ಮೈಸೂರು: ಮದುವೆಯಾಗಿ, ಮಕ್ಕಳಾದ ಬಳಿಕ ಕ್ರೀಡೆಗೆ ಮರಳಿದ ಮಹಿಳೆ 

ಮದುವೆಯಾಗಿ ಮಕ್ಕಳಾದ ಮೇಲೆ ಹೆಂಗಸರ ಜೀವನ ಮುಗೀತು, ಮನೆ, ಸಂಸಾರ ಎಂದು ನೋಡಿಕೊಳ್ಳುವುದರಲ್ಲೆಯೇ ಅವರ ಜೀವನ ಕಳೆಯುತ್ತದೆ, ಇನ್ನು ತಮ್ಮ ಪ್ರತಿಭೆ, ಆಸಕ್ತಿಗಳನ್ನು ತೋರಿಸಿಕೊಳ್ಳಲು ಅವರಿಗೆಲ್ಲಿದೆ ಅವಕಾಶ ಎಂಬ ಅಭಿಪ್ರಾಯಗಳೇ ಹೆಚ್ಚಿನ ಮಂದಿಯಲ್ಲಿ.
ಲಕ್ಷ್ಮಿ
ಲಕ್ಷ್ಮಿ

ಮೈಸೂರು:ಮದುವೆಯಾಗಿ ಮಕ್ಕಳಾದ ಮೇಲೆ ಹೆಂಗಸರ ಜೀವನ ಮುಗೀತು, ಮನೆ, ಸಂಸಾರ ಎಂದು ನೋಡಿಕೊಳ್ಳುವುದರಲ್ಲಿ ಅವರ ಜೀವನ ಕಳೆಯುತ್ತದೆ, ಇನ್ನು ತಮ್ಮ ಪ್ರತಿಭೆ, ಆಸಕ್ತಿಗಳನ್ನು ತೋರಿಸಿಕೊಳ್ಳಲು ಅವರಿಗೆಲ್ಲಿದೆ ಅವಕಾಶ ಎಂಬ ಅಭಿಪ್ರಾಯಗಳೇ ಹೆಚ್ಚಿನ ಮಂದಿಯಲ್ಲಿ.


ಆದರೆ ಮೈಸೂರಿನ ಅಶೋಕಪುರಂನ 35 ವರ್ಷದ ಲಕ್ಷ್ಮಿ ಇದಕ್ಕೆ ಅಪವಾದ. ಅವರು ಶಾಲಾ, ಕಾಲೇಜು ದಿನಗಳಲ್ಲಿ ಖೊ-ಖೊ ಪಂದ್ಯದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದವರು. ಆದರೆ ಪಿಯುಸಿ ಮುಗಿಯುವುದರೊಳಗೆ ಮನೆಯವರು ಮದುವೆ ಮಾಡಿದ್ದರಿಂದ ಓದು ಮತ್ತು ಕ್ರೀಡೆಯನ್ನು ಅರ್ಧಕ್ಕೆ ನಿಲ್ಲಿಸಿ ಗಂಡನ ಮನೆ ಸೇರಿದರು.


ಅದಾಗಿ 16 ವರ್ಷ ಕಳೆದಿದೆ. ಇಬ್ಬರು ಗಂಡು ಮಕ್ಕಳಾದರು. ತನಗೆ ಕ್ರೀಡೆಯಲ್ಲಿ ಇದ್ದ ಆಸಕ್ತಿಯನ್ನು ಮಕ್ಕಳಿಗೆ ಧಾರೆಯೆರೆದು ತರಬೇತಿಗೆ ಕಳುಹಿಸಿದರು. ಅದಕ್ಕೆ ಸರಿಯಾಗಿ ಮಕ್ಕಳಿಗೆ ಸಹ ಕ್ರೀಡೆಯಲ್ಲಿ ಆಸಕ್ತಿಯಿತ್ತು. ಅಥ್ಲೆಟಿಕ್ಸ್ ನಲ್ಲಿ ಮಕ್ಕಳಿಗೆ ತರಬೇತಿ ಕೊಡಿಸಿದರು. ಒಂದು ದಿನ ಮಕ್ಕಳ ತರಬೇತುದಾರ ರಾಷ್ಟ್ರಮಟ್ಟದ ಅಥ್ಲೆಟ್ ಟಿ ಎಸ್ ರವಿ ಲಕ್ಷ್ಮಿಯವರು ಮೂಲತಃ ಕ್ರೀಡಾಪಟು ಎಂದು ಗೊತ್ತಾಗಿ ಮತ್ತೆ ನೀವು ಅಭ್ಯಾಸ ಮುಂದುವರಿಸಬಹುದಲ್ಲಾ ಎಂದು ಕೇಳಿದರಂತೆ. ಕ್ರೀಡಾ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸುವಂತೆ ಹುರಿದುಂಬಿಸಿದರಂತೆ.


 ತರಬೇತುದಾರರ ಸಲಹೆ ಮೇರೆಗೆ ಲಕ್ಷ್ಮಿ ಮದುವೆಯಾಗಿ 16 ವರ್ಷಗಳ ನಂತರ ಮತ್ತೆ ಮೈದಾನಕ್ಕೆ ಇಳಿದರು. ಕ್ರೀಡೆ ಮತ್ತೆ ಅವರ ಕೈಹಿಡಿದಿದೆ. ಒಂದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿ ಹರ್ಡಲ್ಸ್ ನಲ್ಲಿ ತರಬೇತಿ ಪಡೆದರು. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚ್ಯಾಂಪಿಯನ್ ಷಿಪ್ ನಲ್ಲಿ ಭಾರತದಿಂದ ಲಕ್ಷ್ಮಿ ಪ್ರತಿನಿಧಿಸಲಿದ್ದಾರೆ. ಈ ತಿಂಗಳಾರಂಭದಲ್ಲಿ ವಡೋದರದಲ್ಲಿ ನಡೆದಿದ್ದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ 400 ಮೀಟರ್ಸ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.


ತನ್ನ ಈ ಯಶಸ್ಸಿಗೆ ಪೋಷಕರು, ಪತಿ, ಮಕ್ಕಳು ಮತ್ತು ಮಕ್ಕಳ ತರಬೇತುದಾರರ ಪ್ರೋತ್ಸಾಹವೇ ಕಾರಣ ಎಂದು ಲಕ್ಷ್ಮಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com