500 ರೂ. ಕೊಟ್ಟು ಈ ಜೈಲಿಗೆ ಹೋಗಿ... ಒಂದು ದಿನ ವಾಸ್ತವ್ಯಕ್ಕೆ ಇಲ್ಲಿದೆ ಅವಕಾಶ!
ಬೆಳಗಾವಿ: ಜೈಲಿನೊಳಗೆ ಜೀವನ ಹೇಗಿರುತ್ತೆ. ಅಲ್ಲಿ ಕೈದಿಗಳು ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ. ಇದನ್ನ ತಿಳ್ಕೋಬೇಕು ಅನ್ನೋರಿಗೆ ಇಲ್ಲೊಂದು ಅವಕಾಶ ಸಿಗಲಿದೆ.
ಬೆಳಗಾವಿ ಜಿಲ್ಲೆಯ ಹಿಂಡಲಗ ಕೇಂದ್ರೀಯ ಕಾರಾಗೃಹದ ಅಧಿಕಾರಿಗಳು, 'ಖೈದಿಗಳ ಜೀವನದಲ್ಲಿ ಒಂದು ದಿನ' ಎಂಬ ಹೊಸ ಪರಿಕಲ್ಪನೆಯೊಂದಿಗೆ ಯೋಜನೆಯನ್ನು ಆರಂಭಿಸಿದ್ದಾರೆ. ಈ ಹೊಸ ಯೋಜನೆಯಲ್ಲಿ 24 ಗಂಟೆಗಳ ಬಂಧನದ ಅನುಭವವನ್ನು ಪ್ರವಾಸಿಗರಿಗೆ ನೀಡಲಾಗುತ್ತದೆ. ಕಂಬಿ ಹಿಂದೆ ಕಳೆಯುವ ಅನುಭವವನ್ನು ಅಧಿಕಾರಿಗಳು ಜನರಿಗೆ ಕೊಡಲಿದ್ದಾರೆ.
ಜೈಲು ಜೀವನದ ಅನುಭವ ಪಡೆಯಲಿಚ್ಛಿಸುವ ಜನರು ರೂ.500 ನೀಡಿ, ಜೈಲಿನಲ್ಲಿ ಒಂದು ದಿನ ಕಾಲ ಕಳೆಯಬಹುದಾಾಗಿದೆ. ಈಗಾಗಲೇ ಯೋಜನೆಗೆ ಸಿದ್ಧತೆ ನಡೆಸಿರುವ ಅಧಿಕಾರಿಗಳು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರಾಗೃಹದ ಅಧಿಕಾರಿಗಳು. ಕಾರಾಗೃಹಕ್ಕೆ ಬರುವ ಜನರನ್ನು ಖೈದಿಗಳಂತೆ ನೋಡಲಾಗುತ್ತದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿಯವರೆಗೂ ಖೈದಿಗಳಂತೆ ಕಾಲ ಕಳೆಯುವಂತಹ ಅವಕಾಶ ನೀಡಲಾಗುತ್ತದೆ. ಜೈಲಿಗೆ ಬರುವ ಅತಿಥಿಗಳಿಗೆ ಖೈದಿಗಳ ಸಮವಸ್ತ್ರ, ಖೈದಿ ಸಂಖ್ಯೆ, ಕೊಠಡಿಗಳು, ಖೈದಿಗಳಿಗೆ ನೀಡಲಾಗುವ ಊಟ, ಖೈದಿಗಳು ಮಾಡುವ ಕೆಲಸಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜೈಲು ಸಿಬ್ಬಂದಿ ಬೆಳಿಗ್ಗೆ 5 ಗಂಟೆಗೆ ಅತಿಥಿಗಳನ್ನು ಎದ್ದೇಳಿಸುತ್ತಾರೆ. ಟೀ ನೀಡುವುದಕ್ಕೂ ಮುನ್ನ ಬಳಿಕ ಕೊಠಡಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನೀಡಲಾಗುತ್ತದೆ. ಇದಾದ 1 ಗಂಟೆ ಬಳಿಕ ಬೆಳಗಿನ ಉಪಾಹಾರ ನೀಡಲಾಗುತ್ತದೆ. 11 ಗಂಟೆಗೆ ಅನ್ನ ಮತ್ತು ಸಾಂಬಾರ್ ಊಟ ನೀಡಲಾಗುತ್ತದೆ. ಸಂಜೆ 7 ಗಂಟೆಗೆ ರಾತ್ರಿ ಊಟ ನೀಡಲಾಗುತ್ತದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾಂಸಾಹಾರ ನೀಡಲಾಗುತ್ತದೆ. ವೀಕೆಂಡ್ ಸಮಯದಲ್ಲಿ ಕಾರಾಗೃಹಕ್ಕೆ ಭೇಟಿ ನೀಡಿದ್ದೇ ಆದರೆ, ಈ ಅವಕಾಶ ಅತಿಥಿಗಳಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ದಿನದ ಕೆಲಸಗಳೆಲ್ಲಾ ಮುಗಿದ ಬಳಿಕ ಅತಿಥಿಗಳು ಹಾಸಿಗೆಗಳನ್ನು ಪಡೆದುಕೊಂಡು ಇತರರೊಂದಿಗೆ ನೆಲದ ಮೇಲೆ ಮಲಗಬೇಕು. ಮತ್ತಷ್ಟು ನೈಜತೆಗಾಗಿ ಅತಿಥಿಗಳನ್ನು ಕಾರಾಗೃಹದಲ್ಲಿ ಲಾಕ್ ಮಾಡುವ ಕೆಲಸವನ್ನೂ ಮಾಡುವ ಸಾಧ್ಯತೆಗಲಿವೆ ಎಂದು ಮಾಹಿತಿ ನೀಡಿದ್ದಾರೆ.
ಜೈಲಿಗೆ ಭೇಟಿ ನೀಡುವ ಅತಿಥಿಗಳು ಕೆಲವೊಮ್ಮೆ ಕ್ರಿಮಿನಲ್ ಗಳನ್ನು ಮುಖಾಮುಖಿ ನೋಡುವ ಸಾಧ್ಯತೆಗಳು ಎದುರಾಗಬಹುದು. ಜೈಲಿನಲ್ಲಿ ಮರಣದಂನೆ ಶಿಕ್ಷೆಗೆ ಗುರಿಯಾಗಿರುವ 29 ಕೈದಿಗಳಿದ್ದಾರೆ, ಇದರಲ್ಲಿ ದಂಡುಪಾಳ್ಯ ಗ್ಯಾಂಗ್'ನ ಸದಸ್ಯರು, ಸರಣಿ ಅತ್ಯಾಚಾರ ಹಾಗೂ ಕೊಲೆಗಾರ ಉಮೇಶ್ ರಡ್ಡಿ ಕೂಡ ಇದ್ದಾರೆ. ಕೈದಿಗಳ ಜೀವನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಈ ಮೂಲಕ ಜನರು ಅಪರಾಧಗಳ ಎಸಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ