ಪತ್ನಿ ಮೇಲಿನ ಪ್ರೀತಿಯಿಂದ ತಾಜ್ಮಹಲ್ ಮಾದರಿಯ ಮನೆ ಕಟ್ಟಿಸಿಕೊಟ್ಟ ಮಧ್ಯಪ್ರದೇಶ ವ್ಯಕ್ತಿ!
ಮಧ್ಯ ಪ್ರದೇಶದ ಪತಿ ಮಹಾಶಯನೊಬ್ಬ ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ತನ್ನ ಮನೆಯನ್ನೇ ತಾಜ್ ಮಹಲ್ ಹೋಲುವ ರೀತಿಯಲ್ಲಿ ನಿರ್ಮಿಸಿ ಸುದ್ದಿಗೆ ಗ್ರಾಸವಾಗಿದ್ದಾನೆ.
Published: 22nd November 2021 07:12 PM | Last Updated: 22nd November 2021 08:27 PM | A+A A-

ತಾಜ್ ಮಹಲ್ ಹೋಲುವ ಮನೆ
ರ್ಹಾನ್‌ಪುರ: ಮಧ್ಯ ಪ್ರದೇಶದ ಪತಿ ಮಹಾಶಯನೊಬ್ಬ ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ತನ್ನ ಮನೆಯನ್ನೇ ತಾಜ್ ಮಹಲ್ ಹೋಲುವ ರೀತಿಯಲ್ಲಿ ನಿರ್ಮಿಸಿ ಸುದ್ದಿಗೆ ಗ್ರಾಸವಾಗಿದ್ದಾನೆ.
ಹೌದು.. ಮೊಘಲ್ ಚಕ್ರವರ್ತಿಯಾದ ಶಾ ಜಹನನು ತನ್ನ ಪ್ರೀತಿಯ ಮಡದಿ ಮುಮ್ತಾಜ್ ನೆನಪಿಗಾಗಿ ತಾಜ್ ಮಹಲ್ನ್ನು ನಿರ್ಮಿಸಿದನು. ಇದು ಗೋರಿಯಾಗಿದ್ದು, ಪ್ರೇಮದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಪ್ರೇಮಿಯೂ ಕೂಡ 'ಪ್ರಿಯೆ ನಿನಗೋಸ್ಕರ ತಾಜ್ ಮಹಲ್ ಕಟ್ಟಿಸಲೇ' ಅಂತಾ ಹೇಳೆ ಇರುತ್ತಾನೆ. ಪ್ರೀತಿ ಹಾಗೂ ತಾಜ್ಮಹಲ್ಗೂ ಇರುವ ನಂಟು ಅಂತಹುದು. ಅಷ್ಟೇ ಅಲ್ಲಾ ಪ್ರೀತಿಸಿದ ಪ್ರೇಮಿಗಳು ಒಮ್ಮೆಯಾದರೂ ತಾಜ್ ಮಹಲ್ ನೋಡಬೇಕು ಅಂತಾ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲೋರ್ವ ತನ್ನ ಹೆಂಡತಿಗೆ ಪ್ರೀತಿಯ ಕಾಣಿಕೆಯಾಗಿ ತಾಜ್ ಮಹಲ್ ಹೋಲಿಕೆಯ ಮನೆಯನ್ನೇ ಕಟ್ಟಿಸಿಕೊಟ್ಟಿದ್ದಾರೆ.
ಮಧ್ಯಪ್ರದೇಶದ ಬುರ್ಹಾನ್‌ಪುರದ ನಿವಾಸಿಯಾಗಿರುವ ಶಿಕ್ಷಣ ತಜ್ಞ ಆನಂದ್ ಚೋಕ್ಸೆ ಅವರು ಯೋಜನೆಯಂತೆ ತಾಜ್ಮಹಲ್ ಮಾದರಿ ಹೋಲುವ ಮನೆಯನ್ನು ನಿರ್ಮಿಸಿ ತಮ್ಮ ಪ್ರೀತಿಯ ಹೆಂಡತಿ ಮಂಜೂಷಾ ಚೋಕ್ಸೆಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯ ಗುಮ್ಮಟ 29 ಅಡಿ ಎತ್ತರದಲ್ಲಿದೆ. ಮನೆಯ ನೆಲಹಾಸನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಿಸಲಾಗಿದೆ. ಈ ಮನೆಯ ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಮನೆಯೊಳಗೆ ವಿಶಾಲವಾದ ಹಾಲ್ ಇದ್ದು, ಕೆಳಗೆ 2 ಬೆಡ್ ರೂಮ್, ಮೇಲೆ ಎರಡು ಬೆಡ್ ರೂಂಗಳಿವೆ. ಅಲ್ಲದೇ ಮನೆಯ ಮೇಲಂತಸ್ತಿನಲ್ಲಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿ ಕೂಡ ಇದೆ. ತಾಜ್ ಮಹಲ್‌ನಂತೆಯೇ, ಅದರ ನವೀನ ಬೆಳಕಿನಿಂದಾಗಿ ಇಡೀ ಮನೆ ಕತ್ತಲೆಯಲ್ಲಿ ಹೊಳೆಯುತ್ತದೆ.
ಈ ಮನೆ ನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷಗಳು ತೆಗೆದುಕೊಂಡಿದ್ದು, 2018ರಲ್ಲಿ ಈ ಮನೆ ನಿರ್ಮಾಣ ಕಾರ್ಯ ಆರಂಭವಾಗಿ 2021ರಲ್ಲಿ ಪೂರ್ಣಗೊಂಡಿದೆ. ನಿರ್ಮಾಣ ಮಾಡುವಾಗ ಹಲವಾರು ರೀತಿಯ ಸವಾಲುಗಳು ಎದುರಾಗಿತ್ತು ಎಂದು ಮನೆ ನಿರ್ಮಿಸಿದ ಎಂಜಿನಿಯರ್ ಪ್ರವೀಣ್ ಚೋಕ್ಸೆ ಹೇಳಿಕೊಂಡಿದ್ದಾರೆ. 'ಮನೆ ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಮನೆಯ ಎಂಜಿನಿಯರ್ ತಾಜ್ ಮಹಲ್ ಅನ್ನು ಅಧ್ಯಯನ ಮಾಡಬೇಕಾಗಿತ್ತು. ಮನೆಯ ಒಳಭಾಗವನ್ನು ಕೆತ್ತಲು, ಅವರು ಬಂಗಾಳ ಮತ್ತು ಇಂದೋರ್ ಮೂಲದ ಕುಶಲಕರ್ಮಿಗಳ ಸಹಾಯವನ್ನು ಪಡೆದೆ ಎಂದು ಹೇಳಿದ್ದಾರೆ.