ಮನೆಯಡಿ ಅವಿತಿದ್ದ 90 ವಿಷಪೂರಿತ ಹಾವುಗಳು: ಬೆಚ್ಚಿಬಿದ್ದ ಮನೆ ಮಾಲೀಕ

ಅಲ್ ವೂಲ್ಫ್ ಕೈಗೆ ಗ್ಲವಸು ತೊಟ್ಟು ಸಲಕರಣೆ ಹಿಡಿದು ಮನೆಯಡಿ ತೆವಳುತ್ತಾ ಮುಂದಕ್ಕೆ ಸಾಗಿದರು. ಒಂದು ಹಾವು ಕಂಡಿತು. ಅದನ್ನು ಚೀಲಕ್ಕೆ ತುಂಬಿಸಿದರು. ಮತ್ತೊಂದು ಹಾವು ಕಾಣಿಸಿತು. ಅದನ್ನು ಚೀಲಕ್ಕೆ ತುಂಬಿಸಿದರು. ಆಮೇಲೆ ನೋಡಿದರೆ ಹಾವುಗಳ ದೊಡ್ಡ ಗುಂಪೇ ಕಣ್ಣಿಗೆ ಬಿದ್ದಿತು.
ರಾಟಲ್ ಸ್ನೇಕ್
ರಾಟಲ್ ಸ್ನೇಕ್

ಸ್ಯಾನ್ ಫ್ರಾನ್ಸಿಸ್ಕೊ: ಮನೆಗಳಿಗೆ ಹಾವು ನುಗ್ಗಿತೆಂದರೆ ಮನೆಯವರು ಕಂಗಾಲಾಗಿ ಹೆದರಿ ಹಾವು ಹಿಡಿಯುವವರಿಗೆ ಕರೆ ಮಾಡುವರು. ಹಾವುಗಳು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಅದನ್ನು ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರೂ ಇರುತ್ತಾರೆ. ಅಂಥವರಲ್ಲಿ ಒಬ್ಬರು ಅಮೆರಿಕದ ಅಲ್ ವೂಲ್ಫ್. 

ಆ ದಿನ ಅಲ್ ವೂಲ್ಫ್ ಅವರಿಗೆ ಒಂದು ಕರೆ ಬಂದಿತ್ತು. ಕರೆ ಮಾಡಿದ ಮಹಿಳೆ ತಮ್ಮ ಮನೆಯಲ್ಲಿ ಹಾವು ಇರುವುದಾಗಿಯೂ ಅದನ್ನು ಹಿಡಿದು ಸಾಗಹಾಕಬೇಕಾಗಿಯೂ ಮನವಿ ಮಾಡಿದ್ದರು. ಅದರಂತೆ ಅಲ್ ವೂಲ್ಫ್ ತಮ್ಮ ಸಲಕರಣೆಗಳನ್ನು ತೆಗೆದುಕೊಂಡು ಕರೆ ಮಾಡಿದ್ದ ಮಹಿಳೆಯ ಮನೆಗೆ ತೆರಳಿದ್ದರು.

ಮನೆ ಇದ್ದಿದ್ದು ಸಾಂತಾ ರೋಸಾ ಎಂಬಲ್ಲಿ. ಪರ್ವತ ತಪ್ಪಲಲ್ಲಿದ್ದ ಮನೆಯದು. ಅಮೆರಿಕದಲ್ಲಿ ಮನೆಗಳು ಹೆಚ್ಚಾಗಿ ಮರಗಳಿಂದ ಮಾಡಲ್ಪಟ್ಟಿರುತ್ತದೆ. ಸ್ಟೇಜ್ ನಂತೆ ರಚನೆ ಮಾಡಿಕೊಂಡು ಅದರ ಮೇಲೆ ಮನೆ ನಿರ್ಮಿಸಲಾಗುತ್ತದೆ. ವಿಪರೀತ ಚಳಿ ಇರುವುದರಿಂದ ಈ ಏರ್ಪಾಡು. ಹೀಗಾಗಿ ಮನೆಯ ಅಡಿ ಖಾಲಿ ಜಾಗ ಇರುವ ಪ್ರದೇಶದಲ್ಲಿ ಹಾವು ಮತ್ತಿತರ ಪ್ರಾಣಿಗಳು ಸೇರಿಕೊಳ್ಳುವುದುಂಟು. 

ಅಲ್ ವೂಲ್ಫ್ ಕೈಗೆ ಗ್ಲವಸು ತೊಟ್ಟು ಸಲಕರಣೆ ಹಿಡಿದು ಮನೆಯಡಿ ತೆವಳುತ್ತಾ ಮುಂದಕ್ಕೆ ಸಾಗಿದರು. ಅಲ್ಲಿ ಕೆಟ್ಟ ವಾಸನೆ ಬೀರುತ್ತಿತ್ತು.  ಜೇಡರ ಬಲೆ ತೆಗೆದು ಎಚ್ಚರಿಕೆಯಿಂದ ಮುಂದಡಿಯಿಡುತ್ತಿರಬೇಕಾದರೆ ಒಂದು ಹಾವು ಕಂಡಿತು. ಅದನ್ನು ಚೀಲಕ್ಕೆ ತುಂಬಿಸಿ ಅತ್ತಿತ್ತ ನೋಡಿದರು. ಮತ್ತೊಂದು ಹಾವು ಕಾಣಿಸಿತು. ಆಮೇಲೆ ನೋಡಿದರೆ ಹಾವುಗಳ ದೊಡ್ಡ ಗುಂಪೇ ಕಣ್ಣಿಗೆ ಬಿದ್ದಿತು. ಒಂದಾದ ಮೇಲೊಂದರಂತೆ ಹಾವುಗಳನ್ನು ಚೀಲಕ್ಕೆ ಹಾಕಿಕೊಳ್ಳುತ್ತಿದ್ದರೂ ಹಾವುಗಳ ಸಂಖ್ಯೆ ಕಡಿಮೆಯಾಗುವಂತೆ ತೋರಲಿಲ್ಲ. 

ಹಾಗೆ ಅಲ್ ವೂಲ್ಫ್ ಹಿಡಿದದ್ದು ಬರೋಬ್ಬರಿ 90 ಹಾವುಗಳು. ಮನೆಯಡಿ ಸತ್ತುಬಿದ್ದಿದ್ದ ಕೆಲವು ಪ್ರಾಣಿಗಳೂ ಕಾಣ ಸಿಕ್ಕವು. ಹಾವುಗಳಿಗೆ ಅಹಾರವಾದವು ಅವಾಗಿದ್ದವು. 90 ಹಾವುಗಳಲ್ಲಿ 22 ಪೂರ್ಣಪ್ರಮಾಣದಲ್ಲಿ ಬೆಳೆದ ಹಾವಾಗಿದ್ದರೆ ಉಳಿದವುಗಳು ಮರಿಗಳಾಗಿದ್ದವು. 

ಮನೆಯಡಿ ಕಂಡುಬಂದ ಹಾವುಗಳು ವಿಷಪೂರಿತವಾದ ರಾಟಲ್ ಸ್ನೇಕ್ ಗಳಾಗಿದ್ದವು. ಆ ಮನೆಯಿದ್ದ ಜಾಗದ ಸುತ್ತಮುತ್ತ ಬಂಡೆಕಲ್ಲುಗಳಿದ್ದುದರಿಂದ ಈ ಹಿಂದೆ ಹಾವುಗಳು ಬಂಡೆಗಳ ಸಂದುಗೊಂದುಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು. ನಂತರದ ದಿನಗಳಲ್ಲಿ ಮನೆ ನಿರ್ಮಾಣವಾದ ನಂತರ ಬಂಡೆಕಲ್ಲುಗಳ ಸಂದುಗೊಂದುಗಳಿಗಿಂತ ಮನೆಯಡಿಯೇ ಸೂಕ್ತ ವಾತಾವರಣ ನಿರ್ಮಾಣವಾಗಿತ್ತು. 

ಚಳಿಯೇ ಹೆಚ್ಚಾಗಿರುವುದರಿಂದ ಮನೆಯಡಿ ಬೆಚ್ಚಗಿನ ವಾತಾವರಣ ಹಾವುಗಳಿಗೆ ಹೇಳಿಮಾಡಿಸಿದಂತಿದ್ದವು. ಅಷ್ತರವರೆಗೆ ಮನೆಯ ಮಾಲೀಕರು ಒಂದೆರಡು ಹಾವುಗಳಿರಬಹುದಷ್ಟೇ ಎಂದು ತಿಳಿದಿದ್ದರು. 90 ಹಾವುಗಳು ಸಿಕ್ಕಿದ್ದನ್ನು ಕಂಡು ಅವರು ಹೌಹಾರಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿಯೇ ಇರುವುದೇ ಇಲ್ಲಾ ಮನೆ ಬದಲಾಯಿಸುವರೊ ಎಂದು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com