ಡಾ. ಎ.ಪಿ.ಜೆ. ಅಬ್ದುಲ್ ಕಲಾಂ 89ನೇ ಜಯಂತಿ: 'ಕ್ಷಿಪಣಿ ಜನಕ'ನ 5 ಪ್ರಮುಖ ವೈಜ್ಞಾನಿಕ ಕೊಡುಗೆಗಳು

ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿ, ಜನರ ಮಚ್ಚಿನ ರಾಷ್ಟ್ರಪತಿಯಾಗಿ, ಭಾರತದ ಪ್ರಮುಖ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಯಾಗಿ ದಿವಂಗತ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಹಲವು ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದವರು.
ಡಾ ಎ ಪಿ ಜೆ ಅಬ್ದುಲ್ ಕಲಾಂ
ಡಾ ಎ ಪಿ ಜೆ ಅಬ್ದುಲ್ ಕಲಾಂ

ನವದೆಹಲಿ: ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿ, ಜನರ ಮಚ್ಚಿನ ರಾಷ್ಟ್ರಪತಿಯಾಗಿ, ಭಾರತದ ಪ್ರಮುಖ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಯಾಗಿ ದಿವಂಗತ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಹಲವು ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದವರು.

ಬಾಹ್ಯಾಕಾಶ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಭಾರತದ ಎರಡು ಪ್ರಮುಖ ಅಂತರಿಕ್ಷ ಸಂಶೋಧನಾ ಸಂಸ್ಥೆಗಳಾದ ಡಿಆರ್ ಡಿಒ ಮತ್ತು ಇಸ್ರೊದಲ್ಲಿ ಕೆಲಸ ಮಾಡಿದ್ದರು.ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಮತ್ತು ಪೃಥ್ವಿಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದು ಪಡೆದಿದ್ದು ಮಾತ್ರವಲ್ಲದೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ವಿಷಯಗಳಲ್ಲಿ ಕಲಾಂ ಕೊಡುಗೆ ನೀಡಿದ್ದಾರೆ.

ಇಂದು ಅವರ 89ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ದೇಶದ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿರುವ ಪ್ರಮುಖ 5 ಕೊಡುಗೆಗಳನ್ನು ಸ್ಮರಿಸುವುದಾದರೆ:
1. ಭಾರತದ ಮೊದಲ ಉಪಗ್ರಹ ಉಡಾವಣೆ ವಾಹಕ (ಎಸ್ಎಲ್ ವಿ)ಯನ್ನು ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದ್ದು: ಅದು 1980ರ ದಶಕ, ಆಗ ದೇಶ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣೆ ವಾಹಕವನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಡಾ ಕಲಾಂ ಅವರು ಇಸ್ರೊದಲ್ಲಿ ಕೆಲಸ ಮಾಡುತ್ತಿದ್ದಾಗ 10 ವರ್ಷಕ್ಕೂ ಹೆಚ್ಚು ಕಾಲ ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಉಡಾವಣೆ ವಾಹಕದ ಯೋಜನೆ ಮೇಲೆ ಸತತವಾಗಿ ನಿರ್ದೇಶಕರಾಗಿ ಕಠಿಣ ಕೆಲಸ ಮಾಡಿದ್ದರು. 

ಇದರ ಫಲವೇ 1980ರ ಜುಲೈಯಲ್ಲಿ, ಭಾರತದ ಎಸ್ ಎಲ್ ವಿ-3 ಯಶಸ್ವಿಯಾಗಿ ರೋಹಿಣಿ ಸ್ಯಾಟಲೈಟ್ ನ್ನು ಭೂ ಕಕ್ಷೆಗೆ ಸೇರಿಸಿ ಅಂತರಿಕ್ಷ ಕ್ಲಬ್ ನಲ್ಲಿ ಭಾರತ ಸದಸ್ಯ ರಾಷ್ಟ್ರವಾಗುವಂತೆ ಮಾಡಿದರು.

2. ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗೆ ನಿರ್ದೇಶನ: ಎಸ್ ಎಲ್ ವಿ ಸ್ಯಾಟಲೈಟ್ ನ ಯಶಸ್ವಿ ಉಡಾವಣೆ ನಂತರ ಭಾರತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿತು. ನಂತರ ಕೈಗೂಡಿದ್ದೇ ಡೆವಿಲ್ ಮತ್ತು ವೇಲಿಯಂಟ್ ಯೋಜನೆಗಳು. ಈ ಯೋಜನೆಗಳಡಿ ಕಲಾಂ ಅವರು ಇತರ ವಿಜ್ಞಾನಿಗಳ ಸಹಕಾರದೊಂದಿಗೆ ಅಗ್ನಿ ಇಂಟರ್ ಮೀಡಿಯೆಟ್ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪೃಥ್ವಿ ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದರು.

3. ಪೋಕ್ರಾನ್ ನಲ್ಲಿ ಹಲವು ಪರಮಾಣು ಪರೀಕ್ಷೆ: ಅಂದಿನ ಪ್ರಧಾನ ಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ ಕಲಾಂ ಪೋಕ್ರಾನ್ -2 ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಅಂದಿನ ಅತ್ಯುತ್ತಮ ಪರಮಾಣು ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದರು. 1992ರ ಜುಲೈಯಿಂದ 1999ರವರೆಗೆ ಕಲಾಂ ನೇತೃತ್ವದಲ್ಲಿ ದೇಶದಲ್ಲಿ ಹಲವು ಪರಮಾಣು ಪರೀಕ್ಷೆಗಳು ನಡೆದವು.

4. ಆರೋಗ್ಯಸೇವೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದು: ಸೋಮ ರಾಜು ಎಂಬ ಹೃದ್ರೋಗ ತಜ್ಞರ ಜೊತೆ ಕೆಲಸ ಮಾಡಿಕೊಂಡು ಕಡಿಮೆ ವೆಚ್ಚದ ಕೊರೋನರಿ ಸ್ಟಂಟ್ ಕಲಾಂ-ರಾಜು ಸ್ಟಂಟ್ ನ್ನು ಅಭಿವೃದ್ಧಿಪಡಿಸಿದರು, ಇದರಿಂದ ಆರೋಗ್ಯಸೇವೆ ಎಲ್ಲರಿಗೂ ಸಿಗುವಂತಾಯಿತು.

5. ಕಲಾಂ-ರಾಜು ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದು: 2012ರಲ್ಲಿ ಕಲಾಂ ಮತ್ತು ವೈದ್ಯ ಡಾ ಸೋಮ ರಾಜು ಅವರು ದೇಶದ ಗ್ರಾಮೀಣ ಭಾಗದ ಜನರಿಗಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಟ್ಯಾಬ್ಲೆಟ್ ಕಂಪ್ಯೂಟರ್ ಅಭಿವೃದ್ಧಿಪಡಿಸಿದರು. ಇದನ್ನು ಕಲಾಂ-ರಾಜು ಟ್ಯಾಬ್ಲೆಟ್ ಎಂದು ಕರೆಯಲಾಯಿತು. ವಿಜ್ಞಾನ ಮತ್ತು ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿದ್ದ ಕಲಾಂ ದೇಶದ 11ನೇ ರಾಷ್ಟ್ರಪತಿಯಾದರು. ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಕಲಾಂ ಅವರಿಗೆ ಸಿಕ್ಕಿತ್ತು.

ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರು ಶಿಲ್ಲಾಂಗ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಭಾಷಣ ಮಾಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದು 2015ರ ಜುಲೈ 27ರಂದು ಮೃತಪಟ್ಟರು.

ಭೌತಿಕವಾಗಿ ದೂರವಾದರೂ ಮಾನಸಿಕವಾಗಿ ಅವರು ಭಾರತೀಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com