ಕೊಡಗು: 'ಹಸಿರು ಹೊನ್ನಿ'ನಲ್ಲಿ ಹೂಡಿಕೆ ಮಾಡಿದ 'ಸ್ತ್ರೀ ಶಕ್ತಿ ಸಂಘ' ಮಹಿಳೆಯರ ಯಶೋಗಾಥೆ

ಒಂದು ದಶಕಗಳಲ್ಲಿ ಭಾರತದ ಕೃಷಿ ಕ್ಷೇತ್ರ ತಂತ್ರಜ್ಞಾನ ಬಳಕೆ ಮತ್ತು ಆಧುನಿಕ ಅಭ್ಯಾಸಗಳ ವಿಷಯದಲ್ಲಿ ವಿಕಸನಗೊಂಡಿದೆ.
ಭತ್ತದ ನಾಟಿಯಲ್ಲಿ ತೊಡಗಿರುವ ಮಹಿಳೆಯರು
ಭತ್ತದ ನಾಟಿಯಲ್ಲಿ ತೊಡಗಿರುವ ಮಹಿಳೆಯರು

ಮಡಿಕೇರಿ: ಒಂದು ದಶಕಗಳಲ್ಲಿ ಭಾರತದ ಕೃಷಿ ಕ್ಷೇತ್ರ ತಂತ್ರಜ್ಞಾನ ಬಳಕೆ ಮತ್ತು ಆಧುನಿಕ ಅಭ್ಯಾಸಗಳ ವಿಷಯದಲ್ಲಿ ವಿಕಸನಗೊಂಡಿದೆ.

ಮಹಿಳೆಯರು ಕೃಷಿಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದು ಸಾಗುವಳಿ, ಕೃಷಿ ಉತ್ಪನ್ನಗಳ ಉದ್ಯಮ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಕ್ರಿಯಗೊಳ್ಳುತ್ತಿದ್ದಾರೆ. ತಮಿಳುನಾಡಿನ 105 ವರ್ಷದ ಸಾವಯವ ರೈತ ಮಹಿಳೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಎಂ ಪಾಪಮ್ಮಾಳ್ (ರಂಗಮ್ಮಾಳ್) ಈ ಪೈಕಿ ಚಿರಪರಿಚಿತ ಹೆಸರು.

ಇಂತಹದ್ದೇ ಮಹಿಳೆಯರ ಯಶೋಗಾಥೆ ನಮ್ಮ ಕರ್ನಾಟಕದ ಕೊಡಗಿನಲ್ಲೂ ಇದೆ.

ಕೊಡಗಿನ ಮಹಿಳಾ ಉದ್ಯಮಿಗಳ ಸಂಘಟನೆಯಾಗಿರುವ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಪಾಳು ಬಿದ್ದಿದ್ದ ಮೂರು ಎಕರೆ ಭೂಮಿಯನ್ನು ಭತ್ತದ ಗದ್ದೆಯನ್ನಾಗಿ ಮಾಡಿರುವುದು ಈಗ ಚರ್ಚೆಯ ವಿಷಯ. 

326 ಸದಸ್ಯರನ್ನೊಳಗೊಂಡ 15 ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಟನೆಗಳ ಒಕ್ಕೂಟವಾಗಿರುವ ಸಂಜೀವಿನಿ ಒಕ್ಕೂಟಕ್ಕೆ ವಿರಾಜಪೇಟೆ ತಾಲೂಕಿನ ಅರ್ಜಿ ಗ್ರಾಮಪಂಚಾಯಿತಿ ಮೂಲಕ ಕೃಷಿ ಇಲಾಖೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಟ್ರಾಕ್ಟರ್ ಹಾಗೂ ಪಂಪ್ ಸೆಟ್ ಗಳನ್ನು ಒದಗಿಸಿತ್ತು. 

"ನಮಗೆ ನೀಡಲಾಗಿದ್ದ ಉಪಕರಣಗಳನ್ನು ಬಳಕೆ ಮಾಡಬೇಕಿತ್ತು. ಆದ್ದರಿಂದ ಭೂಮಿ ಉಳುಮೆ ಮಾಡಲು ನಿರ್ಧರಿಸಿದೆವು" ಎನ್ನುತ್ತಾರೆ ಐಶ್ವರ್ಯ ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷರಾದ ನಿಶಾ ಜಯಂತ್ ಹೇಳಿದ್ದಾರೆ.

5 ವರ್ಷಗಳಿಂದ ಪಾಳುಬಿದ್ದಿದ್ದ ಜಮೀನನ್ನು ಅದರ ಮಾಲಿಕ ಉಚಿತವಾಗಿ ಗುತ್ತಿಗೆಗೆ ನೀಡಿದರು. ಟ್ರ್ಯಾಕ್ಟರ್ ಹಾಗೂ ಇತರ ಉಪಕರಣಗಳನ್ನು ಬಳಕೆ ಮಾಡಿ ನಾವು ಭತ್ತದ ನಾಟಿ ಮಾಡಲು ಪ್ರಾರಂಭಿಸಿದೆವು

ಸಾಗುವಳಿಗೆ ನೇಮಕ ಮಾಡಿಕೊಂಡ ಕಾರ್ಮಿಕರ ಪೈಕಿ ಬಹುತೇಕ ಮಂದಿ ಮಹಿಳೆಯರೇ ಇದ್ದರು, ಎರಡು ದಿನಗಳಲ್ಲಿ ಭತ್ತದ ನಾಟಿ ಮಾಡುವ ಕೆಲಸ ಪೂರ್ಣಗೊಂಡಿತ್ತು.

2006-7 ರಲ್ಲಿ ಪ್ರಾರಂಭವಾದ ಐಶ್ವರ್ಯ ಸ್ತ್ರೀ ಶಕ್ತಿ ಸಂಘಕ್ಕೆ ಪ್ರಾರಂಭದಲ್ಲಿ 20 ಮಂದಿ ಸದಸ್ಯರಿದ್ದರು ಕ್ರಮೇಣ ಈ ಸಂಘ ಬೆಳೆದು ಇಲ್ಲಿನ ಸದಸ್ಯರು ಫಿನೈಲ್, ಸೋಪ್ ಗಳ  ಉತ್ಪಾದನೆ, ಕ್ಯಾಂಡಲ್ ಗಳು ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು. ಆದರೆ 2020 ರಲ್ಲಿ ಜಗತ್ತಿಗೆ ಕೋವಿಡ್ ನಿಂದ ಉಂಟಾದ ಸಂಕಷ್ಟದಿಂದ ಆರ್ಥಿಕ ಬಿಕ್ಕಟ್ಟು ಇವರನ್ನೂ ಬಿಡಲಿಲ್ಲ. ಈ ಅವಧಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಈ ಸ್ತ್ರೀ ಶಕ್ತಿ ಸಂಘಗಳಿಗೆ ಸವಾಲಿನ ಸಂಗತಿಯಾಗಿತ್ತು. ಆದರೆ ಸವಾಲನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಸದಸ್ಯರು ಕೃಷಿಯಲ್ಲಿ ತೊಡಗಿ, ಅಂದು ಹಾಕಿದ್ದ ಶ್ರಮದ ಪರಿಣಾಮ ಇಂದು ಪ್ರತಿಫಲ ಸಿಗುವ ಹಂತಕ್ಕೆ ಬಂದಿದೆ.

ಪ್ರಾರಂಭದ ದಿನಗಳಲ್ಲಿ ಮಹಿಳೆಯರಿಗೆ ಕೃಷಿಯ ಯಶಸ್ಸಿನ ಬಗ್ಗೆ ಸಹಜ ಆತಂಕಗಳಿದ್ದವು. ಆದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದ್ದು ನವೆಂಬರ್ ನಲ್ಲಿ ಭತ್ತದ ಬೆಳೆ ಕಟಾವಿಗೆ ಸಿದ್ಧವಾಗಿರಲಿದೆ. ಈ ಇಳುವರಿಯ ಒಂದು ಭಾಗವನ್ನು ಸ್ತ್ರೀ ಶಕ್ತಿ ಸಂಘಗಳು ಗ್ರಾಮದ ಅನಾಥಾಶ್ರಮ ಸ್ನೇಹ ಭವನಕ್ಕೆ ನೀಡಲು ನಿರ್ಧರಿಸಿದ್ದರೆ ಮತ್ತೊಂದು ಭಾಗವನ್ನು ತಮಗೆ ಕೃಷಿ ಮಾಡಲು ಭೂಮಿಯನ್ನು ಉಚಿತವಾಗಿ ನೀಡಿದ್ದ ಮಾಲಿಕನ ಕುಟುಂಬಕ್ಕೆ ನೀಡಲು ನಿರ್ಧರಿಸಿದ್ದಾರೆ.

2017-18 ರಲ್ಲಿ ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳು ಸಂಜೀವನಿ ಒಕ್ಕೂಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸವಲತ್ತುಗಳನ್ನು ಹೆಚ್ಚಿಸಿದ್ದವು. ಈ ಸ್ವ-ಸಹಾಯ ಗುಂಪುಗಳಿಗೆ 75,000 ರೂಪಾಯಿಗಳ ಹಣವನ್ನು ಶೇ.1 ರಷ್ಟು ಬಡ್ಡಿಗೆ ಪಡೆಯುವುದಕ್ಕೆ ಸಾಧ್ಯವಾಯಿತು. ಈ ರೀತಿ ಪಡೆದ ಹಣದಲ್ಲಿ  ದಿನನಿತ್ಯದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದವು. ಆದರೆ ಈ ಉದ್ಯಮದ ಮೇಲೆ ಕೋವಿಡ್-19 ಕರಿನೆರಳು ಆವರಿಸಿತು

ಈಗ ಭತ್ತದ ಫಸಲು ಕೈಗೆ ಬರಲು ಸಿದ್ಧವಾಗಿರುವ ನಡುವೆ 50 ಸೆಂಟ್ಸ್ ಜಾಗದಲ್ಲಿ ತರಕಾರಿ ಬೆಳೆಯನ್ನು ಬೆಳೆಯುವುದಕ್ಕೆ ಹೂಡಿಕೆ ಮಾಡಿದ್ದಾರೆ.

"ಮುಂಗಾರಿನ ಬಳಿಕ ಈ ಪ್ರದೇಶದಲ್ಲಿ ತರಕಾರಿ ಬೆಳೆಯಲಿದ್ದೇವೆ. ಈ ಉಪಕ್ರಮವನ್ನು ಬೆಂಬಲಿಸಲು ಒಕ್ಕೂಟದಿಂದ ಹಲವು ಮಹಿಳೆಯರು ಮುಂದೆ ಬಂದಿದ್ದಾರೆ" ಎನ್ನುತ್ತಾರೆ ನಿಶಾ.

ಇದಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಶ್ರೂಮ್ ಬೆಳೆಗಳನ್ನು ಬೆಳೆಯುವ ಯೋಜನೆಯೂ ಇದ್ದು ಪಂಚಾಯತ್ ನಿಂದ ಸಹಾಯ ಕೋರುತ್ತಿದ್ದೇವೆ ಎಂದು ನಿಶಾ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com