ಜಪಾನ್ ನಲ್ಲಿ ನಿರುದ್ಯೋಗಿ ಸ್ಮಾರ್ಟ್ ಮಡದಿಯರ ಸಂಖ್ಯಾ ಸ್ಫೋಟ
ಮಗುವಿಗಾಗಿ ಕೆಲಸ ತೊರೆದ ಹೆಣ್ಣುಮಕ್ಕಳನ್ನು ಜಪಾನಿನ ಉದ್ಯೋಗ ಮಾರುಕಟ್ಟೆ ಮತ್ತೆ ಸ್ವೀಕರಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮನೆಯಲ್ಲೇ ಕೂತು ಬೋರಾದ ಮಡದಿಯರ ಅತಿ ದೊಡ್ಡ ಸಂಖ್ಯೆ ಉತ್ಪತ್ತಿಯಾಗಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.
Published: 30th August 2021 04:05 PM | Last Updated: 30th August 2021 06:54 PM | A+A A-

ಸಾಂದರ್ಭಿಕ ಚಿತ್ರ
ಟೊಕಿಯೊ: ಜಪಾನಿನಲ್ಲಿ ಶಿಕ್ಷಿತ ಮಹಿಳೆಯರ ಅತಿ ದೊಡ್ಡ ವರ್ಗ ದೇಶದ ಉದ್ಯೋಗ ವ್ಯವಸ್ಥೆಯಿಂದಾಗಿ ನಿರುದ್ಯೋಗಿಗಳಾಗಿ ಮನೆಯಲ್ಲೇ ಕಾಲ ತಳ್ಳುತ್ತಿದ್ದಾರೆ ಎಂದು ನೂತನ ವರದಿ ತಿಳಿಸಿದೆ. ಅವರನ್ನು ಸಮರ್ಥವಾಗಿ ಬಳಸಿಕೊಂಡರೆ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಸುಲಭವಾಗಿ ಹೊರಬರಬಹುದು ಎಂದು ಮಹಿಳಾ ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.
ಮಗುವಿಗಾಗಿ ಉದ್ಯೋಗ ತ್ಯಾಗ
ಜಪಾನಿನಲ್ಲಿ ಉದ್ಯೋಗಸ್ಥ ಹೆಣ್ಣುಮಕ್ಕಳು ಮದುವೆಯಾಗಿ ಒಂದು ಮಗುವಾದ ನಂತರ ನೌಕರಿ ಬಿಡುತ್ತಿದ್ದಾರೆ. ಹಾಗೆ ನೌಕರಿ ಬಿಟ್ಟ ಹೆಂಗಸರೊಬ್ಬರೂ ಮತ್ತೆ ಉದ್ಯೋಗಕ್ಕೆ ಮರಳುತ್ತಿಲ್ಲ. ಮನೆ ನಿರ್ವಹಣೆಯಲ್ಲಿಯೇ ಇದ್ದುಬಿಡುತ್ತಿದ್ದಾರೆ. ಅಂಥವರನ್ನು ಮತ್ತೆ ನೌಕರಿಯತ್ತ ಕರೆ ತರುವ ಅನೇಕ ಸಂಘಟನೆಗಳು ಜಪಾನಿನಲ್ಲಿ ತಲೆಯೆತ್ತುತ್ತಿವೆ.
ಇಂದು ಜಪಾನ್ ಸಂಸತ್ತಿನಲ್ಲಿ ಪ್ರತಿ 10 ಮಂದಿ ಪುರುಷ ಸಂಸದರಿಗೆ ಓರ್ವ ಮಹಿಳಾ ಸಂಸದೆಯಿದ್ದಾಳೆ. ಅದನ್ನೇ ಸಾಧನೆಯೆಂಬಂತೆ ಪ್ರಧಾನಿ ಶಿಜೊ ಅಬೆ ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮಹಿಳಾಮಣಿಯರು ವಿರೋಧಿಸಿದ್ದಾರೆ. ಖಾಸಗಿ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆಯಿದೆ.
ಜಪಾನಿ ಕುಟುಂಬ ವ್ಯವಸ್ಥೆ
ಹಲವು ದಶಕಗಳಿಂದ ಜಪಾನಿ ಕುಟುಂಬ ವ್ಯವಸ್ಥೆಯಲ್ಲಿ ಪುರುಷ ಮಾತ್ರವೇ ಆದಾಯ ಗಳಿಸುತ್ತಿದ್ದ. ಹೆಣ್ಣು ಮನೆ ನಿರ್ವಹಣೆಯಲ್ಲೇ ತೃಪ್ತರಾಗಬೇಕಿತ್ತು. ಈ ವ್ಯವಸ್ಥೆಯನ್ನು ಅಲ್ಲೆಲ್ಲರೂ ಅಪ್ಪಿಕೊಂಡಿದ್ದರು. ಹೆಣ್ಣುಮಕ್ಕಳು ಅಂಥದ್ದೊಂದು ಬದುಕಿಗಾಗಿ ಹಾತೊರೆಯುತ್ತಿದ್ದರು. ಅದನ್ನೇ ಜೀವನದ ಧ್ಯೇಯ ಎಂದುಕೊಳ್ಳುತ್ತಿದ್ದರು.
ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಮಹಿಳಾ ಶಿಕ್ಷಿತರು ಈಗಿದ್ದಾರೆ. ಅವರೆಲ್ಲರೂ ಡಿಗ್ರೀ ಪ್ರಮಾಣಪತ್ರಗಳನ್ನು ಹಿಡಿದು ಮನೆಯಲ್ಲೇ ಇದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮನೆಯಲ್ಲೇ ಕೂತು ಬೋರಾದ ಮಡದಿಯರ ಅತಿ ದೊಡ್ಡ ಸಂಖ್ಯೆ ಉತ್ಪತ್ತಿಯಾಗಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.
ಬದಲಾವಣೆಯ ಪರ್ವ
ಜಪಾನಿನ ಉದ್ಯೋಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಕಡಿಮೆ ಇರುವುದನ್ನು ಗಮನಿಸಿದ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿತ್ತು. ಪ್ರತಿ ಸಂಸ್ಥೆಯ ಉನ್ನತ ಹುದ್ದೆಗಳಲ್ಲಿ ಕನಿಷ್ಟ ಓರ್ವ ಮಹಿಳೆಗೆ ಸ್ಥಾನ ನೀಡಲೇಬೇಕೆಂಬ ನಿಯಮವನ್ನು ರೂಪಿಸಿತ್ತು.
ಅರ್ಧಕ್ಕೆ ಉದ್ಯೋಗ ಬಿಟ್ಟ ಮಹಿಳೆಯರು ಬಿಡುವು ತೆಗೆದುಕೊಂಡು ಒಂದಷ್ಟು ಸಮಯದ ನಂತರ ಉದ್ಯೋಗಕ್ಕೆ ಮರಳಲು ಮನಸ್ಸು ಮಾಡುತ್ತಿದ್ದಾರಾದರೂ ಉದ್ಯೋಗ ಮಾರುಕಟ್ಟೆ ಅವರನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಉದ್ಯೋಗ ಮತ್ತು ಕುಟುಂಬದ ನಡುವೆ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಜಪಾನಿ ಹೆಣ್ಣುಮಕ್ಕಳು ಸಿಲುಕಿಕೊಂಡಿದ್ದಾರೆ.
ಕುಟುಂಬಕ್ಕಾಗಿ ಉದ್ಯೋಗ ತೊರೆದ ಮಹಿಳೆಯರು ಮತ್ತೆ ಕೆಲಸಕ್ಕೆ ಸೇರುವಾಗ ತಮ್ಮ ಉದ್ಯೋಗ ಅರ್ಜಿಯಲ್ಲಿ ಅದನ್ನು ನಮೂದಿಸಿದ್ದರೂ ಸಂಸ್ಥೆಗಳು ಅಷ್ಟೂ ಅವಧಿಯನ್ನು ಖಾಲಿ ಕೂತಿದ್ದಾರೆ ಎಂದು ಪರಿಗಣಿಸುತ್ತಿದೆ. ಅದರ ವಿರುದ್ಧ ಮಹಿಳೆಯರು ಈಗೀಗ ದನಿಯೆತ್ತುತ್ತಿದ್ದಾರೆ. ಕುಟುಂಬಕ್ಕಾಗಿ ಕೆಲಸ ಬಿಟ್ಟ ಹೆಣ್ಣುಮಕ್ಕಳಿಗಾಗಿ ಉದ್ಯೋಗ ಕಾರ್ಯಕ್ರಮಗಳನ್ನು ಸಂಸ್ಥೆಗಳು ಪ್ರಾರಂಭಿಸುತ್ತಿವೆ.