ಗಂಭೀರ ಸ್ಥಿತಿಯಲ್ಲಿದ್ದ ತನ್ನ ತಾಯಿಯ ಜೀವ ಉಳಿಸಿದ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಗನಿಂದ ಉಚಿತ ವೈದ್ಯ ಸೇವೆ!

ಗಂಭೀರ ಸ್ಥಿತಿಯಲ್ಲಿದ್ದ ತನ್ನ ತಾಯಿ ಜೀವ ಉಳಿದ ಮೈಸೂರಿನ ಕೋವಿಡ್ ಆಸ್ಪತ್ರೆಗೆ ಚಂಡೀಗಢದಿಂದ ಹಿಂದಿರುಗಿರುವ ಡಾ. ಹರ್ಷ ಎಂಬುವರು ಸ್ವಯಂಪ್ರೇರಿತರಾಗಿ ಉಚಿತ ಸೇವೆ ಸಲ್ಲಿಸಲು ತೀರ್ಮಾನಿಸಿದ್ದಾರೆ. 
ಡಾ. ಹರ್ಷ
ಡಾ. ಹರ್ಷ

ಮೈಸೂರು: ಸಾಂಕ್ರಾಮಿಕ ರೋಗದ ನಡುವೆ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಪದಗಳೇ ಸಾಲದು. ಇತಂಹ ಸಂದರ್ಭದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ತನ್ನ ತಾಯಿ ಜೀವ ಉಳಿದ ಮೈಸೂರಿನ ಕೋವಿಡ್ ಆಸ್ಪತ್ರೆಗೆ ಚಂಡೀಗಢದಿಂದ ಹಿಂದಿರುಗಿರುವ ಡಾ. ಹರ್ಷ ಎಂಬುವರು ಸ್ವಯಂಪ್ರೇರಿತರಾಗಿ ಉಚಿತ ಸೇವೆ ಸಲ್ಲಿಸಲು ತೀರ್ಮಾನಿಸಿದ್ದಾರೆ. 

ಮಂಡ್ಯ ಜಿಲ್ಲೆಯ ರೈತ ಕುಟುಂಬದಿಂದ ಬಂದಿರುವ ಡಾ.ಹರ್ಷ ಅವರು ಚಂಡೀಗಢದ ಪ್ರತಿಷ್ಠಿತ ಪಿಜಿಐಎಂಆರ್‌ನಲ್ಲಿ ರೇಡಿಯೊ ಡಯಾಗ್ನೋಸಿಸ್‌ನಲ್ಲಿ ಔಷಧಿಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಕೋವಿಡ್ ನಂತರ ಭೀಕರ ಪರಿಸ್ಥಿತಿಯಲ್ಲಿ  ಸರ್ಕಾರಿ ಆಸ್ಪತ್ರೆಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು ರೋಗಿಗಳ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. 

ಇನ್ನು ಆಸ್ಪತ್ರೆಗಳಲ್ಲಿ ತೀವ್ರ ಸಿಬ್ಬಂದಿ ಕೊರತೆಯು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಂಡೀಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಹರ್ಷ ಅವರು ರಜೆ ತೆಗೆದುಕೊಂಡು ಬಂದು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸಲು ಮುಂದಾಗಿರುವುದು ನಿಜಕ್ಕೂ ಪ್ರಯೋಜನಕಾರಿ. ಡಾ. ಹರ್ಷ ಅವರ ಈ ನಿರ್ಧಾರಕ್ಕೂ ಒಂದು ಅದ್ಭುತ ಹಿನ್ನಲೆ ಇದೆ. 

ಹೌದು, ಹರ್ಷ ಅವರ ತಾಯಿ 48 ವರ್ಷದ ರಾಜಲಕ್ಷ್ಮೀ ಅವರು ಕೋವಿಡ್ ಗಾಗಿ ಮಂಡ್ಯದ ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಿದ್ದರಿಂದ ತುರ್ತಾಗಿ ಐಸಿಯು ಬೆಡ್ ನ ಅವಶ್ಯಕತೆ ಇತ್ತು. ಹೀಗಾಗಿ ಅನೇಕ ಆಸ್ಪತ್ರೆಗಳನ್ನು ಸುತ್ತಿದರೂ ಯಾವ ಆಸ್ಪತ್ರೆಯೂ ಅವರಿಗೆ ಬೆಡ್ ನೀಡಲು ನಿರಾಕರಿಸಿದವು. ನಂತರ ಮೈಸೂರಿನ ಕೋವಿಡ್ 19 ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ರಾಜಲಕ್ಷ್ಮಿ ಅವರನ್ನು ಪರೀಕ್ಷಿಸಿದ ವೈದ್ಯರು ಪರಿಸ್ಥಿತಿ ಕೈಮೀರಿ ಹೋಗಿದೆ ಜೀವ ಉಳಿಸುವುದು ಕಷ್ಟ ಎಂದು ಹೇಳಿ ಕೈಚೆಲ್ಲಿದ್ದರು. ಆದರೆ ಮೈಸೂರು ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಾಜೇಶ್ವರಿ ಎಚ್ ಆರ್ ಅವರು ಆಸ್ಪತ್ರೆಗೆ ದಾಖಲಿಸಿಕೊಂಡು ಭರವಸೆಯ ಮಾತುಗಳನ್ನು ಹೇಳಿದ್ದರು ಎಂದು ಹರ್ಷ ಹೇಳಿದ್ದಾರೆ.

10 ದಿನಗಳ ಆರೈಕೆಯ ನಂತರ ರಾಜಲಕ್ಷ್ಮಿ ಅವರು ಐಸಿಯುನಿಂದ ಹೊರಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಡಾ.ಹರ್ಷ ಹೇಳಿದರು. ಆಸ್ಪತ್ರೆಯಲ್ಲಿನ ಸೇವೆಯಿಂದ ತನ್ನ ತಾಯಿ ಪುನರ್ ಜನ್ಮ ಪಡೆದಿದ್ದಾರೆ. ಇಂತಹ ಭೀಕರ ಸ್ಥಿತಿಯಲ್ಲಿ ಸಿಬ್ಬಂದಿಗಳ ಪ್ರಯತ್ನದಿಂದ ಪ್ರೇರಿತರಾದ ಡಾ. ಹರ್ಷ ಮೈಸೂರಿಗೆ ಹಿಂದಿರುಗಿದ್ದು ಪಿಪಿಇ ಸೂಟ್ ಧರಿಸಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. 

'ಆಸ್ಪತ್ರೆಯಲ್ಲಿ ಸಾಕಷ್ಟು ಮೂಲಸೌಕರ್ಯ ಮತ್ತು ಸೌಲಭ್ಯಗಳಿವೆ. ಆದರೆ ಐಸಿಯು ಬೆಡ್ ಗಳು ತುಂಬಿರುವುದರಿಂದ ಜೊತೆಗೆ ಮಾನವಶಕ್ತಿಯ ಕೊರತೆಯಿಂದಾಗಿ, ರೋಗಿಗಳು ಗಂಭೀರ ಸ್ಥಿತಿಯಲ್ಲಿರುವುದರಿಂದ ಈಗಿರುವ ಸಿಬ್ಬಂದಿಗೆ ಇದು ಸವಾಲಾಗಿದೆ. ಅವುಗಳಲ್ಲಿ ಪ್ರತಿಯೊಂದಕ್ಕೂ ನಿರಂತರ ಗಮನ ಹರಿಸಬೇಕು ಎಂದು ಅವರು ಹೇಳಿದರು. ಡಾ.ಹರ್ಷ ಈಗ ಮೈಸೂರು ಆಸ್ಪತ್ರೆಯಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲು ರಜೆ ವಿಸ್ತರಿಸಿದ್ದಾರೆ. ಇದೇ ವೇಳೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಚಂಡೀಗಢದ ಆಸ್ಪತ್ರೆಯಲ್ಲೂ ಪರಿಸ್ಥಿತಿ ಕೆಟ್ಟದಾಗಿವೆ ಎಂದು ಅವರು ಹೇಳಿದರು.

ಡಾ. ಹರ್ಷ ಅವರ ಪ್ರಯತ್ನವನ್ನು ಶ್ಲಾಘಿಸಿದ ಡಾ.ರಾಜೇಶ್ವರಿ ಅವರು 'ನಮಗೆ ಹೆಚ್ಚಿನ ವೈದ್ಯರು ಮತ್ತು ತಜ್ಞರ ಅವಶ್ಯಕತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಹೆಚ್ಚುವರಿ ಕೈಯಿಂದಲೂ ಹೆಚ್ಚಿನ ವ್ಯತ್ಯಾಸವಾಗಬಹುದು" ಎಂದು ಹೇಳಿದರು. ಇನ್ನು ಅನೇಕ ವೈದ್ಯರು ಕೋವಿಡ್ -19 ವಾರ್ಡ್‌ಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಡಾ. ಹರ್ಷ ಅವರ ನಿರ್ಧಾರ ನಮಗೆ ಹೆಚ್ಚಿನ ಬಲ ನೀಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com