ಮುಂಬೈ-ಅಹಮದಾಬಾದ್ ಬುಲೆಟ್ ರೈಲು, ಪರಿಸರ, ಜೀವಸಂಕುಲಕ್ಕೆ ತೀವ್ರ ಹಾನಿ; ತಜ್ಞರ ಆತಂಕ

ಥಾಣೆಯ ಉಪನದಿಗೆ ಬರುವ ಪಕ್ಷಿಗಳಲ್ಲಿ ಫ್ಲೆಮಿಂಗೊಗಳು ಮಾತ್ರವಲ್ಲ. ಸುಮಾರು 95 ಪಕ್ಷಿ ...
ಥಾಣೆ ಉಪನದಿಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಕಲರವ(ಸಂಗ್ರಹ ಚಿತ್ರ)
ಥಾಣೆ ಉಪನದಿಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಕಲರವ(ಸಂಗ್ರಹ ಚಿತ್ರ)
Updated on

ಥಾಣೆ/ಸೂರತ್: ಥಾಣೆಯ ಉಪನದಿಗೆ ಬರುವ ಪಕ್ಷಿಗಳಲ್ಲಿ ಫ್ಲೆಮಿಂಗೊಗಳು ಮಾತ್ರವಲ್ಲ. ಸುಮಾರು 95 ಪಕ್ಷಿ ಪ್ರಭೇದಗಳು ಇಲ್ಲಿಗೆ ಬರುತ್ತವೆ. ಹಲವಾರು ಪಕ್ಷಿಗಳಿಗೆ ಈ ಜಲತಾಣ ಜೀವಸೆಲೆಯಾಗಿದೆ. ಆದರೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಿಂದಾಗಿ ಸಸ್ಯ ಮತ್ತು ಪ್ರಾಣಿಗಳಿಗೆ ತೊಂದರೆಯಾಗಿದೆ.

ಈ ಪ್ರದೇಶ ಮರ ಗಿಡಗಳಿಂದ ಸಂಪದ್ಬರಿತವಾಗಿತ್ತು. ಆದರೆ ರೈಲ್ವೆ ಯೋಜನೆಯಿಂದಾಗಿ ಶಬ್ದಮಾಲಿನ್ಯ ಹಾಗೂ ಜೀವಕ್ಕೆ ಎಲ್ಲಿ ಅಪಾಯವಾಗುತ್ತದೆಯೋ ಎಂಬ ಭಯದಿಂದ ಇಲ್ಲಿನ ಪಕ್ಷಿಗಳು ಬೇರೆಡೆಗೆ ವಲಸೆ ಹೋಗುವ ಸಾಧ್ಯತೆಯಿದೆ. ಥಾಣೆ ಉಪನದಿಯ ಸುತ್ತಮುತ್ತಲ ಪ್ರದೇಶಗಳು ಈಗಾಗಲೇ ಬುಲೆಟ್ ರೈಲು ಯೋಜನೆಗೆ ಭೂಮಿ ಕಳೆದುಕೊಳ್ಳುವ ಮತ್ತು ಸಾಕಷ್ಟು ಪ್ರಮಾಣದಲ್ಲಿ ಕೈಗಾರಿಕೆಗಳಿಂದ ರಾಸಾಯನಿಕಗಳು ಹೊರಬಂದು ಪ್ರಕೃತಿ ಹಾನಿಯಾಗವ ಒತ್ತಡದಿಂದ ನಲುಗುತ್ತಿದೆ. ಬುಲೆಟ್ ರೈಲು ಯೋಜನೆಯಿಂದಾಗಿ ಇಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಇಲ್ಲಿನ ಪರಿಸರ ಕಾರ್ಯಕರ್ತ ಗಿರೀಶ್ ಸಲ್ಗೌಂಕರ್. ಇವರು ಸ್ಥಳೀಯ ಕೊಲಿ ಮೀನುಗಾರಿಕೆ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ನಾಲ್ಕು ದಶಕಗಳ ಹಿಂದೆ ಇಲ್ಲಿ ಥಾಣೆ ಉಪನದಿ ಪ್ರದೇಶದಲ್ಲು ಸುಮಾರು 100 ವೈವಿಧ್ಯ ಮೀನುಗಳು ವಾಸವಾಗಿದ್ದವು. ಇಂದು ಅದು 2ರಿಂದ 3 ಪ್ರಭೇದಗಳಿಗೆ ಬಂದು ನಿಂತಿದೆ. ಉದ್ದೇಶಿತ ಮುಂಬೈ-ಅಹಮದಾಬಾದ್ ರೈಲು ಕಾರಿಡಾರ್ ಯೋಜನೆ ಥಾಣೆ ಕ್ರೀಕ್ ಫ್ಲೆಮಿಂಗ್ ಅಭಯಾರಣ್ಯ ಮಾತ್ರವಲ್ಲದೆ ಸಂಜಯ್ ಗಾಧಿ ರಾಷ್ಟ್ರೀಯ ಉದ್ಯಾನವನ, ತುಂಗರೇಶ್ವರ ವನ್ಯಮೃಗ ಅಭಯಾರಣ್ಯಗಳ ಮೂಲಕ ಕೂಡ ಹಾದುಹೋಗುತ್ತದೆ. ಅಲ್ಲದೆ ಕರಾವಳಿ ನಿಯಂತ್ರಣ ವಲಯ(ಸಿಆರ್ ಝೆಡ್)ಗಳನ್ನು ಮಹಾರಾಷ್ಟ್ರದ 6 ಕಡೆಗಳಲ್ಲಿ ಮತ್ತು ಗುಜರಾತ್ ನ ಒಂದು ಕಡೆ ಹಾದುಹೋಗುತ್ತದೆ. ಹೆಚ್ಚು ಸೂಕ್ಷ್ಮ ದುರ್ಬಲ ಪ್ರದೇಶಗಳು ಕೂಡ ಈ ಮಧ್ಯೆ ಬರುತ್ತದೆ. ಇದರಿಂದ ಪರಿಸರ ಸಮತೋಲನಕ್ಕೆ ಹೆಚ್ಚು ಹಾನಿಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸುಮಾರು 80.43 ಹೆಕ್ಟೇರ್ ಅರಣ್ಯ ಪ್ರದೇಶ ಬೇಕಾಗಿದೆ. ಯೋಜನೆ ಜಾರಿಗೆ ಬರಲು ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿಗಳ 80 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ಈ ಯೋಜನೆ ಜಾರಿಗೆ ಬರಲು ಪರಿಸರದ ಮೇಲೆ ಎಷ್ಟು ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ(ಎನ್ಎಚ್ಆರ್ ಸಿಎಲ್) 12 ಪುಟಗಳ ವಿವರಣೆ ಹೊರಡಿಸಿದ್ದರೂ ಕೂಡ ಪರಿಸರ ತಜ್ಞ ಸಾಗರ್ ದಾರಾ ಹೇಳುವ ಪ್ರಕಾರ ಈ ರೈಲು ಯೋಜನೆಯ ಪರಿಣಾಮ ನಿಧಾನವಾಗಿ ಕಂಡುಬರಲಿದೆ.

ಯೋಜನೆಯಿಂದ ಸುತ್ತಮುತ್ತಲ ಭಾಗಗಳಲ್ಲಿ ಕೈಗಾರಿಕೀಕರಣ ಏರ್ಪಟ್ಟು ಜನಸಂಖ್ಯೆ ಕೂಡ ಅಧಿಕವಾಗುತ್ತದೆ, ಈಗಾಗಲೇ ಇರುವ ನೈಸರ್ಗಿಕ ಸಂಪನ್ಮೂಲಕ್ಕೆ ಇದರಿಂದ ಧಕ್ಕೆಯಾಗುತ್ತದೆ. ಈ ಬಗ್ಗೆ ಎನ್ಎಚ್ ಆರ್ ಸಿಎಲ್ ಬಳಿ ಕೇಳಲು ಇ ಮೇಲ್ ಮಾಡಿದರೆ ಪ್ರತಿಕ್ರಿಯೆ ಬರಲಿಲ್ಲ. ಯೋಜನೆಯ ಪ್ರಮುಖ ಸಾಮಗ್ರಿಗಳ ಪೂರೈಕೆದಾರ ಜಪಾನ್ ನ ಅಂತಾರಾಷ್ಟ್ರೀಯ ನಿಗಮ ಸಂಸ್ಥೆ (ಜೆಐಸಿಎ) ತನ್ನ ವೆಬ್ ಸೈಟ್ ನಲ್ಲಿ ಯೋಜನೆಯಿಂದ ಆಗಬಹುದಾದ ಸಾಮಾಜಿಕ ಮತ್ತು ಪಾರಿಸರಿಕ ಪರಿಣಾಮಗಳನ್ನು ವಿವರಿಸಲಾಗಿದೆ ಎಂದು ಹೇಳಿದೆ.

ಅಧ್ಯಯನಗಳಿಂದ ತಿಳಿದುಬಂದ ಪ್ರಕಾರ ಯೋಜನೆ ಜಾರಿಯಿಂದ ವಾಯುಮಾಲಿನ್ಯದಿಂದಾಗಿ ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ. ವಿದ್ಯುತ್ ಘಟಕಗಳಿಂದ ಸುಮಾರು 500 ಕೋಟಿ ಕೃಷಿ ಬೆಳೆ ನಷ್ಟವಾಗಲಿದೆ. ಗುಜರಾತ್ ನ ವಾಪಿ ಮತ್ತು ವಲ್ಸದ್ ಮಾವು ಮತ್ತು ಚಿಕ್ಕು ಬೆಳೆಗಳ ಪ್ರದೇಶವಾಗಿದೆ. ಇವೆರಡೂ ವಾಯುಮಾಲಿನ್ಯಕ್ಕೆ ಬೇಗನೆ ಹಾಳಾಗುವ ಹಣ್ಣುಗಳು ಎನ್ನುತ್ತಾರೆ ಸಾಗರ್ ದಾರಾ.
ಮುಂಬೈ -ಅಹಮದಾಬಾದ್ ಶತಾಬ್ದಿ ತನ್ನ ಸಾಮರ್ಥ್ಯಕ್ಕಿಂತ ಶೇಕಡಾ 40ರಷ್ಟು ಕಡಿಮೆ ವೇಗದಲ್ಲಿ ಚಲಿಸುತ್ತದೆ. ಈ ಮಾರ್ಗದಲ್ಲಿ ಎಕ್ಸ್ ಪ್ರೆಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿ 8 ಇದೆ.

ಎರಡೂ ನಗರಗಳ ಮಧ್ಯೆ ವೊಲ್ವೊ ಬಸ್ ಓಡಾಡುತ್ತದೆ. ಸಾಕಷ್ಟು ವಿಮಾನಗಳಿವೆ. ಹೀಗಿರುವಾಗ ಬುಲೆಟ್ ರೈಲಿನ ಅವಶ್ಯಕತೆ ಏನಿದೆ? ಇದೆಲ್ಲಾ ಪರಿಸರ ನಾಶಮಾಡಲು, ಬೆಳೆಗಳಿಗೆ ಹಾನಿಮಾಡಲು ಇರುವ ಯೋಜನೆಗಳಷ್ಟೆ, ಗುಜರಾತ್ ನ ವಾಪಿ, ಸೂರತ್, ವಡೋದರಗಳಿಗೆ ಸಾಕಷ್ಟು ವಿಮಾನ, ಬಸ್ಸು, ರೈಲು ಸೌಕರ್ಯಗಳಿವೆ, ಇಲ್ಲಿ ಕೈಗಾರಿಕೀಕರಣವಾಗಿದೆ. ಹೀಗಿರುವಾಗ ಬುಲೆಟ್ ರೈಲಿನ ಅವಶ್ಯಕತೆಯಿಲ್ಲ, ಬೆಳೆಗಳು ಹಾನಿಯಾದರೆ ನಾವು ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ ಗುಜರಾತ್ ನ ವಾಪಿ ಜಿಲ್ಲೆಯ ಅಚ್ಚರಿ ಗ್ರಾಮದ ಮಾವು ಬೆಳೆಗಾರ ಕೇತನ್ ಭಾಯ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com