೆ. 
ಸಾರ್ವಜನಿಕ ಸಾರಿಗೆಯಲ್ಲಿ ಹೋಗುವಾಗ ನೋಡಿದರೆ ಎಲ್ಲರೂ ತಮ್ಮ ಮೊಬೈಲ್ ಗಳಲ್ಲಿ ಮುಳುಗಿರುತ್ತಾರೆಯೇ ಹೊರತು ಆ ಕಡೆ ಈಕಡೆ ಯಾರಿದ್ದಾರೆ ಹೇಗಿದ್ದಾರೆ ಎಂಬುದನ್ನು ಕೂಡಾ ಗಮನಿಸುವಷ್ಟು ತಾಳ್ಮೆ ಇಲ್ಲದವರಾಗಿದ್ದಾರೆ. ನಿಮ್ಹಾನ್ಸ್ ನಲ್ಲಿ ಇತ್ತೀಚೆಗೆ ನೆಟ್ ಫ್ಲಿಕ್ಸ್ ವ್ಯಸನಕ್ಕೆ ಶುಶ್ರೂಷೆ ತೆಗೆದುಕೊಳ್ಳುವವರೂ ಇದ್ದಾರೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಇಂತಹ ಅನೇಕ ಮೊಬೈಲ್ ಆಪ್ ಗಳಲ್ಲಿ ಬರುವ ಧಾರಾವಾಹಿ ಸರಣಿಗಳನ್ನೇ ನೋಡುತ್ತಾ ಹಗಲು - ರಾತ್ರೆ ತಮ್ಮನ್ನು ತಾವು ಮರೆಯುವವರಿದ್ದಾರೆ. ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಹುಚ್ಚು ಮತ್ತೊಂದು ದೊಡ್ಡ ಮಾನಸಿಕ ರೋಗವಾಗಿ ಕಾಣಿಸಿಕೊಂಡಿದೆ. ಇನ್ನು ಬ್ಲೂ ವೇಲ್ ನಂತಹ ಅಂತರ್ಜಾಲದ ಆಟಗಳು ಅನೇಕರ ಜೀವನಗಳಲ್ಲೇ ಆಟವಾಡಿವೆ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಆಟಗಳಲ್ಲಿ ತೊಡಗಿಕೊಂಡ ಅದೆಷ್ಟೋ ಮಂದಿ ಜೀವವನ್ನೇ ಕಳೆದುಕೊಂಡಿರುವುದು ಶೋಚನೀಯ. 
ಇವಕ್ಕೆಲ್ಲಾ ಪರಿಹಾರವೇನು? 
ಮನಸ್ಸಿನ ಖಾಯಿಲೆ ಸುಲಭವಾಗಿ ಕಾಣಿಸುವುದಿಲ್ಲ. ಹಾಗಾಗಿ ನಾವುಗಳು ಅದನ್ನು ಆರಂಭದಲ್ಲಿ ಸಹಿಸಿಕೊಳ್ಳುವುದರ ಕಡೆಗೆ ಒಲವು ತೋರಿಸುತ್ತೇವೆ. ಎಷ್ಟೋ ಬಾರಿ ಮಾನಸಿಕ ತುಮುಲಗಳನ್ನು ಅದುಮಿಟ್ಟು ತಮಗೇನೂ ಆಗಿಲ್ಲ ಎಂಬಂತೆ ನಟಿಸುತ್ತೇವೆ. ಒಳಗಿನಿಂದ ಕೊರಗುತ್ತಿರುವುದು ಇತರರಿಗೆ ಗೊತ್ತೇ ಆಗುವುದಿಲ್ಲ. ಇದರ ಜೊತೆಗೆ ಮನಸ್ಸಿನ ಏರುಪೇರುಗಳನ್ನು ಹೇಳಿಕೊಳ್ಳುವುದರ ಕುರಿತು ಹೆಚ್ಚಿನ ಮಂದಿಯಲ್ಲಿ ಹಿಂಜರಿಕೆ ಇದೆ. ತಮಗೆ ಎಲ್ಲಿ ಹುಚ್ಚರೆಂದು ಹಣೆಪಟ್ಟಿ ಕಟ್ಟಿಬಿಡುತ್ತಾರೋ ಎಂಬ ಭಯದಿಂದ ಇತರರೊಂದಿಗೆ ಹಂಚಿಕೊಳ್ಳುವುದೇ ಇಲ್ಲ. ಹಂಚಿಕೊಂಡರೂ ಮಾನಸಿಕ ತಜ್ಞರ ಬಳಿಗೆ ಹೋಗಿ ಶುಶ್ರೂಷೆ ತೆಗೆದುಕೊಳ್ಳುವುದಿಲ್ಲ. ಇನ್ನು ತನ್ನಿಂದ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ತಲುಪಿದ ಮೇಲೆಯೇ, ಉಪಾಯವಿಲ್ಲದೆ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡುತ್ತಾರೆ. ಆಮೇಲೆ ಅವರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ತಜ್ಞರಿಗೂ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ, ಯಾವುದೇ ಮಾನಸಿಕ ಸಮಸ್ಯೆ ಇದ್ದಾಗಲೂ, ಆರಂಭದಲ್ಲೇ ಸರಿಯಾದ ತಜ್ಞರನ್ನು ಭೇಟಿ ಮಾಡಿ ಅವರಿಂದ ಶುಶ್ರೂಷೆಯನ್ನು ಪಡೆಯಿರಿ.
ಕೌನ್ಸೆಲಿಂಗ್ ಅಂದರೆ ಕೇವಲ ಮಾತನಾಡುವುದಷ್ಟೆ ಅಲ್ಲ! ಅದು ಅನೇಕ ವಿಚಾರಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಸರಿಯಾದ ಮನಃಶಾಸ್ತ್ರದ ಅಧ್ಯಯನ ಇರುವ ವ್ಯಕ್ತಿಗಳನ್ನೇ ಸಂಪರ್ಕಿಸಿ. ದೈಹಿಕ ಆರೋಗ್ಯಕ್ಕೆ ಎಷ್ಟು ಒತ್ತು ಕೊಡುತ್ತಿರೋ, ಅಷ್ಟೇ ಮಾನಸಿಕ ಆರೋಗ್ಯಕ್ಕೂ ಒತ್ತು ಕೊಡಿ. ಮಾನಸಿಕ ಆರೋಗ್ಯದ ಕುರಿತು ನಾವು ಒಂದು ಸಮಾಜವಾಗಿ ನಮ್ಮ ಧೋರಣೆಯನ್ನು ಬದಲಾಯಿಸಬೇಕಿದೆ. ಅದು ಎಷ್ಟು ಶೀಘ್ರವಾಗಿ ಆಗುತ್ತದೋ, ಅಷ್ಟು ಶೀಘ್ರವಾಗಿ ಸಮಾಜದ ಮನಸ್ಸು ಆರೋಗ್ಯಕರವಾಗಲು ಸಾಧ್ಯ. 
- ಅಕ್ಷರ ದಾಮ್ಲೆ
ಮಾನಸಿಕ ತಜ್ಞ 
ಮನೋಸಂವಾದ
aksharadamle@manosamvaada.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com