ಜನರ ಸೇವೆಯೇ ಈಶ ಸೇವೆ: ರೋಗಿಗಳಲ್ಲಿ ದೇವರನ್ನು ಕಂಡವರು: ದಿ ಲಾಸ್ಟ್ ಡಾಕ್ಟರ್

ಜೀವನವೇ ಮುಗಿದುಹೋಯಿತು ಎನ್ನುವಾಗ ನಮ್ಮ ಕೈ ಹಿಡಿಯುವವರು ಇಬ್ಬರು. ದೇವರು ಮತ್ತು ವೈದ್ಯರು. ಅದನ್ನು ಅಕ್ಷರಶಃ ತೋರಿಸಿಕೊಟ್ಟಿದ್ದು ಕೊರೊನಾ ಕಾಲ. ಅದೃಶ್ಯ ವೈರಿ ಜೊತೆ ವೈದ್ಯರು ಸೈನಿಕರಂತೆ ಕಾದಾಡಿದ್ದನ್ನು ನಾವ್ಯಾರೂ ಮರೆಯುವಂತಿಲ್ಲ. ವೈದ್ಯಕೀಯ ವ್ಯವಸ್ಥೆ ಕಂಗಾಲಾದಾಗಲೂ ದೃತಿಗೆಡದೆ ಜನರೊಂದಿಗೆ ನಿಂತ, ಅವರಿಗೆ ಲಾಸ್ಟ್ ಹೋಪ್ ನೀಡಿದ ವೈದ್ಯರೇ ದಿ ಲಾಸ್ಟ್ ಡಾಕ್ಟರ್.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಗತ್ತು ಇನ್ನೂ ಕೊರೊನಾ ಕರಿಛಾಯೆಯಿಂದ ಹೊರಬಂದಿಲ್ಲ. ಸರಿಯಾಗಿ ಎರಡು ವರ್ಷಗಳ ಕೆಳಗೆ ಜನವರಿ ತಿಂಗಳು ಭಾರತ ಮೊದಲ ಕೊರೊನಾ ಪ್ರಕರಣವನ್ನು ಕಂಡಿತ್ತು. ಜಗತ್ತನ್ನೇ ಆಪೋಶನ ಪಡೆದಿದ್ದ ಕೊರೊನಾ ವೈರಾಣು ಕೇರಳ ರಾಜ್ಯದ ಮೂಲಕ ಭಾರತದೊಳಕ್ಕೆ ದಾಂಗುಡಿಯಿಟ್ಟಿತ್ತು. ಅದುವರೆಗೂ ಸಾಂಕ್ರಾಮಿಕ ವೈರಾಣುವಿನ ಪರಿಚಯ ಇಲ್ಲದಿದ್ದ ಭಾರತೀಯರು ಕಣ್ಣಿಗೆ ಕಾಣದ ವೈರಿಯೆದುರು ಪರದಾಡಿದರು, ಸೆಣಸಾಡಿದರು.

ಅನಾರೋಗ್ಯಕ್ಕೀಡಾಗಿದ್ದರೂ ಆಸ್ಪತ್ರೆಗಳಿಗೆ ಜನರು ಹೋಗಲು ಹಿಂದೇಟು ಹಾಕತೊಡಗಿದರು. ದೇವರಂತೆ ಕಾಣುವ ವೈದ್ಯರು ಕೂಡಾ ಚಿಕಿತ್ಸೆ ನೀಡಲು ನೂರು ಬಾರಿ ಯೋಚಿಸುವಂಥ ಸಂದರ್ಭ ಒದಗಿಬಂದಿತು. ಅವರಲ್ಲಿಯೂ ಕೆಲವರು ಅಂಥಾ ವಿಷಮ ಘಳಿಗೆಯಲ್ಲೂ ಸಾವಿನ ಭಯ ಲೆಕ್ಕಿಸದೆ ಜನಸಾಮಾನ್ಯರ ಶುಶ್ರೂಷೆಗೆ ಮುಂದಾಗಿದ್ದರು. ಡಾ. ಟೋನಿ ಥಾಮಸ್ ಅವರಲ್ಲೊಬ್ಬರು. ಬೆಂಗಳೂರಿನ ಟ್ರಿನಿಟಿ ಹೆಲ್ತ್ ಕೇರ್ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ವ್ಯವಸ್ಥೆಯನ್ನು ಉತ್ತಮಪಡಿಸುವ ಕೆಲಸದಲ್ಲಿ ಅವರು ದಶಕಗಳಿಂದ ನಿರತರಾಗಿದ್ದಾರೆ. ರಾಮನಗರ ಭಾಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸೆ, ಗ್ರಾಮಸ್ಥರಿಗೆ ಜನರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಹತ್ತು ಹಲವು ಸೇವಾ ಕಾರ್ಯದಲ್ಲಿ ಅವರು ತೊಡಗಿದ್ದಾರೆ.  

ಕೊರೊನಾ ಬಂತೆಂದು ಅವರೇನೂ ಮನೆಯಲ್ಲಿ ಕೂರಲಿಲ್ಲ. ಸರ್ಕಾರ ವೈದ್ಯಕೀಯ ಸಿಬ್ಬಂದಿಯ ಬೆನ್ನಿಗೆ ನಿಂತಿತ್ತು. ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಲು ಇನ್ನಿಲ್ಲದ ಪ್ರೋತ್ಸಾಹ, ಸಹಕಾರ ನೀಡಿತ್ತು. ನಿಜ ಹೇಳಬೇಕೆಂದರೆ ಪ್ರತಿಯೊಬ್ಬರ ಗಮನ ನಗರಪ್ರದೇಶಗಳೆಡೆ ಇತ್ತು. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಮ್ಲಜನಕ ಕೊರತೆ ಹೀಗೆ ಕೊರೊನಾ ಸುತ್ತಲಿನ ಪ್ರತಿ ಸಮಸ್ಯೆಗಳ ಕುರಿತ ಸುದ್ದಿಗಳು ನಗರಪ್ರದೇಶ ಕೇಂದ್ರಿತವಾಗಿದ್ದವು. ಆದರೆ ಈ ಪರಿಸ್ಥಿತಿಯಲ್ಲಿ ಗ್ರಾಮಗಳಲ್ಲಿನ ಪರಿಸ್ಥಿತಿ ಹೇಳತೀರದು. ಮಾಧ್ಯಮಗಳಲ್ಲಿ, ವಾಟ್ಸಾಪುಗಳಲಲ್ಲಿ ನಾನಾ ಬಗೆಯ ಸುಳ್ಳು ಸುದ್ದಿಗಳು ಹರಡಿ ಗ್ರಾಮೀಣ ಭಾಗದ ಜನರ ನಡುವೆ ಮೂಢನಂಬಿಕೆ ಸೃಷ್ಟಿಯಾಗಿತ್ತು. ಇವಿಷ್ಟೂ ಸಂಗತಿ ಡಾ.ಟೋನಿ ಅನುಭವಕ್ಕೆ ಬಂದಿತ್ತು. 

ಸಾವಿನ ಪ್ರಮಾಣ ಏರುತ್ತಿದ್ದಂತೆಯೇ ಅದೃಶ್ಯ ವೈರಾಣುವಿನ ತಾಕತ್ತಿನ ಅರಿವಾಗಿ ಜನಸಾಮಾನ್ಯರು ಥರಗುಟ್ಟಿದರು. ಮನುಷ್ಯ ಸಂಘಜೀವಿ. ಸಾಂಘಿಕ ಬಲವೇ ಮನುಷ್ಯನ ಅತಿದೊಡ್ಡ ಶಕ್ತಿ. ಅದಕ್ಕೇ ಕೊಡಲಿಪೆಟ್ಟು ನೀಡಿತ್ತು ಕೊರೊನಾ ವೈರಾಣು. ಒಂದೇ ಮನೆಯಲ್ಲಿ ಕುಟುಂಬ ಸದಸ್ಯರು ಮಾತನಾಡಲು ಹೆದರುವ ವಾತಾವರಣವನ್ನು ಒಂದು ಯಕಶ್ಚಿತ್ ವೈರಾಣು ನಿರ್ಮಾಣ ಮಾಡಿತ್ತು. ಪರಮಾಣು ಬಾಂಬು, ಹೈಡ್ರೋಜನ್ ಬಾಂಬು ಕೂಡಾ ಉಂಟುಮಾಡದಷ್ಟು ಪ್ರಮಾಣದ ಹಾನಿಗೆ ವೈರಾಣುವೊಂದು ಕಾರಣವಾಗಿದ್ದು ಅಚ್ಚರಿಯೂ ಹೌದು ಎಚ್ಚರಿಕೆಯೂ ಹೌದು. 

ಅಂಥಾ ಸಮಯದಲ್ಲಿ ರಾಮನಗರ ಮರಳ್ವಾಡಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಸೇರಿದಂತೆ ಇನ್ನಿತರೆ ಕಾಯಿಲೆ ಸಂಬಂಧಿ ಆರೋಗ್ಯ ಶಿಬಿರಗಳನ್ನು ಡಾ. ಟೋನಿ ಮುಂದುವರಿಸಿದ್ದರು. ಊರಿಗೆ ಊರೇ ಕದ ಮುಚ್ಚಿ ಮುದುಡಿಕೊಂಡಿದ್ದ ಸಮಯದಲ್ಲಿ ವೈದ್ಯಕೀಯ ಸವಲತ್ತುಳ್ಳ ವ್ಯಾನ್ ನಲ್ಲಿ ಪ್ರಯಾಣ ಮಾಡಿ ಗ್ರಾಮಸ್ಥರ ಅಪನಂಬುಗೆಗಳನ್ನೂ, ಮೂಢನಂಬಿಕೆಗಳನ್ನೂ ಹೋಗಲಾಡಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಶುರುವಿನಲ್ಲಿ ಅವರನ್ನು ಕಂಡು ಗ್ರಾಮಸ್ಥರು ಓಡಿಹೋಗಿದ್ದೂ ಇದೆ. ತಮ್ಮನ್ನು ಮನೆಗಳಿಂದ ಹೊತ್ತೊಯ್ಯಲು ಬಂದಿದ್ದಾರೆ ಎಂದು ಗ್ರಾಮಸ್ಥರು ತಿಳಿದಿದ್ದೇ ಅದಕ್ಕೆ ಕಾರಣ. ಟೋನಿ ಅವರಂಥಾ ವೈದ್ಯರು ನಮ್ಮ ನಡುವೆ ಇರುವುದರಿಂದಲೇ ಒಮಿಕ್ರಾನ್ ವೈರಾಣು ಬಂದರೂ ಧೃತಿಗೆಡದೆ ಜನಸಾಮಾನ್ಯರು ದೈನಂದಿನ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ. ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಸಮೂಹಕ್ಕೆ ಸಲಾಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com