ಬರಿಗಾಲಲ್ಲಿ ಹೋಗಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ, ತುಳಸಿಗೌಡ: ಸರಳತೆ, ದೃಢ ಸಂಕಲ್ಪಕ್ಕೆ ಮೆಚ್ಚುಗೆಯ ಮಹಾಪೂರ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಕೈಯಿಂದ ಕಳೆದ ಸೋಮವಾರ ಪದ್ಮ ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಸಾಧಕರ ಮಧ್ಯೆ ಅತಿ ಹೆಚ್ಚು ಗಮನ ಸೆಳೆದು ಸುದ್ದಿಯಾದವರು ಕರ್ನಾಟಕದ ಹರೆಕಾಲ ಹಾಜಬ್ಬ ಮತ್ತು ತುಳಸಿ ಗೌಡ. 
ಕುಟುಂಬ ಸದಸ್ಯರೊಂದಿಗೆ ತುಳಸಿ ಗೌಡ
ಕುಟುಂಬ ಸದಸ್ಯರೊಂದಿಗೆ ತುಳಸಿ ಗೌಡ

ಮಂಗಳೂರು/ಕಾರವಾರ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಕೈಯಿಂದ ಕಳೆದ ಸೋಮವಾರ ಪದ್ಮ ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಸಾಧಕರ ಮಧ್ಯೆ ಅತಿ ಹೆಚ್ಚು ಗಮನ ಸೆಳೆದು ಸುದ್ದಿಯಾದವರು ಕರ್ನಾಟಕದ ಹರೆಕಾಲ ಹಾಜಬ್ಬ ಮತ್ತು ತುಳಸಿ ಗೌಡ. 

ರಾಷ್ಟ್ರಪತಿ ಭವನದೊಳಗೆ ಕೂತಿದ್ದ ಗಣ್ಯರು ಮತ್ತು ಸಭಿಕರ ಮಧ್ಯೆ ಈ ಇಬ್ಬರು ಸಾಧಕರು ತಮ್ಮ ಸರಳ-ಸೀದ ವೇಷಭೂಷಣಗಳು, ಸಾಂಪ್ರದಾಯಿಕ ನಡಿಗೆ, ಉಡುಪು, ವಿನಯತೆಯಿಂದ ಬರಿಗಾಲಿನಲ್ಲಿ ಹೋಗಿ ರಾಷ್ಟ್ರಪತಿಗಳ ಬಳಿಯಿಂದ ಪ್ರಶಸ್ತಿ ಸ್ವೀಕರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ರಾಷ್ಟ್ರರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಹೋಗುವುದರೆಂದರೆ ಸಂಭ್ರಮ-ಸಡಗರವಂತೂ ಇದ್ದೇ ಇರುತ್ತದೆ. ಆದರೆ ಈ ಇಬ್ಬರೂ ವಿಶೇಷವಾಗಿ ವೇಷಭೂಷಣ ಅಲಂಕಾರ ಮಾಡಿಕೊಂಡು ಹೋಗಿರಲಿಲ್ಲ. ತಮ್ಮೂರಿನಲ್ಲಿ, ಮನೆಯಲ್ಲಿ ಉಡುವ ಧಿರಿಸಿನಲ್ಲಿಯೇ ಹೋಗಿದ್ದರು. ದೆಹಲಿಯ ಅಶೋಕ ಹೊಟೇಲ್ ಒಳಗೆ ಕಾಲಿಟ್ಟ ಹಾಜಬ್ಬ ಅವರ ವೇಷಭೂಷಣ ಅಲ್ಲಿದ್ದವರನ್ನು ವಿಶೇಷವೆನಿಸಿತು. ಅವರನ್ನು ಹೊಟೇಲ್ ನಲ್ಲಿ ಬರಮಾಡಿಕೊಳ್ಳಲು ಬಂದವರಿಗೇ ಒಮ್ಮೆ ಗಲಿಬಿಲಿಯಾಯಿತಂತೆ. ನೀವೇನಾ ಹಾಜಬ್ಬ ಎಂದು ಕೇಳಿದ್ದರಂತೆ. 

69 ವರ್ಷದ ಹಾಜಬ್ಬ ಅವರು ಪದ್ಮ ಪ್ರಶಸ್ತಿ ಸ್ವೀಕರಿಸುವ ಸಮಾರಂಭಕ್ಕೆ ಹೋಗಲು ಒಂದು ಜೊತೆ ಹೊಸ ಚಪ್ಪಲಿ ತರಿಸಿಕೊಂಡಿದ್ದರಂತೆ. ಆದರೆ ರಾಷ್ಟ್ರಪತಿ ಭವನದೊಳಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲು ಅವರ ಹೆಸರನ್ನು ಕರೆದಾಗ ಗಡಿಬಿಡಿಯಲ್ಲಿ ಮರೆತು ಹೋಗಿ ರೆಡ್ ಕಾರ್ಪೆಟ್ ನಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಕೈಮುಗಿದು ಪ್ರಶಸ್ತಿ ಸ್ವೀಕರಿಸಿ ಬಂದರು. ಇತರ ದಿನಗಳಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಅದೇ ಅಭ್ಯಾಸವಾಗಿ ಅವರಿಗೆ ಪ್ರಶಸ್ತಿ ಸ್ವೀಕರಿಸುವಾಗಲೂ ಚಪ್ಪಲಿ ಧರಿಸುವುದು ದೊಡ್ಡ ವಿಷಯವಾಗಲೇ ಇಲ್ಲ.

ಇನ್ನು ತುಳಸಿ ಗೌಡ ಎಂಬ ವೃದ್ಧೆ ತಮ್ಮೂರಿನಲ್ಲಿ ಕಾಡು-ಗುಡ್ಡ ಬೆಟ್ಟಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಂಡರೆ ಸರಿಯಾಗುವುದಿಲ್ಲ ಎಂದು ಹಲವು ವರ್ಷಗಳ ಹಿಂದೆಯೇ ಚಪ್ಪಲಿ ಧರಿಸುವುದನ್ನೇ ಬಿಟ್ಟಿದ್ದಾರಂತೆ. ದೆಹಲಿಗೆ ಹೋಗಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುವ ಖುಷಿ, ಲಗುಬಗೆ ಇವರಿಬ್ಬರಿಗೂ ಇತ್ತು. ಆದರೆ ಸಮಾರಂಭದ ಅದ್ದೂರಿ, ಫೈವ್ ಸ್ಟಾರ್ ಹೊಟೇಲ್ ನಲ್ಲಿ ಉಳಿದುಕೊಳ್ಳುವ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಯಿತು. 

ಹಿಂದೊಮ್ಮೆ ಹಾಜಬ್ಬ ಅವರು ದುಬೈಗೆ ಅಭಿನಂದನಾ ಸಮಾರಂಭಕ್ಕೆ ಹೋಗಿದ್ದರಂತೆ. ಆದರೆ ಅವರು ಉಳಿದುಕೊಂಡಿದ್ದ ಹೊಟೇಲ್ ನ ಅದ್ದೂರಿ, ಕಣ್ಮನ ಸೆಳೆಯುವ ಬಾತ್ ರೂಂ ಕಂಡು ಅಲ್ಲಿ ಸ್ನಾನ ಮಾಡಲು ಮನಸ್ಸು ಒಪ್ಪದೆ ಮಂಗಳೂರಿಗೆ ಬಂದ ನಂತರವೇ ಸ್ನಾನ ಮಾಡಿದ್ದರಂತೆ. 

ಇವರಿಬ್ಬರೂ ಇಷ್ಟು ವರ್ಷದ ತಮ್ಮ ಬದುಕಿನಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಆದರೆ ಅದು ಅವರ ಜೀವನ ಕ್ರಮವನ್ನು ಬದಲಿಸಿಲ್ಲ. ಒಮ್ಮೆ ಉಮ್ರ ಪ್ರವಾಸ ಕೈಗೊಳ್ಳಲು ಟ್ರಾವೆಲ್ ಏಜೆನ್ಸಿಯೊಂದು ಹಾಜಬ್ಬ ಅವರಿಗೆ ಕೇಳಿಕೊಂಡಾಗ ನನಗೆ ನನ್ನೂರಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿದೆ, ಅವುಗಳನ್ನೆಲ್ಲ ಮುಗಿಸದೆ ಯಾತ್ರೆಗೆ ಹೋಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರಂತೆ.

ತಮ್ಮ ಗ್ರಾಮದಲ್ಲಿ ಶಾಲೆ ಕಟ್ಟಿಸಿರುವ ಹಾಜಬ್ಬ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗನ ಮದುವೆ ಮಾಡಿಸಬೇಕಿದೆ. ಆದರೆ ತಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ಬದಿಗೊತ್ತಿ ನ್ಯೂಪಡ್ಪುವಿನಲ್ಲಿ ಪಿಯು ಕಾಲೇಜು ಕಟ್ಟಿಸಬೇಕೆಂದಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾಗ ಇದೊಂದೇ ಬೇಡಿಕೆಯನ್ನು ಹಾಜಬ್ಬ ಅವರ ಮುಂದಿಟ್ಟಿದ್ದಾರೆ.

ಹೊನ್ನಾಳಿಯಲ್ಲಿ ದಶಕಗಳಿಂದ ನೆಲೆಸಿರುವ ತುಳಸಿ ಗೌಡ ಅವರಿಗೆ ಸ್ವಂತ ಮನೆಯಿಲ್ಲ. ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದು ತಮ್ಮ ಜಮೀನನ್ನು ಸಕ್ರಮಗೊಳಿಸುವಂತೆ ಕೇಳಿಕೊಂಡಿದ್ದಾರೆ. ಮಗ, ನಾಲ್ವರು ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ 77 ವರ್ಷದ ತುಳಸಿ ಗೌಡ ತಮ್ಮ ಮೊಮ್ಮಕ್ಕಳಿಗೆ ಉತ್ತಮ ಕೆಲಸ ಕೊಡಿಸುವಂತೆ ಕೇಳುತ್ತಿದ್ದಾರೆ. 2 ವರ್ಷದ ಪುಟ್ಟ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ತುಳಸಿಯವರು ಸಣ್ಣ ವಯಸ್ಸಿನಲ್ಲಿಯೇ ಕೂಲಿ ಮಾಡಿಕೊಂಡು ಕಷ್ಟದ ಜೀವನ ನಡೆಸಿಕೊಂಡು ಬಂದು ಮದುವೆಯಾದ ನಂತರ ಲಕ್ಷಾಂತರ ಸಸಿಗಳನ್ನು ನೆಟ್ಟರು.

ಹಾಜಬ್ಬ ಮತ್ತು ತುಳಸಿಯವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿರುವುದು ಸಾರ್ವಜನಿಕ ಗಮನ ಸೆಳೆದಿದೆ. ಅವರ ಕೆಲಸವನ್ನು ಈಗ ಪ್ರಶಸ್ತಿಗಳೊಂದಿಗೆ ಗುರುತಿಸಲಾಗಿದೆ. ಆದರೆ ಅವರ ಸಾಂಪ್ರದಾಯಿಕ ಜ್ಞಾನ ಅಥವಾ ಕೆಲಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು, ಅದರಲ್ಲಿ ಸರ್ಕಾರದ ಮತ್ತು ಸಮಾಜದ ಪಾತ್ರವೇನು ಎಂಬುದು ಮುಖ್ಯ. ಪ್ರಶಸ್ತಿಗಳು ಅವರ ಜೀವನದಲ್ಲಿ ಏನಾದರೂ ಗುಣಾತ್ಮಕ ಬದಲಾವಣೆಯನ್ನು ತಂದಿದೆಯೇ ಎಂದು ನಾವು ನೋಡಬೇಕು ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ ಆರ್ ಇಂದಿರಾ.

ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಬಗ್ಗೆ ಪೋಸ್ಟ್ ಮಾಡುವ ಬದಲು ಅವರ ಉತ್ತಮ ಕೆಲಸಗಳು ಮತ್ತು ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎನ್ನುತ್ತಾರೆ. 

ಗಾಯವಾದ ಕೈಗಳು: ದೆಹಲಿ ಭೇಟಿಗೆ ಮುನ್ನ ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕು ಎಂದು ಮನೆಗೆ ಬಂದ ಆರೋಗ್ಯಾಧಿಕಾರಿಗಳಿಗೆ ಎಳನೀರು ಕತ್ತರಿಸಿ ಕೊಡುವಾಗ ಕೈಗೆ ಗಾಯವಾಗಿತ್ತು ಹಾಜಬ್ಬನವರಿಗೆ. ನಂತರ ಅವರನ್ನು ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬ್ಯಾಂಡೇಜ್ ಕಟ್ಟಲಾಗಿತ್ತು. ಅದೇ ಗಾಯದ ಕೈಯಲ್ಲಿ ಅವರು ದೆಹಲಿಗೆ ಹೋಗಿದ್ದರು ಎಂದು ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಸನ್ಮಾನ ಮಾಡಿದ ನಂತರ ಅವರಿಗೆ ತೋರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com