ಇವರು 'ಪತಿ-ಪತಿ' ಎಂದು ಹೇಳಿಕೊಂಡು ಮದುವೆಯಾದರು: ತೆಲಂಗಾಣದಲ್ಲೊಂದು ಮೊದಲ ಸಲಿಂಗಕಾಮಿ ಮದುವೆ!
ಹೈದರಾಬಾದ್: 'ಆಯೆ ಹೊ ಮೇರೆ ಜಿಂದಗಿ ಮೇ ತುಮ್ ಬಹರ್ ಬಂಕೆ' ಹೀಗೆಂದು ವರ ಅಭಯ್ ಡಾಂಗೆ ತನ್ನ ವಿವಾಹ ಸಮಾರಂಭದ ಮಂಟಪದಲ್ಲಿ ವಧು ಸುಪ್ರಿಯೊ ಚಕ್ರವರ್ತಿಗೆ ಹಾಡಿದ್ದಾರೆ.
ಏನಿದೆ ಇದರಲ್ಲಿ ವಿಶೇಷ, ವಧು ವರರು ಹಾರ ಬದಲಿಸಿಕೊಳ್ಳುವುದು, ಸಪ್ತಪದಿ ತುಳಿಯುವುದು, ಖುಷಿಯಿಂದ ಹಾಡುವುದು ಸಾಮಾನ್ಯವಲ್ಲವೇ ಎಂದು ಹೇಳುತ್ತೀರಾ, ಇದು ವಿಶೇಷ ಮದುವೆ, ತೆಲಂಗಾಣ(Telangana) ರಾಜ್ಯದ ಮೊದಲ ಸಲಿಂಗಕಾಮಿ ಮದುವೆ(Gay wedding) ಎನಿಸಿದ್ದು ನಿನ್ನೆ ವಿಕರಾಬಾದ್ ಹೆದ್ದಾರಿಯಲ್ಲಿರುವ ಟ್ರಾನ್ಸ್ ಗ್ರೀನ್ ಫೀಲ್ಡ್ಸ್ ರೆಸಾರ್ಟ್ ನಲ್ಲಿ ನೆರವೇರಿದೆ. ಇವರಿಬ್ಬರೂ ತಾವು ವಿವಾಹವಾಗುವುದಾಗಿ ಕಳೆದ ಅಕ್ಟೋಬರ್ ನಲ್ಲಿ ಘೋಷಿಸಿಕೊಂಡಿದ್ದರು. ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಇವರು ಟ್ವೀಟ್ ಮಾಡಿದ್ದ ಸುದ್ದಿಯನ್ನು ರಿಟ್ವೀಟ್ ಮಾಡುವುದರೊಂದಿಗೆ ಹಲವರು ಇವರ ಮದುವೆಗೆ ಬೆಂಬಲ ಸೂಚಿಸಿದ್ದರು.
ತಮ್ಮ ವಿವಾಹ ಮೂಲಕ #LoveIsLove ಎಂಬ ಸಂದೇಶವನ್ನು ಇವರಿಬ್ಬರು ಹರಡುತ್ತಿದ್ದಾರೆ. ಭಾರತದ ಕಾನೂನಿನಲ್ಲಿ ಸಲಿಂಗ ವಿವಾಹಕ್ಕೆ ಇನ್ನೂ ಅನುಮೋದನೆ ನೀಡಿಲ್ಲ. ಆದರೂ ಇವರಿಬ್ಬರೂ ಪುರುಷ-ಪುರುಷನಾಗಿಯೇ ಮದುವೆಯ ಭಾಷೆ ನೀಡಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಸಲಿಂಗಕಾಮಿಗಳ ಸಮುದಾಯದ ಸದಸ್ಯ ಹಾಗೂ ಈ ಜೋಡಿಯ ಸ್ನೇಹಿತ ಸೋಫಿಯಾ ಡೇವಿಡ್ ಇವರ ವಿವಾಹವನ್ನು ಅಧಿಕೃತಗೊಳಿಸಿದ್ದಾರೆ.
ಆಪ್ತ ಬಂಧುಗಳು ಮತ್ತು ಸ್ನೇಹಿತರು ಸೇರಿ 60ಕ್ಕೂ ಹೆಚ್ಚು ಮಂದಿ ಸೇರಿದ್ದ ಸಮಾರಂಭದಲ್ಲಿ ಜೋಡಿ ಬಿಳಿ ಬಣ್ಣದ ಸೂಟ್ ಮತ್ತು ಟೈ ಧರಿಸಿದ್ದರು. ಬಿಳಿ ಬಣ್ಣದ ಥೀಮ್ ನಲ್ಲಿ ವಿವಾಹ ಕಾರ್ಯಕ್ರಮದ ಸ್ಥಳವನ್ನು ಅಲಂಕರಿಸಲಾಗಿತ್ತು.
31 ವರ್ಷದ ಸುಪ್ರಿಯೊ ಮತ್ತು 34 ವರ್ಷದ ಅಭಯ್ ತತಮ್ಮ ವಿವಾಹವು ಅನೇಕ ಸಲಿಂಗಕಾಮಿಗಳಿಗೆ ಮಾದರಿಯಾಗಲು ನಾವು ಬಹಿರಂಗವಾಗಿ ವಿವಾಹವಾಗುತ್ತಿದ್ದೇವೆ. ನಾವು ಯಾವುದೇ ಬಂಧನಗಳಿಲ್ಲದ ಜಗತ್ತಿನಲ್ಲಿ ಬದುಕಲು ಆಶಿಸುತ್ತೇವೆ. ಸಂಬಂಧದ ಪ್ರಮುಖ ಮೌಲ್ಯವೆಂದರೆ ಸ್ವೀಕಾರ. ನಾವು ಇನ್ನೊಬ್ಬ ವ್ಯಕ್ತಿಯನ್ನು ಬದಲಾಯಿಸಲು ಪ್ರಯತ್ನಿಸಬಾರದು. ಸಂಬಂಧವು ಪರಸ್ಪರ ಗೌರವದ ದೃಢವಾದ ಆಧಾರದ ಮೇಲೆ ನಿಂತಿದೆ, ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ 31 ವರ್ಷದ ಸುಪ್ರಿಯೊ ಹೇಳುತ್ತಾರೆ. ಇವರು ಕಳೆದ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ 34 ವರ್ಷದ ಅಭಯ್ ಜೊತೆಗೆ ಸಂಬಂಧವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಅಧಿಕೃತಗೊಳಿಸಿದ್ದರು.
ಪಶ್ಚಿಮ ಬಂಗಾಳ ಮೂಲದ ಸುಪ್ರಿಯೊ ಹೈದರಾಬಾದ್ ನಲ್ಲಿ ಹೊಟೇಲ್ ಉದ್ಯಮದ ವೃತ್ತಿಯಲ್ಲಿದ್ದು ಪಂಜಾಬಿಯಾಗಿರುವ ಅಭಯ್ ಇ ಕಾಮರ್ಸ್ ಸಂಸ್ಥೆಯೊಂದರಲ್ಲಿ ವೃತ್ತಿಯಲ್ಲಿರುವ ಐಟಿ ಉದ್ಯೋಗಿ. ಪ್ಲಾನೆಟ್ ರೋಮಿಯೊ ಎಂಬ ಡೇಟಿಂಗ್ ಆಪ್ ಮೂಲಕ ಎಂಟು ವರ್ಷಗಳ ಹಿಂದೆ ಪರಿಚಿತವಾದ ಇವರಿಬ್ಬರೂ ನಂತರ ಡೇಟಿಂಗ್ ನಲ್ಲಿದ್ದರು. ಈ ವರ್ಷದ ಆರಂಭದಲ್ಲಿ ಮದುವೆಯಾಗಲು ಬಯಸಿದ್ದರು.
ನಮ್ಮ ಪೋಷಕರು ಆರಂಭದಲ್ಲಿ ಒಪ್ಪಲಿಲ್ಲ. ಹಾಗೆಂದು ನಿರಾಕರಿಸಲೂ ಇಲ್ಲ, ಆತ್ಮಾವಲೋಕನ, ಆಲೋಚನೆ ಸಾಕಷ್ಟು ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದರು. ಈಗ ನಾವು ನಮ್ಮ ಸಂಬಂಧವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ವಿವಾಹ ಬಂಧನಕ್ಕೊಳಗಾಗಿದ್ದೇವೆ ಎಂದರು.
ಇವರು ನಾಯಿಮರಿಯೊಂದನ್ನು ಸಾಕುತ್ತಿದ್ದು ಅದರಿಂದ ತಮ್ಮ ಕುಟುಂಬ ಪೂರ್ಣವಾಗಿದೆ ಎಂದು ಭಾವಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ