ಒಲಂಪಿಕ್ಸ್ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ಹಿಂದೆ ಶಿರಸಿ ವ್ಯಕ್ತಿಯ ಪರಿಶ್ರಮ!
ಹುಬ್ಬಳ್ಳಿ: ಟೊಕಿಯೊದಲ್ಲಿ ನಡೆದ ಒಲಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ ಇದೀಗ ಈಡೀ ವಿಶ್ವದ ಗಮನ ಸೆಳೆದಿದ್ದಾರೆ. ಒಲಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ನೀರಜ್ ಚೋಪ್ರಾ ಸಾಧನೆಯನ್ನು ಪ್ರತೀಯೊಬ್ಬರೂ ಕೊಂಡಾಡುತ್ತಿದ್ದಾರೆ.
ಈ ನಡುವೆ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಸಾಧನೆಯ ಹಿಂದೆ ಶಿರಸಿ ವ್ಯಕ್ತಿಯ ಪರಿಶ್ರಮ ಇದೆ ಎಂಬುದು ಕರ್ನಾಟಕದ ಹೆಮ್ಮೆಯ ವಿಚಾರವಾಗಿದೆ.
ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ್ ಅವರು ಈ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದಾರೆ.
23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ್, 2010ರ ನವದೆಹಲಿಯ ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ 2019ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ.
2015ರಲ್ಲಿ ಕಾಶಿನಾಥ ನಾಯ್ಕರ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ, ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.
ನೀರಜ್ ಚೋಪ್ರಾ ಚಿನ್ನದ ಪದಕ ವಿಜೇತರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಕಾಶಿನಾಥ ನಾಯ್ಕ, "2016ರಲ್ಲೇ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ. ಯಾಕೆಂದರೆ, ಕೆಲವು ಯುವಕರು ತರಬೇತಿ ಪಡೆದು ಒಂದಷ್ಟು ಕ್ರೀಡೆಗಳಲ್ಲಿ ಸಾಧನೆ ತೋರುತ್ತಿದ್ದಂತೆ ಅಹಂ ಬರುತ್ತದೆ. ಆದರೆ ನೀರಜ್ ಚೋಪ್ರಾನಲ್ಲಿ ಎಳ್ಳಷ್ಟು ಆ ಗುಣವಿಲ್ಲ. ಎಲ್ಲರ ಆಶೀರ್ವಾದ ಆತನ ಮೇಲಿದೆ. ಆತನ ಗುಣ ಕೂಡ ಇಂದು ಆತ ಚಿನ್ನದ ಪದಕ ಗೆಲ್ಲಲು ಕಾರಣವಾಗಿದೆ," ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ನನ್ನೊಂದಿಗೆ 5 ವರ್ಷಗಳ ಕಾಲ ಇದ್ದರು. ಸೇನೆಗೆ ಕ್ರೀಡಾಪಟುವಾಗಿ ಸೇರುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದೆ. ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿಯೂ ನೀರಜ್ ನನ್ನೊಂದಿಗೆ ಸಂಪರ್ಕದಲ್ಲಿಯೇ ಇದ್ದರು. ಗಾಯಗೊಂಡಾಗ, ಚೇತರಿಕೆ ಸಂದರ್ಭದಲ್ಲಿಯೂ ಸಂಪರ್ಕದಲ್ಲಿಯೇ ಇದ್ದರು. ಸಾಧನೆ ಮಾಡುವಾಗ ಕೆಲವೊಂದು ಅಡೆತಡೆಗಳು ಎದುರಾಗುತ್ತೇವೆ.
ಕೆಲವೊಮ್ಮೆ ವೈಫಲ್ಯಗಳನ್ನೂ ನೋಡಬೇಕಾಗುತ್ತದೆ. ನೀರಜ್ ಅವರೂ ಕೂಡ ಸಾಕಷ್ಟು ಬಾರಿ ವಿಫಲವನ್ನು ಅನುಭವಿಸಿದ್ದರು. ಜಾವೆಲಿನ್ ಎಸೆಯುವ ಪ್ರಯತ್ನದ ವೇಳೆ ಕ್ರೀಡಾ ನಿಯಮಗಳು ಕೆಲವೊಮ್ಮೆ ಗೊಂದಲಗಳನ್ನು ಸೃಷ್ಟಿಸುತ್ತವೆ. ಆದರೆ, ಈ ವೇಳೆ ನಾವು ಹೂಡುವ ತಂತ್ರ ಪ್ರಮುಖವಾಗುತ್ತದೆ. ನೀರಜ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ನೀರಜ್ ಅವರಿಗೆ ಉತ್ತಮ ಭವಿಷ್ಯವಿದೆ. ಪ್ರತೀಯೊಬ್ಬ ಭಾರತೀಯನೂ ಹೆಮ್ಮೆಪಡುವ ಸಂದರ್ಭ ಇದು. ಒಲಂಪಿಕ್ಸ್ ನಲ್ಲಿ ನೀರಜ್ ಅವರಿಗೆ ದೊರಕಿರುವ ಈ ಚಿನ್ನದ ಪದಕವು ಭಾರತದಲ್ಲಿ ಅಥ್ಲೆಟಿಕ್ಸ್‌ಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.


