ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬಗೆ ಪದ್ಮಶ್ರೀ, ಪ್ರಶಸ್ತಿ ಗೌರವ ಹೆಚ್ಚಿಸಿದ ಅಕ್ಷರ ಸಂತ
ರಾಜ್ಯದಾದ್ಯಂತ ಅಕ್ಷರ ಸಂತ ಎಂದೇ ಹೆಸರಾಗಿರುವ ಹರೇಕಳ ಹಾಜಬ್ಬ ಅವರಿಗೆ ನವೆಂಬರ್ 8, 2021 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Published: 09th November 2021 07:45 PM | Last Updated: 09th November 2021 07:45 PM | A+A A-

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಹಾಜಬ್ಬ
ರಾಜ್ಯದಾದ್ಯಂತ ಅಕ್ಷರ ಸಂತ ಎಂದೇ ಹೆಸರಾಗಿರುವ ಹರೇಕಳ ಹಾಜಬ್ಬ ಅವರಿಗೆ ನವೆಂಬರ್ 8, 2021 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಒಬ್ಬ ಸಾಮಾನ್ಯ ಬಡ ವ್ಯಕ್ತಿ ಹಾಜಬ್ಬ ಅವರು ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದ್ದಾರೆ.
ಹರಕೇಳ ಹಾಜಬ್ಬ ಅವರಿಗೆ ಜನವರಿ 25, 2020 ರಂದೇ ದೇಶದ ನಾಲ್ಕನೇ ಉನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಪ್ರಶಸ್ತಿಯನ್ನು ವಿಳಂಬವಾಗಿ ಪ್ರದಾನ ಮಾಡಲಾಗಿದೆ.
ಇದನ್ನು ಓದಿ: ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರ್ಗೆ ಪದ್ಮಶ್ರೀ ಪ್ರಶಸ್ತಿ
ಹಾಜಬ್ಬ ಅವರು ತಾವು ಕಿತ್ತಳೆ ಹಣ್ಣು ಮಾರಿ ಉಳಿಸಿದ ಹಣ ಮತ್ತು ಇತರೆ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ನೀಡಿದ ದೇಣಿಗೆಯಿಂದ ಮಂಗಳೂರಿನ ಹರೇಕಳ ಎಂಬಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ನಿರ್ಮಿಸಿದ್ದಾರೆ.
"ನಾನು ವಿದೇಶಿಯರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡಲು ಸಾಧ್ಯವಾಗದ ಕಾರಣ ತುಂಬಾ ನೊಂದುಕೊಂಡೆ ಮತ್ತು ಹಳ್ಳಿಯಲ್ಲಿ ಶಾಲೆಯನ್ನು ನಿರ್ಮಿಸಲು ನಿರ್ಧರಿಸಿದೆ" ಎಂದು ಪದ್ಮ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಎಎನ್ಐ ತಿಳಿಸಿದ್ದಾರೆ.
"ನನಗೆ ಕನ್ನಡ ಮಾತ್ರ ಗೊತ್ತು, ಇಂಗ್ಲಿಷ್ ಅಥವಾ ಹಿಂದಿ ಗೊತ್ತಿಲ್ಲ. ಹಾಗಾಗಿ ವಿದೇಶಿಯರಿಗೆ ಸಹಾಯ ಮಾಡಲು ಸಾಧ್ಯವಾಗದೆ ನಾನು ಖಿನ್ನತೆಗೆ ಒಳಗಾಗಿದ್ದೆ. ನನ್ನ ಹಳ್ಳಿಯಲ್ಲಿ ಶಾಲೆಯನ್ನು ನಿರ್ಮಿಸುವ ಬಗ್ಗೆ ನನಗೇ ಆಶ್ಚರ್ಯವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಾಜಬ್ಬ, ತಮ್ಮ ಹಳ್ಳಿಯಲ್ಲೂ ಕಾಲೇಜು ಕಟ್ಟುವ ಕನಸು ಹೊತ್ತಿರುವ ಈ ವಿನಮ್ರ ವ್ಯಕ್ತಿ, ‘ಪದ್ಮಶ್ರೀ ಪ್ರಶಸ್ತಿ ನನಗೆ ಮಾತ್ರ ಸಂದ ಗೌರವವಲ್ಲ, ನನ್ನ ಶಾಲೆ ಹಾಗೂ ಸಾವಿರಾರು ವ್ಯಕ್ತಿಗಳು ಹಾಗೂ ಸರ್ಕಾರಕ್ಕೆ ಸಂದ ಗೌರವ. ನನ್ನ ಶಾಲೆಯ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನನಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿದ ಅಧಿಕಾರಿಗಳು. ಮಕ್ಕಳ ಶಿಕ್ಷಣಕ್ಕಾಗಿ ನನ್ನ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ಗುರುತಿಸಿದ್ದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.