ಕೇದಾರನಾಥದಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯ ಅವರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌.
ಶಂಕರಾಚಾರ್ಯ ಪುತ್ಥಳಿ ಬಳಿ ನಿಂತಿರುವ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್.
ಶಂಕರಾಚಾರ್ಯ ಪುತ್ಥಳಿ ಬಳಿ ನಿಂತಿರುವ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್.

ಮೈಸೂರು: ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯ ಅವರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌.

ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ.

2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.

ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 28 ಟನ್‌ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‌ನ ಕೃಷ್ಣಶಿಲೆ ಬಳಸಲಾಗಿದೆ.

ಈ ಕಲ್ಲು ಮಳೆ, ಗಾಳಿ, ಬಿಸಿಲು ಹಾಗೂ ಕಠಿಣ ಹವಾಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪುತ್ಥಳಿಗೆ ಹೊಳಪು ಬರಲು ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ.

 ಮೈಸೂರಿನ ಯೋಗಿರಾಜ್‌ ಶಿಲ್ಪಿ ಅವರ ಕುಟುಂಬ ಐದು ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ನೈಪುಣ್ಯ ಪಡೆದಿದೆ. ಯೋಗಿರಾಜ್‌ ಅವರು ತಮ್ಮ ಪುತ್ರ ಅರುಣ್‌ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ.

ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಯೋಗಿರಾಜ್‌ ಅವರನ್ನು ಈ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಕೆತ್ತನೆ ಆರಂಭಿಸಿದ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

ಐದನೇ ತಲೆಮಾರಿನ ಶಿಲ್ಪಿಯಾಗಿರುವ ಅರುಣ್ ಯೋಗಿರಾಜ್ (37) ಎಂಬಿಎ ಪದವೀಧರರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, 2008 ರಲ್ಲಿ ಕೆಲಸ ತೊರೆದಿದ್ದು. ಅವರ ಕುಟುಂಬವು ಮೈಸೂರು ರಾಜರ ಕುಟುಂಬಕ್ಕಾಗಿ ಅನೇಕ ಪ್ರತಿಮೆಗಳನ್ನು ಮಾಡಿಕೊಟ್ಟಿದೆ.

ಜಿಂದಾಲ್ ಸ್ಟೀಲ್ ವರ್ಕ್ಸ್ ಯೋಜನೆಯನ್ನು ಮೊದಲು ಕೈಗೆತ್ತಿಕೊಂಡಿತ್ತು. ನಂತರ ಅರುಣ್ ಮತ್ತು ಅವರ ತಂದೆಯನ್ನು ಕಂಪನಿ ಸಂಪರ್ಕಿಸಿತ್ತು ಎಂದು ತಿಳಿದುಬಂದಿದೆ..

ಪುತ್ಥಳಿ ಕೆತ್ತನೆಗೆ ನನಗೆ 3 ಮಾದರಿಯ ಛಾಯಾಚಿತ್ರವನ್ನು ನೀಡಲಾಯಿತು, ಆದರೆ ನನಗೆ ಸಂತೋಷವಾಗಲಿಲ್ಲ. ನನ್ನ ಸ್ವಂತ ಮಾದರಿಯನ್ನು ಪುತ್ಥಳಿಯನ್ನು ಕೆತ್ತನೆ ಮಾಡಿದ್ದೇನೆ, 2-ಅಡಿ ಮೂಲ ಮಾದರಿಯನ್ನು ಪ್ರಧಾನಿ ಮೋದಿಗೆ ಕಳುಹಿಸಲಾಗಿತ್ತು. ಬಳಿಕ ನಾನು ಮಾಡಿದ್ದ ಪುತ್ಥಳಿಯ ಮಾದರಿಯನ್ನು ಆಯ್ಕೆ ಮಾಡಲಾಗಿತ್ತು ಎಂದು ಅರುಣ್ ಯೋಗಿ ರಾಜ್ ಅವರು ಹೇಳಿದ್ದಾರೆ.

ಯೋಗಿರಾಜ್ ಅವರು ಮಾಡಿರುವ ಪುತ್ಥಳಿಯಲ್ಲಿ ಶಂಕರಾಚಾರ್ಯ ಅವರು ಶ್ರೀಚಕ್ರದ ಮೇಲೆ ಕುಳಿತಿರುವ ಭಂಗಿಯಲ್ಲಿದೆ. ಪುತ್ಥಳಿ ಕೆತ್ತನೆ ಕಾರ್ಯ 2020ರ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಈ ಕಾರ್ಯ ಪೂರ್ಣಗೊಂಡಿತ್ತು.

ಪುತ್ಥಳಿ ಕೆತ್ತನೆಗೆ ಹೆಚ್.ಡಿ.ಕೋಟೆಯ ಕೃಷ್ಣ ಶಿಲೆಯನ್ನು ಬಳಸಿಕೊಳ್ಳಲಾಗಿದ್ದು, ಈ ಶಿಲೆಯು ಮಳೆ, ಗಾಳಿ, ಬೆಂಕಿ. ತಾಪಗಳನ್ನು ತಡೆಯುವಂತಹ ಸಾಮರ್ಥ್ಯವನ್ನು ಹೊಂದಿದೆ. ಪುತ್ಥಳಿ ಕೆತ್ತನೆ ವೇಳೆ ಒಂದು ದಿನ ಕೂಡ ವಿರಾಮವನ್ನು ಪಡೆದುಕೊಂಡಿರಲಿಲ್ಲ. 360 ಡಿಗ್ರಿ ಆಯಾಮದಲ್ಲೂ ವೀಕ್ಷಣೆ ಮಾಡುವಂತಹ ರೀತಿಯಲ್ಲು ಪುತ್ಥಳಿ ನಿರ್ಮಾಣ ಮಾಡುವಂತೆ ತಿಳಿಸಲಾಗಿತ್ತು. ಶಂಕರಾಚಾರ್ಯರು ಸನ್ಯಾಸಿಯಾಗಿದ್ದು. ತಲೆಯಲ್ಲಿ ಕೂದಲಿಲ್ಲ. ಕಾವಿ ಧರಿಸುತ್ತಾರೆ. ಅವರ ಮುಖವನ್ನು ದೈವಿಕವಾಗಿ ಕಾಣುವಂತೆ ಮಾಡಬೇಕಾಗಿತ್ತು. ಹೀಗಾಗಿ ಅದರ ಮೇಲೆ ಹೆಚ್ಚಿನ ಗಮನಹರಿಸಬೇಕಿದ್ದರಿಂದ ಜೊತೆಯಲ್ಲಿದ್ದ ಎಲ್ಲಾ ಸಹಾಯಕರನ್ನು ಕೆಲ ದಿನಗಳ ಕಾಲ ದೂರ ಕಳುಹಿಸಿದ್ದೆ ಎಂದು ತಿಳಿಸಿದ್ದಾರೆ.

ದುರಾದೃಷ್ಟಕರ ವಿಚಾರವೆಂದರೆ ಯೋಗಿರಾಜ್ ಅವರು ಪುತ್ಥಳಿ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಎರಡು ವಾರಗಳ ಹಿಂದಷ್ಟೇ ಅವರ ತಂದೆ ನಿಧನ ಹೊಂದಿದ್ದರು.

ಇದೀಗ ತಮ್ಮ ತಂದೆಯ ನೆನಪುಗಳನ್ನು ಸ್ಮರಿಸಿದ ಯೋಗಿರಾಜ್ ಅವರು, ಬಂಡೆ ಕೂಡ ಮಣ್ಣಿನಂತೆ ನಮ್ಮ ಮಾತನ್ನು ಕೇಳಬೇಕು. ಆಗ ಮಾತ್ರ ನೀನು ಪರಿಪೂರ್ಣವಾದ ಪ್ರತಿಮೆ ನಿರ್ಮಾಣ ಮಾಡಲು ಸಾಧ್ಯ ಎಂದು ನನ್ನ ತಂದೆ ಹೇಳುತ್ತಿದ್ದರು ಎಂದು ಹೇಳಿದ್ದಾರೆ.

ತಾನು ಕೆತ್ತಿದ್ದ ಪ್ರತಿಮೆ ಅನಾವರಣಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ಪ್ರತಿಯೊಬ್ಬ ಶಿಲ್ಪಿಯ ಕನಸಾಗಿರುತ್ತದೆ. ಆದರೆ, ತಂದೆಯ ಸಾವು ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಗಿರಾಜ್ ಅವರಿಗೆ ಸಾಧ್ಯವಾಗಿಲ್ಲ. ಇದೀಗ ಯೋಗಿರಾಜ್ ಅವರಲ್ಲಿ ಪುತ್ಥಳಿಯು ಅನಾವರಣಗೊಳ್ಳುತ್ತಿರುವ ಸಂತೋಷ ಒಂದೆಡೆ, ಮತ್ತೊಂದೆಡೆ ತಂದೆಯ ಸಾವು ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವ ನೋವಿನಲ್ಲಿರುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com