ಕಲ್ಯಾಣ ಕರ್ನಾಟಕದ ಜನತೆ ಪಾಲಿಗೆ "ಜೀವದಾತ"ನಾದ ಆಕ್ಸಿ ಬಸ್ ಸೇವೆ!

ಕೋವಿಡ್-19 ಎರಡನೇ ಅವಧಿಯಲ್ಲಿ ಭಾರತದ ಹಲವು ಭಾಗಗಳಲ್ಲಿ ಆಕ್ಸಿಜನ್ ಬೇಡಿಕೆ ತೀವ್ರವಾಗಿದ್ದರ ಪರಿಣಾಮ ಆತಂಕ ಉಂಟಾಗಿತ್ತು. 
ಆಕ್ಸಿ ಬಸ್ (ಸಂಗ್ರಹ ಚಿತ್ರ)
ಆಕ್ಸಿ ಬಸ್ (ಸಂಗ್ರಹ ಚಿತ್ರ)

ಕಲಬುರಗಿ: ಕೋವಿಡ್-19 ಎರಡನೇ ಅವಧಿಯಲ್ಲಿ ಭಾರತದ ಹಲವು ಭಾಗಗಳಲ್ಲಿ ಆಕ್ಸಿಜನ್ ಬೇಡಿಕೆ ತೀವ್ರವಾಗಿದ್ದರ ಪರಿಣಾಮ ಆತಂಕ ಉಂಟಾಗಿತ್ತು. 

ಗ್ರಾಮೀಣ ಭಾಗದಲ್ಲಿರುವವರಿಗೆ ಕೋವಿಡ್-19 ಸೋಂಕು ತೀವ್ರಗೊಂಡು ತಕ್ಷಣಕ್ಕೆ ಆಕ್ಸಿಜನ್ ಸಿಗುವ ವ್ಯವಸ್ಥೆ ಲಭ್ಯತೆ ಕಷ್ಟಸಾಧ್ಯವೇ ಆಗಿತ್ತು. ಇಂತಹ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹಲವು ಗ್ರಾಮೀಣ ಪ್ರದೇಶಗಳ ಜನತೆಯ ಪಾಲಿನ ಜೀವರಕ್ಷಕವಾಗಿದ್ದು "ಆಕ್ಸಿ ಬಸ್"

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ ಟಿಸಿ) ಈ ವಿನೂತನ ಆಕ್ಸಿ ಬಸ್ ನ್ನು ಸೇವೆಗೆ ಅನುವುಗೊಳಿಸಿದ್ದರ ಪರಿಣಾಮ ಹಲವು ಮಂದಿ ಕೋವಿಡ್-19 ನಿಂದ ತಮ್ಮ ಜೀವ ಉಳಿಸಿಕೊಂಡಿದ್ದಾರೆ. 

ಸರೋಜಾ ಮದ್ದೆ (72) ಅವರಿಗೆ ಮೇ ತಿಂಗಳಲ್ಲಿ ಕೋವಿಡ್-19 ಸೋಂಕು ತಗುಲಿ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಉಸಿರಾಡದ ಸಮಸ್ಯೆ ಎದುರಿಸಿದ್ದ ಅವರಿಗೆ ಆಕ್ಸಿಜನ್ ನ ಅಗತ್ಯತೆ ತುರ್ತಾಗಿತ್ತು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಪ್ರಾಥಮಿಕ ಕೇಂದ್ರದಲ್ಲಿನ ವೈದ್ಯರು ಮದ್ದೆ ಅವರಿಗೆ ಸಮೀಪವಿರುವ ಒಮರ್ಗ (ಖಜೂರಿಯಿಂದ 25 ಕಿ.ಮೀ ದೂರವಿರುವ ಮಹಾರಾಷ್ಟ್ರದ ಪ್ರದೇಶ) ಕ್ಕೆ ಉತ್ತಮ ಚಿಕಿತ್ಸೆಗಾಗಿ ತೆರಳಲು ಸಲಹೆ ನೀಡಿದರು. 

ಆದರೆ ಆಕೆಯ ಆರೋಗ್ಯ ಪರಿಸ್ಥಿತಿ 25 ಕಿ.ಮೀ ಸಂಚರಿಸುವಷ್ಟು ಉತ್ತಮವಾಗಿರಲಿಲ್ಲ. ಅದೃಷ್ಟವಶಾತ್ ಗ್ರಾಮದ ವೈದ್ಯರು ಆಕೆಗೆ ಆಕ್ಸಿ ಬಸ್ ಬಗ್ಗೆ ಮಾಹಿತಿ ನೀಡಿದರು. ತಕ್ಷಣವೇ ಬಸ್ ಇದ್ದ ಪ್ರದೇಶಕ್ಕೆ ತೆರಳಿದ ಸರೋಜಾ ಮದ್ದೆಗೆ ಆಕ್ಸಿಜನ್ ಲಭ್ಯವಿತ್ತು. "ಆಕ್ಸಿ ಬಸ್ ನಲ್ಲಿ ಎರಡು ದಿನಗಳ ವರೆಗೆ, ಪ್ರತಿ ದಿನ ಎರಡು ಗಂಟೆಗಳ ಕಾಲ ಆಕ್ಸಿಜನ್ ನೀಡಲಾಗಿತ್ತು. ಇದರಿಂದ ನನ್ನ ಆರೋಗ್ಯ ಉತ್ತಮಗೊಂಡಿತು" ಎನ್ನುತಾರೆ ಆಕ್ಸಿ ಬಸ್ ಸೇವೆ ಪಡೆದು ಜೀವ ಉಳಿಸಿಕೊಂಡ ಮದ್ದೆ. 

ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್-19 ಪರಿಸ್ಥಿತಿ ಕೈಮೀರಿ ಹೋಗಿ ಆಕ್ಸಿಜನ್ ಬೇಡಿಕೆ ಹೆಚ್ಚಿದಾಗ ಕೆಕೆಆರ್ ಟಿಸಿ ತನ್ನ 9 ಬಸ್ ಗಳನ್ನು ಮೊಬೈಲ್ ಫೀವರ್ ಕ್ಲಿನಿಕ್, ಸ್ವಾಬ್ ಸಂಗ್ರಹ ಕೇಂದ್ರಗಳನ್ನಾಗಿ ಬದಲಾವಣೆ ಮಾಡಿ ಬೀದರ್, ಯಾದಗಿರಿ, ಬಳ್ಳಾರಿ ವಿಭಾಗಗಳಿಗೆ ಕಳಿಸಿಕೊಟ್ಟಿತ್ತು. 

ಈ ಯತ್ನದ ಸಂಪೂರ್ಣ ಜವಾಬ್ದಾರಿ ಹೊತ್ತು ಜಾರಿಗೊಳಿಸಿದ ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೂರ್ಮ ರಾವ್ ಟಿಎನ್ ಎಸ್ ಇ ಜೊತೆ ಮಾತನಾಡಿದ್ದು, "ಪ್ರತಿ ಬಸ್ ಗಳಲ್ಲಿಯೂ ನಾವು ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿದೆವು. ಕೋವಿಡ್-19 ರೋಗಲಕ್ಷಣಗಳಿರುವವರಿಗೆ ಸೋಂಕು ಪತ್ತೆ ಪರೀಕ್ಷೆ ಹಾಗೂ ಸಹಾಯ ಮಾಡಲು ಈ ಸಿಬ್ಬಂದಿಗಳು ನೆರವಾಗುತ್ತಿದ್ದರು. ಈ ಉಪಕ್ರಮ ಅತ್ಯುತ್ತಮ ಜನಪ್ರಿಯತೆ ಗಳಿಸಿದ್ದು ಬಸ್ ಗಳನ್ನು ಮೊಬೈಲ್ ಆಸ್ಪತ್ರೆ ಹಾಗೂ ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿದ ಮೊದಲ ಸಾರ್ವಜನಿಕ ಸಾರಿಗೆ ಸಂಸ್ಥೆ ಕೆಕೆಆರ್ ಟಿಸಿಯಾಗಿದೆ ಎಂದು ಹೇಳಿದ್ದಾರೆ. 

ಕೆಕೆಆರ್ ಟಿಸಿಯಿಂದ ಪ್ರಯೋಜನ ಪಡೆದು ಕೋವಿಡ್-19 ನ್ನು ಯಶಸ್ವಿಯಾಗಿ ನಿಭಾಯಿಸಿದ ಜಾಲಕಿ ಗ್ರಾಮದ ಮಹಿಳೆ ಯಲ್ಲಬಿ (45) ಮಾತನಾಡಿದ್ದು, "ಕೆಕೆಆರ್ ಟಿಸಿಯ ಮೊಬೈಲ್ ಕ್ಲಿನಿಕ್ ಇಲ್ಲದೇ ಇದ್ದಲ್ಲಿ ತಾವು ಬದುಕಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

"ಮೇ ತಿಂಗಳಲ್ಲಿ ಏಕಾ ಏಕಿ ತಮಗೆ ಉಸಿರಾಟ, ತಲೆತಿರುಗುವಿಕೆ ಸಮಸ್ಯೆ ಎದುರಾಗಿತ್ತು. ವೈದ್ಯರು ತಕ್ಷಣವೇ ಆಕ್ಸಿಜನ್ ಬೆಡ್ ಇರುವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದಕ್ಕೆ ಸೂಚನೆ ನೀಡಿದ್ದರು. ಆದರೆ ಆಗಿನ ಪರಿಸ್ಥಿತಿಯಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಿದ್ದ ಕಾರಣದಿಂದ ಕಲಬುರಗಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಇರುವ ಬೆಡ್ ಗಳ ವ್ಯವಸ್ಥೆ ಪಡೆಯುವುದು ಕಷ್ಟವಾಗಿತ್ತು. ಆಗಲೇ ನಮಗೆ ಆಕ್ಸಿ ಬಸ್ ಗಳ ಬಗ್ಗೆ ತಿಳಿದಿದ್ದು. ಗ್ರಾಮದಲ್ಲಿ ಲಭ್ಯವಿದ್ದ ಆಕ್ಸಿ ಬಸ್ ನ ಸಹಾಯದಿಂದ ಇದ್ದ ಸ್ಥಳದಲ್ಲೇ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದೇನೆ" ಎಂದು ಅವರು ಹೇಳಿದ್ದಾರೆ.

ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮೊಬೈಲ್ ಬಸ್ ಕ್ಲಿನಿಕ್ ಗಳು ಸಂಚರಿಸಿದ್ದು, ಇದಕ್ಕಾಗಿ ಬಳ್ಳಾರಿಯ ಜಿಂದಾಲ್ ಸ್ಟೀಲ್ ಫ್ಯಾಕ್ಟರಿಯ ಆಕ್ಸಿಜನ್ ಲ್ಯಾಡನ್ ಟ್ಯಾಂಕರ್ ಗಳನ್ನು ನಿಭಾಯಿಸುವುದು ಹಾಗೂ ಸಾಗಣೆ ಮಾಡುವುದಕ್ಕೆ 46 ಚಾಲಕರನ್ನು ತರಬೇತುಗೊಳಿಸಲಾಗಿತ್ತು.

ಚಾಲಕರ ಪೈಕಿ ಒಬ್ಬರಾದ ಜೈನುಲ್ಲಾ ತಮ್ಮ ಅನುಭವದ  ಬಗ್ಗೆ ಮಾತನಾಡಿದ್ದು, ಸಾಂಕ್ರಾಮಿಕದ ಅವಧಿಯಲ್ಲಿ ತಮ್ಮ ಜೀವನದಲ್ಲಿ ಅಪರೂಪದ ಕ್ಷಣಗಳನ್ನು ನೋಡಿದ್ದಾಗಿ ಅವರು ಹೇಳಿದ್ದು, ಅಗತ್ಯವಿರುವ ಮಂದಿಗೆ ಸೇವೆ ಮಾಡಿದ್ದು ನನ್ನ ಜೀವನದಲ್ಲಿ ಎಂದಿಗೂ ನೆನಪಿಡುವಂಥದ್ದು ಎಂದಿದ್ದಾರೆ. 

"ಸಾಮಾನ್ಯವಾಗಿ ಬಳ್ಳಾರಿಯಿಂದ ಬೆಂಗಳೂರಿಗೆ 8 ಗಂಟೆಗಳ ಪ್ರಯಾಣವಾಗುತ್ತದೆ. ಆದರೆ ಆಕ್ಸಿಜನ್ ಸಾಗಣೆ ಮಾಡಬೇಕಾದ್ದರಿಂದ 12 ಗಂಟೆಗಳ ಕಾಲಾವಕಾಶ ಬೇಕಾಯಿತು" ಎನ್ನುತ್ತಾರೆ ಜಾಗರೂಕತೆಯಿಂದ ಟ್ಯಾಂಕರ್ ಗಳನ್ನು ಸಾಗಣೆ ಮಾಡಿದ್ದ ಜೈನುಲ್ಲಾ ಹಾಗೂ ಸಹ ಚಾಲಕ ಜಿತೇಂದ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com