ಸ್ವ ನಿರ್ಬಂಧ, ಮಾರ್ಗಸೂಚಿ ಪಾಲನೆ ಮಾಡಿದರೆ ಕೊರೋನಾ ಹತ್ತಿರ ಸುಳಿಯಲ್ಲ ಎಂಬುದಕ್ಕೆ ಮೈಸೂರಿನ ಈ ಗ್ರಾಮಗಳೇ ಸಾಕ್ಷಿ!

ಸರ್ಕಾರ ಏನೇ ಮಾಡಿದರೂ ಜನರು ಕೂಡ ಸ್ವ ನಿರ್ಬಂಧ ವಿಧಿಸಿಕೊಳ್ಳದಿದ್ದರೆ ಕೊರೋನಾ ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಸರ್ಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹೇಳುತ್ತಿದ್ದಾರೆ.
ಕಾಟೂರು ಗ್ರಾಮದ ರೈತರು ಜಮೀನಿನಲ್ಲಿ ಎತ್ತುಗಳ ಸಹಾಯದಿಂದ ಉಳುತ್ತಿರುವುದು
ಕಾಟೂರು ಗ್ರಾಮದ ರೈತರು ಜಮೀನಿನಲ್ಲಿ ಎತ್ತುಗಳ ಸಹಾಯದಿಂದ ಉಳುತ್ತಿರುವುದು

ಮೈಸೂರು: ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇಕಡಾ 55ಕ್ಕೂ ಹೆಚ್ಚಾಗಿದ್ದು, ಗ್ರಾಮಾಂತರ ಭಾಗಗಳಲ್ಲಿ ಕೂಡ ಇತ್ತೀಚೆಗೆ ಸೋಂಕಿತರ, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಏನೇ ಮಾಡಿದರೂ ಜನರು ಕೂಡ ಸ್ವ ನಿರ್ಬಂಧ ವಿಧಿಸಿಕೊಳ್ಳದಿದ್ದರೆ ಕೊರೋನಾ ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಸರ್ಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹೇಳುತ್ತಿದ್ದಾರೆ.

ಕೆಲವು ಗ್ರಾಮಸ್ಥರು ನಿಯಮವನ್ನು ಸರಿಯಾಗಿ ಪಾಲಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ತಮ್ಮದೇ ರೀತಿಯಲ್ಲಿ ಕೊರೋನಾ ಓಡಿಸುತ್ತಿದ್ದಾರೆ.

ಇಲ್ಲಿನ ಕಾಟೂರು ಮತ್ತು ಇಚನಗಿ ಗ್ರಾಮಗಳ ಗ್ರಾಮಸ್ಥರು ಕೊರೋನಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ನಿಯಮವನ್ನು ಗ್ರಾಮದ ಮುಖಂಡರೇ ಜಾರಿಗೆ ತಂದಿದ್ದಾರೆ. ಒಟ್ಟು 2 ಸಾವಿರ ಜನಸಂಖ್ಯೆಯಿರುವ ಈ ಗ್ರಾಮಗಳಲ್ಲಿ ಕೊರೋನಾ ಒಂದನೇ ಅಲೆ, ಎರಡನೇ ಅಲೆ ಬಂದರೂ ಒಂದೇ ಒಂದು ಸೋಂಕಿನ ವರದಿಯಾಗಿಲ್ಲ ಎಂದರೆ ನಂಬಲೇಬೇಕು.

ಕಳೆದ ವರ್ಷ ಒಂದೇ ಒಂದು ಕೊರೋನಾ ಸೋಂಕಿನ ಕೇಸು ಗ್ರಾಮಗಳಲ್ಲಿ ವರದಿಯಾಗದೇ ಇದ್ದಾಗ ಜನರು ಗ್ರಾಮದೇವತೆ ಮಾರಿಹಬ್ಬವನ್ನು ಮಾಡಲು ನಿರ್ಧರಿಸಿದರು. ಮಾರಿಹಬ್ಬವೆಂದರೆ ಕುರಿ ಕಡಿದು ಸಂಭ್ರಮಾಚರಣೆ, ಜನರು ಸೇರುವುದು ಇದ್ದೇ ಇರುತ್ತದೆ, ಆದರೆ ಆಗ ವಕ್ಕರಿಸಿತು ನೋಡಿ ಕೊರೋನಾ ಎರಡನೇ ಅಲೆ. ಆಗ ಗ್ರಾಮಸ್ಥರು ನಮಗೆ ಯಾವ ಹಬ್ಬವೂ ಬೇಡ, ಸಂಭ್ರಮವೂ ಬೇಡ, ಆರೋಗ್ಯವೇ ಮುಖ್ಯ ಎಂದು ಮಾರಮ್ಮ ಹಬ್ಬವನ್ನು ಮುಂದೂಡಿದರು. ಇದೀಗ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದಾರೆ, ಅದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. 

ಕೈ-ಮೈ, ಪರಿಸರ ಸ್ವಚ್ಛವಾಗಿಡುವುದು, ವಾರದಲ್ಲಿ ಮೂರು ದಿನ ಸೋಂಕು ನಿವಾರಕವನ್ನು ಗ್ರಾಮದಲ್ಲಿ ಸಿಂಪಡಿಸುವುದು, ಮನೆ, ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಈ ಗ್ರಾಮಸ್ಥರು ತಪ್ಪದೇ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯೆ ಶಿವಮ್ಮ ಹೇಳುತ್ತಾರೆ.

ಕೊರೋನಾಗಾಗಿ ಮದುವೆ, ಉತ್ಸವ ಎಲ್ಲವನ್ನೂ ಮುಂದೂಡಿದ ಗ್ರಾಮಸ್ಥರು: ಕಳೆದ ವರ್ಷ ಕೊರೋನಾ ಕಾಲಿಟ್ಟ ಮೇಲೆ ಗ್ರಾಮಸ್ಥರು ಆರೋಗ್ಯವೇ ಎಲ್ಲಕ್ಕಿಂತ ಮುಖ್ಯ ಎಂದು ಭಾವಿಸಿ ಜನರು ಸೇರುವ ಉತ್ಸವ, ಸಭೆ, ಸಮಾರಂಭ, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ಹಲವರು ಮುಂದೂಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಮಾರಮ್ಮ ಅವರು ಎಲ್ಲಾ ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ನೈರ್ಮಲ್ಯ / ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಕಟ್ಟುನಿಟ್ಟಾಗಿ ಅಭ್ಯಾಸ ಮಾಡುವ ಮನವಿಯೊಂದಿಗೆ ಪಂಚ ಸೂತ್ರಗಳ ಬಗ್ಗೆ ವಿವರಿಸಿದ್ದಾರೆ. ಈಗ, ಕೊರೋನಾ ಮೂರನೇ ಅಲೆ ಬಗ್ಗೆ ಆತಂಕದಿಂದ, ಅವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.

ಎಲ್ಲಾ ಸಮುದಾಯಗಳ ಹಳ್ಳಿ ಮುಖ್ಯಸ್ಥರನ್ನು ಒಳಗೊಂಡ ಸ್ಥಳೀಯ ಪಂಚಾಯತ್ ಸಹ ಒಂದು ಪಾತ್ರವನ್ನು ವಹಿಸಿದೆ, ಪ್ರತಿಯೊಬ್ಬರೂ ಮಾಸ್ಕ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು, ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಮದುವೆ ಅಥವಾ ಅಂತ್ಯಕ್ರಿಯೆಗಳಲ್ಲಿ 30 ಕ್ಕೂ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳುತ್ತಿದ್ದಾರೆ.

ಕೃಷಿ ಕಾರ್ಮಿಕರನ್ನು 20 ದಿನಗಳ ಕಾಲ ಮನೆಯಲ್ಲಿಯೇ ಇರಬೇಕೆಂದು ಕೇಳಿಕೊಂಡಿದ್ದಾರೆ, ಮನರಂಜನೆ ಅಥವಾ ಹೊರಗಿನ ಜನರ ಸಂಪರ್ಕಕ್ಕೆ ಬರದಂತೆ ನಿರ್ಧರಿಸಿದ್ದಾರೆ. "ನಾವು ನೆರೆಯ ರಾಜ್ಯದ ಜನರ ಒಡೆತನದ ಜಮೀನುಗಳಲ್ಲಿ ಶುಂಠಿಯನ್ನು ಕೊಯ್ಲು ಮಾಡಲು ಗ್ರಾಮಸ್ಥರನ್ನು ಕಳುಹಿಸುತ್ತಿಲ್ಲ" ಎಂದು ವಕೀಲ ನಾಗರಾಜ್ ಹೇಳಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾದೇವಸ್ವಾಮಿ ಅವರು ನಿಯಮಿತವಾಗಿ ಪ್ರಕಟಣೆಗಳನ್ನು ಮಾಡಲು ಮತ್ತು ಕೋವಿಡ್ -19 ಮಾನದಂಡಗಳು, ವ್ಯಾಕ್ಸಿನೇಷನ್ ಪ್ರಯೋಜನಗಳು ಮತ್ತು ಎಂಎನ್‌ಆರ್‌ಇಜಿಎ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಆಟೋರಿಕ್ಷಾವನ್ನು ನಿಯೋಜಿಸಿಕೊಂಡಿದ್ದಾರೆ.

ಸುಮಾರು 1,500 ಜನಸಂಖ್ಯೆಯನ್ನು ಹೊಂದಿರುವ ಕಾಟೂರು ಗ್ರಾಮಸ್ಥರು, ನೆರೆಯ ಹಳ್ಳಿಗಳಲ್ಲಿರುವ ಅವರ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಅನೇಕರು ಕೋವಿಡ್ ಮುಕ್ತವಾಗಿರಲು ತೆಗೆದುಕೊಂಡ ಉಪಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅಂಬೇಡ್ಕರ್ ಸಂಘ ಅಧ್ಯಕ್ಷ ಶಿವಮೂರ್ತಿ, ಹಳ್ಳಿಯ ಕೇವಲ ಒಂದು ಅಥವಾ ಇಬ್ಬರು ಸದಸ್ಯರು ಇಡೀ ಹಳ್ಳಿಯ ಎಲ್ಲ ಕುಟುಂಬಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ನೋಡಿಕೊಳ್ಳುತ್ತಿದ್ದಾರೆ, ಪ್ರತಿ ಕುಟುಂಬದ ಸದಸ್ಯರು ಹೊರಹೋಗುವ ಬದಲು ಮತ್ತು ಹೊರಗಿನವರ ಪ್ರವೇಶವನ್ನು ನಿರ್ಬಂಧಿಸುವಂತಹ ಹೊಸ ಕ್ರಮಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ ಎಂದು ಹಳ್ಳಿಯಲ್ಲಿ ತೆಗೆದುಕೊಂಡಿರುವ ನಿರ್ಬಂಧ, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com