'ಜನ ಮುಖ್ಯವಾಗುತ್ತಾರೆ, ಹೈಕಮಾಂಡ್ ಅಲ್ಲ': ಮಿಚಿಗನ್ ನಲ್ಲಿ ಶೇ.93ರಷ್ಟು ಮತ ಪಡೆದ ಬೆಳಗಾವಿಯ ಥಾಣೆದಾರ್

ಅಮೆರಿಕ ಸಂಸತ್ ಗೆ ಮಿಚಿಗನ್ ಕ್ಷೇತ್ರದಿಂದ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಉದ್ಯಮಿ ಥಾಣೆದಾರ್ ಆಯ್ಕೆಯಾಗಿದ್ದು, ತಮಗೆ ಜನ ಮುಖ್ಯ.. ಹೈಕಮಾಂಡ್ ಅಲ್ಲ ಎಂದು ಹೇಳಿದ್ದಾರೆ.
ಮಿಚಿಗನ್ ನಲ್ಲಿ ಗೆದ್ದ ಥಾಣೆದಾರ್ (ಚಿತ್ರಕೃಪೆ: shriformi.com)
ಮಿಚಿಗನ್ ನಲ್ಲಿ ಗೆದ್ದ ಥಾಣೆದಾರ್ (ಚಿತ್ರಕೃಪೆ: shriformi.com)
Updated on

ಬೆಳಗಾವಿ: ಅಮೆರಿಕ ಸಂಸತ್ ಗೆ ಮಿಚಿಗನ್ ಕ್ಷೇತ್ರದಿಂದ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಉದ್ಯಮಿ ಥಾಣೆದಾರ್ ಆಯ್ಕೆಯಾಗಿದ್ದು, ತಮಗೆ ಜನ ಮುಖ್ಯ.. ಹೈಕಮಾಂಡ್ ಅಲ್ಲ ಎಂದು ಹೇಳಿದ್ದಾರೆ.

ಹೌದು.. ಅಮೆರಿಕದ ಮಿಚಿಗನ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಶೇ.93ರಷ್ಟು ಮತಗಳನ್ನು ಪಡೆದಿರುವ ನಮ್ಮ ಬೆಳಗಾವಿ ಮೂಲಕ ಥಾಣೆದಾರ ಅವರು, ಇದೀಗ ಅಮೆರಿಕ ಸಂಸತ್ ಪ್ರವೇಶ ಪಡೆದಿದ್ದಾರೆ. ಬೆಳಗಾವಿಯ ಇಲ್ಲಿನ ಶಹಾಪುರದ ಮೀರಾಪುರ ಗಲ್ಲಿಯಲ್ಲಿದ್ದ ಅವರು, ಸಾಧಾರಣ ಕುಟುಂಬದವರಾದರೂ  ತಮ್ಮ ಪ್ರತಿಭೆಯಿಂದಾಗಿ ಮೇಲೆ ಬಂದು, ಅಮೆರಿಕದಲ್ಲಿ ಶ್ರೀಮಂತ  ಉದ್ಯಮಿಯಾಗಿ ಹೊರಹೊಮ್ಮಿರುವುದು ವಿಶೇಷ. ಆರು ಮಕ್ಕಳ ಕುಟುಂಬದಲ್ಲಿ ಒಬ್ಬರಾಗಿದ್ದ ಅವರು ಶಿಕ್ಷಣ ಮತ್ತು ಹಣದ ಮಹತ್ವ ಚಿಕ್ಕಂದಿನಿಂದಲೇ ಅರಿತಿದ್ದರು. ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 55ರಷ್ಟು ಅಂಕಗಳನ್ನು  ಗಳಿಸಿ ತೇರ್ಗಡೆಯಾಗಿದ್ದರು.

18ನೇ ವಯಸ್ಸಿನಲ್ಲಿ ವಿಜಯಪುರದ ಬ್ಯಾಂಕೊಂದರಲ್ಲಿ ನೌಕರಿಗೆ ಸೇರಿದ್ದರು. ಕೆಲಸ ಮಾಡುತ್ತಲೇ ಎಂ.ಎಸ್ಸಿ. ಪದವಿ ಪಡೆಯಬೇಕು ಎನ್ನುವುದು  ಬಯಕೆಯಾಗಿತ್ತು. ಆದರೆ, ಧಾರವಾಡದ ಕಾಲೇಜಿನ ಪ್ರಾಂಶುಪಾಲರು ಅವರಿಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಕುಲಪತಿಯ ಬಳಿಯಿಂದ ಅನುಮತಿ  ಪಡೆದಿದ್ದರು. ಆದರೆ, ಇನ್ನೊಂದೆಡೆ 15 ದಿನಗಳ ರಜೆ ಮಂಜೂರು ಮಾಡಲು ಬ್ಯಾಂಕ್‌ ಅಧಿಕಾರಿಗಳು ನಿರಾಕರಿಸಿದ್ದರು. ಆದರೂ ಅವರು ಧಾರವಾಡದಲ್ಲಿ ಎಂ.ಎಸ್ಸಿ. ಪರೀಕ್ಷೆಗೆ ಹಾಜರಾಗಿದ್ದರು. ಇದರಿಂದಾಗಿ ಬ್ಯಾಂಕ್‌ನವರು ಅನುಮತಿ ಇಲ್ಲದೆ ಗೈರುಹಾಜರಿ ಎಂದು ಪರಿಗಣಿಸಿ ಅವರನ್ನು ಕೆಲಸದಿಂದ ತೆಗೆದಿದ್ದರು ಎನ್ನುವ ಸಂಗತಿಯನ್ನು ದಶಕದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದಾಗ ಸ್ಥಳೀಯ ಜಾಲತಾಣದೊಂದಿಗೆ ಹಂಚಿಕೊಂಡಿದ್ದರು. ಬ್ಯಾಂಕ್ ನೌಕರಿ ಕಳೆದುಕೊಂಡಿದ್ದ ಥಾಣೆದಾರ್ ಅವರು, ಈಗ ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ.

65 ವರ್ಷದ ಮಾಜಿ ವಿಜ್ಞಾನಿ ಮತ್ತು ಭಾರತೀಯ ಮೂಲದ ಉದ್ಯಮಿ ಶ್ರೀ ಥಾಣೆದಾರ್ ಅವರು ಮರಾಠಿ ಟಿವಿ ಚಾನೆಲ್ ಎಬಿಪಿ ಮರಾಠ ಸಂದರ್ಶನ ನೀಡಿದ್ದು. "ನಾನು ಬೆಳೆದದ್ದು ಕರ್ನಾಟಕದ ಬೆಳಗಾವಿಯಲ್ಲಿ.. ನಮ್ಮದು ಬಡ ಕುಟುಂಬ. ಬಡತನ ಕುಟುಂಬದವನಾದ ನನಗೆ ಸಾಮಾನ್ಯ ಜನರು ಎದುರಿಸುತ್ತಿರುವ  ಸಮಸ್ಯೆಗಳು ತಿಳಿದಿದೆ. ನನ್ನಂತಹ 'ಹೊರಗಿನವನು' ತಮ್ಮ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದೆಂದು ನನ್ನ ಪ್ರದೇಶದ ಜನರು ಒಮ್ಮೆ ಯೋಚಿಸಿದ್ದರು. ಅಮೆರಿಕ ನನಗೆ ತುಂಬಾ ನೀಡಿದೆ. ನಾನು ಈ ದೇಶಕ್ಕೆ ಋಣಿಯಾಗಿದ್ದೇನೆ ಮತ್ತು ಜನರಿಗೆ ಸೇವೆ ಸಲ್ಲಿಸಲು ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದೆ ಎಂದು  ಹೇಳಿದ್ದಾರೆ.

2018 ರ ಚುನಾವಣೆಯಲ್ಲಿ ಮಿಚಿಗನ್ ಗವರ್ನರ್ ಚುನಾವಣೆ ವೇಳೆ ನಾನು ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಅಭ್ಯರ್ಥಿಯಾಗಿದ್ದರಿಂದ ಅನೇಕ ಜನರಿಗೆ ನನ್ನ ಪರಿಚಯವಿದೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಾನು ಮನೆ ಮನೆಗೆ ಹೋಗಿದ್ದೆ. ಇದರ ಫಲಿತಾಂಶವೆಂದರೆ ನಾನು ಶೇಕಡಾ  93 ರಷ್ಟು ಮತಗಳನ್ನು ಪಡೆದಿದ್ದೇನೆ, ಆದರೆ ನನ್ನ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಕೇವಲ ಶೇ.ಆರು ರಷ್ಟು ಮತಗಳನ್ನು ಗಳಿಸಿದ್ದಾರೆ. ನನ್ನ ಮನೆ ಮನೆ ಭೇಟಿ ವೇಳೆ ನಾನು ಕಂಡುಕೊಂಡ ಜನರ ಸಮಸ್ಯೆಗಳನ್ನು ನಾನು ಓರ್ವ ಶಾಸಕನಾಗಿ ಪರಿಹರಿಸಲು ನನ್ನ ಸಂಪೂರ್ಣ ಪ್ರಯತ್ನ ಪಡುತ್ತೇನೆ ಎಂದು ಹೇಳಿದ್ದಾರೆ. 

ಅಂತೆಯೇ ತಾನು 24 ವರ್ಷದವನಿದ್ದಾಗ ಅಮೆರಿಕಕ್ಕೆ ಬಂದಿದ್ದೆ. ಈಗ ವಿಜ್ಞಾನಿ ಮತ್ತು ಉದ್ಯಮಿಯಾಗಿದ್ದೇನೆ. ಇಲ್ಲಿ ಹೈಕಮಾಂಡ್‌ಗೆ ಯಾವುದೇ ಅವಕಾಶವಿಲ್ಲ. ಎಲ್ಲಾ ಅಧಿಕಾರವು ಜನರ ಬಳಿ ಇದೆ, ಅವರು ಪ್ರಾಥಮಿಕವಾಗಿ ಮತ ಚಲಾಯಿಸುತ್ತಾರೆ ಮತ್ತು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ನೀವು ಜನರ  ಹಿತವನ್ನು ಆನಂದಿಸಬೇಕೇ ಹೊರತು ಪಕ್ಷದ ಹೈಕಮಾಂಡ್‌ನದ್ದಲ್ಲ. ಇಲ್ಲಿ ಕಾಲೇಜುಗಳು ದುಬಾರಿಯಾಗಿದೆ. ನಾನು ಅವುಗಳನ್ನು ಮುಕ್ತಗೊಳಿಸಲು ಬಯಸುತ್ತೇನೆ. ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ ನನ್ನ ಮತ್ತೊಂದು ಕಾಳಜಿಯಾಗಿದೆ. ನಗರ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು  ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಜನಾಂಗೀಯ ಪ್ರಕರಣಗಳ ಕುರಿತು ಮಾತನಾಡಿದ ಥಾಣೆದಾರ್ ಅವರು, ಇಲ್ಲಿ ಪ್ರಸ್ತುತ ವರ್ಣಬೇಧತೆಯನ್ನು ಯುವ ಪೀಳಿಗೆ ನಂಬುವುದಿಲ್ಲ. ಬಿಳಿಯರು ಮತ್ತು ಕರಿಯರೆಂಬ ಪ್ರತ್ಯೇಕತೆಯನ್ನು ಯುವ ಪೀಳಿಗೆ ವಿರೋಧಿಸುತ್ತಾರೆ ಎಂದು ಹೇಳಿದರು. 

ಥಾಣೆದಾರ ಅವರು, 1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1979ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಆಗಿನಿಂದಲೂ ಅಲ್ಲಿಯೇ ಉಳಿದಿದ್ದಾರೆ. 1982ರಲ್ಲಿ ಅಲ್ಲಿಯೇ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌.ಡಿ. ಪದವಿ ಗಳಿಸಿದ್ದಾರೆ. 1982ರಿಂದ  1984ರವೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ (ಪೋಸ್‌–ಡಾಕ್ಟರಲ್ ಸ್ಕಾಲರ್ ಆಗಿ) ಕೆಲಸ ಮಾಡಿದ್ದರು. 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್‌ ಆಗಿ ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಸ್ವಂತ ಉದ್ಯಮ ಆರಂಭಿಸುವ ಮೂಲಕ  ಉದ್ಯಮಿಯಾಗಿದ್ದಾರೆ. 65ರ ಹರೆಯದ ಶ್ರೀ ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ರಾಜ್ಯಪಾಲರ ಹುದ್ದೆಗೂ ಸ್ಪರ್ಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com