ಅಮೆರಿಕ ಸೆನೆಟರ್ ಭಾರತೀಯ ಮೂಲದ ಕಮಲಾ ಹ್ಯಾರಿಸ್ ರ ಹಲವು ಕುತೂಹಲಕಾರಿ ಸಂಗತಿಗಳು...

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬರುವ ನವೆಂಬರ್ ನಲ್ಲಿ ನಡೆಯಲಿದೆ. ಆಡಳಿತಾರೂಢ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಹಣಾಹಣಿ,ಚುನಾವಣಾ ಪ್ರಚಾರದ ಕಾವು ದೇಶದಲ್ಲಿ ಕೋವಿಡ್-19 ಮಧ್ಯೆ ಏರುತ್ತಿದೆ.
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಬರುವ ನವೆಂಬರ್ ನಲ್ಲಿ ನಡೆಯಲಿದೆ. ಆಡಳಿತಾರೂಢ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಹಣಾಹಣಿ,ಚುನಾವಣಾ ಪ್ರಚಾರದ ಕಾವು ದೇಶದಲ್ಲಿ ಕೋವಿಡ್-19 ಮಧ್ಯೆ ಏರುತ್ತಿದೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ 78 ವರ್ಷದ ಜೊ ಬಿಡನ್ ನಿನ್ನೆ ತಮ್ಮ ಉಪಾಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಎಂದು ಘೋಷಿಸಿದರು. ಈ ಮೂಲಕ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮೊದಲ ಕಪ್ಪುವರ್ಣ ಮಹಿಳೆ ಕಮಲಾ ಹ್ಯಾರಿಸ್.

ಪಕ್ಷದಿಂದ ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೂರನೇ ಮಹಿಳೆ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟರ್ ಕಮಲಾ ಹ್ಯಾರಿಸ್. ಈ ಹಿಂದೆ 2008ರಲ್ಲಿ ಅಲಸ್ಕ ಗವರ್ನರ್ ಸಾರಾ ಪಾಲಿನ್ ಮತ್ತು ನ್ಯೂಯಾರ್ಕ್ ರೆಪ್ರೆಸೆಂಟೇಟಿವ್ ಗೆರಲ್ಡಿನ್ ಫೆರ್ರರೊ 1984ರಲ್ಲಿ ಪಕ್ಷಗಳಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಈ ಹಿಂದೆ ಕಳೆದ ವರ್ಷ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಕಮಲಾ ಹ್ಯಾರಿಸ್ ಪ್ರಚಾರವನ್ನು ಆರಂಭಿಸಿದ್ದರು. ನಂತರ ತಮ್ಮ ಪ್ರಚಾರವನ್ನು ಮುಂದುವರಿಸಲು ಹಣಕಾಸಿನ ಕೊರತೆಯಿದೆ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕ ಸೆನೆಟ್ ನಲ್ಲಿರುವ ಮೂವರು ಏಷ್ಯಾ ಅಮೆರಿಕನ್ ಮಹಿಳೆಯರಲ್ಲಿ ಕಮಲಾ ಹ್ಯಾರಿಸ್ ಒಬ್ಬರಾಗಿದ್ದಾರೆ ಮತ್ತು ಮೊದಲ ಭಾರತೀಯ ಮೂಲದ ಅಮೆರಿಕದ ಸೆನೆಟರ್ ಕೂಡ ಆಗಿದ್ದಾರೆ.

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕಮಲಾ ಹ್ಯಾರಿಸ್: ಸಾರ್ವಜನಿಕ ಜೀವನದಲ್ಲಿ, ಆಡಳಿತದಲ್ಲಿ ಪಳಗಿದವರು ಕಮಲಾ ಹ್ಯಾರಿಸ್. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆ.


ಕಮಲಾ ಹ್ಯಾರಿಸ್ ಪರಿಚಯ: ಭಾರತೀಯ ಮೂಲದ ಮಹಿಳೆ. ಇವರ ತಂದೆ ಡೊನಾಲ್ಡ್ ಹ್ಯಾರಿಸ್ ಆಫ್ರಿಕಾದ ಜಮೈಕಾದವರು, ತಾಯಿ ಶ್ಯಾಮಲಾ ಗೋಪಾಲನ್ ಕ್ಯಾನ್ಸರ್ ಸಂಶೋಧಕಿ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಭಾರತದ ಚೆನ್ನೈ ಮೂಲದವರು. ಆದರೆ ಕಮಲಾ ಹ್ಯಾರಿಸ್ ತಮ್ಮನ್ನು ತಾವು ಅಮೆರಿಕನ್ ಎಂದು ಗುರುತಿಸಿಕೊಳ್ಳುತ್ತಾರೆ.

ಕಮಲಾ ಹ್ಯಾರಿಸ್ ಪೋಷಕರು ವಿಚ್ಚೇದನ ಪಡೆದಿದ್ದರು. ನಂತರ ತಾಯಿಯ ಆಶ್ರಯದಲ್ಲಿಯೇ ಬೆಳೆದರು. ಆಕೆಯ ತಾಯಿ ಕಪ್ಪು ವರ್ಣದ ಸಂಪ್ರದಾಯ ಅಳವಡಿಸಿಕೊಂಡು ಅದರಂತೆ ತನ್ನಿಬ್ಬರು ಪುತ್ರಿಯರಾದ ಕಮಲಾ ಮತ್ತು ಮಾಯಾರನ್ನು ಬೆಳೆಸಿದ್ದರು.
ಕಮಲಾ ಹ್ಯಾರಿಸ್ ಗೆ ಭಾರತದ ಸಂಪ್ರದಾಯದ ಪರಿಚಯವಿದೆ. ಅದರಡಿಯಲ್ಲಿಯೇ ತಾಯಿ ಬೆಳೆಸಿದ್ದರು. ಆದರೆ ಅವರು ಈಗ ಸಾಗಿಸುತ್ತಿರುವುದು ಆಫ್ರಿಕಾ ಅಮೆರಿಕನ್ ಜೀವನಶೈಲಿ. ತನ್ನ ತಾಯಿ ಜೊತೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಕಮಲಾ ಹ್ಯಾರಿಸ್ ಹುಟ್ಟಿದ್ದು ಓಕ್ ಲ್ಯಾಂಡ್ ನಲ್ಲಿ, ಬೆಳೆದದ್ದು ಬರ್ಕೆಲೆಯಲ್ಲಿ. ಕೆನಡಾದಲ್ಲಿ ಹೈಸ್ಕೂಲ್ ಜೀವನ ಕಳೆದರು. ಆಗ ಆಕೆಯ ತಾಯಿ ಎಂಸಿಗಿಲ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು.ನಂತರ ಅಮೆರಿಕದಲ್ಲಿ ಕಾಲೇಜು ಶಿಕ್ಷಣ, ಹಾರ್ವರ್ಡ್ ವಿ.ವಿಯಲ್ಲಿ ಕಮಲಾ ಅಧ್ಯಯನ ಮಾಡಿದರು.ಕ್ಯಾಲಿಫೋರ್ನಿಯಾ, ಹೇಸ್ಟಿಂಗ್ಸ್ ವಿವಿಗಳಲ್ಲಿ ಕಾನೂನು ಪದವಿ ಗಳಿಸಿ ಅಲಮೆಡಾ ಕೌಂಡಿ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ವೃತ್ತಿ ಆರಂಭಿಸಿದರು.

2010ರಲ್ಲಿ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ಅಲ್ಲಿಂದಲೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅವರಿಗೆ ಗೌರವ, ಸ್ಥಾನಮಾನ ಸಿಕ್ಕಿ, 2017ರಲ್ಲಿ ಕ್ಯಾಲಿಫೋರ್ನಿಯಾದಿಂದ ಸೆನೆಟರ್ ಆಗಿ ಆಯ್ಕೆಯಾದರು.
ಈ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 13 ಲಕ್ಷ ಭಾರತೀಯ ಅಮೆರಿಕನ್ನರು ಮತ ಚಲಾಯಿಸಲಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 77ರಷ್ಟು ಮಂದಿ ಅಂದಿನ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮತ ಹಾಕಿದ್ದರು. ಹೀಗಾಗಿ ಈ ಬಾರಿ ಕೂಡ ಡೆಮಾಕ್ರಟಿಕ್ ಪಕ್ಷ ಭಾರತೀಯ ಮೂಲದ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಿಲ್ಲಿಸಿದೆ.

ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತೀಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮತ್ತ ಭಾರತೀಯ ಅಮೆರಿಕನ್ನರ ಮತಗಳು ಸಿಗಬೇಕೆಂದು ಇಲ್ಲಿನ ಉದ್ಯಮಿಗಳು, ತಂತ್ರಜ್ಞರ ಮನಗೆಲ್ಲುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com